ಗಡಿಯಲ್ಲಿ ಚೀನಾ ಮತ್ತೆ ಕಿರಿಕ್| ಸೋಮವಾರ ರಾತ್ರಿ ಭಾರತೀಯ ಯೋಧರ ಮೇಲೆ ದಾಳಿ ನಡೆಸಿದ ಚೀನಾ| ಸಂಘರ್ಷದಲ್ಲಿ ಸೇನಾಧಿಕಾರಿ ಸೇರಿ ಮೂವರು ಯೋಧರು ಹುತಾತ್ಮ|
ಲಡಾಖ್(ಜೂ.16): ಗಡಿಯಲ್ಲಿ ದಿನೇ ದಿನೇ ಚೀನಾ ಹಾವಳಿ ಹೆಚ್ಚುತ್ತಿದ್ದು, ಮತ್ತೆ ಮತ್ತೆ ಇದು ತನ್ನ ನರಿ ಬುದ್ಧಿ ತೋರಿಸುತ್ತಿದೆ. ಈಗಾಗಲೇ ಭಾರತ ಹಾಗೂ ಚೀನಾದ ಗಡಿ ಪ್ರದೇಶವಾದ ಲಡಾಖ್‌ನಲ್ಲಿ ಹೆಚ್ಚಿನ ಸೈನ್ಯ ನಿಯೋಜಿಸುವ ಮೂಲಕ ವಿವಾದ ಸೃಷ್ಟಿಸಿದ್ದ ಡ್ರ್ಯಾಗನ್ ರಾಷ್ಟ್ರ, ಮತ್ತೆ ತನ್ನ ಪುಂಡಾಟ ಮುಂದುವರೆಸಿದೆ. ಈ ಬಾರಿ ಭಾರತೀಯ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಓರ್ವ ಸೇನಾಧಿಕಾರಿ ಸೇರಿ ಒಟ್ಟು ಮೂರು ಯೋಧರು ಹುತಾತ್ಮರಾಗಿದ್ದಾರೆ.
ಹೌದು ಭಾರತ ಕೊರೋನಾ ವಿರುದ್ಧ ಸಮರ ಸಾರುತ್ತಿರುವ ಸಂಕಷ್ಟದ ಸಮಯದಲ್ಲಿ ಅತ್ತ ಚೀನಾ ಗಡಿಯಲ್ಲಿ ತನ್ನ ಆ ಮುಂದುವರೆಸಿದೆ. ಮಾತುಕತೆ ನಡೆಸಿದರೂ ತನ್ನ ಬೇಡಿಕೆಗೆ ಭಾರತ ಬಗ್ಗದ ಹಿನ್ನೆಲೆ ಸದ್ಯ ಸಂಘರ್ಷಕ್ಕೆ ಇಳಿದಿದೆ. ಲಡಾಖ್ ಗಡಿಯಲ್ಲಿರುವ ಗಲ್ವಾನ್ ಕಣಿವೆಯಲ್ಲಿ ನಿನ್ನೆ, ಸೋಮವಾರ ರಾತ್ರಿ ಚೀನೀ ಸೈನಿಕರು ದಾಳಿ ನಡೆಸಿದ್ದು, ಈ ವೇಳೆ ಕರ್ನಲ್ ಮತ್ತು ಇಬ್ಬರು ಯೋಧರು ಮೃತಪಟ್ಟಿದ್ದಾರೆ ಎಂದು ಭಾರತೀಯ ಸೇನೆ ಅಧಿಕೃತವಾಗಿ ತಿಳಿಸಿದೆ. ಈ ಸಂಘಟರ್ಷದಿಂದ ನಿರ್ಮಾಣವಾಗಿರುವ ಉದ್ವಿಘ್ನ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಉಭಯ ದೇಶದ ಹಿರಿಯ ಸೇನಾ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ. ಇನ್ನು ಈ ದಾಳಿಯಲ್ಲಿ ಚೀನಾ ಕಡೆಯಲ್ಲೂ ಪ್ರಾಣ ಹಾನಿಯಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
undefined
ಗಡಿಯಲ್ಲಿ ಗುಂಡಿನ ಚಕಮಕಿ ನಡುವೆ ಕಾಮಗಾರಿ ಆರಂಭ; 1600 ಕಾರ್ಮಿಕರು ಲಡಾಕ್‌ಗೆ!
ಲಡಾಖ್‌ನ ಪ್ಯಾಂಗೋಂಗ್ ಟ್ಸೋ ಸರೋವರದ ಬಳಿ ಇರುವ ಎಲ್‍ಎಸಿ ಗಡಿಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ಚೀನಾ ಸೈನಿಕರು ಆಕ್ರಮಣಕಾರಿ ರೀತಿಯಲ್ಲಿ ವರ್ತಿಸುತ್ತಿದ್ದಾರೆರೆ. ಅದಕ್ಕೆ ಪ್ರತಿಯಾಗಿ ಭಾರತೀಯ ಸೈನಿಕರೂ ಕೂಡ ಪ್ರತಿರೋಧ ತೋರುತ್ತಿದ್ದಾರೆ. ಸರೋವರದ ಬಳಿಯ ಗಡಿಭಾಗದ ಒಂದು ಆಯಕಟ್ಟಿನ ಜಾಗದಲ್ಲಿ ಭಾರತ ರಸ್ತೆ ನಿರ್ಮಿಸುತ್ತಿದೆ. ಹಾಗೆಯೇ, ಗಾಲ್ವನ್ ಕಣಿವೆಯಲ್ಲಿ ಡರ್ಬುಕ್-ಶಯೋಕ್-ದೌಲತ್ ಬೇಗ್ ಓಲ್ಡೀ ರಸ್ತೆಯನ್ನು ಸಂಪರ್ಕಿಸುವ ಮತ್ತೊಂದು ರಸ್ತೆಯನ್ನೂ ನಿರ್ಮಿಸಲಾಗುತ್ತಿದೆ. ಇದು ಚೀನೀಯರ ಕೆಂಗಣ್ಣಿಗೆ ಕಾರಣವಾಗಿದೆ. ಈ ರಸ್ತೆ ನಿರ್ಮಾಣ ಕಾರ್ಯಕ್ಕೆ ಚೀನೀಯರು ತೀವ್ರ ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದಾರೆ.
ಚೀನಾ 2,500 ಸೇನಾ ತುಕಡಿಗಳನ್ನ ನಿಯೋಜಿಸಿದೆ. ಮದ್ದುಗುಂಡು, ಶಸ್ತ್ರಾಸ್ತ್ರಗಳನ್ನ ಗಡಿಭಾಗದಲ್ಲಿ ಶೇಖರಿಸುತ್ತಿದೆ. ಭಾರತ ಕೂಡ ಹೆಚ್ಚುವರಿ ತುಕಡಿಗಳನ್ನು ಲಡಾಖ್ ಗಡಿಭಾಗಕ್ಕೆ ನಿಯೋಜಿಸುತ್ತಿದೆ. ಈ ಪರಿಸ್ಥಿತಿ ಹೀಗೇ ಮುಂದುವರಿದರೆ ಎರಡೂ ದೇಶಗಳ ಮಧ್ಯೆ ಯುದ್ಧದ ಕಾರ್ಮೋಡ ಕವಿಯಬಹುದು ಎಂದು ಹಲವರು ಎಚ್ಚರಿಸಿದ್ದಾರೆ. ಕೊರೋನಾ ಸಂಕಷ್ಟದಲ್ಲಿರುವಾಗ ಸಣ್ಣ ಮಟ್ಟದ ಯುದ್ಧವೂ ದುಬಾರಿಯಾದೀತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಚೀನಾಗೇಕೆ ಕೋಪ?
ಭಾರತ ತನ್ನ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಗ್ಯಾಲ್ವಾನ್ ಪ್ರದೇಶದ ಸ್ಥಳೀಯರಿಗೆ ಸಹಾಯ ಮಾಡಲು ರಸ್ತೆ ನಿರ್ಮಾಣ ಆರಂಭಿಸಿದೆ. ಆದರೀಗ ಈ ರಸ್ತೆ ನಿರ್ಮಾಣ ಕಾಮಗಾರಿ ಚೀನಾ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಕಾರಣದಿಂದ ಲಡಾಖ್ ಗಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇನೆಯನ್ನು ನಿಯೋಜಿಸಿದೆ.
ಭಾರತ ಹಾಗೂ ಚೀನಾ ಗಡಿ ಎಲ್ಲೆಲ್ಲಿದೆ?
ಭಾರತ ಹಾಗೂ ಚೀನಾದ ನಡುವೆ ಒಟ್ಟು 3,488 ಕಿ.ಮೀ ಗಡಿ ಉದ್ದ ಇದೆ. ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಮತ್ತು ಉತ್ತರಾಖಂಡ್, ಹಿಮಾಚಲ ಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ ರಾಜ್ಯಗಳಲ್ಲಿ ಚೀನಾದ ಜೊತೆ ಭಾರತ ಗಡಿ ಹಂಚಿಕೊಂಡಿವೆ.
ಏನಿದು ಎಲ್‍ಎಸಿ?
ಭಾರತ ಮತ್ತು ಪಾಕ್ ಮಧ್ಯೆ ಗುಂಡಿನ ದಾಳಿ ನಡೆದ ಸಂದರ್ಭದಲ್ಲೆಲ್ಲಾ ಎಲ್‍ಒಸಿ(ಗಡಿ ನಿಯಂತ್ರಣ ರೇಖೆ ಅಥವಾ ಲೈನ್ ಆಫ್ ಕಂಟ್ರೋಲ್) ಪದ ಬರುತ್ತದೆ. ಭಾರತ ಮತ್ತು ಪಾಕಿಸ್ತಾನವನ್ನು ಜಮ್ಮು ಕಾಶ್ಮೀರದಲ್ಲಿ ಬೇರ್ಪಡಿಸುವ ಅಂತಾರಾಷ್ಟ್ರೀಯ ರೇಖಡಯನ್ನು ಎಲ್‍ಒಸಿ ಎಂದು ಕರೆಯಲಾಗುತ್ತದೆ. ಆದರೆ ಜಮ್ಮು ಕಾಶ್ಮೀರದಲ್ಲಿ ಭಾರತ ಮತ್ತು ಚೀನಾವನ್ನು ಬೇರ್ಪಡಿಸುವ ಗಡಿಯನ್ನು ಎಲ್‍ಎಸಿ(ಗಡಿ ವಾಸ್ತವಿಕ ನಿಯಂತ್ರಣ ರೇಖೆ ಅಥವಾ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್) ಎಂದು ಕರೆಯಲಾಗುತ್ತದೆ.
1962ರಲ್ಲಿ ಭಾರತ ಚೀನಾ ನಡುವೆ ನಡೆದ ಯುದ್ಧದ ಬಳಿಕ ಉಭಯ ರಾಷ್ಟ್ರಗಳು ತಮ್ಮ ಭೂ ಪ್ರದೇಶವನ್ನು ಗುರುತಿಸಲು ಎಲ್‍ಎಸಿಯನ್ನು ಬಳಸುತ್ತಿವೆ. ಎಲ್‍ಎಸಿ ಅಂತರಾಷ್ಟ್ರೀಯ ಗಡಿ ರೇಖೆಯಲ್ಲ. ಲಡಾಖ್ ಪೂರ್ವ ಭಾಗದಲ್ಲಿರುವ ಅಕ್ಸಾಯ್ ಚೀನಾ ನಮ್ಮದು ಎನ್ನುವುದು ಭಾರತದ ವಾದ.