India Gate ಸೊಸೆಯಂದಿರ ಪೈಪೋಟಿಗೆ ದೇವೇಗೌಡರು ಸುಸ್ತು, ಕಾಂಗ್ರೆಸ್‌ಗೆ ತಲೆನೋವಾದ ಗೆಹ್ಲೋಟ್ ಮಾತು!

By Suvarna NewsFirst Published Jan 6, 2023, 3:09 PM IST
Highlights

ರಾಜ್ಯದಲ್ಲಿ ಚುನಾವಣೆ ಕಾವು ಹೆಚ್ಚಾದಂತೆ ದೊಡ್ಡ ಗೌಡರ ಕುಟುಂಬ ಸಕ್ರಿಯವಾಗಿದೆ. ಮಗ, ಸೊಸೆ, ಮೊಮ್ಮಗ, ಬೀಗ ಸೇರಿದಂತೆ ಕುಟುಂಬದ ಬಹುತೇಕರು ಕಣದಲ್ಲಿದ್ದಾರೆ. ಸೊಸೆಯರ ಪೈಪೋಟಿ ಇದೀಗ ದೇವೇಗೌಡರಿಗೆ ತಲೆನೋವಾಗಿದೆ. ಇತ್ತ ಅಶೋಕ್ ಗೆಹ್ಲೋಟ್ ಸಿಎಂ ಸ್ಥಾನಕ್ಕೆ ಹಾಕಿದ ಟವೆಲ್‌ಗೆ ಹೈಕಮಾಂಡ್ ಸುಸ್ತಾಗಿದ್ರೆ, ರಾಜಸ್ಥಾನ ಬಿಜೆಪಿಯಲ್ಲೂ ತಣ್ಣನೆ ಹಾಳಿ ಬಿರುಗಾಳಿಯಾಗುವ ಸಾಧ್ಯತೆ ಇದೆ. ಈ ಎಲ್ಲಾ ಕುತೂಹಲ ಬೆಳವಣಿಗೆ ಇಂದಿನ ಇಂಡಿಯಾ ಗೇಟ್ ಅಂಕಣದಲ್ಲಿ.
 

ಸೊಸೆಯಂದಿರ ಪೈಪೋಟಿಗೆ ಮಾಜಿ ಪ್ರಧಾನಿ ದೇವೇಗೌಡರು ಫುಲ್ ಸುಸ್ತು!
ಕುಟುಂಬ ರಾಜಕಾರಣ ಈ ದೇಶಕ್ಕೆ ಹೊಸತಲ್ಲ. ಇನ್ನು ಕರುನಾಡ ಪಾಲಿಗೆ ಕುಟುಂಬ ರಾಜಕಾರಣ ಎಂದ ಕೂಡಲೇ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಕುಟುಂಬ ನೆನಪಾಗುತ್ತದೆ.  ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಕರ್ನಾಟಕದಲ್ಲಿ ಈ ಬಾರಿ ಗೌಡರ ಕುಟುಂಬದ ಎಷ್ಟು ಮಂದಿ ಶಾಸಕರಾಗಬಹುದು ಎಂಬ ಚರ್ಚೆ ಹಳೆ ಮೈಸೂರು ಭಾಗದಲ್ಲಿ ಈಗಾಗಲೇ ಆರಂಭವಾಗಿದೆ. ಇದರ ಜತೆಗೆ ಗೌಡರ ಕುಟುಂಬದ ಹೆಣ್ಣು ಮಕ್ಕಳ ಮತ್ಸರದ ಬಗ್ಗೆ ಮಸಾಲೆದಾರ್ ಚರ್ಚೆಗಳು ಶುರುವಾಗಿವೆ. 

ದೇವೇಗೌಡರ ಕುಟುಂಬದಲ್ಲಿ ಒಬ್ಬರು ರಾಜ್ಯಸಭಾ ಸದಸ್ಯ (ದೇವೇಗೌಡ) ಒಬ್ಬ ಸಂಸದ ( ಮೊಮ್ಮಗ ಪ್ರಜ್ವಲ್), ಐದು ಮಂದಿ ವಿಧಾನಸಭಾ ಸದಸ್ಯರು (ಮಕ್ಕಳಾದ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ, ಸೊಸೆ ಅನಿತಾ ಕುಮಾರಸ್ವಾಮಿ, ಬೀಗ ಡಿ.ಸಿ. ತಮ್ಮಣ್ಣ ಮತ್ತು ಸಂಬಂಧಿ  ಬಾಲಕೃಷ್ಣ ) ಹಾಗೂ ಒಬ್ಬ ವಿಧಾನ ಪರಿಷತ್ ಸದಸ್ಯ ( ಮೊಮ್ಮಗ ಸೂರಜ್) ಇದ್ದಾರೆ. ಇದಲ್ಲದೆ, ಹಾಸನ ಜಿಲ್ಲಾ ಪಂಚಾಯತಿ ಸದಸ್ಯರು (ಮತ್ತೊಬ್ಬ ಸೊಸೆ ಭವಾನಿ ರೇವಣ್ಣ) ಇದ್ದಾರೆ.

ಸಂಕಷ್ಟದಲ್ಲಿ ಪಿಣರಾಯಿಗೆ ಕೈ ಹಿಡಿದ ಹವಾಮಾನ, ಕಾಂಗ್ರೆಸ್‌ಗೆ ತಲೆನೋವಾದ ತಮಿಳುನಾಡು-ತೆಲಂಗಾಣ!

ಈ ಬಾರಿ ಮತ್ತೆಷ್ಟು ಮಂದಿ ಜನಪ್ರತಿನಿಧಿಗಳು ಈ ಕುಟುಂಬದಿಂದ ತಯಾರಾಗಬಹುದು ಎಂದು ಚರ್ಚೆ ಜತೆಗೆ ಮಹಿಳಾ ಮತ್ಸರದ ಆ್ಯಂಗಲ್ ಕೂಡ ಸೇರ್ಪಡೆಯಾಗಿದೆ. ಜೆಡಿಎಸ್ ಈಗಾಗಲೇ ಪ್ರಕಟಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ  ಮೂವರು ಗೌಡರ ಕುಟುಂಬದವರೇ ಇದ್ದಾರೆ. ಅದು- ಎಚ್.ಡಿ. ಕುಮಾರಸ್ವಾಮಿ (ಚನ್ನಪಟ್ಟಣ), ನಿಖಿಲ್ ಕುಮಾರಸ್ವಾಮಿ (ರಾಮನಗರ) ಮತ್ತು , ಡಿ.ಸಿ. ತಮ್ಮಣ್ಣ (ಮದ್ದೂರು).

ಭವಿಷ್ಯದ ಅಭ್ಯರ್ಥಿ ಪಟ್ಟಿಯಲ್ಲಿ ಇನ್ನೂ ಇಬ್ಬರಿಗೆ ಅಂದರೆ ಎಚ್.ಡಿ. ರೇವಣ್ಣ (ಹೊಳೆ ನರಸೀಪುರ)  ಮತ್ತು ಬಾಲಕೃಷ್ಣ (ಶ್ರವಣಬೆಳಗೊಳ) ಅವರಿಗೆ  ಸ್ಥಾನ ಸಿಗುವುದು ಗ್ಯಾರಂಟಿ. ಅಂದರೆ ಸಂಖ್ಯೆ  ಐದಕ್ಕೇರುತ್ತದೆ. ಚುನಾವಣೆ ಸಮೀಪಿಸಿದಂತೆ ಈ ಸಂಖ್ಯೆ ಹೆಚ್ಚಾಗುವುದೇ ಎಂಬ ಕುತೂಹಲಕಾರಿ ಪ್ರಶ್ನೆಯಿದೆ.  ಎಚ್.ಡಿ. ರೇವಣ್ಣ ಅವರ ಪುತ್ರ ಪ್ರಜ್ವಲ್ ಸದ್ಯಕ್ಕೆ ಸಂಸದರಾಗಿ, ಅವರ ಸಹೋದರ ಸೂರಜ್ ಸಹ ವಿಧಾನಪರಿಷತ್ ಸದಸ್ಯರಾಗಿಯೇ ಇರುವ ಸಾಧ್ಯತೆಯಿದೆ.  ಆದರೆ, ಈ ಸಹೋದರರ ತಾಯಿ ಅರ್ಥಾತ್ ಎಚ್.ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಏನು ಮಾಡುತ್ತಾರೆ ಎಂಬುದೇ ಪ್ರಶ್ನೆ.

ಮೂಲಗಳ ಪ್ರಕಾರ ಭವಾನಿ ರೇವಣ್ಣ ಅವರಿಗೆ ಹಾಸನ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ಇದೆ. ಕಳೆದ ಚುನಾವಣೆಯಲ್ಲೇ ಸ್ಪರ್ಧಿಸಲು ಮುಂದಾಗಿದ್ದ ಅವರು ಅನಿತಾ ಕುಮಾರಸ್ವಾಮಿಗೆ ಟಿಕೆಟ್ ನೀಡಿದರೆ ತಮಗೂ ನೀಡಬೇಕು ಎಂದು ಪಟ್ಟು ಹಿಡಿದಿದ್ದರಂತೆ. ಕುಟುಂಬಸ್ಥರಿಗೆ ಹೆಚ್ಚು ಟಿಕೆಟ್ ನೀಡಿದರೆ ತಪ್ಪು ಸಂದೇಶ ಹೋಗುತ್ತದೆ ಎಂಬ ಕಾರಣಕ್ಕೆ ದೇವೇಗೌಡರ ಮಧ್ಯಸ್ಥಿಕೆಯಲ್ಲಿ ಇದು ಇತ್ಯರ್ಥವಾಗಿತ್ತಂತೆ.ಆದರೆ, ಈ ಬಾರಿ  ಭವಾನಿ ಅವರು ಸುಮ್ಮನಾಗುವ ಲಕ್ಷಣವಿಲ್ಲ. ಭವಾನಿ ಅವರ ಮಾತಿಗೆ ಮನ್ನಣೆ ಸಿಕ್ಕರೆ ಅನಿತಾ ಅವರೂ ಸುಮ್ಮನಿರುವ ಲಕ್ಷಣವಿಲ್ಲ ಎನ್ನುತ್ತಾರೆ ಕುಟುಂಬದ ಆಪ್ತರು.  ಈ ಮಹಿಳಾ ಮತ್ಸರವನ್ನು ದೊಡ್ಡ ಗೌಡರು ಈ ಬಾರಿ ಹೇಗೆ ಎದುರಿಸುತ್ತಾರೆ ಎಂಬುದೇ ಮುಂದಿನ ಚುನಾವಣೆಯ ಕದನ ಕುತೂಹಲ!

From the India Gate: ಸಮಾಜವಾದಿ ಪಕ್ಷಕ್ಕೆ ಮತ್ತಷ್ಟು ಬಲ; ಭಾರತ್‌ ಜೋಡೋ ಯಾತ್ರೆ ಯಶಸ್ಸಿನ ಗುಟ್ಟು..!

ಜಮ್ಮು ಮತ್ತು ಕಾಶ್ಮೀರ ಪಾಕಿಸ್ತಾನ ಅಂಗ ಎಂದ ಹಾಕಿ ಫೆಡರೇಶನ್!
ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಎಡವಟ್ಟು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. ವಿಶ್ವಕಪ್ ಹಾಕಿ ಟೂರ್ನಿ ಭೂಪಟದಲ್ಲಿ ಜಮ್ಮು ಮತ್ತು ಕಾಶ್ಮೀರ ಪಾಕಿಸ್ತಾನದ ಅಂಗ ಎಂದು ಬಿಂಬಿಸಿದೆ. 2016ರಲ್ಲಿ ನರೀಂದರ್ ಬಾತ್ರ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಅಧ್ಯಕ್ಷರಾದ ಬಳಿಕ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದರು. 2018ರ ಹಾಕಿ ವಿಶ್ವಕಪ್ ಟ್ರೋಫಿಯನ್ನು ಯಾವುದೇ ರಾಜಕೀಯ ನಾಯಕರು ವಿತರಿಸಲು ಅವಕಾಶ ನೀಡುವುದಿಲ್ಲ ಎಂದಿದ್ದರು. ಇದೇ ವೇಳೆ ಈ ಟ್ರೋಫಿ ಭಾರತಕ್ಕೆ ಬರುವ ಮೊದಲು ಜಮ್ಮ ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ  ಅನ್ನೋದನ್ನು ಸ್ಪಷ್ಟಪಡಿಸಿ ಅನ್ನೋ ತಾಕೀತು ಬಂದಿತ್ತು. 

1975ರಲ್ಲಿ ಭಾರತ ಹಾಕಿ ವಿಶ್ವಕಪ್ ಗೆದ್ದುಕೊಂಡಿತು. ಈ ವೇಳೆಯೂ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಭೂಪಟದಲ್ಲಿ ಜಮ್ಮು ಮತ್ತು ಕಾಶ್ಮೀರ ಪಾಕಿಸ್ತಾನದ ಅಂಗ ಎಂದೇ ತೋರಿಸಲಾಗಿತ್ತು. ಇದಕ್ಕ ಮುಖ್ಯ ಕಾರಣ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌ನಲ್ಲಿ ಪಾಕಿಸ್ತಾನದ ಸದಸ್ಯನೋರ್ವನ ಕಿತಾಪತಿಯಾಗಿತ್ತು. 2016ರಲ್ಲಿ ನರೀಂದರ್ ಬಾತ್ರ ಹಾಕಿ ಫೆಡರೇಶನ್‌ಗೆ ಅಧ್ಯಕ್ಷರಾಗುವ ಮೂಲಕ ಭಾರತ ಅಧಿಕಾರ ಸ್ಥಾಪಿಸಿತು. 2017ರಲ್ಲಿ ಮ್ಯಾಪ್ ಸರಿಪಡಿಸಿ ಜಮ್ಮು ಮತ್ತು ಕಾಶ್ಮೀರ ಭಾರತದ ಅಂಗ ಎಂದು ತೋರಿಸಲಾಗಿತ್ತು.

ನಾನೇ ರಾಜಕುಮಾರ!
ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಹಲವು ಏರಿಳಿತ, ಅಡೆ ತಡೆಗಳನ್ನು ಎದುರಿಸಿದೆ. ಸಿಎಂ ಅಶೋಕ್ ಗೆಹ್ಲೋಟ್ ಬಣ ಹಾಗೂ ಬಂಡಾಯ ಸಚಿನ್ ಪೈಲೆಟ್ ಬಣದ ನಡುವಿನ ಕಿತ್ತಾಟ ಸರ್ಕಾರದ ಪತನದ ಅಂಚಿಗೆ ಹೋಗಿತ್ತು. ಸದ್ಯ ಸಾವರಿಸಿಕೊಂಡು ಸಾಗುತ್ತಿರುವ ಸಂದರ್ಭದಲ್ಲಿ ಅಶೋಕ್ ಗೆಹ್ಲೋಟ್ ನೀಡಿರುವ ಹೇಳಿಕೆ ಕಾಂಗ್ರೆಸ್‌ಗೆ, ಬಂಡಾಯ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅಶೋಕ್ ಗೆಹ್ಲೋಟ್ ಮುಂದಿನ ಭಾರಿಯೂ ಸಿಎಂ ಆಗಿ ಮಂದುವರಿಯುವುದಾಗಿ ಹೇಳಿದ್ದಾರೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಜನರ ಒಲವು ಇದೆ. ಜನರು ಕಾಂಗ್ರೆಸ್‌ಗೆ ಮತ್ತೆ ಅಧಿಕಾರ ನೀಡಲಿದ್ದಾರೆ. ಮತ್ತೆ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದಿದ್ದಾರೆ. ಈ ಮೂಲಕ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿರುವ ಸಚಿನ್ ಪೈಲೈಟ್ ಬಣಕ್ಕೆ ಸ್ಪಷ್ಟ ಉತ್ತರ ನೀಡಿದ್ದಾರೆ. ಈ ಅವಧಿ ಮಾತ್ರವಲ್ಲ, ಮುಂದೆ ಅಧಿಕಾರಕ್ಕೆ ಬಂದರೆ ಮತ್ತೆ ನಾನೇ ಮುಖ್ಯಮಂತ್ರಿ ಅನ್ನೋದನ್ನು ಸೂಚಿಸಿದ್ದಾರೆ. 

ಗೆಹ್ಲೋಟ್ ಹೇಳಿಕೆ ಇದೀಗ ಸಚಿನ್ ಪೈಲೆಟ್ ಬಣಕ್ಕೆ ಮಾತ್ರವಲ್ಲ ಕಾಂಗ್ರೆಸ್ ಹೈಕಮಾಂಡ್‌ಗೂ ತಲೆನೋವಾಗಿದೆ. ಅಶೋಕ್ ಗೆಹ್ಲೋಟ್ ಬಣದಿಂದ ಸಚಿನ್ ಪೈಲೆಟ್ ಬಣಕ್ಕೆ ಅಧಿಕಾರ ಹಸ್ತಾಂತರಿಸಲು ಹೈಕಮಾಂಡ್ ಹಲವು ಪ್ರಯತ್ನ ನಡೆಸಿ ವಿಫಲಗೊಂಡಿದೆ. ಇದೀಗ ಸಿಎಂ ಸ್ಥಾನ ಭದ್ರಪಡಿಸಿಕೊಳ್ಳುವ ಹೇಳಿಕೆ ತಲೆನೋವಾಗಿ ಪರಿಣಮಿಸಿದೆ.

ಬಿಜೆಪಿಯಿಂದ ಅಂತರ ಕಾಯ್ದುಕೊಂಡ್ರಾ ವಸುಂದರ ರಾಜೆ?
ರಾಜಸ್ಥಾನದಲ್ಲಿ ಮರಳಿ ಅಧಿಕಾರ ಪಡೆಯಲು ಬಿಜೆಪಿ ಸತತ ರ್ಯಾಲಿ ನಡೆಸುತ್ತಿದೆ. ಜಾನಕ್ರೋಶ ರ್ಯಾಲಿ ಮೂಲಕ ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿದೆ. ಆದರೆ ಮಾಜಿ ಸಿಎಂ, ಬಿಜೆಪಿ ನಾಯಕ ವಸುಂದರಾ ರಾಜೆ ಪಕ್ಷದಿಂದ ಅಂತರಕಾಯ್ದುಕೊಂಡಿದ್ದಾರೆ. ಇತ್ತ ಅರುಣ್ ಸಿಂಗ್ ಸೇರಿದಂತೆ ಹಲವು ನಾಯಕರ ಭಾಷಣಗಳು ಭಾರಿ ಚರ್ಚೆಯಾಗುತ್ತಿದೆ. ಅಶೋಕ್ ಗೆಹ್ಲೋಟ್ ಹಾಗೂ ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಗುರಿಯಾಗಿಸಿ ಭಾಷಣ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಸಭೆ, ಕಾರ್ಯಕ್ರಮಗಳಿಂದ ಮಹಿಳಾ ನಾಯಕಿ ದೂರ ಉಳಿದಿದ್ದಾರೆ. ಇತ್ತ ಅರುಣ್ ಸಿಂಗ್, ಬಿಜೆಪಿ ರಾಜಸ್ಥಾನ ಅಧ್ಯಕ್ಷ ಗುಂಪುಗಾರಿಕೆ, ಬಣ ಹಾಗೂ ಬಂಡಾಯ ಮಾತನ್ನು ತಳ್ಳಿ ಹಾಕಿದ್ದಾರೆ. ರಾಜಸ್ಥಾನ ಬಿಜೆಪಿಯಲ್ಲಿ ಒಗ್ಗಟ್ಟಿದೆ. ವೈಯುಕ್ತಿ ಹಾಗೂ ಕುಟುಂಬದ ಕಾರಣದಿಂದ ವಸುಂದರ ರಾಜೆ ಕಾಣಿಸಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 

India Gate: ಬೊಮ್ಮಾಯಿ ಹೊಸೆದ ಮೀಸಲು ಫಾರ್ಮುಲಾ

ರಾಜಸ್ಥಾನ ಬಿಜೆಪಿಯ ಸಿಎಂ ಅಭ್ಯರ್ಥಿ ವಸುಂದರ ರಾಜೆ ಎಂದು ಘೋಷಿಸಲು ಮಹಿಳಾ ನಾಯಕಿ ಬಣ ಒತ್ತಾಯ ಮಾಡಿದೆ. ಆದರೆ ಬಿಜೆಪಿ ಹೈಕಮಾಂಡ್ ಪ್ರಧಾನಿ ಮೋದಿ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಮುಂದಾಗಿದೆ. ಗೆಲುವಿನ ಬಳಿಕ ಸಿಎಂ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಎಂದಿದೆ. ಇದು ವಸುಂದರಾ ರಾಜೆ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದಾರೆ ಅನ್ನೋ ಮಾತುಗಳು ಬಲವಾಗುತ್ತಿದೆ. ಒಂದೆಡೆ ರಾಜಸ್ಥಾನ ಕಾಂಗ್ರೆಸ್ ಬಂಡಾಯ ಮುಂದಿಟ್ಟು ಬಿಜೆಪಿ ಪ್ರಚಾರ ಮಾಡುತ್ತಿದೆ. ಇದೀಗ ತಮ್ಮದೇ ಪಕ್ಷದಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿರುವುದು ತೀವ್ರ ಹಿನ್ನಡೆಯಾಗುವ ಸಾಧ್ಯತೆ ಇದೆ.

click me!