Bulli Bai app case: ಆರಂಭವಾಗದ ವಿಚಾರಣೆ, ಮೂವರು ಆರೋಪಿಗಳಿಗೆ ಜಾಮೀನು

By Sharath Sharma  |  First Published Jun 27, 2022, 12:31 PM IST

Bulli Bai case follow up: ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದ್ದ ಪ್ರತಿಷ್ಠಿತ ಮುಸಲ್ಮಾನ ಮಹಿಳೆಯರನ್ನು ಆನ್‌ಲೈನ್‌ನಲ್ಲಿ ಹರಾಜಿಗೆ ಹಾಕುವ ಬುಲ್ಲಿ ಬಾಯ್‌ ಪ್ರಕರಣದ ಮೂವರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆರು ತಿಂಗಳ ಬಳಿಕ ಆರೋಪಿಗಳು ಬಂಧ ಮುಕ್ತಗೊಳ್ಳುತ್ತಿದ್ದಾರೆ. 


ಮುಂಬೈ: ದೇಶಾದ್ಯಂತ ಸಂಚಲನ ಮೂಡಿಸಿದ್ದ ಬುಲ್ಲಿಬಾಯ್‌ ಪ್ರಕರಣದ (Bulli Bai Case) ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ಪ್ರಕರಣದ ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿ ಆರಂಭವಾಗದ ಹಿನ್ನೆಲೆಯಲ್ಲಿ ಆರೋಪಿಗಳ ಪರ ವಕೀಲರು ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದ್ದರು. ಇದನ್ನು ಆಲಿಸಿದ ಮಾನ್ಯ ನ್ಯಾಯಾಲಯ ಮೂವರು ಆರೋಪಿಗಳಿಗೆ ಜಾಮೀನು ನೀಡಿದೆ. ಬುಲ್ಲಿ ಬಾಯ್‌ ಎಂಬ ಹೆಸರಿನಲ್ಲಿ ವೆಬ್‌ಸೈಟ್‌ (Bulli Bai App) ಮತ್ತು ಆಪ್‌ ರಚಿಸಿ, ಮುಸಲ್ಮಾನ ಯುವತಿಯರನ್ನು ಹರಾಜು ಹಾಕಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ನಂತರ ಮುಂಬೈ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದರು. ಆರೋಪಿಗಳ ಮೇಲೆ ಲೈಂಗಿಕ ದೌರ್ಜನ್ಯ, ಮಾನಹಾನಿ, ಕೋಮು ದ್ವೇಷ ಬಿತ್ತನೆ, ಅಪರಾಧಕ್ಕೆ ಪಿತೂರಿ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. 

ಇಂದು ಆರೋಪಿಗಳ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ, ಪ್ರಕರಣ ಸಂಬಂಧ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗದ ಹಿನ್ನೆಲೆ ಆರೋಪಿಗಳಿಗೆ ಜಾಮೀನು ನೀಡಿದೆ. "ಪ್ರಕರಣದ ವಿಚಾರಣೆ ಇನ್ನೂ ಆರಂಭವಾಗಿಲ್ಲ. ತಕ್ಷಣಕ್ಕೆ ವಿಚಾರಣೆ ಆರಂಭವಾಗುವಂತೆಯೂ ಕಾಣುತ್ತಿಲ್ಲ. ಹೀಗಿರುವಾಗ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ವಿನಾಃಕಾರಣ ಇಟ್ಟುಕೊಳ್ಳುವುದು ಸರಿಯಲ್ಲ," ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಇದರಿಂದ ಮೂವರು ಆರೋಪಿಗಳು ಸದ್ಯಕ್ಕೆ ಬಂಧ ಮುಕ್ತರಾಗಲಿದ್ದಾರೆ. 

Tap to resize

Latest Videos

undefined

ನೀರಜ್‌ ಸಿಂಗ್‌, ನೀರಜ್‌ ಬಿಷ್ಣೋಯ್‌ ಮತ್ತು ಅಂಬುಕರೇಶ್ವರ್‌ ಠಾಕೂರ್‌ಗೆ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಎ.ಬಿ. ಶರ್ಮ ಜಾಮೀನು ಮಂಜೂರುಮಾಡಿದ್ದಾರೆ. ಬಂಧನವಾದ ಆರು ತಿಂಗಳ ಬಳಿಕ ಆರೋಪಿಗಳಿಗೆ ಜಾಮೀನು ನೀಡಲು ನ್ಯಾಯಾಲಯ ಒಪ್ಪಿದೆ. ಆರೋಪಿಗಳ ವಯಸ್ಸು ಮತ್ತು ನ್ಯಾಯಾಂಗ ಬಂಧನಲ್ಲಿದ್ದ ಸಮಯವನ್ನು ಪರಿಗಣಿಸಿ ಜಾಮೀನು ನೀಡಲಾಗಿದೆ ಎಂದು ಕೋರ್ಟ್‌ ತಿಳಿಸಿದೆ. 

ಆರೋಪಿಗೆ ಪಶ್ಚಾತ್ತಾಪವೇ ಇಲ್ಲ?:

ಪ್ರತಿಷ್ಠಿತ ಮುಸ್ಲಿಂ (Muslim) ಮಹಿಳೆಯರನ್ನು (Woman) ಅವಹೇಳನಕಾರಿಯಾಗಿ ಚಿತ್ರಿಸಿ ಹರಾಜಿಗೆ ಇಡುತ್ತಿದ್ದ ‘ಬುಲ್ಲಿ ಬಾಯಿ’ (Bulli Bai App) ಆ್ಯಪ್‌ನ ಪ್ರಮುಖ ಆರೋಪಿ ನೀರಜ್‌ ಬಿಷ್ಣೋಯಿ ಪೊಲೀಸರ ವಿಚಾರಣೆ ವೇಳೆ, ತಾನು ಮಾಡಿದ್ದು ಸರಿ ಇತ್ತು, ಈ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ. 

ಭೋಪಾಲ್‌ನಲ್ಲಿ ಎರಡನೇ ವರ್ಷದ ಬಿಟೆಕ್‌ ಓದುತ್ತಿರುವ ಬಿಷ್ಣೋಯಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಈತನನ್ನು 7 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ‘ನಾನು ಮಾಡಿರುವ ಕೆಲಸದ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ. ನಾನು ಮಾಡಿದ್ದು ಸರಿ ಇತ್ತು’ ಎಂದು ಪೊಲೀಸರಿಗೆ ಹೇಳಿದ್ದ. ಬಂಧನದ ನಂತರ ಈತನನ್ನು ಭೋಪಾಲ್‌ ಇಂಜಿನಿಯರಿಂಗ್‌ ಕಾಲೇಜು ಅಮಾನತ್ತು ಮಾಡಿತ್ತು.

ಮುಸ್ಲಿಂ (Muslim) ಮಹಿಳೆಯರನ್ನು ಅವಹೇಳನಕಾರಿ ಚಿತ್ರಿಸಿ ಹರಾಜಿಗೆ ಇಡುತ್ತಿದ್ದ ‘ಬುಲ್ಲಿ ಬಾಯಿ’ ಆ್ಯಪ್‌ ಪ್ರಕರಣ ತಿರುವುಗಳ ಮೇಲೆ ತಿರುವು ಪಡೆದುಕೊಂಡಿತ್ತು. ದೇಶದ ವಿವಿಧ ಮೂಲೆಗಳಲ್ಲಿ ಇದರ ಮೂಲ ಪತ್ತೆಯಾಗುತ್ತಲೇ ಇದ್ದವು.

ಆಪ್ ಹಿಂದಿನ ಮಾಸ್ಟರ್ ಮೈಂಡ್ ನ್ನು ಅಸ್ಸಾಂನಿಂದ (Assam) ಬಂಧಿಸಲಾಗಿದೆ ಎಂದು ದೆಹಲಿ (Newdelhi) ಪೊಲೀಸರು (Police) ತಿಳಿಸಿದ್ದರು. ಮುಖ್ಯ ಸಂಚುಕೋರ ಮತ್ತು  ಅಪ್ಲಿಕೇಶನ್‌ನ ಹ್ಯಾಂಡಲ್ ಮಾಡುತ್ತಿದ್ದ ನೀರಜ್ ಬಿಷ್ಣೋಯ್ ಎಂಬಾತನ ಬಂಧಿಸಿ ಕರೆತಂದಿದ್ದರು. ಇಂಟಲಿಜನ್ಸ್ ವಿಭಾಗದ ಡೆಪ್ಯೂಟಿ ಕಮಿಷನರ್ ಕೆಪಿಎಸ್ ಮಲ್ಹೋತ್ರಾ ಮಾಹಿತಿ ನೀಡಿದ್ದಾರೆ. 21 ವರ್ಷದ ಬಿಷ್ಣೋಯ್ ಭೋಪಾಲ್ ಮೂಲದ ಸಂಸ್ಥೆಯಲ್ಲಿ ಎರಡನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ.

ಇದನ್ನೂ ಓದಿ: Bulli Bai row: ಗಿಟ್‌ಹಬ್‌ನಲ್ಲಿ ಮುಸ್ಲಿಂ ಮಹಿಳೆಯರ ಹರಾಜು: ಬೆಂಗಳೂರಲ್ಲಿ ಯುವಕ ವಶಕ್ಕೆ!

ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ದನಿಯೆತ್ತಿರುವ ಪ್ರಮುಖ ಮುಸ್ಲಿಂ ಮಹಿಳಾ ಪತ್ರಕರ್ತರು, ವಕೀಲರು ಮತ್ತು ಹೋರಾಟಗಾರರನ್ನು ಅಸಹ್ಯಕರ ರೀತಿಯಲ್ಲಿ ಪ್ರೊಜೆಕ್ಟ್ ಮಾಡಿ ಮಾರಾಟಕ್ಕೆ ಇದ್ದಾರೆ ಎಂಬಂತೆ ಜಾಹೀರಾತು ಮಾಡುತ್ತಿದ್ದ.  

ಮುಂಬೈ ಪೊಲೀಸರ ಸೈಬರ್ ಸೆಲ್ ಈ ಹಿಂದೆ ಮೂವರನ್ನು ಬಂಧಿಸಿತ್ತು. 21 ವರ್ಷದ ವಿದ್ಯಾರ್ಥಿ ಮಯಾಂಕ್ ರಾವಲ್, 19 ವರ್ಷದ ಶ್ವೇತಾ ಸಿಂಗ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿ ವಿಶಾಲ್ ಕುಮಾರ್ ಝಾ ರನ್ನು ಬಂಧಿಸಲಾಗಿದ್ದು ಶ್ವೇತಾ ಸಿಂಗ್ ಮಾಸ್ಟರ್ ಮೈಂಡ್ ಎಂದು ಭಾವಿಸಲಾಗಿತ್ತು. ತಮ್ಮನ್ನು ಹರಾಜಿಗೆ ಇಟ್ಟಿದ್ದನ್ನು ಕಂಡ ಮುಸ್ಲಿಂ ಮಹಿಳೆಯರು ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. 

ಇದನ್ನೂ ಓದಿ: Bulli Bai App : ನಾನು ಮಾಡಿದ್ದು ಸರಿಯಾಗೇ ಇತ್ತು ಎಂದ ಬುಲ್ಲಿ ಬಾಯಿ  ರೂವಾರಿ! 

ಮುಂಬೈ, ಅಸ್ಸಾಂ, ದೆಹಲಿ, ಬೆಂಗಳೂರು ಹೀಗೆ ದೇಶದ ಎಲ್ಲ ಮೂಲೆಗಳಲ್ಲಿಯೂ ಆಪ್ ಗೆ ಸಂಬಂಧಿಸಿದ ವ್ಯಕ್ತಿಗಳ ಬಂಧನವಾಗುತ್ತಿದೆ. ಬಂಧಿತೆ ಶ್ವೇತಾ ಪೋಷಕರನ್ನು ಕಳೆದುಕೊಂಡಿದ್ದಳು. ಶ್ವೇತಾ ತಂದೆಯ ಕಳೆದ ವರ್ಷ ಕೋವಿಡ್‌ ಸೋಂಕಿನಿಂದ ಸಾವಿಗೀಡಾಗಿದ್ದರು. ತಂದೆಯ ಸಾವಿಗೂ ಮೊದಲೇ ಶ್ವೇತಾಳ ತಾಯಿ ಕ್ಯಾನ್ಸರ್‌ಗೆ ಬಲಿಯಾಗಿದ್ದರು. ಈಕೆಗೆ ಒಬ್ಬಳು ಹಿರಿಯ ಸಹೋದರಿ ಇದ್ದು, ಆಕೆ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದಾಳೆ. ಹಾಗೆಯೇ ಓರ್ವ ಕಿರಿಯ ಸಹೋದರಿ ಹಾಗೂ ಸಹೋದರ ಇದ್ದು ಇಬ್ಬರು ಶಿಕ್ಷಣ ಪಡೆಯುತ್ತಿದ್ದಾರೆ. ಇತ್ತ ಶ್ವೇತಾ ಎಂಜಿನಿಯರಿಂಗ್‌ ಪ್ರವೇಶ ಪರೀಕ್ಷೆ ಬರೆಯಲು ಸಿದ್ಧಳಾಗುತ್ತಿದ್ದಳು. 

click me!