ಎಕ್ಸ್, ಮೆಟಾ ಮುಂತಾದ ಸೋಷಿಯಲ್ ಮೀಡಿಯಾಗಳ ಭಾರತೀಯ ಪ್ರತಿನಿಧಿಗಳ ಜೊತೆಗೆ ಆನ್‌ಲೈನ್ ಸಭೆ ನಡೆಸಿದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಸಂಕೇತ್ ಎಸ್., ‘ಹುಸಿ ಬಾಂಬ್ ಸಂದೇಶ ತಡೆಗೆ ನೀವು ಏನು ಕ್ರಮ ಕೈಗೊಂಡಿದ್ದೀರಿ? ಎಂದು ಪ್ರಶ್ನೆ ಮಾಡಿದ್ದಾರೆ.
ನವದೆಹಲಿ: ಕಳೆದೊಂದು ವಾರದಿಂದ ವಿಮಾನಯಾನ ಕಂಪನಿಗಳಿಗೆ ಭಾರೀ ಸಂಖ್ಯೆಯಲ್ಲಿ ಹುಸಿ ಬಾಂಬ್ ಸಂದೇಶಗಳು ರವಾನೆಯಾಗುತ್ತಿರುವ ಬಗ್ಗೆ ಗರಂ ಆಗಿರುವ ಕೇಂದ್ರ ಸರ್ಕಾರ, ಈ ವಿಷಯದಲ್ಲಿ ಕೈಕಟ್ಟಿ ಕುಳಿತಿರುವ ‘ಎಕ್ಸ್’ (ಹಿಂದಿನ ಟ್ವೀಟರ್) ವಿರುದ್ಧ ತೀವ್ರ ಹರಿಹಾಯ್ದಿದೆ.
ಏರ್‌ಲೈನ್ಸ್‌ಗಳಿಗೆ ಹುಸಿ ಬಾಂಬ್ ಸಂದೇಶಗಳು ಹೆಚ್ಚಿನ ಸಂಖ್ಯೆಯಲ್ಲಿ ಎಕ್ಸ್ ಹಾಗೂ ಇನ್ನಿತರ ಸೋಷಿಯಲ್ ಮೀಡಿಯಾ ಮೂಲಕವೇ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಬುಧವಾರ ಎಕ್ಸ್, ಮೆಟಾ ಮುಂತಾದ ಸೋಷಿಯಲ್ ಮೀಡಿಯಾಗಳ ಭಾರತೀಯ ಪ್ರತಿನಿಧಿಗಳ ಜೊತೆಗೆ ಆನ್‌ಲೈನ್ ಸಭೆ ನಡೆಸಿದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಸಂಕೇತ್ ಎಸ್., ‘ಹುಸಿ ಬಾಂಬ್ ಸಂದೇಶ ತಡೆಗೆ ನೀವು ಏನು ಕ್ರಮ ಕೈಗೊಂಡಿದ್ದೀರಿ? ನಿಮ್ಮ ನಡೆ ‘ಅಪರಾಧವನ್ನು ಬೆಂಬಲಿಸುವುದಕ್ಕೆ ಸಮ.’ ನಿಮ್ಮ ವೇದಿಕೆಯನ್ನು ಬಳಸಿ ಕಿಡಿಗೇಡಿಗಳು ರವಾನಿಸುತ್ತಿರುವ ಸಂದೇಶಗಳಿಂದ ಏರ್‌ಲೈನ್ಸ್ ಹಾಗೂ ಪ್ರಯಾಣಿಕರಿಗೆ ಆಗುತ್ತಿರುವ ಸಮಸ್ಯೆಯ ತೀವ್ರತೆ ಅರಿವಿದೆಯೇ ಎಂದು ತೀವ್ರವಾಗಿ ತರಾಟೆ ತೆಗೆದುಕೊಂಡರು ಎಂದು ಮೂಲಗಳು ತಿಳಿಸಿವೆ.
ಒಂದು ವಾರದಿಂದ ಭಾರತದ ಏರ್‌ಲೈನ್ಸ್ ಕಂಪನಿಗಳ 120ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ. ನಂತರ ಏರ್‌ಲೈನ್ಸ್‌ಗಳು ಶಿಷ್ಟಾಚಾರದಂತೆ ವಿಮಾನದ ತಪಾಸಣೆ ಇತ್ಯಾದಿ ಕ್ರಮಗಳನ್ನು ಕೈಗೊಂಡಿದ್ದು, ಅದರಿಂದ ಏರ್‌ಲೈನ್ಸ್‌ಗಳಿಗೆ ವ್ಯಾಪಕ ನಷ್ಟ ಹಾಗೂ ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆ ಉಂಟಾಗಿದೆ.
ಮತ್ತೆ 79 ವಿಮಾನಗಳಿಗೆ ಹುಸಿಬಾಂಬ್ ಬೆದರಿಕೆ: ಕಿಡಿಗೇಡಿಗಳ ಕೃತ್ಯಕ್ಕೆ 600 ಕೋಟಿ ನಷ್ಟ!