ದೆಹಲಿಯ ಕಲಿಂದಿ ಕುಂಜ್ ಪ್ರದೇಶದಲ್ಲಿ ವೈದ್ಯರೊಬ್ಬರನ್ನು ರೋಗಿಗಳ ವೇಷದಲ್ಲಿ ಬಂದ ಅಪ್ರಾಪ್ತರಿಬ್ಬರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ 16 ವರ್ಷ ಪ್ರಾಯದ ಇಬ್ಬರು ಬಾಲಕರು ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ನೆತ್ತರು ಹರಿದಿದೆ. ರೋಗಿಗಳ ವೇಷದಲ್ಲಿ ಬಂದ ಅಪ್ರಾಪ್ತರಿಬ್ಬರು ವೈದ್ಯರೊಬ್ಬರ ಮೇಲೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ದೆಹಲಿಯ ಕಲಿಂದಿ ಕುಂಜ್ ಪ್ರದೇಶದಲ್ಲಿ ಇಂದು ಮಧ್ಯಾಹ್ನ ಈ ಘಟನೆ ನಡೆದಿದೆ. ಯುನಾನಿ ಪದ್ಧತಿಯಲ್ಲಿ ಚಿಕಿತ್ಸೆ ನೀಡುತ್ತಿದ್ದ ಜಾವೇದ್ ಅಖ್ತರ್ ಮೃತರಾದ ವೈದ್ಯ. ನರ್ಸಿಂಗ್ ಹೋಮ್ ಒಳಭಾಗದಲ್ಲೇ ಈ ಘಟನೆ ನಡೆದಿದೆ.
ಘಟನೆಯ ನಂತರ ವೈದ್ಯ ಜಾವೇದ್ ಅಖ್ತರ್ ಅವರು ತಲೆಯಿಂದ ರಕ್ತ ಸೋರುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಘಟನೆಯಲ್ಲಿ 16 ವರ್ಷ ಪ್ರಾಯದ ಇಬ್ಬರು ಬಾಲಕರು ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇವರಿಬ್ಬರು ಮಧ್ಯಾಹ್ನ 1 ಗಂಟೆ ವೇಳೆಗೆ ಡ್ರೆಸ್ಸಿಂಗ್ ಮಾಡಿಸುವುದಕ್ಕೆ ಮೂರು ಬೆಡ್‌ಗಳಿದ್ದ ನಿಮಾ ಆಸ್ಪತ್ರೆಗೆ ಆಗಮಿಸಿದ್ದರು ಎಂದು ಸುದ್ದಿಸಂಸ್ಥೆ ಪಿಟಿಐಗೆ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇವರಲ್ಲೊಬ್ಬನ ಕಾಲಿನ ಹೆಬ್ಬರಳಿಗೆ ಬ್ಯಾಂಡೇಜ್ ಹಾಕಲಾಗಿತ್ತು. ಹಾಗೂ ಒಂದು ದಿನ ಮೊದಲು ಕೂಡ ಅವರು ಈ ಆಸ್ಪತ್ರೆಗೆ ಡ್ರೆಸ್ಸಿಂಗ್ ಮಾಡಿಸಿಕೊಳ್ಳಲು ಬಂದಿದ್ದರು.
ಕಣ್ಣೆದುರೇ ಅಣ್ಣನನ್ನು ಗುಂಡಿಕ್ಕಿ ಕೊಂದರು... 5 ಸಾವಿರ ಅನಾಥ ಶವಗಳಿಗೆ ಮುಕ್ತಿ ತೋರಿದ ಯುವತಿಯ ಕಥೆ ಕೇಳಿ...
ಅದೇ ರೀತಿ ಇಂದು ಕಾಲಿಗೆ ಡ್ರೆಸ್ಸಿಂಗ್ ಮಾಡಿಸಿಕೊಂಡ ನಂತರ ಆರೋಪಿಗಳು ವೈದ್ಯ ಜಾವೇದ್ ಅಖ್ತರ್ ಅವರು ಕುಳಿತಿದ್ದ ಕ್ಯಾಬೀನ್‌ಗೆ ಹೋಗಿದ್ದಾರೆ. ಈ ವೇಳೆ ನರ್ಸಿಂಗ್ ಸ್ಟಾಪ್‌ಗಳಾಗಿದ್ದ ಗಜಲ ಪ್ರವೀಣ್ ಹಾಗೂ ಮೊಹಮ್ಮದ್ ಕಮಿಲ್ ಅವರಿಗೆ ಗುಂಡಿನ ಸದ್ದು ಕೇಳಿದೆ. ಕೂಡಲೇ ಪ್ರವೀಣ್ ಅವರು ಒಳಗೋಡಿ ಹೋಗಿದ್ದು, ಅಲ್ಲಿ ವೈದ್ಯ ಜಾವೇದ್ ರಕ್ತದ ಮಡುವಿನಲ್ಲಿ ಕುಳಿತಿರುವುದು ಕಂಡು ಬಂದಿದೆ. ಮೇಲ್ನೋಟಕ್ಕೆ ಇದು ಉದ್ದೇಶಪೂರ್ವಕವಾಗಿ ಮಾಡಿದ ಕೊಲೆ ಎಂದು ಕಂಡು ಬರುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಸ್ಥಳೀಯ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದಾರೆ. ನಿನ್ನೆ ರಾತ್ರಿ 8 ಗಂಟೆಯವರೆಗೂ ಜಾವೇದ್ ಅಖ್ತರ್ ಅವರು ನರ್ಸಿಂಗ್ ಹೋಮ್‌ನಲ್ಲಿ ಕೆಲಸ ಮಾಡಿದ್ದರು ಎಂದು ಆಸ್ಪತ್ರೆಯ ಸಿಬ್ಬಂದಿ ಅಬಿದ್ ಎಂಬುವವರು ಹೇಳಿದ್ದಾರೆ. ಈ ಘಟನೆ ಈಗ ರಾಷ್ಟ್ರ ರಾಜಧಾನಿಯಲ್ಲಿ ವೈದ್ಯರ ಸುರಕ್ಷತೆಯ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ.
ವೃದ್ಧಾಪ್ಯದಲ್ಲಿದ್ದ ಅಪ್ಪ ಅಮ್ಮ, ಸಾಕು ನಾಯಿಯ ತಲೆ ಕಡಿದು ಕೊಂದ ಪಾಪಿ