ಬಿಹಾರ ಚುನಾವಣೆ ಸಮಯದಲ್ಲೆ ಅಗಲಿದ ಪಾಸ್ವಾನ್/ ಏನಾಗಲಿದೆ ಬಿಹಾರದ ಭವಿಷ್ಯ/ ಯಾರ ಪರ ಇದ್ದಾರೆ ಮತದಾರರು/ ಮೋದಿಯೇ ಇಲ್ಲಿಯತೂ ಟ್ರಂಪ್ ಕಾರ್ಡ್
ಡೆಲ್ಲಿ ಮಂಜು
ನವದೆಹಲಿ (ಅ. 09) ಕೊರೋನಾ ಸಂಕಟ, ಬಿಟ್ಟು ಬಿಡದೆ ಕಾಡಿದ ಕಾರ್ಮಿಕರ ಮಹಾವಲಸೆ, ಕೈಯಲ್ಲಿ ಕಾಸಿಲ್ಲ, ಮಾಡೋಕೆ ಕೆಲಸ ಇಲ್ಲ ಅನ್ನುವಂತಹ ನಿರುದ್ಯೋಗ... ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನ.. ಇಷ್ಟರ ನಡುವೆ ಬಿಹಾರದಲ್ಲಿ ವಿಧಾನಸಭೆ ಚುನಾವಣೆ.
ಬಿಹಾರ ಅಂದ ಕೂಡಲೇ ನೆನಪಾಗೋದು ಅಲ್ಲಿನ ಕಾರ್ಮಿಕರು ಮತ್ತು ಎಂಥದ್ದೇ ಕಷ್ಟದ ಕೆಲಸಕ್ಕಾದರೂ ಸೈ ಎನ್ನುವ ಅವರ ಛಾತಿ. ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಬಿಹಾರದ ಕಾರ್ಮಿಕರ ಸೈನ್ಯ ಸಿಕ್ಕೇ ಸಿಗುತ್ತದೆ. ಇನ್ನು ಬಿಹಾರದ ರಾಜಕೀಯ ಅಂದ ಕೂಡಲೇ ಲಾಲೂಪ್ರಸಾದ್ ಯಾದವ್, ನಿತೀಶ್ ಕುಮಾರ್, ರಾಮವಿಲಾಸ್ ಪಾಸ್ವಾನ್ ಮುಂತಾದ ನಾಯಕರು ಬರುತ್ತಾರೆ. ಜೊತೆಗೆ ಜಾತಿ, ಜನಾಂಗ ಅಂದಾಗ, ಯಾದವರು, ದಲಿತರು, ಮಹಾ ದಲಿತರು, ಮುಸಲ್ಮಾನರು, ಕೂರ್ಮಿಗಳು, ಕೊರ್ಯಿಗಳು, ಒಬಿಸಿಗಳು ಮುಂತಾದವರ ಪಟ್ಟಿ ಕಣ್ಣು ಮುಂದೆ ಬರುತ್ತದೆ. ಸರಿಸುಮಾರು 10.50 ಕೋಟಿ ಜನಸಂಖ್ಯೆ ಇರುವ ಬಿಹಾರದಲ್ಲಿ , ಆರೂ ಮುಕ್ಕಾಲು ಕೋಟಿ ಮತದಾರರು ಇದ್ದಾರೆ.
ಅಗಲಿದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ಬಾನ್
ನಮ್ಮದು 'ಸೊಲೋ' ಹೋರಾಟ:
ಇದು ಬಿಹಾರದ ಯುವ ನಾಯಕ, ಲೋಕ ಜನ ಶಕ್ತಿ ಪಕ್ಷದ ಮುಖಂಡ ಚಿರಾಗ್ ಪಾಸ್ವಾನ್ ಈ ಬಾರಿಯ ಎಲೆಕ್ಷನ್ ನಿರ್ಣಯ. ಬಿಹಾರದಲ್ಲಿ ಎನ್‌ಡಿಎ ಗೆ ಬೆಂಬಲ ಇಲ್ಲ. ಆದ್ರೆ ರಾಷ್ಟ್ರ ಮಟ್ಟದಲ್ಲಿ ಬೆಂಬಲ ಇದೆ ಎಂದಿದ್ದಾರೆ ಚಿರಾಗ್. ಚಿರಾಗ್ ಏನ್ ಹೇಳ್ತಾರೋ ಅದರಂತೆ ಮಾಡಿ ಅಂತ ಸಿನೀಯರ್ ಪಾಸ್ವಾನ್ ಹೇಳಿದ್ರು.
ಎನ್ ಡಿ ಎ ಅಭ್ಯರ್ಥಿ ಹಾಗು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರನ್ನು ಈ ಬಾರಿ ಸಿಎಂ ಅಂಥ ಘೋಷಣೆ ಮಾಡಬೇಡಿ. ಶೇಕಡ 50 ರಷ್ಟು ಸೀಟು ಬಿಟ್ಟು ಕೊಡಬೇಕು ಅಂಥ ಚಿರಾಗ್ ಪಟ್ಟು ಹಿಡಿದರು. ಆದರೆ ನಿತೀಶ್ ರನ್ನು ಬಿಟ್ಟು ಕೊಡದ ಮೋದಿ ಸಾಹೇಬರ ಬಳಗ, ಅವರ ಜೊತೆಯಲ್ಲೇ ಚುನಾವಣಾ ಅಖಾಡಕ್ಕೆ ಇಳಿಯುವುದು ಅಂತ ತೀರ್ಮಾನಿಸಿತು. ಆಗ ಸಿಟ್ಟಿಗೆದ್ದ ಚಿರಾಗ್ ಏಕಾಂಗಿಯಾಗಿ ಅಂದರೆ ಸೋಲೋ ಆಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದರು.
ಕಳೆದ ವಿಧಾನಸಭಾ ಚುನಾವಣೆ ಗಿಂತ ಲೋಕಸಭಾ ಚುನಾವಣೆಯಲ್ಲಿ ಸಿನೀಯರ್ ಪಾಸ್ವಾನ್ ಪಕ್ಷವನ್ನು ಬಿಹಾರಿಗಳು ಕೈ ಹಿಡಿದರು. ಸ್ಪರ್ಧೆ ಮಾಡಿದ್ದ ಆರು ಸ್ಥಾನಗಳಲ್ಲೂ ಲೋಕ ಜನಶಕ್ತಿ ಪಕ್ಷ ಗೆಲುವು ಸಾಧಿಸಿದ್ದು , ಈ ಬಾರಿಯ ಹುಮ್ಮಸ್ಸು ಮತ್ತಷ್ಟು ಹೆಚ್ಚಿಸಿದೆ. ಆದ್ರೆ ಸಿನೀಯರ್ ಪಾಸ್ವಾನ್ , ರಾಜಕೀಯ ಪಡಸಾಲೆಯಲ್ಲಿ ಇಸ್ರೋವಾಲಾ ಎನ್ನುವ ರಾಮವಿಲಾಸ್ ಪಾಸ್ವಾನ್ ನಿಧನರಾಗಿದ್ದಾರೆ. ಈ ಅಲೆ ಕೂಡ ಚುನಾವಣೆ ಯಲ್ಲಿ ಪಾಸ್ವಾನ್ ಪಕ್ಷವನ್ನು ಕೈ ಹಿಡಿಯಬಹುದು ಎನ್ನಲಾಗುತ್ತಿದೆ.
ಲಾಲೂಗೆ ಕೊನೆ ಅವಕಾಶ, ನಿತೀಶ್ ಕುಮಾರ್ ಗೆ ಅಪಾಯ
ಮೋದಿ ಇಲ್ಲದೆ ಗೆಲುವಿಲ್ಲ.
ಆಡಳಿತಾರೂಢ ಜೆಡಿಯು ಮತ್ತು ಬಿಜೆಪಿ ಪಕ್ಷಗಳಿಗೆ ಈಗ ಮೋದಿಯವರೇ ಗೆಲುವಿನ ಅಸ್ತ್ರ. ಸಿಎಂ ನಿತೇಶ್ ಕುಮಾರ್ ಅವರಿಗೆ ಆಡಳಿತ ವಿರೋಧಿ ಅಲೆ ಇದೆ. ಮೋದಿ ಸಾಹೇಬರ ಪಕ್ಷ, ಸಾಥಿ ಪಕ್ಷವಾಗಿದ್ರೂ ವಿರೋಧದ ಅಲೆ ನಿತೇಶ್ ಕುಮಾರ್ ಗೆ ಇದೆ.
ಎರಡೂ ಪಕ್ಷಗಳ ನಡುವೆ ಶೇ.50:50
ಸೀಟ್ ಶೇರಿಂಗ್ ಮಾಡಿಕೊಂಡು ಅಖಾಡಕ್ಕೆ ಇಳಿದಿವೆ. ಬಿಝಲಿ, ಪಾನಿ, ಸಡಕ್ , ಕಾನೂನು ವಲಯಗಳಲ್ಲಿ ನಿತೇಶ್ ಮೆಚ್ಚುವ ಕೆಲಸ ಮಾಡಿದ್ದಾರೆ. ಗೂಂಡಾಗಳು, ಪುಡಾರಿಗಳ ಆಟ ಒಂದು ಹಂತಕ್ಕೆ ಕಟ್ಟಿ ಹಾಕಿದ್ದಾರೆ. ಆದರೆ ನಿತೇಶ್ ಅವರು ಪ್ರತಿನಿಧಿಸುವ ಕೂರ್ಮಿ ಜಾತಿಯವರು ದಿನೇ ದಿನೇ ಪ್ರಬಲರಾಗುತ್ತಿದ್ದಾರೆ. ಟೆಂಡರ್ ಗಳಿಂದ ಹಿಡುದು ಪೊಲೀಸ್ ಠಾಣೆಯ ಪಂಚಾಯ್ತಿಗಳ ತನಕ ಅವರದ್ದೇ ಆಟ. ಇದು ಮೇಲ್ವರ್ಗದ ಯಾದವರು, ರಜಪೂತರರು, ಭೂಮಿಹಾರರಿಗೆ ಹಿಡಿಸುತ್ತಿಲ್ಲ. ಈ ಕೋಪ ಚುನಾವಣೆ ಅಸ್ತ್ರವಾಗುತ್ತಿದ್ಯಾ ಅನ್ನೋ ಲೆಕ್ಕಚಾರ ನಡೆಯುತ್ತಿದೆ.
ಇನ್ನು ಈ ಮಧ್ಯಮ ವರ್ಗದ ಯಾದವರು, ಸ್ಯಾನ್ಸ್ಕ್ರಿಟೈಜ್ ಆದ ಯಾದವರು, ಶ್ರೀಮಂತ ಯಾದವರು ಮೋದಿಯವರನ್ನು ಒಪ್ಪಿಕೊಂಡು, ಚುನಾವಣೆಯಲ್ಲಿ ಅಪ್ಪಿಕೊಳ್ಳುತ್ತಾರೆ ಎನ್ನಲಾಗುತ್ತಿದೆ. ಇಷ್ಟರ ನಡುವೆ ಮೋದಿಯವ ವಿರುದ್ದ ಯಾರು ಮಾತಾಡುತ್ತಿಲ್ಲ.
ಇತ್ತ ನಿತೀಶ್ ವಿರುದ್ದ ಸೆಟೆದು ನಿಂತಿರುವ ಚಿರಾಗ್ ಪಾಸ್ವಾನ್, ಕೇಂದ್ರ ಮತ್ತು ಮೋದಿಯವರಿಗೆ ಜೈ ಅನ್ನುತ್ತಿದ್ದಾರೆ. ಇನ್ನು ಲಾಲೂಪ್ರಸಾದ್ ಅವರು ಜೈಲಿನಲ್ಲಿದ್ದಾರೆ. ಹೊರಗಡೆ ಕಿತ್ತಾಡುತ್ತಿರುವ ಲಾಲೂ ಅವರ ಮಕ್ಕಳು, ಹೊರಗಡೆ ಮೋದಿಯವರ ವಿರುದ್ದ ಮಾತಾಡುತ್ತಿಲ್ಲ. ಹಾಗಾಗಿ ಈಗ ಮೋದಿಯವರೇ ಬ್ರಾಂಡ್. ಮೋದಿಯವರು ನಿತೀಶ್ ಪರ ನಿಂತಿರುವ ಕಾರಣಕ್ಕೆ ಅಧಿಕಾರ ಹಿಡಿಯುವ ಆಸೆ ಸ್ವಲ್ಪ ಇನ್ನೂ ಜೀವಂತವಾಗಿದೆ.
15 ಜಿಲ್ಲೆಯಗಳಲ್ಲಿ ನಿರಂತರ ಪ್ರವಾಹ, ಅಲ್ಲಿನ ಜನರ ಬವಣೆ, 'ಮದ್ಯ ಮನೆಗೆ ಸೇವೆ' ಅನ್ನೋ ಹೆಸರಲ್ಲಿ ಪೊಲೀಸರ ಲೂಟಿಯ ಬಗ್ಗೆ ಬಿಹಾರಿಗಳಲ್ಲಿ ಸ್ವಲ್ಪ ಅಸಮಧಾನ ಇದೆ. ಐದಾರು ವರ್ಷಗಳ ಹಿಂದೆ ನಮ್ಮೂರಿಗೆ ಬಿಝಲಿ ಬಂತು, ನಮ್ಮೂರಿಗೆ ಸಡಕ್ ಬಂದಿದ್ದೂ ನಮ್ಮ ಮುಂದೇನೆ ಅನ್ನೋ ಯುವಕರು ಇನ್ನೂ ನಿತೀಶ್ ಅವರ ಜೊತೆಯಲ್ಲೇ ಇದ್ದಾರೆ.
ಬಹುಸಂಖ್ಯಾತ ಕೂರ್ಮಿಗಳು ಮತ್ತು ಅವರ ಜೊತೆಯಲ್ಲೇ ಹೆಜ್ಜೆ ಹಾಕುವ ಕೊರ್ಯಿಗಳು ಯಾರ ಪರ ವಾಲುತ್ತಾರೋ ಅವರದ್ದೇ ಗೆಲುವಿನ ಹೆಜ್ಜೆ. ಇನ್ನು ಯಾದವರು ಮೋದಿ ಮತ್ತು ಲಾಲೂ ಅವರಲ್ಲಿ ಹಂಚಿಕೆಯಾಗಿ ಹೋಗಿದ್ದಾರೆ. ಆದ್ರೂ ಯಾದವರ ಮೊದಲ ಆದ್ಯತೆ ಲಾಲೂ ಅನ್ನೋದು ಗೌಣ ಅಲ್ಲ.
ಇತ್ತ ನಿತೀಶ್ ಸಾಹೇಬ್ರು ಎಲ್ಲರಿಗೂ ಬೇಕಾದವರಾಗಿದ್ದು ಒಂದಷ್ಟು ಮುಸ್ಲಿಂ ಮತಗಳನ್ನು ಸೆಳೆಯುತ್ತಾರೆ. ಬುದ್ಧಿವಂತ ರಜಪೂತರು ಬಿಜೆಪಿಯ ತೆಕ್ಕೆಯಲ್ಲಿದ್ದಾರೆ. ಕೊರೋನಾ ಕಾಲದಲ್ಲಿ ನಮಗೆ ಸೌಲಭ್ಯ ಒದಗಿಸಿಲ್ಲ ಅನ್ನೋ ಅಸಮಾಧಾನ ಮತದಾರರಲ್ಲಿದ್ದರೂ ಬಿಹಾರಿಗಳ ದೊಡ್ಡ ಹಬ್ಬ 'ಶಟ್' ಪೂಜೆಯ ಹೊತ್ತಲ್ಲಿ ನೆರವಿಗೆ ಬಂದಿದ್ದು ಮರೆಯಲ್ಲ ಎನ್ನುತ್ತಿದ್ದಾರೆ ಬಿಹಾರ್ ವಾಲಾಗಳು.