ಕೋವ್ಯಾಕ್ಸಿನ್‌ ಎಕ್ಸ್‌ಪೈರಿ ಅವಧಿ 12 ತಿಂಗಳಿಗೆ ವಿಸ್ತರಣೆ

By Kannadaprabha News  |  First Published Nov 4, 2021, 9:57 AM IST
  • ಭಾರತ್‌ ಬಯೋಟೆಕ್‌ ಕಂಪನಿ ತಯಾರಿಸುತ್ತಿರುವ ಕೋವ್ಯಾಕ್ಸಿನ್‌ ಲಸಿಕೆ
  • ಲಸಿಕೆಯನ್ನು ಸಂಗ್ರಹಿಸಿಡುವ ಅವಧಿ ಒಂದು ವರ್ಷಕ್ಕೆ (12 ತಿಂಗಳಿಗೆ) ವಿಸ್ತರಣೆ

ನವದೆಹಲಿ (ನ.04): ಭಾರತ್‌ ಬಯೋಟೆಕ್‌ ಕಂಪನಿ (Bharat Boitech) ತಯಾರಿಸುತ್ತಿರುವ ಕೋವ್ಯಾಕ್ಸಿನ್‌ (covaxin) ಲಸಿಕೆಯನ್ನು ಸಂಗ್ರಹಿಸಿಡುವ ಅವಧಿ ಒಂದು ವರ್ಷಕ್ಕೆ (12 ತಿಂಗಳಿಗೆ) ವಿಸ್ತರಣೆಯಾಗಿದೆ. 

ಈ ಮೊದಲು ಕೇವಲ 9 ತಿಂಗಳು ಮಾತ್ರ ಸಂಗ್ರಹಿಸಿ ಇಡಬಹುದಾಗಿತ್ತು. ಇದೀಗ ಈ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು, ಕೇಂದ್ರದ ಔಷಧಿ (Medicine) ಗುಣಮಟ್ಟಮತ್ತು ನಿಯಂತ್ರಣ ಸಂಸ್ಥೆ, ಉತ್ಪಾದನಾ ದಿನಾಂಕದಿಂದ 1 ವರ್ಷದವರೆಗೆ ಲಸಿಕೆಯನ್ನು ಸಂಗ್ರಹಿಸಿಡಲು ಒಪ್ಪಿಗೆ ನೀಡಿದೆ. ಕೋವ್ಯಾಕ್ಸಿನ್‌ (Covaxin) ಲಸಿಕೆಯನ್ನು ಈ ಮೊದಲು ಉತ್ಪಾದನಾ ದಿನಾಂಕದಿಂದ 6 ತಿಂಗಳೊಳಗೆ ಬಳಸಬೇಕಿತ್ತು. ಬಳಿಕ 9 ತಿಂಗಳಿಗೆ ವಿಸ್ತರಿಸಲಾಗಿತ್ತು. ಇದೀಗ 1 ವರ್ಷದವರೆಗೂ ಶೇಖರಿಸಿಡುವ ಸಾಮರ್ಥ್ಯವನ್ನು ಹೊಂದಿದ್ದು, ಈ ಬಗ್ಗೆ ಒಪ್ಪಿಗೆ ಕೂಡ ಸಿಕ್ಕಿದೆ. ಈ ವಿಚಾರಕ್ಕೆ ಭಾರತ್‌ ಬಯೋಟೆಕ್‌ ಕಂಪನಿ ಕೂಡ ಹರ್ಷ ವ್ಯಕ್ತಪಡಿಸಿದೆ.

Tap to resize

Latest Videos

undefined

ಭಾರತದ ಕೋವ್ಯಾಕ್ಸಿನ್‌ಗೆ ವಿಶ್ವ ಮಾನ್ಯತೆ

ವಿಶ್ವಸಂಸ್ಥೆ: ದೀಪಾವಳಿಗೆ (Deepavali) ವಿಶ್ವ ಆರೋಗ್ಯ ಸಂಸ್ಥೆ (WHO) ಭಾರತಕ್ಕೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಸಂಸ್ಥೆ ಅಭಿವೃದ್ಧಿಪಡಿಸಿದ ಕೋವಿಡ್‌ ಲಸಿಕೆ (Covid Vaccine) ‘ಕೋವ್ಯಾಕ್ಸಿನ್‌’ನ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಬುಧವಾರ ಅನುಮೋದನೆ ನೀಡಿದೆ. ಇದರೊಂದಿಗೆ ಕೋವಿಶೀಲ್ಡ್‌ ಬಳಿಕ ಭಾರತದ ಮತ್ತೊಂದು ಲಸಿಕೆಗೆ ಜಾಗತಿಕ ಮಾನ್ಯತೆ ಸಿಕ್ಕಿದಂತಾಗಿದೆ.

ಜೊತೆಗೆ ಅಮೆರಿಕ, ಚೀನಾ ನಂತರ ವಿಶ್ವದಲ್ಲೇ 2 ಲಸಿಕೆಗಳಿಗೆ ಜಾಗತಿಕ ಮಾನ್ಯತೆ ಪಡೆದ 3ನೇ ದೇಶವಾಗಿ ಭಾರತ ಹೊರಹೊಮ್ಮಿದೆ. ಅಲ್ಲದೆ ಜಾಗತಿಕ ಮಟ್ಟದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಮನ್ನಣೆ ಪಡೆದ 8ನೇ ಲಸಿಕೆ ಎಂಬ ಹಿರಿಮೆಗೂ ಕೋವ್ಯಾಕ್ಸಿನ್‌ ಪಾತ್ರವಾಗಿದೆ.

ಡಬ್ಲ್ಯುಎಚ್‌ಒ ಮಾನ್ಯತೆ ನೀಡಿದ ಕಾರಣ, ಕೋವ್ಯಾಕ್ಸಿನ್‌ ಲಸಿಕೆ ಪಡೆದವರ ವಿದೇಶ ಸಂಚಾರಕ್ಕೆ ಇರುವ ಅಡ್ಡಿ ನಿವಾರಣೆಯಾಗಲಿದೆ. ಜೊತೆಗೆ, ಲಸಿಕೆಯನ್ನು ವಿದೇಶಗಳಿಗೆ ರಫ್ತು ಮಾಡಲು ಕಂಪನಿಗೆ ರಹದಾರಿ ಸಿಕ್ಕಿದಂತಾಗುತ್ತದೆ. ವಿಶ್ವದ ಬಹುತೇಕ ದೇಶಗಳು ತಮ್ಮ ದೇಶದಲ್ಲಿ ಈ ಲಸಿಕೆಯ ಪ್ರಯೋಗ ನಡೆಯದ ಹೊರತಾಗಿಯೂ ಅದಕ್ಕೆ ಮಾನ್ಯತೆ ನೀಡಲು ಅನುವು ಮಾಡಿಕೊಡುತ್ತದೆ.

ಮಾನ್ಯತೆ ಬಗ್ಗೆ ಡಬ್ಲ್ಯುಎಚ್‌ಒ ಹೇಳಿಕೆ:

ಈ ಕುರಿತು ಹೇಳಿಕೆ ನೀಡಿರುವ ಡಬ್ಲ್ಯುಎಚ್‌ಒ (WHO) ‘ವಿಶ್ವದೆಲ್ಲೆಡೆಯ ತಜ್ಞರನ್ನು ಒಳಗೊಂಡಿರುವ ನಮ್ಮ ತಾಂತ್ರಿಕ ಸಲಹಾ ಸಮಿತಿಯು ಕೋವ್ಯಾಕ್ಸಿನ್‌ ಲಸಿಕೆಯು ಕೋವಿಡ್‌ನಿಂದ ಜನರನ್ನು ರಕ್ಷಿಸಲು ಅಗತ್ಯವಾದ ಡಬ್ಲ್ಯುಎಚ್‌ಒದ ಗುಣಮಟ್ಟವನ್ನು ಹೊಂದಿದೆ. ಲಸಿಕೆ ಪಡೆಯುವುದರಿಂದ ಇರುವ ಅಪಾಯಕ್ಕಿಂತ ಅದರ ಲಾಭಗಳೇ ಹೆಚ್ಚು ಎಂಬ ಅಂತಿಮ ತೀರ್ಮಾನಕ್ಕೆ ಬಂದಿದೆ. ಹೀಗಾಗಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ 4 ವಾರಗಳ ಅಂತರದಲ್ಲಿ ಲಸಿಕೆಯ 2 ಡೋಸ್‌ ಪಡೆಯಲು ಅನುವಾಗುವಂತೆ ತುರ್ತು ಬಳಕೆಗೆ ಅನುಮತಿ ನೀಡಲಾಗುತ್ತಿದೆ’ ಎಂದು ಹೇಳಿದೆ.

ಆದರೆ, ಗರ್ಭಿಣಿಯರಲ್ಲಿ ವ್ಯಾಕ್ಸಿನ್‌ನ (Vaccine) ಸುರಕ್ಷತೆ ಮತ್ತು ಪರಿಣಾಮಗಳ ಕುರಿತು ಯಾವುದೇ ನಿರ್ಧಾರಕ್ಕೆ ಬರಲು ಈಗಿನ ಮಾಹಿತಿಗಳು ಸಾಲದು. ಹೀಗಾಗಿ ಈ ಬಗ್ಗೆ ಇನ್ನಷ್ಟು ವಿಸ್ತೃತ ಯೋಜನೆಗೆ ನಿರ್ಧರಿಸಲಾಗಿದೆ ಎಂದು ಡಬ್ಲ್ಯುಎಚ್‌ಒ(WHO) ಸ್ಪಷ್ಟಪಡಿಸಿದೆ.

2ನೇ ಡೋಸ್‌ ಪಡೆದ 14 ದಿನಗಳ ಬಳಿಕ ಎಷ್ಟೇ ಗಂಭೀರ ಪರಿಸ್ಥಿತಿಯಲ್ಲೂ ಕೋವ್ಯಾಕ್ಸಿನ್‌ ಶೇ.78ರಷ್ಟುಪರಿಣಾಮಕಾರಿ ಎಂದು ಸಾಬೀತಾಗಿದೆ. ಅದರಲ್ಲೂ ಈ ಲಸಿಕೆ ಕಡಿಮೆ ಮತ್ತು ಮಧ್ಯಮ ಆದಾಯ(Income) ದೇಶಗಳಿಗೆ ಹೆಚ್ಚು ಸೂಕ್ತವಾಗುತ್ತದೆ, ಕಾರಣ ಇದನ್ನು ಸುಲಭವಾಗಿ ಸಂಗ್ರಹಿಸಬಹುದು ಎಂದು ಡಬ್ಲ್ಯುಎಚ್‌ಒ ಹೇಳಿದೆ.

ಮೋದಿ ಒತ್ತಡ ಹೇರಿದ್ದರು:

ಕಳೆದ ವಾರ ಜಿ-20 ಸಭೆಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್‌ ಅಧೋನಾಂ ಘೇಬ್ರಿಯೇಸಸ್‌ ಅವರನ್ನು ಭೇಟಿಯಾಗಿ, ಮುಂದಿನ ವರ್ಷದಲ್ಲಿ ಭಾರತವು 500 ಕೋಟಿಯಷ್ಟುಕೋವಿಡ್‌ ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಕೋವ್ಯಾಕ್ಸಿನ್‌ಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದ್ದರು.

click me!