ಕೊರೋನಾ ಲಸಿಕೆಯ ಎರಡನೇ ಡೋಸ್ ಮತ್ತು ಮುಂಜಾಗ್ರತಾ ಡೋಸ್ ನಡುವಿನ ಅಂತರವನ್ನು ಸರ್ಕಾರ ಶೀಘ್ರವೇ 6 ತಿಂಗಳಿಗೆ ಇಳಿಸುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.
ನವದೆಹಲಿ (ಏ.28): ಕೊರೋನಾ ಲಸಿಕೆಯ (Covid Vaccine) ಎರಡನೇ ಡೋಸ್ ಮತ್ತು ಮುಂಜಾಗ್ರತಾ ಡೋಸ್ (Booster Dose) ನಡುವಿನ ಅಂತರವನ್ನು ಸರ್ಕಾರ ಶೀಘ್ರವೇ 6 ತಿಂಗಳಿಗೆ ಇಳಿಸುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ. ಸದ್ಯ ಈ ಡೋಸ್‌ಗಳ ನಡುವೆ 9 ತಿಂಗಳ ಅಂತರ ಇದೆ. ಲಸಿಕೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು ಏ.29ರಂದು ನಿಗದಿಯಾಗಿರುವ ಸಭೆಯಲ್ಲಿ ಲಸಿಕೆ ನಡುವಿನ ಅಂತರವನ್ನು ತಗ್ಗಿಸುವ ಬಗ್ಗೆ ಶಿಫಾರಸು ಮಾಡಲಿದೆ ಎಂದು ತಿಳಿಸಿದ್ದಾರೆ.
2 ಡೋಸ್ ಪಡೆದ 6 ತಿಂಗಳ ನಂತರ ಮನುಷ್ಯನ ದೇಹದಲ್ಲಿ ಪ್ರತಿರೋಧ ಶಕ್ತಿ ಕುಗ್ಗುತ್ತದೆ. ಹೀಗಾಗಿ ಬೂಸ್ಟರ್ ಡೋಸ್ ನೀಡಬೇಕು ಎಂದು ಐಸಿಎಂಆರ್ (ICMR) ಮತ್ತು ಇತರ ಅಂತಾರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು ಸಲಹೆ ನೀಡಿದ್ದವು. ಈ ಎಲ್ಲಾ ವೈಜ್ಞಾನಿಕ ಸಂಶೋಧನೆಗಳ ಆಧಾರದಲ್ಲಿ ಎರಡನೇ ಡೋಸ್ ಮತ್ತು ಮುನ್ನೆಚ್ಚರಿಕಾ ಡೋಸ್ ನಡುವಿನ ಅಂತರವನ್ನು 6 ತಿಂಗಳಿಗೆ ತಗ್ಗಿಸಲು ಸರ್ಕಾರ ಚಿಂತನೆ ನಡೆಸಿದೆ. ಶೀಘ್ರವೇ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
undefined
Covid Crisis: ವಿದೇಶಕ್ಕೆ ಹೋಗುವವರಿಗೆ ಶೀಘ್ರ ಬೂಸ್ಟರ್ ಡೋಸ್?
ಬೂಸ್ಟರ್ ಡೋಸ್ ಬಗ್ಗೆ ನಿರ್ಲಕ್ಷ್ಯ ಬೇಡ: 18 ರಿಂದ 59 ವರ್ಷ ವಯೋಮಾನದವರು ಬೂಸ್ಟರ್ ಡೋಸ್ ಕೊರೋನಾ ಲಸಿಕೆ (Vaccination) ಪಡೆಯಲು ನೀರಸ ಪ್ರತಿಕ್ರಿಯೆ ತೋರುತ್ತಿರಲು ಮುಖ್ಯ ಕಾರಣ 2ನೇ ಡೋಸ್ ಮತ್ತು ಮುನ್ನೆಚ್ಚರಿಕಾ ಡೋಸ್ ಲಸಿಕೆ ನಡುವೆ 9 ತಿಂಗಳ ಅಂತರವಿರುವುದು ಕಾರಣ. ಇದಲ್ಲದೆ ಕೋವಿಡ್ ಹೋಗಿದೆ ಎಂಬ ಉದಾಸೀನವೂ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಬೂಸ್ಟರ್ ಡೋಸ್ (Booster Dose) ಬಗ್ಗೆ ನಿರ್ಲಕ್ಷ್ಯ ಬೇಡ ಎಂದೂ ಎಚ್ಚರಿಸಿದ್ದಾರೆ.
ಎರಡು ಡೋಸ್ ಲಸಿಕೆ ಪಡೆದ ನಾಲ್ಕೈದು ತಿಂಗಳ ಬಳಿಕ ಪ್ರತಿಕಾಯ ಶಕ್ತಿ ಕುಗ್ಗಲು ಆರಂಭವಾಗುತ್ತದೆ. 9 ತಿಂಗಳ ವೇಳೆಗೆ ಅದು ಕನಿಷ್ಠ ಪ್ರಮಾಣಕ್ಕೆ ಇಳಿಕೆಯಾಗಿರುತ್ತದೆ. ಹೀಗಾಗಿ ಎರಡನೇ ಡೋಸ್ ಲಸಿಕೆ ಪಡೆದ 6 ತಿಂಗಳ ನಂತರ ಮುನ್ನೆಚ್ಚರಿಕಾ ಡೋಸ್ ಲಸಿಕೆ ಪಡೆಯುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ. ಹಾಗೆಯೇ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಮುನ್ನೆಚ್ಚರಿಕಾ ಲಸಿಕೆ ಬಗ್ಗೆ ಅರಿವಿನ ಕೊರತೆ ಇದೆ ಎಂದು ಏಮ್ಸ್ ಮುಖ್ಯಸ್ಥ (AIMS chief)ರಣದೀಪ್ ಗುಲೇರಿಯಾ (Randeep Guleriya) ಹೇಳಿದ್ದಾರೆ.
ಇದೇ ವೇಳೆ ಕೊರೋನಾ ಅಂತ್ಯವಾಗಿಲ್ಲ. ಯಾವುದೇ ಸಮಯದಲ್ಲಿ ಹೊಸ ರೂಪಾಂತರಿ ತಳಿಗಳ ಉಗಮವಾಗಬಹುದು. ಹಾಗಾಗಿ ಮುನ್ನೆಚ್ಚರಿಕಾ ಲಸಿಕೆ ಪಡೆಯಲು ಯಾರು ಅರ್ಹರೋ ಅಂಥವರು ಅಲಕ್ಷ್ಯಿಸದೇ ಲಸಿಕೆ ಪಡೆಯಬೇಕು ಎಂದು ಹೇಳಿದ್ದಾರೆ. ಹಿಂದಿನಂತೆ ಜನರು ಈಗ ಸಾಂಕ್ರಾಮಿಕಕ್ಕೆ ಹೆದರುತ್ತಿಲ್ಲ. ಕೊರೋನಾ ಪ್ರಕರಣಗಳು ತಗ್ಗುತ್ತಿರುವುದರಿಂದ ಕೋವಿಡ್ ಬಗ್ಗೆ ಜನರಲ್ಲಿ ನಿರ್ಲಕ್ಷ್ಯ ಮನೋಭಾವ ಮೂಡಿದೆ. ಆದರೆ ಬೂಸ್ಟರ್ ಡೋಸ್ ಲಸಿಕೆ ಪಡೆಯಲು ನಿರ್ಲಕ್ಷ್ಯ ಬೇಡ. ನಿರ್ದಿಷ್ಟ ಸಮಯದ ಬಳಿಕ ಜನರಲ್ಲಿ ಅದರಲ್ಲೂ ಒಂದಕ್ಕಿಂತ ಹೆಚ್ಚು ಕಾಯಿಲೆಗಳಿರುವವರಲ್ಲಿ ಪ್ರತಿಕಾಯ ಶಕ್ತಿ ಕುಗ್ಗುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಎಚ್ಚರಿಸಿದ್ದಾರೆ.
3ನೇ ಡೋಸ್‌ಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯೇ ಇಲ್ಲ!
18-59 ವರ್ಷ ವಯೋಮಾನದವರಿಗೆ ಬುಧವಾರ ದೇಶಾದ್ಯಂತ 16,352 ಡೋಸ್ ಲಸಿಕೆ ವಿತರಿಸಲಾಗಿದ್ದು, ಈವರೆಗೆ ಒಟ್ಟಾರೆ 62,683 ಮುನ್ನೆಚ್ಚರಿಕಾ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ. ಇತ್ತ ಕೋವಿಡ್ ಲಸಿಕೆಯ (Covid 19 Vaccine) ಬೂಸ್ಟರ್ ಡೋಸ್ ಗಳು (Booster Dose) ಎಲ್ಲಾ ಭಾರತೀಯ ವಯಸ್ಕರಿಗೆ ಲಭ್ಯವಾಗುವ ಒಂದು ದಿನದ ಮೊದಲು, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್ (Covishield ) ಮತ್ತು ಕೋವಾಕ್ಸಿನ್ (Covaxin ) ಬೆಲೆಗಳನ್ನು ಅರ್ಧಕ್ಕಿಂತ ಹೆಚ್ಚು ಕಡಿತಗೊಳಿಸಲಾಗಿದೆ. ಎರಡೂ ಲಸಿಕೆ ಡೋಸ್‌ಗಳ ಬೆಲೆ ಈಗ ರೂ. 225 ಆಗಿರುತ್ತದೆ.