ಉಡಾಫೆ ಮಾಡಿದರೆ ತಿಂಗಳಿಗೆ 26 ಲಕ್ಷ ಕೇಸ್| ಕೇಂದ್ರ ಸರ್ಕಾರಿ ಸಮಿತಿ ಎಚ್ಚರಿಕೆ| ಸಿಹಿಸುದ್ದಿ: ವೈರಸ್ ಗರಿಷ್ಠಕ್ಕೇರಿ ಇಳಿಯುತ್ತಿದೆ. ನಿಯಮ ಪಾಲಿಸಿದರೆ ಫೆಬ್ರವರಿಗೆ ನಿಯಂತ್ರಣ| ಕಹಿಸುದ್ದಿ: ಬರುವ ಚಳಿಗಾಲ, ಹಬ್ಬದ ವೇಳೆ ಎಚ್ಚರ ತಪ್ಪಿದರೆ ಸೋಂಕು, ಸಾವು ಭಾರೀ ಏರಿಕೆ
ಪುಣೆ(ಅ.19): ಭಾರತದಲ್ಲಿ ಕೊರೋನಾ ಸೋಂಕು ಗರಿಷ್ಠಕ್ಕೆ ತಲುಪಿ ಈಗ ಇಳಿಮುಖವಾಗುತ್ತಿದ್ದು, ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಮುಂದಿನ ವರ್ಷದ ಫೆಬ್ರವರಿ ವೇಳೆಗೆ ಅದನ್ನು ಬಹುತೇಕ ನಿಯಂತ್ರಣಕ್ಕೆ ತರಬಹುದು ಎಂದು ಕೇಂದ್ರ ಸರ್ಕಾರದಿಂದ ನೇಮಕಗೊಂಡ ಕೊರೋನಾ ತಜ್ಞರ ಸಮಿತಿಯೊಂದು ಶುಭ ಸುದ್ದಿ ನೀಡಿದೆ. ಆದರೆ ಒಂದು ವೇಳೆ, ಸೋಂಕು ಹೆಚ್ಚಳಕ್ಕೆ ಕಾರಣವಾಗಬಹುದಾದ ಮುಂಬರುವ ಚಳಿಗಾಲ ಮತ್ತು ಹಬ್ಬದ ದಿನಗಳಲ್ಲಿ ಎಚ್ಚರಿಕೆ ವಹಿಸದೇ ಹೋದಲ್ಲಿ ಪ್ರತಿ ತಿಂಗಳೂ ಕನಿಷ್ಠ 26 ಲಕ್ಷ ಹೊಸ ಸೋಂಕಿತರು ಪತ್ತೆಯಾಗಬಹುದು ಎಂಬ ಎಚ್ಚರಿಕೆಯನ್ನೂ ಅದು ನೀಡಿದೆ.
ಚಳಿಗಾಲದಲ್ಲಿ ಕೊರೋನಾ 2ನೇ ಅಲೆ ಏಳುವ ಆತಂಕ!
ಇದೇ ವೇಳೆ ಜೊತೆಗೆ ಕೊರೋನಾ ಪ್ರಮಾಣ ತೀವ್ರ ಹೆಚ್ಚಳಗೊಂಡು ಆಸ್ಪತ್ರೆಗಳ ಮೇಲೆ ತೀರಾ ಹೊರೆ ಬೀಳುತ್ತಿದೆ ಎಂಬ ಪರಿಸ್ಥಿತಿ ನಿರ್ಮಾಣವಾಗದ ಹೊರತೂ, ದೇಶದ ಯಾವುದೇ ರಾಜ್ಯ ಅಥವಾ ಜಿಲ್ಲೆಗಳಲ್ಲಿ ಲಾಕ್ಡೌನ್ ಜಾರಿಗೊಳಿಸಬಾರದು ಎಂದೂ ಸಮಿತಿ ಶಿಫಾರಸು ಮಾಡಿದೆ.
ಹೀಗಾಗಿ ಶುಭ ಸುದ್ದಿಯ ಖುಷಿಯಲ್ಲಿ ಮೈಮರೆತು ಎಚ್ಚರ ತಪ್ಪದಿರುವಂತೆ ನೋಡಿಕೊಳ್ಳುವ ಹೊಣೆ ಇದೀಗ ಸರ್ಕಾರಗಳು ಮತ್ತು ಜನಸಾಮಾನ್ಯರ ಕೈಯಲ್ಲಿದೆ.
ಸೆಪ್ಟೆಂಬರ್‌ನಲ್ಲೇ ಗರಿಷ್ಠ:
ಹೈದರಾಬಾದ್ ಐಐಟಿ ಪ್ರೊಫೆಸರ್ ಎಂ.ವಿದ್ಯಾಸಾಗರ್ ನೇತೃತ್ವದ 10 ಜನರ ಈ ಸಮಿತಿಯು ಕಂಪ್ಯೂಟರ್ ಮಾಡೆಲ್‌ಗಳನ್ನು ಬಳಸಿ ದೇಶದಲ್ಲಿ ಹರಡುತ್ತಿರುವ ಕೊರೋನಾದ ಗತಿಯ ಅಧ್ಯಯನ ನಡೆಸಿದೆ. ಅದರ ಪ್ರಕಾರ ದೇಶದಲ್ಲಿ ಸೆಪ್ಟೆಂಬರ್ ಮಧ್ಯದ ಅವಧಿಯಲ್ಲೇ ಕೊರೋನಾ ಗರಿಷ್ಠ ಮಟ್ಟಕ್ಕೆ ತಲುಪಿದೆ. ನಂತರ ಇಳಿಕೆಯಾಗಲು ಆರಂಭವಾಗಿದ್ದು, ಈ ಅಲೆ ಫೆಬ್ರವರಿವರೆಗೆ ಮುಂದುವರೆಯಲಿದೆ. ಆಶಾದಾಯಕ ಸಂಗತಿಯೆಂದರೆ, ಸಮಿತಿಯು ಭಾರತದಲ್ಲಿ ಕೊರೋನಾ ಸೋಂಕಿತರ ಒಟ್ಟು ಸಂಖ್ಯೆ 1.06 ಕೋಟಿ ದಾಟುವ ಸಾಧ್ಯತೆ ಕಡಿಮೆ ಎಂದು ಹೇಳಿದೆ.
ಕೊರೋನಾ ಲಸಿಕೆ: ಗುಡ್ ನ್ಯೂಸ್ ಕೊಟ್ಟ ಸೆರಂ ಸಂಸ್ಥೆ!
ಚಳಿಗಾಲದ ಅಪಾಯ:
ಮುಂಬರುವ ಹಬ್ಬಗಳು ಮತ್ತು ಚಳಿಗಾಲದ ವೇಳೆ ಕೊರೋನಾ ಏರಿಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ಸೋಂಕು ನಿಯಂತ್ರಣಕ್ಕೆ ಇರುವ ಈಗಿನ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಮುಂದುವರಿಸಬೇಕು. ಇಲ್ಲದೇ ಹೋದಲ್ಲಿ ತಿಂಗಳೊಂದಕ್ಕೆ 26 ಲಕ್ಷ ಹೊಸ ಸೋಂಕಿತರು ಪತ್ತೆಯಾಗಬಹುದು. ಇದಕ್ಕೆ ಕೇರಳವೇ ಉದಾಹರಣೆ. ಅಲ್ಲಿ ಓಣಂ ಬಳಿಕ ಪ್ರಕರಣಗಳ ಸಂಖ್ಯೆ ದಿಢೀರ್ ಏರಿಕೆಯಾಯಿತು. ಈ ವೇಳೆ ವೈದ್ಯಕೀಯ ಸ್ಪಂದನೆ ಪ್ರಮಾಣ ಶೇ.22ರಷ್ಟುಇಳಿಕೆಯಾಯಿತು. ಹೀಗಾಗಿ ಎಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದು ಸಮಿತಿ ಹೇಳಿದೆ.
ಲಾಕ್ಡೌನ್‌ನಿಂದಾಗಿ ಬಚಾವ್:
ಮಾಚ್‌ರ್‍ನಲ್ಲಿ ಲಾಕ್‌ಡೌನ್ ಜಾರಿಗೊಳಿಸಿದ್ದರಿಂದಾಗಿ ದೇಶದಲ್ಲಿ ಕೊರೋನಾ ಹರಡುವುದು ಬಹಳ ನಿಧಾನವಾಗಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಕೊರೋನಾದ ಮೇಲೆ ಲಾಕ್‌ಡೌನ್ ಅತ್ಯಂತ ಗಂಭೀರ ಪರಿಣಾಮ ಬೀರಿದೆ. ಲಾಕ್‌ಡೌನ್ ಜಾರಿಗೊಳಿಸಿರದಿದ್ದರೆ ಜೂನ್ ತಿಂಗಳಲ್ಲೇ ಸೋಂಕಿತರ ಪ್ರಮಾಣ 1.40 ಕೋಟಿ ತಲುಪುತ್ತಿತ್ತು. ಜೊತೆಗೆ ಸಾವಿನ ಪ್ರಮಾಣ 26 ಲಕ್ಷಕ್ಕೆ ಏರಿರುತ್ತಿತ್ತು ಎಂದು ಸಮಿತಿ ಹೇಳಿದೆ.
ವರದಿ ಏನನ್ನುತ್ತೆ?
- ಲಾಕ್‌ಡೌನ್ ಮಾಡದೆ ಇದ್ದಿದ್ದರೆ ಜೂನ್‌ನಲ್ಲೇ 1.4 ಕೋಟಿ ಕೇಸ್, 26 ಲಕ್ಷ ಸಾವು
- ಸೆಪ್ಟೆಂಬರ್‌ನಲ್ಲೇ ದೇಶದಲ್ಲಿ ಕೊರೋನಾ ಗರಿಷ್ಠ ಮಟ್ಟಕ್ಕೇರಿ, ಇಳಿಕೆ ಆರಂಭವಾಗಿದೆ
- ಇದೇ ರೀತಿಯಾಗಿ ಮುಂದುವರಿದರೆ ಫೆಬ್ರವರಿ ವೇಳೆಗೆ ಕೊರೋನಾ ನಿಯಂತ್ರಣಕ್ಕೆ
- ಚಳಿಗಾಲ, ಹಬ್ಬಗಳ ಸಂದರ್ಭದಲ್ಲಿ ಜನರು ಮೈಮರೆತರೆ ಮತ್ತೆ ಸೋಂಕು ಉಲ್ಬಣ
- ಕಂಪ್ಯೂಟರ್ ಮಾಡೆಲ್ ಬಳಸಿ ವಿದ್ಯಾಸಾಗರ್ ನೇತೃತ್ವದ 10 ಜನರ ಸಮಿತಿ ವರದಿ