ಮಣಿಪುರ ಹೊತ್ತಿ ಉರಿಯುತ್ತಿರೋದ್ಯಾಕೆ?

By Shashishekar P  |  First Published Jul 22, 2023, 4:31 PM IST

ಮಣಿಪುರ ಹೊತ್ತಿ ಉರಿಯಲು ಅನೇಕ ಕಾರಣಗಳಿರಬಹುದು. ಹೊರಗಿನ ದುಷ್ಟ ಶಕ್ತಿಯನ್ನು ಕಂಟ್ರೋಲ್ ಮಾಡೋದು ಸುಲಭ. ಆದರೆ, ಒಳಗೆಯೇ ಹೊತ್ತಿ ಉರಿಯುವ ಬೆಂಕಿಯನ್ನು ಆರಿಸೋದು ಕಷ್ಟ. ಆದರೂ, ರಾಜ್ಯ ಸರಕಾರ ವಿಫಲವಾಗುತ್ತಿರುವುದೆಲ್ಲಿ? 


ಮಣಿಪುರದಲ್ಲಿ ಹಿಂಸಾಚಾರ ಆರಂಭವಾಗಿ ಮೂರು ತಿಂಗಳಾಗ್ತಿದೆ... ಇಲ್ಲಿಯವರೆಗೆ ಈಶಾನ್ಯ ಮೂಲೆಯ ರಾಜ್ಯವೊಂದರಲ್ಲಿ ಮೀಸಲಾತಿ ಗಲಾಟೆಯಾಗ್ತಿದೆ ಅನ್ನುವಂತೆ ನಾವು ಆ ಸಂಘರ್ಷವನ್ನ ನೋಡ್ತಿದ್ವಿ.. ಆದ್ರೆ ಇಬ್ಬರು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿ ಬೆತ್ತಲೆ ಮೆರವಣಿಗೆ ಮಾಡಿದ್ರಲ್ಲ... ಆ ಘಟನೆ ನಂತರ ಅಲ್ಲೇನೋ ಸಮಸ್ಯೆ ಇದೆ ಅಂತ ಎಲ್ಲರಿಗೂ ಅನ್ನಿಸಿದೆ. ಆ ಒಂದು ಘಟನೆ ಇಡೀ ದೇಶ ತಲೆ ತಗ್ಗಿಸಿವಂತೆ ಮಾಡಿಬಿಡ್ತು.. ದೇಶಾದ್ಯಂತ ಜನ ಆ ಘಟನೆಯನ್ನ ಖಂಡಿಸಿದ್ರು.. ಮೊದಲ ಬಾರಿಗೆ ಪ್ರಧಾನಿ ಮಣಿಪುರದ ಹಿಂಸಾಚಾರದ ಬಗ್ಗೆ ಮಾತಾಡಿದ್ರು.

ಅಲ್ಲಿ ಬೆತ್ತಲಾದದ್ದು ಮಹಿಳೆಯರಲ್ಲ, ಆ ಹೀನ ಕೃತ್ಯ ಮಾಡಿದವರ ಮನಸ್ಥಿತಿ. ಆ ಅಮಾನುಷ ಘಟನೆ ನಡೆದಿದ್ದು ಮೇ ನಾಲ್ಕನೇ ತಾರೀಕು, ವಿಡಿಯೋ ಬಿಡುಗಡೆ ಆಗಿದ್ದು ಜುಲೈ 19ಕ್ಕೆ. ಅಲ್ಲೀವರೆಗೆ ಇಂಥದ್ದೊಂದು ಘಟನೆ ನಡೆದಿದೆ ಅನ್ನೋದನ್ನೇ ಮುಚ್ಚಿಡಲಾಗಿತ್ತು. ಒಂದು ವೇಳೆ ಆ ವಿಡಿಯೋ ಬಹಿರಂಗವಾಗದೇ ಇದ್ದಿದ್ರೆ ಇಂಥಾ ಘಟನೆ ನಡೆದೇ ಇಲ್ಲ ಎಂಬಂತೆ ಮುಚ್ಚಿಹೋಗ್ತಿತ್ತು. ವಿಡಿಯೋ ರಿಲೀಸ್ ಆಗಿ ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಮೇಲೆ ಅಲ್ಲಿನ ಪೊಲೀಸರು ಎಫ್ಐಆರ್ ರಿಜಿಸ್ಟರ್ ಮಾಡಿದ್ದಾರೆ. ಅಂದ್ರೆ ಘಟನೆ ನಡೆದ 76 ದಿನಗಳ ನಂತರ ಎಫ್ಐಆರ್ ದಾಖಲಾಗಿ ಆರೋಪಿಗಳ ಅರೆಸ್ಟ್ ಆಗಿದೆ. ನಿಜವಾಗ್ಲೂ ಮಣಿಪುರದಲ್ಲೊಂದು ಸರ್ಕಾರ ಇದ್ಯಾ..? ಅಲ್ಲೊಬ್ಬ ಮುಖ್ಯಮಂತ್ರಿ ಇದ್ದಾರಾ..? ಅಲ್ಲಿ ಪೊಲೀಸರಿದ್ದಾರಾ..? ನಾಚಿಕೆ ಆಗ್ಬೇಕು ಅಲ್ಲಿನ ಸರ್ಕಾರಕ್ಕೆ, ಅಲ್ಲಿನ ಪೊಲೀಸರಿಗೆ. ಇಷ್ಟು ನೀಚ ಮಟ್ಟಕ್ಕೆ ಯಾವುದೇ ಸಂಘರ್ಷ, ಹೋರಾಟ ಇಳೀಬಾರದು. ಇಂಥಾ ಘಟನೆ ಮತ್ಯಾವತ್ತೂ ನಡೀಬಾರದು.

ನಡೆಯೋ ಅಪರಾಧಗಳು ಒಂದೆರಡಲ್ಲ:
ಇಲ್ಲೀವರೆಗೆ ಮಣಿಪುರದಲ್ಲಿ 160 ಕೊಲೆ, 10ಕ್ಕೂ ಹೆಚ್ಚು ಅತ್ಯಾಚಾರ, 5 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.. 17 ದೇವಸ್ಥಾನಗಳು ಧ್ವಂಸವಾಗಿದ್ರೆ, 221 ಚರ್ಚ್ಗಳು ನೆಲಸಮವಾಗಿವೆ. 60 ಸಾವಿರಕ್ಕೂ ಹೆಚ್ಚು ಜನ ಮನೆ ಮಠಗಳನ್ನ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇಷ್ಟೆಲ್ಲಾ ನಡೆಯೋದಕ್ಕೆ ಕಾರಣ ಏನು..? ಅಲ್ಲಿ ಹಿಂಸಾಚಾರ ಯಾಕಾಗ್ತಿದೆ..? ಈ ಅಂತರ್ಯುದ್ಧಕ್ಕಿರೋ ಹಿನ್ನೆಲೆ ಏನು..? ಇತಿಹಾಸ ಏನ್ ಹೇಳುತ್ತೆ..? ಈ ಹಿಂಸಾಚಾರದ ಹಿಂದೆ ಧರ್ಮ ಸಂಘರ್ಷವೂ ಇದೆಯಾ..?

ಎಲ್ಲ ಗಲಭೆಗಳಿಗೂ ಬೇಕು ಹೆಣ್ಣು ಮತ್ತು ಆಕೆಯ ದೇಹ!

ಹೇಗಿದೆ ಮಣಿಪುರ?
ಮಣಿಪುರದಲ್ಲಿ ಯಾಕೆ ಅಂತರ್ಯುದ್ಧ ನಡೀತಿದೆ ಅನ್ನೋದನ್ನ ನೋಡ್ಬೇಕಂದ್ರೆ ಅದಕ್ಕೂ ಮೊದಲು ಅಲ್ಲಿನ ಇತಿಹಾಸ, ಭೌಗೋಳಿಕತೆ, ಅಲ್ಲಾದ ಜನಸಂಖ್ಯಾ ಅಸಮತೋಲನ ಮತ್ತು ಮೀಸಲಾತಿ ಬೇಡಿಕೆ, ಹೋರಾಟಗಳನ್ನ ವಿವರವಾಗಿ ನೋಡ್ಬೇಕು. ಬೆಂಗಳೂರಿನಿಂದ ಅಜಮಾಸು ನಾಲ್ಕು ಸಾವಿರ ಕಿಲೋಮೀಟರ್ ದೂರದಲ್ಲಿದೆ ಮಣಿಪುರ. ಈಶಾನ್ಯ ಭಾರತದ 8 ರಾಜ್ಯಗಳಲ್ಲೊಂದಾದ ಮಣಿಪುರ ಪಕ್ಕದ ನಾಗಾಲ್ಯಾಂಡ್, ಅಸ್ಸಾಂ, ಮಿಜೋರಾಮ್ ಜತೆ ಗಡಿ ಹಂಚಿಕೊಂಡಿದೆ. ಮಿಲಿಟರಿ ಆಡಳಿತವಿರೋ ಮಯನ್ಮಾರ್ ದೇಶದ ಜತೆಗೆ 350 ಕಿಮೀ ಅಂತಾರಾಷ್ಟ್ರೀಯ ಗಡಿಯನ್ನ ಹಂಚಿಕೊಂಡಿದೆ. ಮಣಿಪುರದ ಶೇ 85-90ರಷ್ಟು ಭಾಗ ಗುಡ್ಡಗಾಡು ಪ್ರದೇಶ. ನಾಲ್ಕೂ ಕಡೆ ಬೆಟ್ಟ, ಗುಡ್ಡಗಾಡು ಪ್ರದೇಶ ಇದೆ. ಮಧ್ಯದಲ್ಲಿ ಕಣಿವೆಯಂತಾ ಪ್ರದೇಶ ಇದೆ.  ಈ ಗುಡ್ಡಗಾಗು ಪ್ರದೇಶ ಮತ್ತು ಕಣಿವೆಯಂತಾ ಪ್ರದೇಶದಲ್ಲಿರೋ ಜನರ ಮಧ್ಯೆ ನಡೆಯುತ್ತಿರೋ ಸಂಘರ್ಷ ಇದು.

1947ರಲ್ಲಿ ಭಾರತ ಬ್ರಿಟಿಷರಿಂದ ಸ್ವತಂತ್ರಗೊಂಡ ಮೇಲೆ, 1949ರಲ್ಲಿ ಅಲ್ಲಿದ್ದ ಮೇತಿ ರಾಜಮನೆತನದ ರಾಜ ಭಾರತ ಗಣರಾಜ್ಯ ಸೇರುವ ಒಪ್ಪಂದಕ್ಕೆ ಸಹಿ ಹಾಕಿದ. ಆರಂಭದಲ್ಲಿ ಕೇಂದ್ರಾಡಳಿತ ಪ್ರದೇಶವಾಗಿದ್ದ ಮಣಿಪುರಕ್ಕೆ 1972ರಲ್ಲಿ ರಾಜ್ಯದ ಸ್ಥಾನಮಾನ ನೀಡಲಾಯ್ತು. ಎಲ್ಲ ಈಶಾನ್ಯ ರಾಜ್ಯಗಳಂತೆ ಮಣಿಪುರದಲ್ಲೂ ಬುಡಕಟ್ಟು ಸಮುದಾಯಗಳ ಮಧ್ಯೆ ಸಂಘರ್ಷ ನಡೆಯುತ್ತಲೇ ಇದೆ. ಹೀಗಾಗಿ ಮಣಿಪುರದಲ್ಲಿ ಸಶಸ್ತ್ರಪಡೆಗಳಿಗೆ ವಿಶೇಷಾಧಿಕಾರವನ್ನೂ ನೀಡಲಾಗಿತ್ತು. ಈಗ ಇದು ಬೆಟ್ಟ ಗುಡ್ಡಗಾಡು ಪ್ರದೇಶದ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದೆ.

ಮಣಿಪುರದಲ್ಲಿ ಪ್ರಮುಖವಾಗಿ 4 ಬುಡಕಟ್ಟು ಸಮುದಾಯಗಳಿವೆ. ಮೇತಿ, ಕುಕಿ, ನಾಗಾ, ಮತ್ತೆ ಜೋಮಿ ಅನ್ನುವ ನಾಲ್ಕು ಬುಡಕಟ್ಟು ಸಮುದಾಯಗಳಿವೆ. ಮಣಿಪುರದ ಶೇ.85 ರಿಂದ 90ರಷ್ಟು ಭೂಮಿ ಬೆಟ್ಟ, ಗುಡ್ಡ, ದಟ್ಟ ಅರಣ್ಯದಿಂದಲೇ ತುಂಬಿದೆ. ಕುಕಿ, ನಾಗಾ, ಜೋಮಿ ಬುಡಕಟ್ಟು ಸಮುದಾಯಗಳು ಈ ಬೆಟ್ಟ, ಗುಡ್ಡಗಾಡು ಪ್ರದೇಶದಲ್ಲಿ ವಾಸ ಮಾಡ್ತಾರೆ. ಸುತ್ತ ಇರೋ ಬೆಟ್ಟಗುಡ್ಡಗಳ ಮಧ್ಯದಲ್ಲಿ ಶೇ 10 ರಿಂದ 15ರಷ್ಟು ಕಣಿವೆಯಂತಾ ಭೂಮಿ. ಈ ಕಣಿವೆಯ ಪ್ರದೇಶದಲ್ಲಿ ಮೇತಿ ಸಮುದಾಯದ ಜನ ವಾಸ ಮಾಡ್ತಾರೆ. ನಾಗ, ಕುಕಿ ಮತ್ತು ಜೋಮಿ ಈ ಮೂರೂ ಬುಡಕಟ್ಟು ಸಮುದಾಯಗಳ ಒಟ್ಟು ಜನಸಂಖ್ಯೆ ರಾಜ್ಯದ ಶೇ. 40ರಷ್ಟಿದ್ರೆ, ಇವರ ಬಳಿ ಇರೋ ಭೂ ಪ್ರದೇಶ ಶೇ.85 ರಿಂದ 90 ರಷ್ಟು. ಈ ಬುಡಕಟ್ಟು ಸಮುದಾಯದ ಶೇ.99ರಷ್ಟು ಜನ ಕ್ರಿಶ್ಚಿಯನ್ನರು. ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಮೇತಿಗಳು ಶೇ.55ರಷ್ಟಿದ್ರೆ ಇವರ ಬಳಿ ಇರೋ ಭೂ ಪ್ರದೇಶ ಶೇ.10ರಿಂದ 15ರಷ್ಟು ಮಾತ್ರ. ಇವರಲ್ಲಿ ಬಹುಪಾಲು ಜನ ಹಿಂದೂಗಳು. ಸ್ವಲ್ಪ ಪ್ರಮಾಣದಲ್ಲಿ ಮುಸ್ಲಿಮರು.. ಬೌದ್ಧರೂ ಇದ್ದಾರೆ. ಕುಕಿ, ನಾಗ, ಮತ್ತು ಜೋಮಿ ಸಮುದಾಯಗಳು ಎಸ್ಟಿ ವರ್ಗಕ್ಕೆ ಸೇರಿದ್ರೆ., ಬಹುಸಂಖ್ಯಾತ ಮೇತಿ ಸಮುದಾಯಕ್ಕೆ ಎಸ್ಟಿ ಸ್ಥಾನ ಮಾನ ಇಲ್ಲ. ಅವರು ಒಬಿಸಿ, ಎಸ್ಸಿ ಕ್ಯಾಟಗರಿಯಲ್ಲಿ ಮೀಸಲಾತಿ ಪಡೀತಾರೆ.

ಮಣಿಪುರಕ್ಕಿದೆ ವಿಶೇಷ ಸ್ಥಾನಮಾನ:
ಜಮ್ಮು ಕಾಶ್ಮೀರಕ್ಕೆ ಆರ್ಟಿಕಲ್ 370 ಅಂತ ವಿಶೇಷಾಧಿಕಾರ ಇತ್ತಲ್ಲ.. ಹಾಗೇ ಮಣಿಪುರದಲ್ಲಿ ಆರ್ಟಿಕಲ್ 371-ಸಿ ಅನ್ನೋ ವಿಶೇಷ ಕಾಯ್ದೆ ಜಾರಿಯಲ್ಲಿದೆ. ಸಂವಿಧಾನದ ಈ ವಿಶೇಷ ಸ್ಥಾನಮಾನದ ಪ್ರಕಾರ ಎಸ್ಟಿ ಸ್ಥಾನಮಾನ ಇಲ್ಲದ ಮೇತಿ ಸಮುದಾಯದ ಜನ ಗುಡ್ಡಗಾಡು ಪ್ರದೇಶಗಳಲ್ಲಿ ಭೂಮಿ ಖರೀದಿಸುವಂತಿಲ್ಲ. ಮನೆಗಳನ್ನ ಕಟ್ಟುವಂತಿಲ್ಲ. ಅಲ್ಲಿ ವಾಸ ಮಾಡುವಂತಿಲ್ಲ. ಆದ್ರೆ ಬೆಟ್ಟ ಗುಡ್ಡಗಳ ಮೇಲಿರೋ ಕುಕಿ, ನಾಗಾ ಬುಡಕಟ್ಟು ಜನ ಮೇತಿಗಳು ವಾಸ ಮಾಡೋ ಕಣಿವೆ-ಬಯಲಿನ ಪ್ರದೇಶದಲ್ಲಿ ಭೂಮಿ ಖರೀದಿಸಬಹುದು, ಮನೆ ಕಟ್ಟಿಕೊಂಡು ವಾಸ ಮಾಡಬಹುದು. ಈ ಭೂ ಸಂಪತ್ತಿನ ಹಂಚಿಕೆಯಲ್ಲಿನ ವ್ಯತ್ಯಾಸವೇ ಇಲ್ಲಿ ಸಂಘರ್ಷದ ಮೂಲ.

ರಾಜ್ಯದ ಒಟ್ಟಾರೆ ಭೂಮಿಯಲ್ಲಿ ಶೇ. 10-15ರಷ್ಟು ಜಾಗದಲ್ಲಿರೋ ಮೇತಿ ಸಮುದಾಯ ಇಲ್ಲಿ ರಾಜಕೀಯವಾಗಿ ಪವರ್ಫುಲ್. ಕಾರಣ ರಾಜ್ಯದ ಶೇ.55ರಷ್ಟು ಜನಸಂಖ್ಯೆ ಅವರದ್ದೇ. ಮಣಿಪುರದ 60 ವಿಧಾನಸಭಾ ಕ್ಷೇತ್ರಗಳಲ್ಲಿ 40 ಕ್ಷೇತ್ರ ಮೇತಿ ಬಾಹುಳ್ಯದ ಕಣಿವೆ ಪ್ರದೇಶದಲ್ಲಿ ಬಂದ್ರೆ, ಉಳಿದ 20 ಕ್ಷೇತ್ರಗಳು ಗುಡ್ಡಗಾಡು ಪ್ರದೇಶಗಳಲ್ಲಿ ಬರುತ್ವೆ. ಜನಸಂಖ್ಯೆಯ ಕಾರಣದಿಂದ ಮೇತಿ ಸಮುದಾಯಕ್ಕೆ ಇಲ್ಲಿ ರಾಜಕೀಯ ಶಕ್ತಿ ಇದೆ. ಅಧಿಕಾರ ಯಾವಾಗಲೂ ಅವರ ಕೈಯಲ್ಲೇ ಇರುತ್ತೆ.

ಮಣಿಪುರದಲ್ಲಿ ನಿಲ್ಲದ ಮೀಸಲಾತಿ ದಂಗೆ: ರಕ್ತ ಚರಿತ್ರೆಯ ಸ್ಫೋಟಕ ಸತ್ಯ ಬಿಚ್ಚಿಟ್ಟ ಸೇನಾಧಿಕಾರಿ..!

ಡ್ರಗ್ಸ್ ದಂಧೆ ಮತ್ತು ಅಕ್ರಮ ವಲಸಿಗರು:
ಇಲ್ಲಿನ ಡ್ರಗ್ಸ್ ದಂಧೆ ಮತ್ತು ಅಕ್ರಮ ವಲಸೆಯ ಆ್ಯಂಗಲ್ ಕೂಡ ಈ ಹಿಂಸಾಚಾರಕ್ಕಿದೆ. ಮೊದಲಿಗೆ ಅಕ್ರಮ ವಲಸೆಯ ವಿಷಯಕ್ಕೆ ಬರೋಣ. ಈಶಾನ್ಯದ ಎಲ್ಲ ರಾಜ್ಯಗಳಲ್ಲೂ ಅಕ್ರಮ ಬಾಂಗ್ಲಾ ವಲಸಿಗರ ಸಮಸ್ಯೆ ಇದೆ. ಆದ್ರೆ ಇಲ್ಲಿರೋದು ಅಕ್ರಮ ಮಯನ್ಮಾರಿ ವಲಸಿಗರು. ಮಣಿಪುರದಲ್ಲಿರುವಂತೆ ಪಕ್ಕದ ನಾಗಾಲ್ಯಾಂಡ್, ಮಿಜೋರಾಮ್‌ನಲ್ಲೂ ಕುಕಿ ಸಮುದಾಯ ಇದೆ. ಜತೆಗೆ ಮಯನ್ಮಾರ್ ನಲ್ಲಿಯೂ ಕುಕಿಗಳಿದ್ದಾರೆ. ಮಯನ್ಮಾರ್‌ನ ಕುಕಿ ಸಮುದಾಯದ ಜನ ನಿರಂತರವಾಗಿ ಗಡಿ ನುಸುಳಿ ಅಕ್ರಮವಾಗಿ ಮಣಿಪುರದ ಗುಡ್ಡಗಳಲ್ಲಿ ಸೇರಿಕೊಳ್ತಿದ್ದಾರೆ. ಇದಕ್ಕೆ ಅಲ್ಲಿನ ಸ್ಥಳೀಯ ಕುಕಿಗಳ ಬೆಂಬಲವೂ ಇದೆ. ಈಗ ನಡೆಯುತ್ತಿರೋ ಹಿಂಸಾಚಾರದಲ್ಲಿ ಅವರದ್ದೂ ಭಾಗಿತ್ವ ಇದೆ. ಮಣಿಪುರಕ್ಕೆ ಇನ್ನರ್ ಲೈನ್ ಪರ್ಮಿಟ್ ಅನ್ನೋ ವಿಶೇಷ ವ್ಯವಸ್ಥೆ ಇದೆ. ಈ ನಿಯಮದ ಪ್ರಕಾರ ಭಾರತದ ಬೇರೆ ರಾಜ್ಯದ ಪ್ರಜೆಗಳು ಇಲ್ಲಿಗೆ ಹೋಗಬೇಕು ಅಂದ್ರೆ, ಅಲ್ಲಿ ಉಳಿದುಕೊಳ್ಳಬೇಕಂದ್ರೆ ಅನುಮತಿ ಪಡೆಯಲೇಬೇಕು. ಅದೊಂಥರಾ ವೀಸಾ ಇದ್ದಂತೆ. ಅಂತಾರಾಷ್ಟ್ರೀಯ ಗಡಿಗೆ ಹತ್ತಿರವಿರೋ ಸೂಕ್ಷ್ಮ, ಸಂರಕ್ಷಿತ ಪ್ರದೇಶದಲ್ಲಿ ಹೊರ ರಾಜ್ಯದವರಿಗೆ ಅನುಮತಿಯಿಲ್ಲದೇ ಒಳಗೆ ಬಿಟ್ಟುಕೊಳ್ಳಲ್ಲ. ಈ ನಿಯಮ ಇತರ ಈಶಾನ್ಯ ರಾಜ್ಯಗಳಲ್ಲೂ ಇದೆ. ಪರಿಸ್ಥಿತಿ ಹೀಗಿದ್ದರೂ ಕೂಡ ಮಯನ್ಮಾರ್ ಮೂಲಕ ಬರೋ ಅಕ್ರಮ ವಲಸಿಗರನ್ನ ತಡೆಯಲಾಗ್ತಿಲ್ಲ.

ಮಣಿಪುರದ ಗುಡ್ಡಗಾಡು ಪ್ರದೇಶಗಳಲ್ಲಿ ಕದ್ದುಮುಚ್ಚಿ ಓಪಿಯಂ ಡ್ರಗ್ಸ್ ಬೆಳೀತಾರೆ. ಅದನ್ನ ಮಯನ್ಮಾರ್ನ ಡ್ರಗ್ ಡೀಲರ್ಗಳು ನಿಯಂತ್ರಿಸ್ತಾರೆ. ಕಳೆದ ಐದು ವರ್ಷಗಳಲ್ಲಿ 15,400 ಎಕರೆಯಲ್ಲಿ ಅಕ್ರಮವಾಗಿ ಓಪಿಯಂ ಡ್ರಗ್ಸ್ ಬೆಳೆದಿರೋದು ಪತ್ತೆಯಾಗಿದ್ರೆ, 2500 ಜನ ಅರೆಸ್ಟ್ ಆಗಿದ್ದಾರೆ. ಹಾಗೆ ಬಂಧನಕ್ಕೊಳಗಾದವರಲ್ಲಿ ಬಹುತೇಕರು ಕುಕಿ ಸಮುದಾಯದವರು. ಮಣಿಪುರದ 30 ಲಕ್ಷ ಜನಸಂಖ್ಯೆಯಲ್ಲಿ ಒಂದೂವರೆಯಿಂದ ಎರಡು ಲಕ್ಷ ಜನ ಡ್ರಗ್ಸ್ ದಾಸರಾಗಿದ್ದಾರೆ. ಆ ಮಟ್ಟಿಗೆ ಡ್ರಗ್ಸ್ ದಂಧೆ ವ್ಯಾಪಕವಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ ಈ ಡ್ರಗ್ಸ್ ದಂಧೆ ಮಟ್ಟ ಹಾಕೋದಕ್ಕೆ ಸರ್ಕಾರ ಅಕ್ರಮವಾಗಿ ಓಪಿಯಂ ಬೆಳೆಯೋ ಜಮೀನುಗಳ ಮೇಲೆ ದಾಳಿ ಮಾಡಿ ಡ್ರಂಗ್ಸ್ ದಂಧೆಕೋರರ ವಿರುದ್ಧ ಕ್ರಮಕ್ಕೆ ಮುಂದಾಯ್ತು. ಜತೆಗೆ ಅರಣ್ಯಭೂಮಿ ಒತ್ತುವರಿ ವಿರುದ್ಧವೂ ಕಾರ್ಯಾಚರಣೆ ಶುರು ಆಯ್ತು. ಇದು ಅಲ್ಲಿನ ಕುಕಿ, ನಾಗ, ಜೋಮಿ ಸಮುದಾಯವನ್ನ ಕೆರಳಿಸ್ತು. ಮೇತಿಗಳ ಸರ್ಕಾರ ನಮ್ಮ ಜಮೀನಿನ ಮೇಲೆ ಅಧಿಪತ್ಯ ಸಾಧಿಸೋದಕ್ಕೆ ಹೊರಟಿದೆ ಅನ್ನೋ ಅಸಮಾಧಾನ ಶುರುವಾಯ್ತು. ಸರ್ಕಾರ ಬುಡಕಟ್ಟು ಸಮುದಾಯದ ಹಿತಾಸಕ್ತಿಗೆ ವಿರುದ್ಧವಾಗಿದೆ ಅನ್ನೊ ಆಕ್ರೋಶ ಅದು. ಇದು ಸಣ್ಣ ಮಟ್ಟದ ಹಿಂಸಾಚಾರದ ಘಟನೆಗಳಿಗೆ ಕಾರಣವಾಯ್ತು. ಈ ಮಧ್ಯೆ ಅಲ್ಲಿನ ಬಿಜೆಪಿ ಸರ್ಕಾರ ಇಂಪಾಲ್ನಲ್ಲಿನ ಬುಡಕಟ್ಟು ಸಮುದಾಯದ ಕಾಲೋನಿಯೊಂದರಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿ ಅಕ್ರಮವಾಗಿ ಕಟ್ಟಲಾಗಿದ್ದ ಚರ್ಚ್ಗಳನ್ನ ನೆಲಸಮ ಮಾಡ್ತು. ಈ ಘಟನೆ ಮೇತಿ ವರ್ಸಸ್ ಕುಕಿ-ನಾಗಾ ಬಣ್ಣ ಪಡೆದುಕೊಳ್ತು.

ಮಣಿಪುರ ಯುವತಿಯರ ಬೆತ್ತಲೆ ಪ್ರಕರಣಕ್ಕೆ ಪ್ರಧಾನಿಯ ಟೀಕಿಸಿದ ಕಿಶೋರ್‌, 'ನಿಮ್ಮ 56 ಇಂಚಿನ ಬಡಾಯಿಗೆ ಧಿಕ್ಕಾರವಿರಲಿ..'

ಕುತ್ತು ತಂತು ಹೈಕೋರ್ಟ್ ಆದೇಶ:
ಈ ಸಣ್ಣ ಮಟ್ಟದ ಸಂಘರ್ಷ ಇವತ್ತಿನ ರೀತಿ ಹೊತ್ತಿ ಉರಿಯೋದಕ್ಕೆ ಕಾರಣವಾಗಿದ್ದು ಏಪ್ರಿಲ್ 20ರಂದು ಮಣಿಪುರ ಹೈಕೋರ್ಟ್ ಮೀಸಲಾತಿ ಬಗ್ಗೆ ಮಾಡಿದ ಆದೇಶ. ಮೇತಿ ಸಮುದಾಯಕ್ಕೆ ಎಸ್ಟಿ ಸ್ಥಾನಮಾನ ನೀಡಬೇಕು ಅನ್ನೋದು ಆ ಸಮುದಾಯದ ಬೇಡಿಕೆ. ಭಾರತ ಗಣರಾಜ್ಯ ಸೇರುವ ಒಪ್ಪಂದಕ್ಕೆ ಅಹಿ ಹಾಕುವಾಗಲೇ ಎಸ್ಟಿ ಸ್ಥಾನಮಾನದ ಷರತ್ತು ಹಾಕಿತ್ತು ಮೇತಿ ಸಮುದಾಯ. ಆ ಬೇಡಿಕೆಯನ್ನ ಪರಿಗಣಿಸಿ ಮೇತಿಗಳಿಗೆ ಎಸ್ಟಿ ಸ್ಥಾನಮಾನ ನೀಡಲು ನಾಲ್ಕು ವಾರಗಳಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಅಂದಿತ್ತು ಮಣಿಪುರದ ಹೈಕೋರ್ಟ್. ಈ ಆದೇಶದ ನಂತರ ಮಣಿಪುರದಲ್ಲಿ ಹಿಂಸಾಚಾರ ಶುರುವಾಯ್ತು. ಹೈಕೋರ್ಟ್ ಆದೇಶ ಖಂಡಿಸಿ ಮಣಿಪುರ ಬುಡಕಟ್ಟು ವಿದ್ಯಾರ್ಥಿ ಸಂಘಟನೆ ಮೇ-3ನೇ ತಾರೀಕು ಬುಡಕಟ್ಟು ಐಕ್ಯತಾ ಮೆರವಣಿಗೆ ಮಾಡಿದ್ವು. ಈ ಪ್ರತಿಭಟನಾ ಮೆರವಣಿಗೆಯಲ್ಲಿ 60 ಸಾವಿರ ವಿದ್ಯಾರ್ಥಿಗಳು ಸೇರಿದ್ರು. ಚೂರಾಚಂದಪುರ್ ನಗರದಲ್ಲಿ ಈ ರ್ಯಾಲಿ ಹೋಗುವಾಗ ಶುರುವಾಯ್ತು ಹಿಂಸಾಚಾರ. ಮೇತಿ ಸಮುದಾಯದ ಜನರ ಮೇಲೆ ಕುಕಿ-ನಾಗಾ ಬುಡಕಟ್ಟು ವಿದ್ಯಾರ್ಥಿಗಳು ದಾಳಿ ಮಾಡಿದರು, ಅವರ ಮನೆಗಳಿಗೆ ಬೆಂಕಿಯಿಟ್ಟರು. ಇದರ ಬೆನ್ನಿಗೇ ಮೇತಿಗಳು ತಿರುಗಿಬಿದ್ದು ಪ್ರತಿದಾಳಿಗೆ ಮುಂದಾದ್ರು. ಅಲ್ಲಿಂದ ಶುರುವಾಯ್ತು ಮೇತಿ ಮತ್ತು ಕುಕಿ-ನಾಗಾ ಜನರ ಮಧ್ಯದ ಅಂತರ್ಯುದ್ಧ.

ಮೇತಿ ಸಮುದಾಯದವರ ವಾದ ಏನಂದ್ರೆ ನಾವು ಜನಸಂಖ್ಯೆಯಲ್ಲಿ ಬಹುಸಂಖ್ಯಾತರಿದ್ದೀವಿ.. ಆದ್ರೆ ರಾಜ್ಯದ ಸಂಪನ್ಮೂಲದಲ್ಲಿ ನಮಗೆ ಶೇ.10-15ರಷ್ಟು ಮಾತ್ರ ಪಾಲಿದೆ. ನಮಗೂ ಗುಡ್ಡಗಾಡು ಪ್ರದೇಶಗಳ ಮೇಲೆ ಹಿಡಿತ ಬೇಕು ಅನ್ನೋದು. ಇದು ಸಾಧ್ಯವಾಗಬೇಕಂದ್ರೆ ಅವರಿಗೆ ಎಸ್ಟಿ ಸ್ಥಾನಮಾನ ಸಿಗಬೇಕು. ಯಾವುದೇ ಕಾರಣಕ್ಕೂ ಮೇತಿ ಸಮುದಾಯಕ್ಕೆ ಎಸ್ಟಿ ಸ್ಥಾನಮಾನ ಸಿಗಬಾರದು ಅನ್ನೋದು ಕುಕಿ, ನಾಗಾಗಳ ಆಗ್ರಹ. ಅವರು ಶೈಕ್ಷಣಿಕವಾಗಿ, ರಾಜಕೀಯವಾಗಿ ಮುಂದಿದ್ದಾರೆ, ಗುಡ್ಡಗಾಡು ಪ್ರದೇಶಗಳು ಮೇತಿಗಳ ಪಾಲಾಗಬಾರದು. ಅವರಿಗೆ ಎಸ್ ಟಿ ಸ್ಥಾನ ಮಾನ ಸಿಕ್ಕಿದ್ರೆ ನಮ್ಮ ಜಮೀನು ಅವರ ಕೈವಶವಾಗುತ್ತೆ. ಈ ಬೆಟ್ಟ, ಗುಡ್ಡದ ಪ್ರದೇಶ ನಮ್ಮದು, ನಮ್ಮ ಬಳಿಯೇ ಇರ್ಬೇಕು ಅನ್ನೋ ಹೋರಾಟ ಕುಕಿ-ನಾಗಾ ಸಮುದಾಗಳದ್ದು. ಅದಕ್ಕಾಗಿಯೇ ಮಣಿಪುರದಿಂದ ನಮ್ಮ ಜಾಗ ಪ್ರತ್ಯೇಕಿಸಿ ಹೊಸ ರಾಜ್ಯ ಮಾಡಿ ಅಂತಿರೋದು ಈ ಬುಡಕಟ್ಟು ಸಮುದಾಯದ ಜನ.

ಕ್ರಿಶ್ಚಿಯನ್ ಮಷಿನರಿಗಳು ಮತ್ತು ಮತಾಂತರ ಮಾಫಿಯಾ:
ಮೀಸಲಾತಿ, ಭೂಮಿ ಮೇಲಿನ ಹಕ್ಕಿನ ವಿಷಯಕ್ಕಾಗಿಯಷ್ಟೇ ಇಲ್ಲಿ ಸಂಘರ್ಷ ಇಲ್ಲ. ಬುಡಕಟ್ಟು ಸಮುದಾಯಗಳ ಮಧ್ಯದ ತಿಕ್ಕಾಟಕ್ಕೆ ಕ್ರಿಶ್ಚಿಯನ್ ಮತಾಂತರ ಮಾಫಿಯಾದ ಆ್ಯಂಗಲ್ ಕೂಡ ಇದೆ. ಕ್ರಿಶ್ಚಿಯಾನಿಟಿ ಮಣಿಪುರಕ್ಕೆ ಕಾಲಿಟ್ಟಿದ್ದು 1890ರಲ್ಲಿ. ಆರಂಭದಲ್ಲಿ ಅಮೆರಿಕನ್ ಬ್ಯಾಪ್ಟಿಸ್ಟ್ ಮಿಷನರಿಗಳು ಇಲ್ಲಿ ಮತಾಂತರ ಶುರು ಮಾಡಿದವು. ಆನಂತರ ಬ್ರಿಟಿಷ್ ಚರ್ಚ್ಗಳೂ ಕೈಜೋಡಿಸಿದ್ವು. ಹಿಂದು ಮತ್ತು ಬುಡಕಟ್ಟು ಸಂಪ್ರದಾಯ ಪಾಲಿಸುತ್ತಿದ್ದ ಗುಡ್ಡಗಾಡು ಪ್ರದೇಶಗಳಲ್ಲಿದ್ದ ಬಡವರು, ಆದಿವಾಸಿಗಳನ್ನ ನಿರಂತರವಾಗಿ ಮತಾಂತರ ಮಾಡಲಾಯ್ತು. ನಿಮ್ಮ ದೇವರು ಸರಿಯಿಲ್ಲ, ಆಚರಣೆ ಸರಿಯಿಲ್ಲ, ಸಂಸ್ಕೃತಿ ಸರಿಯಿಲ್ಲ ಅಂತ ಅವರ ನಂಬಿಕೆಗಳಿಗೆ ಕೊಳ್ಳಿಯಿಟ್ಟು ಅವರ ಕೊರಳಿಗೆ ಶಿಲುಬೆ ಹಾಕಲಾಯ್ತು. 1901ರಲ್ಲಿ ಶೇ.96ರಷ್ಟಿದ್ದ ಮಣಿಪುರಿ ಹಿಂದೂಗಳ ಸಂಖ್ಯೆ 1951ರ ಹೊತ್ತಿಗೆ ಶೇ.81ಕ್ಕೆ ಇಳಿದಿತ್ತು. 1981ಕ್ಕೆ 63%. 2001ಕ್ಕೆ 52%ಗೆ ಇಳಿದು ಈಗ ಒಟ್ಟು ಜನಸಂಖ್ಯೆಯ ಶೇ.49ರಷ್ಟಕ್ಕೆ ಬಂದು ನಿಂತಿದೆ ಅಲ್ಲಿನ ಹಿಂದೂಗಳ ಸಂಖ್ಯೆ. ಕ್ರಿಶ್ಚಿಯನ್ನರ ಸಂಖ್ಯೆ ಶೇ.42ರಷ್ಟಿದೆ. ಕಳೆದ 120 ವರ್ಷಗಳಲ್ಲಿ ಮಣಿಪುರದಲ್ಲಾದ ಜನಸಂಖ್ಯಾ ಅಸಮತೋಲನ ಅಲ್ಲಿ ಮೇತಿ ಹಿಂದೂಗಳು v/s ಕುಕಿ ಕ್ರಿಶ್ಚಿಯನ್ನರು ಅನ್ನೋ ಸ್ಥಿತಿಗೆ ಬಂದು ನಿಂತಿದೆ. ಅದೇ ಕಾರಣಕ್ಕೆ ಬುಡಕಟ್ಟು ಸಂಘರ್ಷ ಅಲ್ಲಿ ಧರ್ಮ ಸಂಘರ್ಷವಾಗಿಯೂ ಬದಲಾಗಿದೆ. ಕುಕಿಗಳು ದೇವಸ್ಥಾನಗಳನ್ನ ಒಡೆಯುತ್ತಿದ್ದಾರೆ, ಮೇತಿಗಳು ಚರ್ಚ್‌ಗಳನ್ನು ನೆಲಸಮ ಮಾಡ್ತಿದ್ದಾರೆ.

ಇತ್ತೀಚೆಗೆ ಯುರೋಪಿಯನ್ ಪಾರ್ಲಿಮೆಂಟ್ ಮಣಿಪುರದ ಹಿಂಸಾಚಾರ ತಡೆಯೋದಕ್ಕೆ ಕ್ರಮ ಕೈಗೊಳ್ಬೇಕು. ಅಲ್ಲಿನ ಕ್ರಿಶ್ಚಿಯನ್ನರನ್ನ ರಕ್ಷಿಸಬೇಕು ಅಂದಿದ್ದು ಇದಕ್ಕೇನೇ. ಕ್ರೈಸ್ತ ಮಿಷನರಿಗಳ ಮೂಲಕ ಮತಾಂತರ ಮಾಫಿಯಾ ನಡೆಸೋದು, ಭೌಗೋಳಿಕವಾಗಿ ಜನಸಂಖ್ಯಾ ಅಸಮತೋಲನಕ್ಕೆ ಕುಮ್ಮಕ್ಕು ಕೊಡೋದು, ಆಮೇಲೆ ಪ್ರಜಾಪ್ರಭುತ್ವ, ಮಾನವಹಕ್ಕುಗಳ ಬಗ್ಗೆ ಬಿಟ್ಟಿ ಉಪದೇಶ ಮಾಡೋದು ಈ ಪಾಶ್ಚಿಮಾತ್ಯ ದೇಶಗಳಿಗೆ ಚಟ. ತಮ್ಮದೇ ದೇಶ ಫ್ರಾನ್ಸ್ನಲ್ಲಿನ ದಂಗೆಯನ್ನ ಮೊದಲು ನಿಯಂತ್ರಣಕ್ಕೆ ತರಲಿ, ಬ್ರಿಟನ್ಗೆ ಬರೋ ನಿರಾಶ್ರಿತರನ್ನ ರವಾಂಡಾಗೆ ಗಡಿಪಾರು ಮಾಡೋ ಅಮಾನವೀಯತೆಯನ್ನ ನಿಲ್ಲಿಸಲಿ. ಯೂರೋಪಿಯನ್ ದೇಶಗಳಲ್ಲಿ ತಲೆಎತ್ತಿರೋ ಮುಸ್ಲಿಂ ಮೂಲಭೂತವಾದವನ್ನ ಮಟ್ಟ ಹಾಕಲಿ. ಬೇರೆ ದೇಶಗಳ ಪ್ರಜಾಪ್ರಭುತ್ವ ರಕ್ಷಣೆಯ ಗುತ್ತಿಗೆಯನ್ನ ಈ ಪಾಶ್ಚಿಮಾತ್ಯ ದೇಶಗಳು ತಗೊಳ್ಳೋದು ಬೇಡ... ನಾವೇ ಶ್ರೇಷ್ಠ ಅನ್ನೋ ವಸಾಹತುಶಾಹಿ ಮನಸ್ಥಿತಿಯನ್ನ ಈ ದೇಶಗಳು ಇನ್ನಾದರೂ ಬಿಡಲಿ. ಮಣಿಪುರದ ಸಮಸ್ಯೆ ಇತ್ಯರ್ಥ ಮಾಡುವ ಶಕ್ತಿ ಈ ದೇಶಕ್ಕಿದೆ.

Tap to resize

Latest Videos

ಆದಷ್ಟು ಬೇಗ ಮಣಿಪುರದಲ್ಲಿ ಹಿಂಸಾಚಾರ ನಿಲ್ಲಲಿ, ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ಮಣಿಪುರದ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಲಿ. ಬುಡಕಟ್ಟು ಸಮುದಾಯಗಳ ಮಧ್ಯೆ ಇರೋ ಅಪನಂಬಿಕೆಗಳನ್ನ ಮೊದಲು ದೂರ ಮಾಡಬೇಕಿದೆ. ಆ ನಂತರ ಎಲ್ಲ ಸಮುದಾಯಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ಶಾಂತಿ ಸುವ್ಯವಸ್ಥೆ ಮರುಸ್ಥಾಪಿಸೋ ಕೆಲಸ ಆಗಲಿ.

click me!