ಯೋಧನಿಂದಲೇ ಕರ್ನಾಟಕದ ಇಬ್ಬರು ಸೈನಿಕರು ಸೇರಿ ನಾಲ್ವರ ಹತ್ಯೆ: ಕಾರಣ ಬಹಿರಂಗ..

By BK Ashwin  |  First Published Apr 17, 2023, 3:23 PM IST

ಪಂಜಾಬ್‌ನ ಬಟಿಂಡಾ ಸೇನಾ ನೆಲೆಯಲ್ಲಿ ನಡೆದ ಯೋಧರ ಹತ್ಯೆ ಪ್ರಕರಣದ ಹಿಂದೆ ಯಾವುದೇ ಭಯೋತ್ಪಾದನೆಯ ಕೋನವಿಲ್ಲ ಎಂದು ಸೇನೆ ಮತ್ತು ಪಂಜಾಬ್ ಪೊಲೀಸರು ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸೇನಾಧಿಕಾರಿಗಳು ಆತನಿಗೆ ಕಿರುಕುಳ ನೀಡುತ್ತಿದ್ದರು ಎಂಬ ಕಾರಣದಿಂದ ಆರೋಪಿ ಜವಾನ ಅವರನ್ನು ಹತ್ಯೆ ಮಾಡಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಬಠಿಂಡಾ (ಏಪ್ರಿಲ್ 17, 2023): ಪಂಜಾಬ್‌ನ ಬಠಿಂಡಾ ಸೇನಾ ನೆಲೆಯಲ್ಲಿ ಏಪ್ರಿಲ್ 12 ರಂದು ಕರ್ನಾಟಕದ ಇಬ್ಬರು ಯೋಧರು ಸೇರಿ ನಾಲ್ವರು ಯೋಧರ ಹತ್ಯೆ ಮಾಡಲಾಗಿತ್ತು. ಇದು ಉಗ್ರರ ದಾಳಿ ಎಂಬ ಅನುಮಾನವೂ ಕೇಳಿಬಂದಿತ್ತು. ಆದರೆ, ಈ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದು. ಇದು ಉಗ್ರರ ದಾಳಿಯಲ್ಲ ವೈಯಕ್ತಿಕ ದ್ವೇಷದ ಪರಿಣಾಮ ಎಂದು ತಿಳಿದುಬಂದಿದೆ. 
 
ಹೌದು, ಪಂಜಾಬ್‌ನ ಬಟಿಂಡಾ ಸೇನಾ ನೆಲೆಯಲ್ಲಿ ನಡೆದ ಯೋಧರ ಹತ್ಯೆ ಪ್ರಕರಣದ ಹಿಂದೆ ಯಾವುದೇ ಭಯೋತ್ಪಾದನೆಯ ಕೋನವಿಲ್ಲ ಎಂದು ಸೇನೆ ಮತ್ತು ಪಂಜಾಬ್ ಪೊಲೀಸರು ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸೇನಾಧಿಕಾರಿಗಳು ಆತನಿಗೆ ಕಿರುಕುಳ ನೀಡುತ್ತಿದ್ದರು ಎಂಬ ಕಾರಣದಿಂದ ಆರೋಪಿ ಜವಾನ ಅವರನ್ನು ಹತ್ಯೆ ಮಾಡಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನು ಓದಿ: ಪಂಜಾಬ್‌ನಲ್ಲಿ ಶೂಟೌಟ್‌: ರಾಜ್ಯದ ಇಬ್ಬರು ಸೇರಿ ನಾಲ್ವರು ಯೋಧರ ದುರ್ಮರಣ; ಉಗ್ರ ದಾಳಿಯೋ? ಸೇನೆ ಒಳಗಿನವರ ದಾಳಿಯೋ?

Tap to resize

Latest Videos

ಬಟಿಂಡಾ ಸೇನಾ ಠಾಣೆ ಗುಂಡಿನ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾದ ಘಟನೆಗೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಮೋಹನ್ ದೇಸಾಯಿ ಎಂದು ಗುರುತಿಸಲಾದ ಒಬ್ಬ ಸೇನಾ ಯೋಧನನ್ನು ಸೋಮವಾರ ಬಂಧಿಸಿದ್ದಾರೆ. "ಆರೋಪಿ ಜವಾನನಿಗೆ ಮೃತ ಜವಾನರು ಕಿರುಕುಳ ನೀಡುತ್ತಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ" ಎಂದೂ ಪೊಲೀಸ್ ಮೂಲಗಳು ತಿಳಿಸಿವೆ. 

ಈ ಬಗ್ಗೆ ಬಟಿಂಡಾ ಪೊಲೀಸರು ಮತ್ತು ಸೇನೆ ಸೋಮವಾರ ಬಟಿಂಡಾದಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದು, ಆರೋಪಿ ಮೋಹನ್ ದೇಸಾಯಿ ವೈಯಕ್ತಿಕ ದ್ವೇಷದ ಕಾರಣದಿಂದ ಜವಾನರನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. 

ಇದನ್ನೂ ಓದಿ: ಪಂಜಾಬ್‌ನ ಮಿಲಿಟರಿ ಸ್ಟೇಷನ್‌ನಲ್ಲಿ ಗುಂಡಿನ ದಾಳಿ: ನಾಲ್ವರು ಬಲಿ

ಅಲ್ಲದೆ, ಆರೋಪಿ ಈ ಹಿಂದೆ ನೀಡಿದ ಹೇಳಿಕೆಗಳ ಆಧಾರದ ಮೇಲೆ ನಾಲ್ವರು ಯೋಧರ ಹತ್ಯೆಗೆ ಸಂಬಂಧಿಸಿದಂತೆ ಆರಂಭಿಕ ಎಫ್ಐಆರ್ ದಾಖಲಿಸಲಾಗಿತ್ತು. ಆದರೆ, ತನಿಖಾ ಸಂಸ್ಥೆಗಳನ್ನು ದಾರಿತಪ್ಪಿಸಲು ದೇಸಾಯಿ ಈ ಕಥೆಯನ್ನು ಹೆಣೆದಿದ್ದ ಎಂದು ಸೇನೆ ಸೋಮವಾರ ಮಾಹಿತಿ ನೀಡಿದೆ.
ಪಂಜಾಬ್ ಪೊಲೀಸರು ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಮೊದಲು ಎಫ್‌ಐಆರ್ ದಾಖಲಿಸಿದ್ದರು. ಇವರು ಬಿಳಿ ಕುರ್ತಾ ಪೈಜಾಮಾವನ್ನು ಧರಿಸಿದ್ದರು ಮತ್ತು ಗುಂಡೇಟು ನಡೆದ ಸಮಯದಲ್ಲಿ ರೈಫಲ್ ಮತ್ತು ಕೊಡಲಿಯನ್ನು ಹಿಡಿದಿದ್ದರು ಎಂದು ದೇಸಾಯಿ ಹೇಳಿಕೆ ನೀಡಿದ್ದರು.

ಮಾರಣಾಂತಿಕ ಗುಂಡಿನ ದಾಳಿಗೆ ಒಂದೆರಡು ದಿನಗಳ ಹಿಂದೆ ಘಟಕದ ಗಾರ್ಡ್ ರೂಮ್‌ನಿಂದ INSAS ಅಸಾಲ್ಟ್ ರೈಫಲ್ ನಾಪತ್ತೆಯಾಗಿತ್ತು. ಏಪ್ರಿಲ್ 12ರ ಸಂಜೆ ನಾಲೆಯಲ್ಲಿ ಆಯುಧ ಪತ್ತೆಯಾಗಿತ್ತು. “ಜವಾನರನ್ನು ಕೊಲ್ಲಲು ಬಳಸಿದ ಆಯುಧ ಮತ್ತು ಬುಲೆಟ್‌ಗಳನ್ನು ದೇಸಾಯಿ ಕದ್ದಿದ್ದಾರೆ. ಬಳಿಕ ಅವರು ಕತೆ ಕಟ್ಟಿದರು. ಕೊಡಲಿ ಕಥೆ ಸುಳ್ಳು. ಆರೋಪಿ ಜವಾನ ಪೊಲೀಸರಿಗೆ ಗೊಂದಲ ಮೂಡಿಸಲು ಯತ್ನಿಸುತ್ತಿದ್ದ’ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ.

ಆರೋಪಿ ಜವಾನ ಅವಿವಾಹಿತನಾಗಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಇನ್ನು, ಬೇರೆ ಯಾವುದೇ ವ್ಯಕ್ತಿ ಭಾಗಿಯಾಗಿರುವುದು ಇದುವರೆಗೆ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಏನಾಗಿತ್ತು?
ಬುಧವಾರ ಬೆಳಗಿನ ಜಾವ 4.30ರ ಸಮಯದಲ್ಲಿ ಬಠಿಂಡಾ ಸೇನಾ ನೆಲೆಯಲ್ಲಿ ಭಾರಿ ಗುಂಡಿನ ಸದ್ದು ಕೇಳಿಬಂದಿದೆ. ಕೂಡಲೇ ಕ್ಷಿಪ್ರ ಪಡೆಯನ್ನು ಸನ್ನದ್ಧಗೊಳಿಸಿ ಬ್ಯಾರಕ್‌ ಬಳಿ ಕಳುಹಿಸಲಾಗಿದೆ. ಈ ವೇಳೆ ಒಂದು ಕೊಠಡಿಯಲ್ಲಿ ಎರಡು ಮತ್ತು ಇನ್ನೊಂದು ಕೊಠಡಿಯಲ್ಲಿ ಎರಡು ರಕ್ತಸಿಕ್ತ ಸ್ಥಿತಿಯಲ್ಲಿದ್ದ ಯೋಧರ ದೇಹ ಪತ್ತೆಯಾಗಿತ್ತು. ಈ ಘಟನೆಯಲ್ಲಿ ಬೇರೆ ಯಾರೂ ಗಾಯಗೊಂಡಿಲ್ಲ ಅಥವಾ ಆಸ್ತಿಪಾಸ್ತಿಗೆ ಯಾವುದೇ ಹಾನಿಯಾಗಿಲ್ಲ. ‘ಇದು ಭಯೋತ್ಪಾದಕ ದಾಳಿಯಲ್ಲ ಅಥವಾ ಹೊರಗಿನ ಯಾರೂ ನಡೆಸಿದ ದಾಳಿಯಲ್ಲ. ಯೋಧರ ನಡುವೆಯೇ ನಡೆದ ಕಾಳಗವಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಪ್ರಕರಣ ಸಂಬಂಧ ಯಾರನ್ನೂ ಬಂಧಿಸಿಲ್ಲ’ ಎಂದು ಪಂಜಾಬ್‌ ಪೊಲೀಸರು ಘಟನೆ ಬೆನ್ನಲ್ಲೇ ಮಾಹಿತಿ ನೀಡಿದ್ದರು.

click me!