ಎಎಸ್‌ಐ ವರದಿಯಲ್ಲಿ ಜ್ಞಾನವಾಪಿ ಮಸೀದಿಯನ್ನು ಮಂದಿರ ಕೆಡವಿ ನಿರ್ಮಾಣ ಮಾಡಲಾಗಿತ್ತು ಎನ್ನುವ ಮಾಹಿತಿ ಬಂದಿದ್ದಲ್ಲದೆ, ಇಲ್ಲಿ ತೆಲುಗು, ಕನ್ನಡ ಹಾಗೂ ದೇವನಾಗರಿ ಭಾಷೆಯ ಶಾಸನಗಳು ಸಿಕ್ಕಿವೆ ಎಂದು ವರದಿಯಾಗಿತ್ತು. ಈ ನಡುವೆ ಸಿಕ್ಕ ಮೂರು ತೆಲುಗು ಶಾಸನಗಳ ವಿವರವನ್ನು ಪತ್ತೆ ಮಾಡಲಾಗಿದೆ.
ಹೈದರಾಬಾದ್ (ಜ.30): ವಾರಣಾಸಿಯ ಜ್ಞಾನವಾಪಿ ಮಸೀದಿಯ ಗೋಡೆಗಳ ಮೇಲೆ ದೊರೆತ ಮೂರು ತೆಲುಗು ಶಾಸನಗಳ ವಿವರಗಳನ್ನು ಮೈಸೂರಿನ ಪುರಾತತ್ವ ಸರ್ವೇಕ್ಷಣಾ ಇಲಾಖೆ ಎಪಿಗ್ರಫಿ ವಿಭಾಗವು ಪತ್ತೆ ಮಾಡಿದೆ. ಎಎಸ್‌ಐ ನಿರ್ದೇಶಕ (ಎಪಿಗ್ರಫಿ) ಕೆ.ಮುನಿರತ್ನಂ ರೆಡ್ಡಿ ನೇತೃತ್ವದ ತಜ್ಞರ ತಂಡವು ತೆಲುಗಿನ ಮೂರು ಶಾಸನ ಸೇರಿದಂತೆ 34 ಶಾಸನಗಳನ್ನು ಅರ್ಥೈಸಿ, ಕಾಶಿ ವಿಶ್ವನಾಥ ದೇವಾಲಯದ ಅಸ್ತಿತ್ವದ ಬಗ್ಗೆ ವರದಿಯನ್ನು ಸಲ್ಲಿಕೆ ಮಾಡಿದೆ. ಈ ಕುರಿತಾಗಿ ಮಾಹಿತಿ ನೀಡಿರುವ ಮುನಿರತ್ನಂ ಅವರು 17 ನೇ ಶತಮಾನದಷ್ಟು ಹಿಂದಿನ ಶಾಸನಗಳಲ್ಲಿ ನಾರಾಯಣ ಭಟ್ಲು ಅವರ ಮಗ ಮಲ್ಲನ ಭಟ್ಲು ಅವರಂತಹ ವ್ಯಕ್ತಿಗಳ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ. "ನಾರಾಯಣ ಭಟ್ಲು 1585 ರಲ್ಲಿ ಕಾಶಿ ವಿಶ್ವನಾಥ ದೇವಾಲಯದ ನಿರ್ಮಾಣವನ್ನು ಮೇಲ್ವಿಚಾರಣೆ ಮಾಡಿದ ತೆಲುಗು ಬ್ರಾಹ್ಮಣ ಎಂದು ಇದರಲ್ಲಿ ತಿಳಿಸಲಾಗಿದೆ. ಜಾನ್‌ಪುರದ ಹುಸೇನ್ ಶಾರ್ಕಿ ಸುಲ್ತಾನ್ (1458-1505) 15 ನೇ ಶತಮಾನದಲ್ಲಿ ಕಾಶಿ ವಿಶ್ವನಾಥ ದೇವಾಲಯವನ್ನು ಕೆಡವಲು ಆದೇಶಿಸಿದ್ದ ಎನ್ನುವ ವಿವರ ಇದರಲ್ಲಿದ್ದು, ದೇವಾಲಯವನ್ನು 1585 ರಲ್ಲಿ ಪುನರ್ನಿರ್ಮಿಸಲಾಯಿತು. ರಾಜಾ ತೋಡರಮಲ್ಲ ಅವರು ದಕ್ಷಿಣ ಭಾರತದ ಪರಿಣಿತರಾದ ನಾರಾಯಣ ಭಟ್ಲು ಅವರನ್ನು ದೇವಾಲಯದ ನಿರ್ಮಾಣದ ಮೇಲ್ವಿಚಾರಣೆಗೆ ಕೇಳಿಕೊಂಡರು ಎಂದು ಹೇಳಲಾಗಿದೆ. ಪ್ರಸ್ತುತ ಶಾಸನವು ಮೇಲಿನ ಸಂಗತಿಯನ್ನು ತಿಳಿಸಿದೆ” ಎಂದು ಮುನಿರತ್ನಂ ಹೇಳಿದ್ದಾರೆ.
ಈ ಶಾಸನವನ್ನು ಜ್ಞಾನವಾಪಿ ಮಸೀದಿಯ ಗೋಡೆಯ ಮೇಲೆ ಕೆತ್ತಲಾಗಿದೆ ಮತ್ತು ಅದನ್ನು ತೆಲುಗು ಭಾಷೆಯಲ್ಲಿ ಬರೆಯಲಾಗಿದೆ. ಅದು ಹಾಳಾಗಿದ್ದು, ಅಪೂರ್ಣವಾಗಿದ್ದರೂ ಮಲ್ಲನ ಭಟ್ಲು ಮತ್ತು ನಾರಾಯಣ ಭಟ್ಲು ಎಂದು ನಮೂದಿಸಲಾಗಿದೆ ಎಂದು ಎಎಸ್‌ಐ ನಿರ್ದೇಶಕರು ತಿಳಿಸಿದ್ದಾರೆ. ಮಸೀದಿಯೊಳಗೆ ದೊರೆತ ಎರಡನೇ ತೆಲುಗು ಶಾಸನವು ‘ಗೋವಿ’ಯ ಉಲ್ಲೇಖವನ್ನು ಮಾಡಿದೆ. ಗೋವಿಗಳು ಎಂದರೆ ಕುರುಬರು ಎನ್ನುವ ಅರ್ಥವಾಗಿದೆ.
ಮೂರನೆಯ ಶಾಸನವು 15 ನೇ ಶತಮಾನದಷ್ಟು ಹಿಂದಿನದಾಗಿದೆ. ಮಸೀದಿಯ ಉತ್ತರ ಭಾಗದಲ್ಲಿರುವ ಮುಖ್ಯ ದ್ವಾರದಲ್ಲಿ ಎಎಸ್‌ಐ ತಜ್ಞರು ಇದನ್ನು ಕಂಡುಹಿಡಿದ್ದಾರೆ. ಇದು 14 ಸಾಲುಗಳನ್ನು ಹೊಂದಿದ್ದು, ಸಂಪೂರ್ಣವಾಗಿ ಸವೆದುಹೋಗಿದೆ. "ಈ ಶಾಸನಗಳು ಹಾನಿಗೊಳಗಾಗಿದ್ದು, ಇತರ ವಿವರಗಳು ಕಳೆದುಹೋಗಿವೆ, ”ಎಂದು ತಜ್ಞರು ತಿಳಿಸಿದ್ದಾರೆ. ತೆಲುಗಲ್ಲದೆ ಕನ್ನಡ, ದೇವನಾಗರಿ ಮತ್ತು ತಮಿಳು ಭಾಷೆಗಳಲ್ಲಿ ಶಾಸನಗಳಿದ್ದವು. ಎಎಸ್‌ಐ ಎಪಿಗ್ರಫಿ ವಿಭಾಗವು ಈ ಹಿಂದೆ ಅಯೋಧ್ಯೆಯಲ್ಲಿ ದೊರೆತ ಸಂಸ್ಕೃತ ಶಾಸನಗಳ ವಿವರಗಳನ್ನು ಪತ್ತೆ ಮಾಡಿತ್ತು.
ಜ್ಞಾನವಾಪಿ ಮಸೀದಿ ನಿರ್ಮಾಣಕ್ಕೂ ಮುನ್ನ ಅಲ್ಲಿ ಮಂದಿರವಿತ್ತು: ಎಎಸ್‌ಐ ವರದಿಯಲ್ಲಿ ಬಹಿರಂಗ!
“ಈ ಶಾಸನಗಳನ್ನು ಕಲ್ಲಿನ ಚಪ್ಪಡಿಯಲ್ಲಿ ಕೆತ್ತಲಾಗಿದೆ ಮತ್ತು ಅಯೋಧ್ಯೆಯಲ್ಲಿ ದೇವಸ್ಥಾನ ನೆಲಸಮ ಮಾಡುವಾಗ ಇದು ಸಿಕ್ಕಿತ್ತು. ಇದನ್ನು ಸಂಸ್ಕೃತ ಭಾಷೆ ಮತ್ತು ಸುಮಾರು 12-13 ನೇ ಶತಮಾನದ ನಾಗರಿ ಅಕ್ಷರಗಳಲ್ಲಿ ಬರೆಯಲಾಗಿದೆ. ಇದು ನಪಾಲ ಕಾಮ ಎಂಬ ವ್ಯಕ್ತಿಯಿಂದ ಭಗವಾನ್ ರಾಮನಿಗೆ ನಮನ ಸಲ್ಲಿಸಿರುವುದನ್ನು ದಾಖಲಿಸಿರುವಂತಿದೆ,” ಎಂದು ಮುನಿರತ್ನಂ ಅಯೋಧ್ಯೆಯಲ್ಲಿ ಸಿಕ್ಕ ಸಂಸ್ಕೃತ ಶಾಸನಗಳ ಬಗ್ಗೆ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಜ್ಞಾನವಾಪಿಗೆ ಕನ್ನಡದ ನಂಟು, ಪುರಾತತ್ವ ಸರ್ವೆಯಲ್ಲಿ ಸಿಕ್ಕಿದ ಕನ್ನಡ ಶಾಸನವಿದು!