ಸಂಸ್ಕೃತವನ್ನು ರಾಷ್ಟ್ರಭಾಷೆಯನ್ನಾಗಿ ಘೋಷಣೆ ಮಾಡುವುದಾಗಲಿ, ರಾಷ್ಟ್ರಭಾಷೆ ಅಲ್ಲ ಎಂದು ಹೇಳುವುದಾಗಲಿ ದೇಶದ ಸಂಸತ್ತಿಗೆ ಬಿಟ್ಟ ವಿಚಾರ. ಅದೇ ಸರಿಯಾದ ವೇದಿಕೆ. ಕೋರ್ಟ್ ಇದರ ತೀರ್ಮಾನ ಮಾಡುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂಆರ್ ಷಾ ಮತ್ತು ಕೃಷ್ಣ ಮುರಾರಿ ಅವರ ಸುಪ್ರೀಂ ಕೋರ್ಟ್ ಪೀಠ ಹೇಳಿ, ಅರ್ಜಿಯನ್ನು ವಜಾ ಮಾಡಿದೆ.
ನವದೆಹಲಿ (ಸೆ.2): ಸಂಸ್ಕೃತವನ್ನು ರಾಷ್ಟ್ರಭಾಷೆಯನ್ನಾಗಿ ಘೋಷಣೆ ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. ಯಾವುದೇ ಭಾಷೆಯನ್ನು ರಾಷ್ಟ್ರಭಾಷೆ ಎಂದು ಘೋಷಣೆ ಮಾಡುವ ಹಾಗೂ ಮಾಡದೇ ಇರುವ ಅಧಿಕಾರ ಇರುವುದು ದೇಶದ ಸಂಸತ್ತಿಗೆ. ಇದೇ ಸರಿಯಾದ ವೇದಿಕೆ. ಸುಪ್ರೀಂ ಕೋರ್ಟ್ ಇದರ ತೀರ್ಮಾನ ಮಾಡುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂಆರ್‌ಷಾ ಹಾಗೂ ಕೃಷ್ಣ ಮುರಾರಿ ಅವರಿದ್ದ ಪೀಠವು ಶುಕ್ರವಾರ ಹೇಳಿದೆ. ಅರ್ಜಿದಾರರು ಒಂದು ವಿಚಾರವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ನೀವು ಹೇಳಿದ ವಿಚಾರವನ್ನು ತೀರ್ಮಾನ ಮಾಡುವ ಸರಿಯಾದ ವೇದಿಕೆ ಸಂಸತ್ತು. ಅಲ್ಲಿಯೇ ಇದರ ಚರ್ಚೆಯಾಗಬೇಕು ಕೋರ್ಟ್‌ನಲ್ಲಲ್ಲ ಎಂದು ಹೇಳಿತು. "ಈ ಕುರಿತಾಗಿ ನಾವು ಏಕೆ ನೋಟಿಸ್ ಜಾರಿ ಮಾಡಬೇಕು ಅಥವಾ ಪ್ರಚಾರಕ್ಕಾಗಿ ಯಾಕೆ ನೋಟಿಸ್ ಘೋಷಿಸಬೇಕು? ನಾವು ನಿಮ್ಮ ಕೆಲವು ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು ಆದರೆ ಇದನ್ನು ಚರ್ಚಿಸಲು ಸರಿಯಾದ ವೇದಿಕೆ ಸಂಸತ್ತು. ಇದಕ್ಕೆ ಸಂವಿಧಾನದ ತಿದ್ದುಪಡಿ ಅಗತ್ಯವಿದೆ" ಎಂದು ಪೀಠ ಹೇಳಿದೆ. ಇದು ನೀತಿಯ ವಿಷಯವಾಗಿದ್ದು ಅದನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಸೇರಿಸಿದೆ.
"ನಾವು ಅರ್ಜಿಯನ್ನು ಪರಿಗಣಿಸಲು ನಿರಾಕರಿಸುತ್ತೇವೆ ಹಾಗೂ ಅರ್ಜಿಯನ್ನು ವಜಾ ಮಾಡುತ್ತಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳ ಮುಂದೆ ಸೂಕ್ತ ಪ್ರಾತಿನಿಧ್ಯವನ್ನು ಮಾಡಲು ವಕೀಲರು ಸ್ವತಂತ್ರರಾಗಿದ್ದಾರೆ' ಎಂದು ನ್ಯಾಯಾಲಯವು ಆದೇಶ ನೀಡಿದೆ. ನಿವೃತ್ತ ಐಎಎಸ್ ಅಧಿಕಾರಿ ಹಾಗೂ ವಕೀಲ ಕೆ.ಜಿ.ವಂಝಾರ ( IAS officer and lawyer KG Vanzara) ಅವರು ಈ ಕುರಿತಾಗಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ (PIL) ಅರ್ಜಿ ಸಲ್ಲಿಸಿದ್ದರು.
ಸಂಸ್ಕೃತವನ್ನು (Sanskrit ) ರಾಷ್ಟ್ರೀಯ ಭಾಷೆಯನ್ನಾಗಿ (National Language) ಘೋಷಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಇಂತಹ ಕ್ರಮವು ದೇಶದ ಅಧಿಕೃತ ಭಾಷೆಯಾಗಿ ಇಂಗ್ಲಿಷ್ ಮತ್ತು ಹಿಂದಿಯನ್ನು ಒದಗಿಸುವ ಪ್ರಸ್ತುತ ಸಾಂವಿಧಾನಿಕ ನಿಬಂಧನೆಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
Hindi Language ವಿಶ್ವಸಂಸ್ಥೆಯಲ್ಲಿ ಹಿಂದಿ ಬಳಕೆ ಉತ್ತೇಜನಕ್ಕೆ ಕೇಂದ್ರದಿಂದ 6 ಕೋಟಿ ರೂ!
ಈ ಪಿಐಎಲ್ ಅನ್ನು ಗುಜರಾತ್ ಸರ್ಕಾರದ ಮಾಜಿ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಪ್ರಸ್ತುತ ಗುಜರಾತ್ ಹೈಕೋರ್ಟ್‌ನಲ್ಲಿ ವಕೀಲರಾಗಿರುವ ಕೆ.ಜಿ. ವಂಝಾರ ಅವರು ಸಲ್ಲಿಸಿದ್ದರು. ವಂಝಾರ ಅವರು ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿ ಅಲ್ಲಿಯೇ ನಿವೃತ್ತರಾಗಿದ್ದ ವಿವಾದಿತ ಐಪಿಎಸ್ ಅಧಿಕಾರಿ ಡಿಜಿ ವಂಝಾರ ಅವರ ಸಹೋದರರು. ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸಲು ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿಅವರು 2020ರಲ್ಲಿಯೇ ಮನವಿ ಮಾಡಿದ್ದರು. ಹಿಂದಿಗೆ ನೀಡಿರುವ ಅಧಿಕೃತ ಭಾಷಾ ಸ್ಥಾನಮಾನಕ್ಕಿಂತ ರಾಷ್ಟ್ರೀಯ ಭಾಷೆಯ ಸ್ಥಾನಮಾನ ಹೆಚ್ಚಾಗಿರುತ್ತದೆ ಎಂದು ವಂಝಾರ ಹೇಳಿಕೊಂಡಿದ್ದಾರೆ. ಈಗಿನ ಸಾಂವಿಧಾನಿಕ ಚೌಕಟ್ಟಿಗೆ ಧಕ್ಕೆಯಾಗದಂತೆ ಕಾಯಿದೆ ಅಥವಾ ಕಾರ್ಯಕಾರಿ ಆದೇಶದ ಮೂಲಕ ಇದನ್ನು ಸರಳವಾಗಿ ಮಾಡಬಹುದು ಎಂದು ಅವರ ಅರ್ಜಿಯಲ್ಲಿ ತಿಳಿಸಲಾಗಿದೆ.
ಇಸ್ರೇಲ್‌ನಿಂದ ಕಲಿಯಬೇಕು: ಅಧಿಕೃತ ಭಾಷೆ ಅಗತ್ಯವಾಗಿ ರಾಷ್ಟ್ರೀಯ ಭಾಷೆಯೊಂದಿಗೆ ಸಮೀಕರಿಸಲಾಗುವುದಿಲ್ಲ. ಎರಡೂ ಖಂಡಿತವಾಗಿಯೂ ಪ್ರತ್ಯೇಕವಾಗಿರಬಹುದು. ಇದನ್ನು ನಾವು ಇಸ್ರೇಲ್‌ನಿಂದ ಕಲಿಯಬೇಕು ಎಂದು ವಂಝಾರ ಅರ್ಜಿಯಲ್ಲಿ ಬರೆದಿದ್ದುರ. 1948ರಲ್ಲಿ ಇಸ್ರೇಲ್, ಸತ್ತ ಭಾಷೆ ಎಂದು ಹೇಳಲಾದ ಕಳೆದ 2 ಸಾವಿರ ವರ್ಷಗಳಿಂದ ಯಾರೂ ಬಳಕೆ ಮಾಡದ ಹಿಬ್ರೂವನ್ನು ರಾಷ್ಟ್ರಭಾಷೆ ಎಂದು ಘೋಷಣೆ ಮಾಡಿತ್ತು. ಅದರೊಂದಿಗೆ ಇಂಗ್ಲೀಷ್ ಅನ್ನು ಅಧಿಕೃತ ಹಾಗೂ ರಾಷ್ಟ್ರೀಯ ಭಾಷೆಯಾಗಿ ಇಸ್ರೇಲ್ ಸರ್ಕಾರ ಇರಿಸಿಕೊಂಡಿತ್ತು' ಎಂದು ಬರೆದಿದ್ದರು. ಈ ಕ್ರಮವು ಯಾವುದೇ ಧರ್ಮ ಅಥವಾ ಜಾತಿಗಳಿಂದ ಯಾವುದೇ ವಿರೋಧವನ್ನು ಎದುರಿಸುವುದಿಲ್ಲ ಎಂದು ಹೇಳಿದ್ದರು.