ವಿಶ್ವಸಂಸ್ಥೆ ಭಾರತ ಜಗತ್ತಿನಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿದೆ ಎಂದು ವರದಿ ಮಾಡಿದ್ದು, ಅದು ನಿಜವೇ? ಭಾರತ ನಿಜಕ್ಕೂ ಅತಿಹೆಚ್ಚು ಜನಸಂಖ್ಯೆ ಹೊಂದಿದೆಯೇ? ಏಕೆಂದರೆ 2011ರ ಬಳಿಕ ಭಾರತ ನೈಜ ಜನಗಣತಿ ನಡೆಸಿಲ್ಲ. ಈಗಿನ ಬಹುತೇಕ ಲೆಕ್ಕಾಚಾರಗಳು ಒಂದು ದಶಕಕ್ಕೂ ಹಿಂದಿನ ಮಾಹಿತಿಗಳ ಆಧಾರದಲ್ಲಿವೆ.
ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಕಳೆದ ವಾರ, ವಿಶ್ವಸಂಸ್ಥೆ ತನ್ನ ಘೋಷಣೆಯಲ್ಲಿ ಭಾರತ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ, ಜಗತ್ತಿನ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಎನಿಸಿದೆ ಎಂದಿತು. ವಿಶ್ವಸಂಸ್ಥೆಯ ಪ್ರಕಾರ, ಭಾರತದಲ್ಲಿ 1.428 ಬಿಲಿಯನ್ ಜನಸಂಖ್ಯೆ ಇದ್ದರೆ, ಚೀನಾದ ಜನಸಂಖ್ಯೆ 1.426 ಬಿಲಿಯನ್ ಆಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಚೀನಾದ ಅಧಿಕಾರಿಯೊಬ್ಬರು, "ಜನಸಂಖ್ಯೆಯ ಪ್ರಯೋಜನ ಕೇವಲ ಸಂಖ್ಯೆಯ ಮೇಲೆ ಮಾತ್ರವಲ್ಲ, ಜನರ ಗುಣಮಟ್ಟದ ಮೇಲೂ ಅವಲಂಬಿತವಾಗಿದೆ" ಎಂದಿದ್ದರು.
"ವಿಶ್ವಸಂಸ್ಥೆ ಭಾರತ ಜಗತ್ತಿನಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿದೆ ಎಂದು ವರದಿ ಮಾಡಿದ್ದು, ಅದು ನಿಜವೇ ಎಂದು ಕರಾರುವಾಕ್ಕಾಗಿ ಹೇಳಲು ಸಾಧ್ಯವಿಲ್ಲ. ಭಾರತ ನಿಜಕ್ಕೂ ಅತಿಹೆಚ್ಚು ಜನಸಂಖ್ಯೆ ಹೊಂದಿದೆಯೇ? ಆದರೆ 2011ರ ಬಳಿಕ ಭಾರತ ನೈಜ ಜನಗಣತಿ ನಡೆಸಿಲ್ಲ. ಈಗಿನ ಬಹುತೇಕ ಲೆಕ್ಕಾಚಾರಗಳು ಒಂದು ದಶಕಕ್ಕೂ ಹಿಂದಿನ ಮಾಹಿತಿಗಳ ಆಧಾರದಲ್ಲಿವೆ" ಎಂದು ಬ್ಲೂಮ್‌ಬರ್ಗ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಭಾರತದ ಲೋಕಸಭಾ ಚುನಾವಣೆಯನ್ನು ಜಾಗತಿಕ ಅದ್ಭುತ ಎನ್ನುವಂತೆ ಗಮನಿಸಲಾಗುತ್ತದೆ. ಹಲವು ರೀತಿಯಲ್ಲಿ, ಭಾರತದ ಜನಗಣತಿ ಒದಗಿಸುವ ಅವಕಾಶಗಳು, ಅನುಕೂಲಗಳೂ ಅಪಾರವಾಗಿವೆ. ಭಾರತದ ಜನಗಣತಿ ಅತ್ಯಂತ ಸಮರ್ಥವೂ ಹೌದು. ಬಹುತೇಕ ಒಂದು ಶತಮಾನದ ಹಿಂದಿನಿಂದಲೂ, ಪ್ರತಿ ದಶಕದ ಆರಂಭದಲ್ಲಿ ಪ್ರತಿಯೊಬ್ಬ ಭಾರತೀಯರ ಕೌಟುಂಬಿಕ ದಾಖಲೆಗಳು ನಮೂದಾಗುತ್ತವೆ.
India Population Surpasses China: ಚೀನಾವನ್ನು ಹಿಂದಿಕ್ಕಿ ವಿಶ್ವದಲ್ಲಿಯೇ ಗರಿಷ್ಠ ಜನಸಂಖ್ಯೆಯ ದೇಶವಾಗಲಿದೆ ಭಾರತ!
ಆದರೆ 2020ರಲ್ಲಿ ಕೋವಿಡ್ ಸಾಂಕ್ರಾಮಿಕದ (covid pandemic) ಪರಿಣಾಮವಾಗಿ ಭಾರತದ ಜನಗಣತಿಯನ್ನು (India Population) ಮುಂದೂಡಬೇಕಾಯಿತು. ಮೊದಲಿಗೆ ಜನಗಣತಿಯನ್ನು ಅಮೆರಿಕಾದಲ್ಲಿ ಪ್ರಯತ್ನಿಸಿದಂತೆ ಇಲೆಕ್ಟ್ರಾನಿಕ್ ವಿಧಾನದಲ್ಲಿ ನಡೆಸಲಾಗುವುದು ಎನ್ನಲಾಗಿತ್ತು. ಆದರೆ, ಭಾರತದಲ್ಲಿ ಮತ್ತು ಜಗತ್ತಿನಲ್ಲಿ ಪರಿಸ್ಥಿತಿ ಇಂದು ಸಹಜ ಸ್ಥಿತಿಗೆ ಬಂದಿದೆ. ಆದರೆ ಆನ್‌ಲೈನ್ ಮೂಲಕವಾಗಲಿ, ಹಳೆಯ ಪದ್ಧತಿಯಂತಾಗಲಿ ಜನಗಣತಿ ನಡೆಸಲು ತಯಾರಿ ಕಂಡುಬರುತ್ತಿಲ್ಲ.
ಪ್ರಸ್ತುತ ಕೇಂದ್ರ ಸರ್ಕಾರ ಮಾಹಿತಿಗಳೊಡನೆ ಒಂದು ರೀತಿ ಸಂಕೀರ್ಣ ಸಂಬಂಧ ಹೊಂದಿದೆ. ಕಳೆದ ಏಳು ವರ್ಷಗಳ ಅವಧಿಯಲ್ಲಿ, ರಾಷ್ಟ್ರೀಯ ಆದಾಯದಿಂದ, ತಲಾ ವೆಚ್ಚ, ಉದ್ಯೋಗದ ತನಕ ವಿವಿಧ ಸಮೀಕ್ಷೆಗಳು ಹಾಗೂ ಲೆಕ್ಕಾಚಾರಗಳನ್ನು ಮುಂದೂಡಲಾಗಿದೆ ಅಥವಾ ಪರಿಷ್ಕರಿಸಲಾಗಿದೆ.
ಈ ಬಾರಿಯ ಜನಗಣತಿ ರಾಜಕೀಯವಾಗಿ ಹೆಚ್ಚಿನ ಮಹತ್ವ ಹೊಂದಿರುವ ನಿರೀಕ್ಷೆಗಳಿದ್ದವು. ವಿವಿಧತೆಗೆ ಹೆಸರಾಗಿರುವ ಭಾರತದಲ್ಲಿ ಜನಗಣತಿ ವಿವಿಧ ಸಮುದಾಯಗಳ ಸಂಖ್ಯೆಯ ಕುರಿತಾದ ಸ್ಪಷ್ಟ ಚಿತ್ರಣ ಒದಗಿಸುತ್ತದೆ. ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಜನರ ಸಂಖ್ಯೆ ಕೇವಲ ಮತದಾನದ ಮೇಲೆ ಮಾತ್ರ ಪ್ರಭಾವ ಬೀರುವುದಿಲ್ಲ. ಬದಲಿಗೆ ಸರ್ಕಾರದ ಅನುದಾನದ ಹಂಚಿಕೆ ಮತ್ತು ಸಾರ್ವಜನಿಕ ಸೇವೆಗಳ ಮೇಲೂ ಪರಿಣಾಮ ಬೀರುತ್ತದೆ. ಈಗ ಸೂಕ್ತ ಜನಗಣತಿಯ ಮಾಹಿತಿಗಳಿಲ್ಲದೆ ಭಾರತದ ಆಡಳಿತಗಾರರು ಕತ್ತಲಲ್ಲಿ ತಡಕಾಡುವಂತಾಗಿದೆ.
ಲವ್, ರೋಮ್ಯಾನ್ಸ್ ಮಾಡಲೆಂದೇ ವಿದ್ಯಾರ್ಥಿಗಳಿಗೆ ಒಂದು ವಾರ ರಜೆ ಕೊಟ್ಟ ಚೀನಾ!
ದುರದೃಷ್ಟವಶಾತ್, ಭಾರತದ ಜನಸಂಖ್ಯಾ ಹಂಚಿಕೆ, ಅಂದರೆ ಜನರು ಯಾವ ಜಾತಿಗೆ ಸೇರಿದ್ದಾರೆ, ಅವರು ಎಲ್ಲಿ ವಾಸಿಸುತ್ತಿದ್ದಾರೆ, ಅವರು ಯಾವ ಧರ್ಮವನ್ನು ಪಾಲಿಸುತ್ತಿದ್ದಾರೆ ಎಂಬ ಮಾಹಿತಿಗಳು ಹೆಚ್ಚು ಹೆಚ್ಚು ವಿವಾದಾತ್ಮಕವಾಗುತ್ತಿವೆ.
ಉದಾಹರಣೆಗೆ, ಜಾತಿಯ ಪರಿಕಲ್ಪನೆಯನ್ನೇ ತೆಗೆದುಕೊಳ್ಳೋಣ. 1931ರ ತನಕವೂ ಭಾರತದಲ್ಲಿ ಜಾತಿಯ ಹಂಚಿಕೆ ಯಾವ ರೀತಿ ಇದೆ ಎಂಬ ಕುರಿತು ಸ್ಪಷ್ಟ ಮಾಹಿತಿ ಇರಲಿಲ್ಲ. ಆದರೆ ಭಾರತದ ಬಹುತೇಕ ಆಡಳಿತಾತ್ಮಕ ಕ್ರಮಗಳು ಈ ಮಾಹಿತಿಯ ಆಧಾರಿತವಾಗಿದ್ದು, ಉದ್ಯೋಗ (job), ಶೈಕ್ಷಣಿಕ ಮೀಸಲಾತಿಗಳನ್ನು ಅಗತ್ಯವಿರುವ ಜಾತಿ ಹಾಗೂ ಸಮುದಾಯಗಳಿಗೆ ಒದಗಿಸಲಾಗುತ್ತದೆ. ಈ ಅಂಕಿ ಸಂಖ್ಯೆಗಳಲ್ಲಿ ಏನಾದರೂ ಮಹತ್ತರ ಬದಲಾವಣೆಗಳಾದರೆ, ಜಾತಿ ಆಧಾರಿತ ರಾಜಕೀಯ ಲೆಕ್ಕಾಚಾರಗಳಲ್ಲೂ ಬದಲಾವಣೆ ತರುತ್ತವೆ.
ಇನ್ನೊಂದು ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಧರ್ಮ. ಒಂದು ವೇಳೆ ಅಲ್ಪಸಂಖ್ಯಾತರ ಜನಸಂಖ್ಯೆ ಅಪಾರವಾಗಿ ಹೆಚ್ಚಳವಾಗಿದ್ದರೆ, ಬಲಪಂಥೀಯರು ಕುಪಿತರಾಗುವ ಸಾಧ್ಯತೆಗಳಿವೆ. ಅಂತಹ ಪರಿಸ್ಥಿತಿಯಲ್ಲಿ ಹಿಂದೂಗಳಿಗೆ ನಿಮ್ಮ ಸಂಖ್ಯೆ ಅಪಾಯದಲ್ಲಿಲ್ಲ ಎಂದು ಮನದಟ್ಟು ಮಾಡಲು ಅಧಿಕಾರಿಗಳು ಕಷ್ಟಪಡಬೇಕಾಗುತ್ತದೆ.
ಈ ಜನಗಣತಿ 'ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜ಼ನ್ಸ್' ರೂಪಿಸಲು ಆರಂಭಿಕ ಹೆಜ್ಜೆಯಾಗಿತ್ತು. ಈ ಯೋಜನೆ ಮತ್ತು ಪೌರತ್ವ ಕಾಯ್ದೆಯ ತಿದ್ದುಪಡಿಗಳು ಸೇರಿ ಭಾರತದಾದ್ಯಂತ 2019ರಲ್ಲಿ ಉಗ್ರ ಪ್ರತಿಭಟನೆಗಳಿಗೆ ಕಾರಣವಾಗಿದ್ದವು. ಈ ಕಾನೂನುಗಳು ಹಲವು ಭಾರತೀಯ ಮುಸ್ಲಿಮರ ಪೌರತ್ವ ಕಿತ್ತುಕೊಳ್ಳಬಹುದು ಎಂದು ಭಯ ಮೂಡಿಸಿದ್ದವು. ಈ ವಿಚಾರವನ್ನು ಮತ್ತೆ ಮುನ್ನಲೆಗೆ ತರುವ ಆಸೆ ಈಗ ಯಾರಿಗೂ ಇಲ್ಲ.
ಇನ್ನು ಭಾಷಾ ಗುಂಪುಗಳು ಮತ್ತು ರಾಜ್ಯಗಳ ನಿವಾಸಿಗಳ ಸಂಖ್ಯೆಯೂ ಪ್ರಶ್ನಾರ್ಹವಾಗಿವೆ. ಭಾರತ ಪ್ರಸ್ತುತ ಎರಡು ಭಾಗವಾಗಿ ವಿಂಗಡಿಸಬಹುದಾಗಿದ್ದು, ಒಂದು ಭಾಗ ಅಪಾರವಾಗಿ ಹೆಚ್ಚುತ್ತಿರುವ ಜನಸಂಖ್ಯೆಯಾದರೆ, ಇನ್ನೊಂದು ಭಾಗ ವೇಗವಾಗಿ ವಯಸ್ಸಾಗುತ್ತಿರುವ ಹಿರಿಯರು. ಸರ್ಕಾರದ ಅಂದಾಜಿನ ಪ್ರಕಾರ, 2011ರ ಜನಗಣತಿಯ ವೇಳೆಗೆ 104 ಮಿಲಿಯನ್ ಜನಸಂಖ್ಯೆ ಹೊಂದಿದ್ದ ಬಿಹಾರ 2041ರ ವೇಳೆಗೆ ಇನ್ನೂ 50 ಮಿಲಿಯನ್ ಹೆಚ್ಚುವರಿ ಜನಸಂಖ್ಯೆ ಹೊಂದಲಿದೆ. ಇನ್ನೊಂದೆಡೆ, ದಕ್ಷಿಣದ ತಮಿಳುನಾಡು ರಾಜ್ಯದಲ್ಲಿ ಇದಕ್ಕೆ ವಿರುದ್ಧವಾಗಿ, ಜನಸಂಖ್ಯೆ ಇಳಿಮುಖವಾಗಲು ಆರಂಭವಾಗುವ ಸಾಧ್ಯತೆಗಳಿವೆ. ಇನ್ನು ಭಾರತದ ಸಣ್ಣಪುಟ್ಟ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು (regional Party) ಆಡಳಿತ ನಡೆಸುತ್ತಿದ್ದು, ಅವುಗಳು ಉತ್ತರ ಭಾರತದಂತೆ ಒಂದೇ ಭಾಷೆ ಮಾತನಾಡುವುದಿಲ್ಲ. ಅವುಗಳು ಉತ್ತರ ಭಾರತಕ್ಕೆ ಹೋಲಿಸಿದರೆ ಶ್ರೀಮಂತ ರಾಜ್ಯಗಳೇ ಆಗಿವೆ.
ನೂತನ ಜನಸಂಖ್ಯಾ ಲೆಕ್ಕಾಚಾರದ ಪ್ರಕಾರ, ಭಾರತದ ಲೋಕಸಭೆಯಲ್ಲಿ ಈ ರಾಜ್ಯಗಳ ಸಂಸದರ ಸಂಖ್ಯೆ ಇಳಿಮುಖವಾಗುವ ಅಪಾಯವಿದೆ. ಹಾಗೇನಾದರೂ ಆದರೆ, ನವದೆಹಲಿಯ ನೀತಿಗಳಲ್ಲಿ ದಕ್ಷಿಣದ ರಾಜ್ಯಗಳಿಗೆ ಅತ್ಯಂತ ಕಡಿಮೆ ಅಧಿಕಾರವಿರುತ್ತದೆ. ರಾಜ್ಯವೊಂದರ ಹಣಕಾಸು ಸಚಿವರ ಪ್ರಕಾರ, ಉತ್ತರ ಭಾರತದಲ್ಲಿ ಸರ್ಕಾರಕ್ಕೆ ತೆರಿಗೆ ನೀಡುವುದೂ ಒಂದೇ, ಹಾಳು ಬಾವಿಗೆ ದುಡ್ಡು ಸುರಿಯುವುದೂ ಒಂದೇ!
ಅಂತಿಮವಾಗಿ ಭಾರತದಲ್ಲಿ ಉದ್ಯೋಗದ ಸಮಸ್ಯೆಯೂ ಹೇರಳವಾಗಿದೆ. ನೂರಾರು ಮಿಲಿಯನ್ ಯುವಜನತೆಗೆ ಉದ್ಯೋಗ ಸೃಷ್ಟಿಯ ಕುರಿತಾದ ಸಮರ್ಪಕ ದಾಖಲೆಗಳು ಭಾರತದ ಬಳಿ ಲಭ್ಯವಿಲ್ಲ. 2017 ಮತ್ತು 2018ರಲ್ಲಿ ಎರಡು ಸರ್ಕಾರಿ ಸಮೀಕ್ಷೆಗಳು ನಿರುದ್ಯೋಗ ಪ್ರಮಾಣ ಕಡಿಮೆಯಾಗಿದೆ ಎಂದಿದ್ದವು. ಆದರೆ, 2011ರ ಜನಗಣತಿಯ ಪ್ರಕಾರ, ಭಾರತದ 28% ಕುಟುಂಬಗಳಲ್ಲಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಜನರಿದ್ದರು. 15-24 ವಯಸ್ಸಿನ 47 ಮಿಲಿಯನ್ ನಿರುದ್ಯೋಗಿಗಳಿದ್ದು, ನಿರುದ್ಯೋಗ ದರ 20% ತಲುಪಿತ್ತು. ಒಂದು ವೇಳೆ ಈ ಸಂಖ್ಯೆ ಏನಾದರೂ ಇನ್ನಷ್ಟು ಹೆಚ್ಚಳವಾದರೆ, ಯುವ ಭಾರತೀಯರನ್ನು ಸೆಳೆಯಲು ಪ್ರಯತ್ನಿಸುವ ಸರ್ಕಾರಕ್ಕೆ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಗಳಿವೆ.
ಈ ಜನಗಣತಿ ಎಷ್ಟು ಭಾರತೀಯರಿಗೆ ಉತ್ತಮ ಆರೋಗ್ಯ ಸೇವೆ ಲಭ್ಯವಿದೆ ಮತ್ತು ಅವರು ಎಷ್ಟು ಶಿಕ್ಷಣ ಹೊಂದಿದ್ದಾರೆ ಎಂಬುದನ್ನೂ ಬಯಲು ಮಾಡುತ್ತದೆ. ಅವರೇನಾದರೂ ಉದ್ಯೋಗಕ್ಕಾಗಿ ಬೇರೆಡೆ ತೆರಳಬೇಕಾಗಬಹುದೇ ಎನ್ನುವುದನ್ನೂ ಈ ಮಾಹಿತಿಗಳು ಸೂಚಿಸುತ್ತವೆ. ಅಂದರೆ, ಚೀನಾ ಮಾತನಾಡುತ್ತಿರುವ 'ಗುಣಮಟ್ಟದ' ಪ್ರಶ್ನೆಗಳಿಗೂ ಇದು ಉತ್ತರ ನೀಡಲಿದೆ.
ಆದರೆ ಸದ್ಯದ ಪರಿಸ್ಥಿತಿಯಲ್ಲಿ ಭಾರತ ಚೀನಾಗೆ ಈ ವಿಚಾರದ ಕುರಿತಂತೆ ಉತ್ತರ ನೀಡಲು ಸಿದ್ಧವಾಗಿಲ್ಲ. ಸದ್ಯೋ ಭವಿಷ್ಯದಲ್ಲಿ ಭಾರತ ಜಗತ್ತಿನ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಎಂದೇ ಕರೆಸಿಕೊಳ್ಳಲಿದೆ. ಆದರೆ, ಭಾರತ ತನ್ನ ಜಗತ್ತನ್ನು ಹೇಗೆ ಪರಿವರ್ತಿಸಿಕೊಳ್ಳಲಿದೆ, ಹೇಗೆ ಪ್ರಭಾವ ಬೀರಲಿದೆ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ.