ಆಯುಧ ದುರ್ಬಳಕೆ ತಡೆಯಲು ರಫ್ತು ನೀತಿ ಕಠಿಣಗೊಳಿಸಿದ ಭಾರತ!

Published : May 31, 2024, 11:16 AM ISTUpdated : Dec 30, 2024, 01:20 PM IST
ಆಯುಧ ದುರ್ಬಳಕೆ ತಡೆಯಲು ರಫ್ತು ನೀತಿ ಕಠಿಣಗೊಳಿಸಿದ ಭಾರತ!

ಸಾರಾಂಶ

ಭಾರತದ ರಕ್ಷಣಾ ರಫ್ತು 2023ರಲ್ಲಿ ಒಂದು ಹೊಸ ಮೈಲಿಗಲ್ಲನ್ನು ತಲುಪಿದೆ. ಭಾರತ ಸ್ವಾತಂತ್ರ್ಯ ಗಳಿಸಿದ ಬಳಿಕ, ಇದೇ ಮೊದಲ ಬಾರಿಗೆ 3 ಬಿಲಿಯನ್ ಡಾಲರ್‌ಗೂ (ಅಂದಾಜು 24,000 ಕೋಟಿ ರೂಪಾಯಿ) ಹೆಚ್ಚಿನ ಮೌಲ್ಯದ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡಿದೆ.

- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಭಾರತದ ರಕ್ಷಣಾ ರಫ್ತು 2023ರಲ್ಲಿ ಒಂದು ಹೊಸ ಮೈಲಿಗಲ್ಲನ್ನು ತಲುಪಿದೆ. ಭಾರತ ಸ್ವಾತಂತ್ರ್ಯ ಗಳಿಸಿದ ಬಳಿಕ, ಇದೇ ಮೊದಲ ಬಾರಿಗೆ 3 ಬಿಲಿಯನ್ ಡಾಲರ್‌ಗೂ (ಅಂದಾಜು 24,000 ಕೋಟಿ ರೂಪಾಯಿ) ಹೆಚ್ಚಿನ ಮೌಲ್ಯದ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡಿದೆ.

ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ, ಗ್ರೂಪ್ ಕ್ಯಾಪ್ಟನ್ ಉತ್ತಮ್ ಕುಮಾರ್ ದೇವನಾಥ್ ಅವರ ಪ್ರಕಾರ, ಅಫ್ಘಾನಿಸ್ತಾನದಲ್ಲಿ ಉಂಟಾದ ಪರಿಸ್ಥಿತಿ ತಲೆದೋರದಂತೆ ತಡೆಯುವ ಸಲುವಾಗಿ ಭಾರತ ರಕ್ಷಣಾ ಉತ್ಪನ್ನಗಳ ರಫ್ತಿನ ಕುರಿತಂತೆ ಇನ್ನಷ್ಟು ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ ಎಂದಿದ್ದಾರೆ. ಅವರು ಮೇ 30ರಂದು ಈ ವಿಚಾರವನ್ನು ಮಾಧ್ಯಮಗಳೊಡನೆ ಹಂಚಿಕೊಂಡಿದ್ದರು.

"ಹಿಂದೆ ಅಮೆರಿಕಾ ಒದಗಿಸಿದ ಆಯುಧಗಳು ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕರ ಕೈಗೂ, ಗಾಜಾ ಪಟ್ಟಿಯಲ್ಲಿ ಮೂಲಭೂತವಾದಿ ಸಂಘಟನೆಗಳ ಕೈಗೂ ಸೇರಿದ್ದವು. ಆದ್ದರಿಂದ ಭಾರತ ತನ್ನ ಆಯುಧಗಳು ಅಪಾಯಕಾರಿ ದೇಶಗಳು ಮತ್ತು ಭಯೋತ್ಪಾದಕ ಸಂಘಟನೆಗಳ ಕೈಗೆ ಸಿಗಬಾರದೆಂಬ ಉದ್ದೇಶದಿಂದ ಈ ಜಾಗರೂಕತೆಯ ಕ್ರಮವನ್ನು ಕೈಗೊಂಡಿದೆ" ಎಂದು ದೇವನಾಥ್ ಅಭಿಪ್ರಾಯ ಪಟ್ಟಿದ್ದಾರೆ.

ರಕ್ಷಣಾ ಉಪಕರಣಗಳನ್ನು ರಫ್ತು ಮಾಡುವ ಸಂದರ್ಭದಲ್ಲಿ, ಭಾರತದ ರಕ್ಷಣಾ ಸಚಿವಾಲಯ ಕಟ್ಟುನಿಟ್ಟಿನ 'ಅಂತಿಮ ಬಳಕೆದಾರರ ನಿಯಮ'ವನ್ನು ಜಾರಿಗೆ ತರುತ್ತಿದೆ ಎಂಬ ವರದಿಯನ್ನು ಆಧರಿಸಿ ದೇವನಾಥ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದ ಆಯುಧಗಳು ಅನುದ್ದೇಶಿತ ತಾಣಗಳನ್ನು ತಲುಪುತ್ತಿವೆ ಎಂಬ ಮಾಧ್ಯಮ ವರದಿಗಳ ಆಧಾರದಲ್ಲಿ ಭಾರತ ಈ ನಿರ್ಧಾರ ಕೈಗೊಂಡಿದೆ.

ಉಕ್ರೇನ್ ಕೈಯಲ್ಲಿ ಅಮೆರಿಕದ ವಿಷಕಾರಿ ರಾಸಾಯನಿಕ ಅಸ್ತ್ರ?; ಜಾಗತಿಕ ಆತಂಕವನ್ನು ಹೆಚ್ಚಿಸಿದ ರಷ್ಯಾದ ಆರೋಪ..!

ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಭಾರತ ಸರ್ಕಾರ ಈಗ ಅಂತಿಮ ಬಳಕೆದಾರರ ಪ್ರಮಾಣಪತ್ರ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪ್ರಯತ್ನ ನಡೆಸುತ್ತಿದೆ. ಈ ಕ್ರಮದ ಮೂಲಕ, ಭಾರತ ಪೂರೈಸುವ ಆಯುಧ ಉಪಕರಣಗಳು ಅನಧಿಕೃತ ಬಳಕೆದಾರರ ಕೈಗೆ ಸಿಗದಂತೆ ತಡೆಯಲು ಸಾಧ್ಯವಾಗುತ್ತದೆ.

ಈ ಹಿಂದೆ,‌ ಕೆಲವು ಪಾಶ್ಚಾತ್ಯ ವರದಿಗಳು ಭಾರತೀಯ ನಿರ್ಮಾಣದ ಆರ್ಟಿಲರಿ ಶೆಲ್‌ಗಳು ಉಕ್ರೇನ್‌ನಲ್ಲಿ ಪತ್ತೆಯಾಗಿದ್ದವು ಎಂದಿದ್ದವು. ಆದರೆ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಭಾರತ ತನ್ನ 155 ಎಂಎಂ ಆರ್ಟಿಲರಿ ಶೆಲ್‌ಗಳನ್ನು ಪೂರ್ವ ಯುರೋಪಿನ ದೇಶವಾದ ಉಕ್ರೇನ್‌ಗೆ ಪೂರೈಸಿಲ್ಲ ಎಂದು ಸ್ಪಷ್ಟಪಡಿಸಿತು.

"ಉಕ್ರೇನ್‌ನಲ್ಲಿ ಭಾರತೀಯ ನಿರ್ಮಾಣದ ಆರ್ಟಿಲರಿ ಶೆಲ್‌ಗಳು ಪತ್ತೆಯಾಗಿವೆ ಎನ್ನುವಂತಹ ಕೆಲವು ಮಾಧ್ಯಮ ವರದಿಗಳನ್ನು ನಾವು ಗಮನಿಸಿದ್ದೇವೆ. ಆದರೆ, ಭಾರತ ಉಕ್ರೇನ್‌ಗೆ ಯಾವುದೇ ಆರ್ಟಿಲರಿ ಆಯುಧಗಳನ್ನು ಪೂರೈಸಿಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ. ನಾವು ಅವುಗಳನ್ನು ರಫ್ತೂ ಮಾಡಿಲ್ಲ, ಉಕ್ರೇನ್‌ಗೆ ಪೂರೈಕೆಯೂ ಮಾಡಿಲ್ಲ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರರಾದ ರಣ್‌ಧೀರ್ ಜೈಸ್ವಾಲ್ ಅವರು ಈ ವರ್ಷಾರಂಭದಲ್ಲಿ ಹೇಳಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಮಾಹಿತಿ ನೀಡಿರುವ ದೇವನಾಥ್ ಅವರು, ಭಾರತ ಪ್ರಸ್ತುತ ಮಿಲಿಟರಿ ಉಪಕರಣಗಳನ್ನು 80ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದ್ದು, 2025-26ರ ವೇಳೆಗೆ ಈ ರಫ್ತು ಮೌಲ್ಯ 5 ಬಿಲಿಯನ್ ಡಾಲರ್ (ಅಂದಾಜು 40,000 ಕೋಟಿ ರೂಪಾಯಿ) ದಾಟುವ ಸಾಧ್ಯತೆಗಳಿವೆ ಎಂದು ವಿವರಿಸಿದ್ದಾರೆ.

ಭಾರತ ತನ್ನ ನಿರ್ಮಾಣದ ಮಿಲಿಟರಿ ಉಪಕರಣಗಳನ್ನು ಕೇವಲ ತನ್ನ ಮಿತ್ರ ರಾಷ್ಟ್ರಗಳಿಗೆ ಮಾತ್ರವೇ ಪೂರೈಕೆ ಮಾಡುತ್ತಿದ್ದು, ಅವುಗಳು ಯೋಜಿತ ಉದ್ದೇಶಗಳಿಗೆ ಮಾತ್ರವೇ ಆಯುಧಗಳನ್ನು ಬಳಸಲಿವೆ ಎಂದು ಭಾರತ ನಿರೀಕ್ಷಿಸಿದೆ.

ಉದಾಹರಣೆಗೆ, ಭಾರತ ತನ್ನ ಬ್ರಹ್ಮೋಸ್ ಕ್ಷಿಪಣಿಗಳನ್ನು ಫಿಲಿಪೈನ್ಸ್, ವಿಯೆಟ್ನಾಂ, ಮತ್ತು ಇಂಡೋನೇಷ್ಯಾಗಳಿಗೆ ರಫ್ತು ಮಾಡಲು ಕ್ರಮ ಕೈಗೊಂಡಿದೆ. ಆದರೆ, ಈ ನಿಟ್ಟಿನಲ್ಲಿ ಭಾರತ ತನ್ನ ಅಭಿಪ್ರಾಯಗಳನ್ನೂ ನೀಡಿದೆ. ಭಾರತ ಫಿಲಿಪೈನ್ಸ್‌ಗೆ ಬ್ರಹ್ಮೋಸ್ ಕ್ಷಿಪಣಿಗಳನ್ನು ಒದಗಿಸುವಾಗ, ಈ ಕ್ಷಿಪಣಿಗಳನ್ನು ನೆರೆ ರಾಷ್ಟ್ರಗಳ ಜೊತೆಗಿನ ಯಾವುದೇ ಚಕಮಕಿಯಲ್ಲಿ ಬಳಸಬಾರದು ಎಂದು ಆದೇಶಿಸಿದೆ ಎಂದು ದೇವನಾಥ್ ವಿವರಿಸಿದ್ದಾರೆ.

ಆ ಸಂದರ್ಭದಲ್ಲಿ, ಭಾರತ ವಿಯೆಟ್ನಾಂ ಮತ್ತು ಇಂಡೋನೇಷ್ಯಾ ಎರಡೂ ದೇಶಗಳಿಗೆ ಅತ್ಯಂತ ಪ್ರಸಿದ್ಧವಾದ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಪಣಿಗಳು ನಿಮ್ಮ ದೇಶದ ವಿರುದ್ಧ ಪ್ರಯೋಗಿಸಲ್ಪಡುವುದಿಲ್ಲ ಎಂದು ಭರವಸೆ ನೀಡಿತ್ತು ಎಂದು ದೇವನಾಥ್ ಹೇಳಿದ್ದಾರೆ.

ರಕ್ಷಣಾ ತಜ್ಞರ ಪ್ರಕಾರ, ಆಯುಧಗಳು ಮತ್ತು ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡುವ ದೇಶಗಳು ಇಂತಹ ರಾಜತಾಂತ್ರಿಕ ಭರವಸೆಗಳನ್ನು ಇತರ ದೇಶಗಳಿಗೆ ನೀಡುವುದು ಸರ್ವೇಸಾಮಾನ್ಯವಾಗಿದೆ.

"ಭಾರತೀಯ ನಿರ್ಮಾಣದ ಮಿಲಿಟರಿ ಉಪಕರಣಗಳು ಯಾರದೋ ತಪ್ಪು ಕೈಗಳಿಗೆ ಬೀಳದಂತೆ ತಡೆಯಲು ಇರುವ ಸೂಕ್ತ ಪರಿಹಾರ ಕ್ರಮವೆಂದರೆ, ಅಂತಿಮ ಬಳಕೆದಾರರ ಪ್ರಮಾಣಪತ್ರ ಹೊಂದುವುದು. ಈ ಪ್ರಕ್ರಿಯೆಯಲ್ಲಿ, ಭಾರತದಿಂದ ಆಯುಧಗಳನ್ನು ಖರೀದಿಸುವ ಭಾರತದ ಸ್ನೇಹಿ ರಾಷ್ಟ್ರ, ತಾನು ನವದೆಹಲಿಯ ಜೊತೆ ಸ್ನೇಹದಿಂದಿರುವ ದೇಶದ ಮೇಲೆ ಈ ಆಯುಧಗಳ ಪ್ರಯೋಗ ನಡೆಯುವುದಿಲ್ಲ ಎಂದು ಪ್ರಮಾಣಪತ್ರ ನೀಡಬೇಕಾಗುತ್ತದೆ" ಎಂದು ದೇವನಾಥ್ ವಿವರಿಸಿದ್ದಾರೆ.

ಐಎನ್‌ಎಸ್ ವಿಕ್ರಾಂತ್ ಹೆಗಲೇರಲಿದೆ ರಫೇಲ್ ಫೈಟರ್: ಭಾರತ-ಫ್ರಾನ್ಸ್ ಒಪ್ಪಂದಕ್ಕೆ ಹೊಸ ಖದರ್..!

ಆದರೆ, ಈ ನಿಯಮಾವಳಿಗಳು ಮುಂದಿನ ದಿನಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಕಟ್ಟುನಿಟ್ಟಾಗಿರಲಿವೆ.

ಭಾರತದ ಮಿಲಿಟರಿ - ಔದ್ಯಮಿಕ ವ್ಯವಸ್ಥೆಯ ಕುರಿತು ಮಾಹಿತಿ ನೀಡಿರುವ ದೇವನಾಥ್ ಅವರು, ಭಾರತದ ಬಳಿ ಅತ್ಯಂತ ದೊಡ್ಡದಾದ, ಮತ್ತು ಬಲಿಷ್ಟವಾದ ರಕ್ಷಣಾ ಉತ್ಪಾದನಾ ಘಟಕಗಳು ಮತ್ತು ಪೂರೈಕೆ ಜಾಲವಿದೆ ಎಂದಿದ್ದಾರೆ. ಈ ಜಾಲದಲ್ಲಿ, ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಂತಹ ಸಂಸ್ಥೆಗಳು ಮತ್ತು 600ಕ್ಕೂ ಹೆಚ್ಚು ಖಾಸಗಿ ಸಂಸ್ಥೆಗಳಿದ್ದು, ವಿವಿಧ ರೀತಿಯ ಆಯುಧಗಳು, ಉಪಕರಣಗಳನ್ನು ನಿರ್ಮಿಸುತ್ತಿವೆ.

ತಮ್ಮ ಆಯುಧಗಳನ್ನು ವಿದೇಶಗಳಿಗೆ ಮಾರಾಟ ಮಾಡುವ ಮುನ್ನ, ಈ ಸಂಸ್ಥೆಗಳು ಭಾರತದ ರಕ್ಷಣಾ ಸಚಿವಾಲಯದಿಂದ ನಿರಾಪೇಕ್ಷಣಾ ಪತ್ರ (ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ - ಎನ್ಒಸಿ) ಪಡೆಯುವುದು ಕಡ್ಡಾಯವಾಗಿದೆ. ಆ ಬಳಿಕ, ಸಂಸ್ಥೆಗಳು ವಿದೇಶಾಂಗ ಸಚಿವಾಲಯದಿಂದಲೂ ಇದೇ ರೀತಿಯ ಎನ್ಒಸಿ ಪಡೆಯಬೇಕಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್