ಉದ್ಧವ್‌ ಠಾಕ್ರೆ ವಿಶ್ವಾಸಮತಕ್ಕೆ ಸೂಚಿಸಿದ ಗೌರ್ನರ್‌ ಬಗ್ಗೆ ಸುಪ್ರೀಂ ಕಿಡಿ: ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದ ಕೋರ್ಟ್‌

By Kannadaprabha NewsFirst Published Mar 16, 2023, 12:57 PM IST
Highlights

ಉದ್ಧವ್‌ ಠಾಕ್ರೆಗೆ ವಿಶ್ವಾಸಮತಕ್ಕೆ ಸೂಚಿಸಿದ ಗವರ್ನರ್‌ ಬಗ್ಗೆ ಸುಪ್ರೀಂಕೋರ್ಟ್‌ ಅತೃಪ್ತಿ ವ್ಯಕ್ತಪಡಿಸಿದೆ. 3 ವರ್ಷ ಸರ್ಕಾರ ನಡೆಸಿದ ಬಳಿಕ ಬಂಡಾಯ ಏಕೆಂದು ಶಾಸಕರನ್ನು ಕೇಳಬೇಕಿತ್ತು. ರಾಜ್ಯಪಾಲರ ನಡೆ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಪಂಚಸದಸ್ಯ ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ. 

ನವದೆಹಲಿ (ಮಾರ್ಚ್‌ 16, 2023): ‘ಆಡಳಿತ ಪಕ್ಷದಲ್ಲಿನ ಶಾಸಕರ ಅತೃಪ್ತಿಯನ್ನೇ ಆಧರಿಸಿ ವಿಶ್ವಾಸಮತ ಯಾಚನೆಗೆ ರಾಜ್ಯಪಾಲರು ಕರೆಯುವುದು ತಪ್ಪು. ಇದು ಚುನಾಯಿತ ಸರ್ಕಾರದ ಪತನಕ್ಕೆ ಕಾರಣವಾಗುತ್ತದೆ. ಇಂಥ ನಿರ್ಣಯಗಳು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ’ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಮಹಾರಾಷ್ಟ್ರ ರಾಜಕೀಯದಲ್ಲಿ 2022ರಲ್ಲಿ ಭಾರಿ ಬದಲಾವಣೆ ಆಗಿತ್ತು. ಏಕನಾಥ ಶಿಂಧೆ ಬಣದ 34 ಶಾಸಕರು ಶಿವಸೇನೆಯಿಂದ ಬಂಡೆದ್ದು, ಬಿಜೆಪಿ ಜತೆ ಕೈಜೋಡಿಸಿದ್ದರು. ಇದಕ್ಕೆ ಸಂಬಂಧಿಸಿದ ಪಕ್ಷಾಂತರ, ಅನರ್ಹತೆ ಹಾಗೂ ವಿಲೀನ ಕುರಿತಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸುತ್ತಿದೆ. ಈ ವೇಳೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರ ಪಂಚಸದಸ್ಯ ಸಾಂವಿಧಾನಿಕ ಪೀಠ ಬುಧವಾರ ಈ ಮಹತ್ವದ ಅನಿಸಿಕೆ ವ್ಯಕ್ತಪಡಿಸಿದೆ.

ಇದನ್ನು ಓದಿ: ಸೇನೆಯ ಹೆಸರು, ಚಿಹ್ನೆ ಖರೀದಿಸಲು 2,000 ಕೋಟಿ ರೂ. ಡೀಲ್: ಸಂಜಯ್ ರಾವತ್ ಸ್ಫೋಟಕ ಆರೋಪ

ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಅಂದು ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಭಗತ್‌ ಸಿಂಗ್‌ ಕೋಶ್ಯಾರಿ ಪರ ವಾದ ಮಂಡಿಸಿ, ‘34 ಶಿವಸೇನೆ ಶಾಸಕರು ಹಾಗೂ ಕೆಲವು ಪಕ್ಷೇತರರು ಉದ್ಧವ್‌ ಠಾಕ್ರೆಗೆ ನಮ್ಮ ಬೆಂಬಲ ಹಿಂಪಡೆಯುತ್ತಿದ್ದೇವೆ ಎಂದು ಗವರ್ನರ್‌ಗೆ ಪತ್ರ ಬರೆದಿದ್ದರು. ಇದನ್ನು ಆಧರಿಸಿ ರಾಜ್ಯಪಾಲ ಕೋಶ್ಯಾರಿ ವಿಶ್ವಾಸಮತ ಯಾಚಿಸುವಂತೆ ಉದ್ಧವ್‌ ಠಾಕ್ರೆಗೆ ಕೋರಿದರು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಭಿನ್ನಾಭಿಪ್ರಾಯಗಳು ಪಕ್ಷಗಳಲ್ಲಿ ಅನೇಕ ವಿಚಾರಗಳಿಗೆ ಉಂಟಾಗುತ್ತವೆ. ಅಭಿವೃದ್ಧಿಗೆ ಹಣ, ಪಕ್ಷದ ತತ್ವ ಉಲ್ಲಂಘನೆ.....ಮುಂತಾದ ವಿಷಯಗಳಲ್ಲಿ ಅತೃಪ್ತಿ ಸೃಷ್ಟಿಆಗುತ್ತಿರುತ್ತವೆ. ಶಾಸಕರು ಬರೆದ ಪತ್ರದಲ್ಲಿ ‘ಠಾಕ್ರೆ ಬಗ್ಗೆ ಪಕ್ಷದಲ್ಲಿ ವ್ಯಾಪಕ ಅತೃಪ್ತಿ ಇದೆ’ ಎಂದು ಬರೆಯಲಾಗಿದೆ. ಆದರೆ ವಿಶ್ವಾಸಮತ ಯಾಚನೆಗೆ ಇಂಥ ವಿಷಯಗಳು ಮಾನದಂಡ ಆಗುವುದಿಲ್ಲ. ಇದನ್ನೇ ಮಾನದಂಡ ಮಾಡಿಕೊಂಡು ಹೊರಟರೆ ಶಾಸಕರು ಪಕ್ಷಾಂತರ ಮಾಡುತ್ತಲೇ ಹೋಗುತ್ತಾರೆ. ರಾಜ್ಯಪಾಲರು ಸರ್ಕಾರ ಬೀಳಿಸುತ್ತಲೇ ಹೋಗುತ್ತಾರೆ’ ಎಂದಿತು.

ಇದನ್ನೂ ಓದಿ: ಶಿವಸೇನೆಯ ಚಿಹ್ನೆ ಕದ್ದ ಕಳ್ಳನಿಗೆ ತಕ್ಕ ಪಾಠ ಕಲಿಸಿ; ಚುನಾವಣಾ ಆಯೋಗ ಮೋದಿ ಗುಲಾಮ: ಉದ್ಧವ್‌ ಠಾಕ್ರೆ ಕಿಡಿ

‘ಹೀಗಾಗಿ ವಿಶ್ವಾಸಮತ ಯಾಚನೆಗೆ ಕರೆಯುವ ಮುನ್ನ ರಾಜ್ಯಪಾಲರು 34 ಶಾಸಕರನ್ನು ಕರೆದು, ‘3 ವರ್ಷ ನೀವು ಕಾಂಗ್ರೆಸ್‌-ಎನ್‌ಸಿಪಿ ಜತೆಗೆ ‘ಸಂತೋಷದ ಮದುವೆ’ ಮಾಡಿಕೊಂಡಿದ್ದಿರಿ. ಏಕೆ ಹಠಾತ್ತಾಗಿ ನೀವು ಮೈತ್ರಿಯಿಂದ ಹೊರಬೀಳುತ್ತಿದ್ದೀರಿ? ವಿಚ್ಛೇದನ ಮಾಡಿಕೊಳ್ಳುತ್ತಿದ್ದೀರಿ?’ ಎಂದು ಪ್ರಶ್ನಿಸಬೇಕಿತ್ತು. ಬಂಡಾಯ ಶಾಸಕರು ಮುಂದಿನ ಸರ್ಕಾರದಲ್ಲಿ ಮಂತ್ರಿಗಳಾಗಲಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿತ್ತು’ ಎಂದು ಕಟುವಾಗಿ ನುಡಿಯಿತು.

ಇದನ್ನೂ ಓದಿ: ಇಂದಿರಾ ಗಾಂಧಿಯೂ ಇದೇ ಪರಿಸ್ಥಿತಿ ಎದುರಿಸಿದ್ರು: ಶಿವಸೇನೆ ಚಿಹ್ನೆ ಕಳೆದುಕೊಂಡ ಉದ್ಧವ್ ಠಾಕ್ರೆ ಸಂತೈಸಿದ ಶರದ್ ಪವಾರ್

click me!