ನಿತ್ಯಾನಂದ ಹಿಂದೂಗಳಿಗಾಗಿ ಸ್ಥಾಪಿಸಿರುವ ಕೈಲಾಸ ದೇಶವು ತನ್ನ ವೆಬ್‌ಸೈಟಿನಲ್ಲಿ ತಿಳಿಸಿರುವಂತೆ ಜಗತ್ತಿನ ಇತರ ದೇಶಗಳಂತೆ ಸಂಪೂರ್ಣ ಆಡಳಿತ ವ್ಯವಸ್ಥೆಯನ್ನು ಹೊಂದಿದೆ. ಕೈಲಾಸಕ್ಕೆ ತನ್ನದೇ ಆದ ರಾಷ್ಟ್ರ ಧ್ವಜವಿದ್ದು, ಅದರಲ್ಲಿ ಒಂದು ಬದಿಯಲ್ಲಿ ನಿತ್ಯಾನಂದನ ಚಿತ್ರ ಹಾಗೂ ಮತ್ತೊಂದು ಬದಿಯಲ್ಲಿ ಗೂಳಿಯ ಚಿತ್ರವಿದೆ. ಇದನ್ನು ‘ವೃಷಭ ಧ್ವಜ’ ಎಂದು ಕೈಲಾಸ ಕರೆದಿದೆ.
ಭಾರತದಲ್ಲಿ ಅತ್ಯಾಚಾರ, ಅಪಹರಣ ಸೇರಿದಂತೆ ನಾನಾ ಆರೋಪಗಳನ್ನು ಹೊತ್ತು ವಿದೇಶಕ್ಕೆ ಪರಾರಿಯಾಗಿರುವ ಬಿಡದಿಯ ವಿವಾದಿತ ದೇವಮಾನವ ನಿತ್ಯಾನಂದ ತನ್ನದೇ ಸ್ವಂತ ದೇಶ ಸ್ಥಾಪನೆ ಮಾಡಿಕೊಂಡಿದ್ದಾನೆ. ಈತನ ದೇಶವನ್ನು ಯಾರೂ ಮಾನ್ಯ ಮಾಡದೇ ಇದ್ದರೂ, ದೇಶದೆ ಹೆಸರನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎಂದಿಟ್ಟುಕೊಳ್ಳುವ ಮೂಲಕ, ವಿಶ್ವಸಂಸ್ಥೆಯ ಅಂಗಸಂಸ್ಥೆಗಳ ಮುಕ್ತ ಸಭೆಯಲ್ಲಿ ಭಾಗಿಯಾಗುವ ಮೂಲಕ ತನ್ನ ದೇಶಕ್ಕೆ ಜಾಗತಿಕ ಮಾನ್ಯತೆ ಸಿಕ್ಕಿದೆ ಎಂದು ಜನರಲ್ಲಿ ಬಿಂಬಿಸುವ ಯತ್ನ ಮಾಡಿದ್ದಾನೆ. ಇದರ ನಡುವೆಯೇ ತನ್ನ ದೇಶದ ಪೌರತ್ವ ಪಡೆದುಕೊಳ್ಳಲು ಆನ್‌ಲೈನ್‌ನಲ್ಲಿ ಇ-ಪೌರತ್ವ ಮತ್ತು ಇ-ವೀಸಾಗೆ ಆಹ್ವಾನಿಸಿದ್ದಾನೆ. ನಿತ್ಯಾನಂದ ಅಧಿಪತಿಯಾಗಿರುವ ಈ ನಿಗೂಢ ಮಾಯಾಲೋಕದ ಒಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.
ಎಲ್ಲಿದೆ ನಿತ್ಯಾನಂದನ ’ಕೈಲಾಸ’?
2019ರಲ್ಲಿ ಭಾರತ ಬಿಟ್ಟು ಪರಾರಿಯಾದ ಸ್ವಯಂ ಘೋಷಿತ ಧರ್ಮಗುರು, ಬಿಡದಿ ಧ್ಯಾನ ಪೀಠದ ನಿತ್ಯಾನಂದ 1 ವರ್ಷದ ಬಳಿಕ ತನ್ನದೇ ದೇಶ ಸ್ಥಾಪನೆ ಮಾಡಿರುವುದಾಗಿ ಘೋಷಿಸಿಕೊಂಡಿದ್ದ. ಭೌಗೋಳಿಕವಾಗಿ ಅಸ್ತಿತ್ವದ ಪ್ರಶ್ನೆ ಎದುರಿಸುತ್ತಿರುವ ಈ ದೇಶ ವರ್ಚುವಲ್ ಜಗತ್ತಿನಲ್ಲಿ ಸ್ಥಾನ ಪಡೆದುಕೊಂಡಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎಂದು ಈ ದೇಶಕ್ಕೆ ನಿತ್ಯಾನಂದ ಹೆಸರಿಟ್ಟಿದ್ದು, ಇಲ್ಲಿ ನಡೆಯುವ ಘಟನೆಗಳು ಕೇವಲ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ವರದಿಯಾಗುತ್ತವೆ. ನಿತ್ಯಾನಂದ ಈಕ್ವೆಡಾರ್ ಬಳಿ ಒಂದು ದ್ವೀಪವನ್ನು ಖರೀದಿಸಿದ್ದು, ಇದನ್ನೇ ದೇಶವಾಗಿ ಘೋಷಿಸಿರಬಹುದು ಎಂದು ಕೆಲವು ವರದಿಗಳು ತಿಳಿಸಿವೆ, ಆದರೆ ನಿತ್ಯಾನಂದ ತನ್ನ ಹೊಸ ದೇಶವನ್ನು ಘೋಷಣೆ ಮಾಡಿದಾಗ, ಆತ ಈಕ್ವೆಡಾರ್‌ನಲ್ಲಿ ಇರಲಿಲ್ಲ ಎಂದು ಅಲ್ಲಿನ ಆಡಳಿತ ಸ್ಪಷ್ಟಪಡಿಸಿತ್ತು.
ಕೈಲಾಸದಿಂದ ಬಂದ ನಿತ್ಯಾ ಸುಂದರಿ ವಿರುದ್ಧ ಭಾರತೀಯರು ರೊಚ್ಚಿಗೆದ್ದಿದ್ದೇಕೆ..?
ಕೈಲಾಸ ದೇಶದಲ್ಲಿ ಏನೇನಿದೆ?
ನಿತ್ಯಾನಂದ ಹಿಂದೂಗಳಿಗಾಗಿ ಸ್ಥಾಪಿಸಿರುವ ಕೈಲಾಸ ದೇಶವು ತನ್ನ ವೆಬ್‌ಸೈಟಿನಲ್ಲಿ ತಿಳಿಸಿರುವಂತೆ ಜಗತ್ತಿನ ಇತರ ದೇಶಗಳಂತೆ ಸಂಪೂರ್ಣ ಆಡಳಿತ ವ್ಯವಸ್ಥೆಯನ್ನು ಹೊಂದಿದೆ. ಕೈಲಾಸಕ್ಕೆ ತನ್ನದೇ ಆದ ರಾಷ್ಟ್ರ ಧ್ವಜವಿದ್ದು, ಅದರಲ್ಲಿ ಒಂದು ಬದಿಯಲ್ಲಿ ನಿತ್ಯಾನಂದನ ಚಿತ್ರ ಹಾಗೂ ಮತ್ತೊಂದು ಬದಿಯಲ್ಲಿ ಗೂಳಿಯ ಚಿತ್ರವಿದೆ. ಇದನ್ನು ‘ವೃಷಭ ಧ್ವಜ’ ಎಂದು ಕೈಲಾಸ ಕರೆದಿದೆ. ನಿತ್ಯಾನಂದ ಆಶೀರ್ವಾದ ಮಾಡುವ ಭಂಗಿಯಲ್ಲಿ ಕುಳಿತಿರುವ ಮೂರ್ತಿಯನ್ನು ಲಾಂಛನವಾಗಿ ಅಳವಡಿಸಿಕೊಳ್ಳಲಾಗಿದೆ. ಅಲ್ಲದೇ ದೇವನಾಗರಿ ಲಿಪಿಯಲ್ಲಿ ರಾಷ್ಟ್ರಗೀತೆಯನ್ನು ಸಹ ರಚಿಸಲಾಗಿದೆ. ಇಲ್ಲಿ ಧಾರ್ಮಿಕ ಸ್ಥಳಗಳನ್ನು ನಿರ್ಮಾಣ ಮಾಡಲಾಗಿದ್ದು, ದೇಶದ ಎಲ್ಲಾ ಜನರಿಗೂ ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆ ಹಾಗೂ ಉಚಿತ ಆಹಾರವನ್ನು ಒದಗಿಸಲಾಗುತ್ತದೆ. ಜೊತೆಗೆ ತನ್ನದೇ ಕರೆನ್ಸಿಯನ್ನು ಮುದ್ರಿಸಿದ್ದು, ರಿಸರ್ವ್ ಬ್ಯಾಂಕ್ ಅನ್ನು ಸಹ ಸ್ಥಾಪಿಸಲಾಗಿದೆ.
ಕೈಲಾಸದ ಪೌರತ್ವ ಪಡೆಯುವುದು ಹೇಗೆ?
ದೇಶದ ವೆಬ್‌ಸೈಟ್‌ನ ಪ್ರಕಾರ ಕೈಲಾಸ ದೇಶ ತನ್ನದೇ ಆದ ಆಡಳಿತ ವ್ಯವಸ್ಥೆ, ಸಂವಿಧಾನ, ಧ್ವಜ, ಆರ್ಥಿಕ ವ್ಯವಸ್ಥೆ, ಪಾಸ್‌ಪೋರ್ಟ್ ಮತ್ತು ಲಾಂಛನವನ್ನು ಹೊಂದಿದೆ. ಇದಲ್ಲದೇ ಕಳೆದ ಗುರುವಾರ ಕೈಲಾಸ ತನ್ನ ಟ್ವೀಟರ್ ಹ್ಯಾಂಡಲ್‌ನ ಮೂಲಕ ಈ ದೇಶದ ಪ್ರಜೆಗಳಾಗಲು ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ. ಇದಕ್ಕಾಗಿ ಕ್ಯೂಆರ್‌ಕೋಡ್ ಅನ್ನು ಕೈಲಾಸ ದೇಶ ಒದಗಿಸಿದ್ದು, ಇದನ್ನು ಸ್ಕ್ಯಾನ್ ಮಾಡಿ ಅಗತ್ಯ ಮಾಹಿತಿಗಳನ್ನು ತುಂಬುವ ಮೂಲಕ ಪೌರತ್ವವನ್ನು ಪಡೆದುಕೊಳ್ಳಬಹುದಂತೆ. ಅಲ್ಲದೇ ಕೈಲಾಸದ ಪೌರತ್ವ ಪಡೆದುಕೊಂಡರೆ, ವಿಶೇಷ ಹೋಮ ಮತ್ತು ಅಧ್ಯಾತ್ಮಿಕ ಸೇವೆಗಳು, ನಿತ್ಯಾನಂದನ ವಿಶೇಷ ದರ್ಶನ ಹಾಗೂ ಆಶೀರ್ವಾದ, ಸಂಸ್ಕೃತ ಮಂತ್ರಗಳ ಕಲಿಕೆ, ಆಧ್ಯಾತ್ಮಿಕ ಮನೋಭಾವನೆ ಬೆಳೆಸಿಕೊಳ್ಳಲು ಉತ್ತಮ ವಾತಾವರಣ ಕಲ್ಪಿಸಲಾಗುತ್ತದೆ ಎಂದು ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.
ಇದನ್ನು ಓದಿ: ಕೈಲಾಸಕ್ಕೆ ವಿಶ್ವಸಂಸ್ಥೆ ಮಾನ್ಯತೆ ಸಿಕ್ಕಿತೆಂದು ಕತೆ ಕಟ್ಟಿದ ನಿತ್ಯಾ! UN ಸಭೆಯಲ್ಲಿ ತನ್ನವರು ಭಾಗಿ ಎಂದು ಸುಳ್ಳು ಸುದ್ದಿ
ದೇಶವಾಗಿ ಕೈಲಾಸಕ್ಕೆ ಮಾನ್ಯತೆ ಇದೆಯಾ?
ಜಾಲತಾಣಗಳಲ್ಲಿ ಕೈಲಾಸದ ಬಗ್ಗೆ ನಿತ್ಯಾನಂದ ಹಾಗೂ ಆತನ ಶಿಷ್ಯರು ಸದಾ ಮಾಹಿತಿಗಳನ್ನು ನೀಡುತ್ತಲೇ ಇರುತ್ತಾರೆ. ತಮ್ಮ ಕಲ್ಪನೆಯ ದೇಶದ ಬಗ್ಗೆ, ತಮ್ಮ ದೇಶ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿದೆ ಎಂದು ಹೇಳಿಕೊಂಡರೂ ಸಹ ವಿಶ್ವಸಂಸ್ಥೆ ಕೈಲಾಸಕ್ಕೆ ದೇಶದ ಸ್ಥಾನಮಾನ ನೀಡಿಲ್ಲ. ಕೆಲವು ತಿಂಗಳ ಹಿಂದೆ ನಿತ್ಯಾನಂದ ತನ್ನ ಶಿಷ್ಯೆ ವಿಜಯಪ್ರಿಯ ನಿತ್ಯಾನಂದಳನ್ನು ವಿಶ್ವಸಂಸ್ಥೆಗೆ ಕಳುಹಿಸಿ, ಕೈಲಾಸಕ್ಕೆ ದೇಶದ ಸ್ಥಾನಮಾನ ನೀಡುವಂತೆ ಮನವಿ ಸಲ್ಲಿಸಿದ್ದ. ಆದರೆ ವಿಜಯಪ್ರಿಯ ಸಲ್ಲಿಸಿದ ದಾಖಲಾತಿಗಳು ಸರಿಯಿಲ್ಲ ಎಂಬ ಕಾರಣ ನೀಡಿ ಈ ಮನವಿಯನ್ನು ವಿಶ್ವಸಂಸ್ಥೆ ತಿರಸ್ಕರಿಸಿತ್ತು.
ದೇಶದ ಮಾನ್ಯತೆ ಸಿಗುವುದು ಹೇಗೆ?
ಯಾವುದೇ ಹೊಸ ಭೂಭಾಗಕ್ಕೆ ದೇಶ ಎಂಬ ಮಾನ್ಯತೆ ನೀಡಲು ಈಗಲೂ 1933ರ ಮಾಂಟೆವಿಡಿಯೋ ಸಮಾವೇಶದ ನಿರ್ಣಯವನ್ನು ಆಧಾರವಾಗಿ ಬಳಸಿಕೊಳ್ಳಲಾಗುತ್ತದೆ. 1933ರ ಡಿ.26ರಂದು ಉರುಗ್ವೆಯಲ್ಲಿ ನಡೆದ ಸಮಾವೇಶದಲ್ಲಿ ದೇಶ ರಚನೆಯ ಮಾನದಂಡಗಳ ಕುರಿತಾಗಿ ಅಮೆರಿಕ ಅಧ್ಯಕ್ಷತೆಯಲ್ಲಿ ಒಂದಷ್ಟು ದೇಶಗಳುಒ ಪ್ಪಂದಕ್ಕೆ ಸಹಿ ಹಾಕಿದ್ದು, ಇದನ್ನು ಇಂದಿಗೂ ಅಂತಾರಾಷ್ಟ್ರೀಯ ಕಾನೂನಾಗಿ ಪರಿಗಣಿಸಲಾಗುತ್ತದೆ. ಇದರ ಪ್ರಕಾರ ಯಾವುದೇ ಭೂಭಾಗಕ್ಕೆ ದೇಶದ ಮಾನ್ಯತೆ ನೀಡಬೇಕಾದರೆ ಆ ದೇಶ ನಿರ್ದಿಷ್ಟವಾದ ಜನಸಂಖ್ಯೆಯನ್ನು ಹೊಂದಿರಬೇಕು. ಜೊತೆಗೆ ಒಂದು ಸರ್ಕಾರ ಮತ್ತು ಇತರ ದೇಶಗಳ ಜೊತೆ ಸಂಬಂಧ ಹೊಂದಬಹುದಾದ ಸಾಮರ್ಥ್ಯವನ್ನು ಹೊಂದಿರಬೇಕು.
ಇದನ್ನೂ ಓದಿ: Nithyananda Life in Danger: ಶ್ರೀಲಂಕಾದಲ್ಲಿ ವೈದ್ಯಕೀಯ ಆಶ್ರಯ ಪಡೀತಾರಾ ಸ್ವಯಂಘೋಷಿತ ದೇವಮಾನವ..?
ಕೈಲಾಸಕ್ಕೆ ಮಾನ್ಯತೆ ಸಿಕ್ಕರೆ ಏನು ಲಾಭ?
ನಿತ್ಯಾನಂದನ ಕಾಲ್ಪನಿಕ ದೇಶಕ್ಕೆ ಇನ್ನೂ ವಿಶ್ವ ಸಂಸ್ಥೆ ಮಾನ್ಯತೆ ನೀಡಿಲ್ಲ. ಹಾಗಾಗಿ ಯಾವುದೇ ದೇಶಗಳು ಕಾನೂನಾತ್ಮಕವಾಗಿ ಕೈಲಾಸದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಒಂದು ವೇಳೆ ಕೈಲಾಸಕ್ಕೆ ವಿಶ್ವಸಂಸ್ಥೆ ದೇಶದ ಸ್ಥಾನಮಾನ ನೀಡಿದರೆ, ಅದರಿಂದ ಕೈಲಾಸಕ್ಕೆ ಹೆಚ್ಚಿನ ಲಾಭ ದೊರೆಯುತ್ತದೆ. ದೇಶದ ಮಾನ್ಯತೆ ಸಿಕ್ಕ ಕೂಡಲೇ ವಿಶ್ವಸಂಸ್ಥೆ, ವಿಶ್ವಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ ಮುಂತಾದ ಜಾಗತಿಕ ಸಂಸ್ಥೆಗಳಿಗೆ ಕೈಲಾಸಕ್ಕೆ ಪ್ರವೇಶ ದೊರೆಯುತ್ತದೆ. ಹೀಗಾದರೆ ಕೈಲಾಸ ಅಂತಾರಾಷ್ಟ್ರೀಯವಾಗಿ ಹಣಕಾಸಿನ ಸಹಾಯವನ್ನು ಪಡೆದುಕೊಳ್ಳಬಹುದು. ಇತರ ದೇಶಗಳ ಜೊತೆಗೆ ವ್ಯಾಪಾರ ವಹಿವಾಟು ನಡೆಸಬಹುದು.
ಪ್ರಸ್ತುತ ಕೈಲಾಸದ ಸ್ಥಿತಿಗತಿ ಏನು?
ನಿತ್ಯಾನಂದನ ಕೈಲಾಸಕ್ಕೆ ವಿಶ್ವಸಂಸ್ಥೆಯಾಗಲೀ, ಯಾವುದೇ ದೇಶಗಳಾಗಲಿ ಮಾನ್ಯತೆಯನ್ನು ನೀಡಿಲ್ಲ. ಹಾಗಾಗಿ ಇಂತಹ ದೇಶಗಳನ್ನು ಮೈಕ್ರೋನೇಶನ್ಸ್ ಎಂದು ಕರೆಯಲಾಗುತ್ತದೆ. ಮೈಕ್ರೋನೇಶನ್ಸ್ ಎಂದರೆ ತಾವಾಗಿಯೇ ಸ್ವಾತಂತ್ರ್ಯ ಮತ್ತು ಸಾರ್ವಭೌಮತೆಯನ್ನು ಘೋಷಿಸಿಕೊಂಡಿರುವ ಭೂಭಾಗಗಳು, ಆದರೆ ಇವುಗಳಿಗೆ ವಿಶ್ವಸಂಸ್ಥೆಯ ಮಾನ್ಯತೆ ಇರುವುದಿಲ್ಲ. ಜಾಗತಿಕವಾಗಿ ಒಟ್ಟು 80 ಮೈಕ್ರೋನೇಶನ್ಸ್‌ಗಳನ್ನು ಗುರುತಿಸಲಾಗಿದೆ. ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ ಆಧ್ಯಾತ್ಮ ಗುರು ರಜನೀಶ್ ಸ್ಥಾಪಿಸಿರುವ ರಜನೀಶ್ ಪುರಂ. ಇಲ್ಲಿ ಸಾರ್ವಜನಿಕ ಸಾರಿಗೆ ಮತ್ತು ಪೊಲೀಸ್ ವ್ಯವಸ್ಥೆಗಳನ್ನು ನಿರ್ಮಿಸಲಾಗಿದೆ.
ಇದನ್ನೂ ಓದಿ: ನಿತ್ಯಾನಂದ ಸ್ವಾಮೀಜಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ
ಯಾರಾದರೂ ದೇಶ ನಿರ್ಮಾಣ ಮಾಡಬಹುದೇ?
ಜಾಗತಿಕ ಕಾನೂನಿನ ಪ್ರಕಾರ ಯಾರು ಬೇಕಾದರೂ ಒಂದು ದೇಶವನ್ನು ನಿರ್ಮಾಣ ಮಾಡಬಹುದು. ನಿರ್ದಿಷ್ಟ ಜನಸಂಖ್ಯೆ, ಸರ್ಕಾರ, ಇತರ ದೇಶಗಳ ಜೊತೆ ವ್ಯವಹರಿಸುವ ಸಾಮರ್ಥ್ಯವಿದ್ದು, ಆ ಭೂಪ್ರದೇಶವನ್ನು ಅಕ್ರಮ ಚಟುವಟಿಕೆಗಳಿಗೆ ಬಳಸದಿದ್ದರೆ ಅದಕ್ಕೆ ವಿಶ್ವಸಂಸ್ಥೆ ದೇಶದ ಮಾನ್ಯತೆ ನೀಡುತ್ತದೆ. ದಕ್ಷಿಣ ಅಮೆರಿಕದ ಬಳಿ ಇರುವ ದ್ವೀಪಗಳನ್ನು ಉದ್ಯಮಿಗಳು, ರಾಜಕೀಯ ನಾಯಕರು ಖರೀದಿ ಮಾಡಿ ತಮ್ಮ ಖಾಸಗಿ ತಾಣವಾಗಿ ಬದಲಾಯಿಸಿಕೊಳ್ಳುತ್ತಾರೆ. ನಿತ್ಯಾನಂದನೂ ಸಹ ಇದೇ ರೀತಿ ಒಂದು ದ್ವೀಪವನ್ನು ಖರೀದಿ ಮಾಡಿ ದೇಶದ ಮಾನ್ಯತೆಗಾಗಿ ಪ್ರಯತ್ನಿಸುತ್ತಿರಬಹುದು.