ಭಾರತದ ಪರಮಾಣು ಪಯಣ: ಅಣ್ವಸ್ತ್ರ ಸಜ್ಜಿತ ಭಾರತ ನಿರ್ಮಾಣದ ಕಥನ

By Girish Goudar  |  First Published Apr 4, 2024, 12:42 PM IST

1998ರ ಪರಮಾಣು ಪರೀಕ್ಷೆಗಳು ಭಾರತವನ್ನು ಸ್ಪಷ್ಟವಾಗಿ ಅಣ್ವಸ್ತ್ರ ಸಜ್ಜಿತ ರಾಷ್ಟ್ರವಾಗಿ ರೂಪಿಸುತ್ತಿದ್ದವು. ಪೋಖ್ರಾನ್ 2 ಎಂದು ಹೆಸರಾದ ಈ ಪರೀಕ್ಷೆಗಳ ಬಳಿಕ, ಭಾರತ ಸರ್ಕಾರ ತನ್ನ ಬಳಿ ಈಗ ಪರಮಾಣು ಶಸ್ತ್ರಾಸ್ತ್ರಗಳಿವೆ ಎಂದು ಜಗತ್ತಿಗೆ ಘೋಷಿಸಿತು.


ಗಿರೀಶ್ ಲಿಂಗಣ್ಣ

ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

Tap to resize

Latest Videos

ಬೆಂಗಳೂರು(ಏ.04):  ಮೇ 11, 1998ರಂದು ಭಾರತ ಪೋಖ್ರಾನ್‌ನಲ್ಲಿರುವ ತನ್ನ ಮಿಲಿಟರಿ ಪರೀಕ್ಷಾ ನೆಲೆಯಲ್ಲಿ ಮೂರು ಪರಮಾಣು ಬಾಂಬ್‌ಗಳನ್ನು ಯಶಸ್ವಿಯಾಗಿ ಪರೀಕ್ಷಿಸಿತು. ಅದಾದ ಬಳಿಕ, ಮೇ 13ರಂದು ಭಾರತ ಇನ್ನೂ ಎರಡು ಬಾಂಬ್‌ಗಳನ್ನು ಪರೀಕ್ಷಿಸಿತು.

ಆಪರೇಶನ್ ಶಕ್ತಿ ಎಂದು ಹೆಸರಿಡಲಾಗಿದ್ದ ಈ ಪರೀಕ್ಷೆಗಳು ಭಾರತವೂ ಸಹ ಶಕ್ತಿಶಾಲಿ ಪರಮಾಣು ಶಸ್ತ್ರಗಳನ್ನು ತಯಾರಿಸಬಲ್ಲದು ಎಂಬ ಸಂದೇಶವನ್ನು ಜಗತ್ತಿಗೆ ನೀಡಿದವು. ಭಾರತದ ಕೆಲವು ಪರಮಾಣು ಬಾಂಬ್‌ಗಳಂತೂ 200,000 ಟನ್‌ಗಳಷ್ಟು (200 ಕಿಲೋ ಟನ್) ಶಕ್ತಿಯುತವಾಗಿದ್ದವು. ಈ ಪರೀಕ್ಷೆಯ ಯಶಸ್ಸು ಭಾರತವನ್ನು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಕೆಲವೇ ರಾಷ್ಟ್ರಗಳ ಗುಂಪಿಗೆ ಸೇರಿಸಿತು. ಪೋಖ್ರಾನ್-2 ಎಂದು ಚಿರಪರಿಚಿತವಾಗಿರುವ ಈ ಪರೀಕ್ಷೆಗಳು, 1940 ಮತ್ತು 1950ರ ದಶಕದಲ್ಲೇ ಆರಂಭಗೊಂಡಿದ್ದ ಅತಿದೊಡ್ಡ ಸವಾಲಿನ ಪಯಣದ ಕೊನೆಯ ಹಂತವಾಗಿದ್ದವು. ಈ ಪಯಣದುದ್ದಕ್ಕೂ ಭಾರತಕ್ಕೆ ಬಹಳಷ್ಟು ಅಡೆತಡೆಗಳು ಮತ್ತು ವೈಫಲ್ಯದ ಅಪಾಯಗಳು ಎದುರಾಗಿದ್ದವು.

ಭಾರತದ ಬೆನ್ನಿಗೆ ಚೂರಿ ಇರಿದ ಮಾಲ್ಡೀವ್ಸ್‌, ಮಾಲೆಗೆ ಬರಲಿದೆ ಚೀನಾದ ಬೇಹುಗಾರಿಕಾ ಹಡಗು !

ಪರಮಾಣು ಸಾಮರ್ಥ್ಯಕ್ಕೆ ಅಡಿಪಾಯ ಹಾಕಿದ ಹೋಮಿ ಜೆ ಭಾಭಾ

ಖ್ಯಾತ ಭಾರತೀಯ ವಿಜ್ಞಾನಿ ಹೋಮಿ ಜಹಾಂಗೀರ್ ಭಾಭಾ ಅವರ ಕಾರಣದಿಂದ ಭಾರತದ ಪರಮಾಣು ಸಂಶೋಧನಾ ಪ್ರಯತ್ನಗಳು ಆರಂಭಗೊಂಡವು. 1945ರಲ್ಲಿ, ಭಾರತದ ಅತಿದೊಡ್ಡ ಔದ್ಯಮಿಕ ಕುಟುಂಬಗಳಲ್ಲಿ ಒಂದನ್ನು ತನ್ನ ದೂರದೃಷ್ಟಿಗೆ ಬೆಂಬಲ ನೀಡುವಂತೆ ಮನ ಒಲಿಸಿದ ಭಾಭಾ, ಬಾಂಬೇಯಲ್ಲಿ (ಇಂದಿನ ಮುಂಬೈ) ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿಐಎಫ್ಆರ್) ಸ್ಥಾಪಿಸಲು ನೆರವಾದರು. ಇದು ಪರಮಾಣು ಭೌತಶಾಸ್ತ್ರದ ಅಧ್ಯಯನಕ್ಕಾಗಿ ಸ್ಥಾಪಿಸಲ್ಪಟ್ಟ ಭಾರತದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಭಾರತದ ಆದ್ಯ ಭೌತಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದ ಹೋಮಿ ಜಹಾಂಗೀರ್ ಭಾಭಾ ಅವರು ಭಾರತದ ಅತ್ಯಂತ ಪ್ರಮುಖ ಉದ್ಯಮ ಕುಟುಂಬಗಳಲ್ಲಿ ಒಂದಾದ ಟಾಟಾ ಕುಟುಂಬವನ್ನು ಸಂಪರ್ಕಿಸಿ, ವೈಜ್ಞಾನಿಕ ಸಂಶೋಧನಾ ಸಂಸ್ಥೆಯೊಂದರ ಸ್ಥಾಪನೆಗೆ ಹಣಕಾಸಿನ ನೆರವು ಒದಗಿಸುವಂತೆ ಮನವಿ ಮಾಡಿಕೊಂಡರು. ಟಾಟಾ ಕುಟುಂಬ, ಅದರಲ್ಲೂ ಸರ್ ದೊರಾಬ್ಜಿ ಟಾಟಾ ಟ್ರಸ್ಟ್, ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿಐಎಫ್ಆರ್) ಸಂಸ್ಥೆಯ ಸ್ಥಾಪನೆಗೆ ಅವಶ್ಯಕ ನೆರವು ನೀಡಿದರು. ಆ ಮೂಲಕ ಭಾರತದ ವೈಜ್ಞಾನಿಕ ಮತ್ತು ಪರಮಾಣು ಸಾಮರ್ಥ್ಯವನ್ನು ವೃದ್ಧಿಸಬೇಕೆಂಬ ಭಾಭಾ ಅವರ ದೂರದೃಷ್ಟಿಗೆ ಅವಶ್ಯಕವಾದ ಬೆಂಬಲ ಲಭಿಸಿತು.

ಭಾರತ ಸ್ವಾತಂತ್ರ್ಯ ಪಡೆದ ಬಳಿಕ, ಹೋಮಿ ಜೆ ಭಾಭಾ ಅವರು ಭಾರತದ ಪ್ರಥಮ ಪ್ರಧಾನ ಮಂತ್ರಿಯಾಗಿದ್ದ ಜವಾಹರಲಾಲ್ ನೆಹರು ಅವರೊಡನೆ ಹಲವು ಮಾತುಕತೆಗಳನ್ನು ನಡೆಸಿದರು. ಭಾಭಾ ಅವರು ಪ್ರಧಾನಿ ನೆಹರೂಗೆ ಅಣುಶಕ್ತಿ ದೇಶಕ್ಕೆ ಎಷ್ಟು ಪ್ರಯೋಜನಕಾರಿ ಮತ್ತು ಭಾರತ ಅದರಲ್ಲಿ ಹೂಡಿಕೆ ನಡೆಸುವುದು ಎಷ್ಟು ಮುಖ್ಯ ಎಂದು ವಿವರಿಸಿದರು. ಈ ಮಾತುಕತೆಗಳ ಫಲವಾಗಿ, ಭಾರತ ಸರ್ಕಾರ 1954ರಲ್ಲಿ ಅಣು ಶಕ್ತಿ ಇಲಾಖೆಯನ್ನು (ಡಿಪಾರ್ಟ್‌ಮೆಂಟ್ ಆಫ್ ಅಟಾಮಿಕ್ ಎನರ್ಜಿ - ಡಿಎಇ) ಸ್ಥಾಪಿಸಿ, ಹೋಮಿ ಜಹಾಂಗೀರ್ ಭಾಭಾ ಅವರನ್ನು ಅದರ ಮುಖ್ಯಸ್ಥರನ್ನಾಗಿ ನೇಮಿಸಿತು.

ನೆಹರೂ ಅವರು ಬಹಿರಂಗವಾಗಿ ತಾನು ಪರಮಾಣು ಶಸ್ತ್ರಾಸ್ತ್ರಗಳ ವಿರೋಧಿ ಎಂದು ಘೋಷಿಸಿಕೊಂಡಿದ್ದರು. ಆದರೆ ಖಾಸಗಿಯಾಗಿ, ನೆಹರೂ ಅವರು ಭಾಭಾ ಅವರಿಗೆ ದೈನಂದಿನ ಜೀವನದ ಉದ್ದೇಶಗಳಿಗೆ ಮತ್ತು ಅವಶ್ಯಕತೆ ಬಿದ್ದರೆ ರಕ್ಷಣಾ ಉದ್ದೇಶಗಳಿಗೂ ಬಳಸುವಂತಹ ಪರಮಾಣು ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲು ಅನುಮತಿ ನೀಡಿದ್ದರು. ಭಾಭಾ ಅವರ ಇಲಾಖೆಯಾದ ಡಿಎಇ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿದ್ದು, ಅದನ್ನು ಸಾರ್ವಜನಿಕರಾಗಲಿ, ಮಾಧ್ಯಮಗಳಾಗಲಿ ಅಷ್ಟು ಕೂಲಂಕಷವಾಗಿ ಗಮನಿಸುತ್ತಿರಲಿಲ್ಲ.

ಚೀನಾ ಮತ್ತು ಪಾಕಿಸ್ತಾನಗಳ ಸವಾಲುಗಳು

ಎರಡು ಮುಖ್ಯ ಘಟನೆಗಳು ಭಾರತದ ಅಣ್ವಸ್ತ್ರ ಕಾರ್ಯಕ್ರಮದಲ್ಲಿ ಅತ್ಯಂತ ಮುಖ್ಯ ಪಾತ್ರ ವಹಿಸಿದವು. ಮೊದಲನೆಯದಾಗಿ, ಭಾರತ 1962ರಲ್ಲಿ ಚೀನಾ ವಿರುದ್ಧದ ಯುದ್ಧದಲ್ಲಿ ಅತಿದೊಡ್ಡ ಸೋಲು ಅನುಭವಿಸಿತು. ಅದಾದ ಎರಡು ವರ್ಷಗಳ ಬಳಿಕ, ಚೀನಾ ತನ್ನ ಪರಮಾಣು ಬಾಂಬ್ ಪರೀಕ್ಷೆ ನಡೆಸಿತು. ಈ ಬೆಳವಣಿಗೆಗಳಿಂದ, ಭಾರತದ ನಾಯಕರಿಗೆ ಭಾರತ ವಿರೋಧಿಯಾಗಿದ್ದ ಚೀನಾದ ಸಾಮರ್ಥ್ಯಗಳು ಹೆಚ್ಚುತ್ತಿದ್ದು, ಇದರಿಂದ ಭಾರತದ ಸುರಕ್ಷತೆಗೆ ಅಪಾಯ ಉಂಟಾಗಬಹುದೇ ಎಂಬ ಕಳವಳ ಮೂಡಿಸಿದ್ದವು. ಈ ಕಾರಣಗಳಿಂದಾಗಿ, ಭಾರತದ ಆಡಳಿತ ವರ್ಗ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ಕುರಿತು ಗಂಭೀರವಾಗಿ ಆಲೋಚಿಸಲು ಆರಂಭಿಸಿತು.

ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಪ್ರಧಾನ ಮಂತ್ರಿಯಾದ ಬಳಿಕ, ಆರಂಭಿಕವಾಗಿ ಈಗಾಗಲೇ ಅಣ್ವಸ್ತ್ರ ಹೊಂದಿದ್ದ ದೇಶಗಳೊಡನೆ ರಕ್ಷಣಾ ಭರವಸೆ ಪಡೆದುಕೊಳ್ಳಲು ಬಯಸಿದ್ದರು. ಒಂದು ವೇಳೆ ಭಾರತ ಏನಾದರೂ ಅಣ್ವಸ್ತ್ರ ಅಪಾಯ ಎದುರಿಸಿದರೆ, ಈ ರಾಷ್ಟ್ರಗಳು ಭಾರತದ ನೆರವಿಗೆ ಬರಬೇಕು ಎಂದು ಲಾಲ್ ಬಹಾದ್ದೂರ್ ಶಾಸ್ತ್ರಿ ಅಪೇಕ್ಷಿಸಿದ್ದರು. ಆದರೆ, ಇಂತಹ ಯಾವುದೇ ಭರವಸೆಗಳು ಲಭಿಸದಾದಾಗ, ಭಾರತ ಬೇರೆ ಆಲೋಚನೆ ಮಾಡಬೇಕಾಗಿ ಬಂತು. ಒಂದು ವೇಳೆ ಭಾರತ ಏನಾದರೂ ತನ್ನ ಭದ್ರತಾ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಬೇಕಾದರೆ, ಭಾರತ ತನ್ನದೇ ಆದ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿ ಪಡಿಸಬೇಕಾಗಿತ್ತು. ಯಾಕೆಂದರೆ, ಅಣ್ವಸ್ತ್ರ ದಾಳಿ ಎದುರಾಗುವ ಸಂದರ್ಭ ಬಂದರೆ, ಭಾರತ ಬೇರಾವುದೋ ರಾಷ್ಟ್ರದ ಮೇಲೆ ಅವಲಂಬಿತವಾಗಿರಲು ಸಾಧ್ಯವಿರಲಿಲ್ಲ.

1965ರಲ್ಲಿ ಭಾರತ ಪಾಕಿಸ್ತಾನದ ನಡುವೆ ಇನ್ನೊಂದು ಬಾರಿ ಯುದ್ಧ ನಡೆದು, ಆ ಯುದ್ಧದಲ್ಲಿ ಚೀನಾ ಪಾಕಿಸ್ತಾನದ ಬೆಂಬಲಕ್ಕೆ ನಿಂತಿತು. ಈ ಸಂದರ್ಭದಲ್ಲಿ ವಿದ್ಯಮಾನಗಳು ನಿಜಕ್ಕೂ ವೇಗ ಪಡೆದುಕೊಂಡವು. ಎರಡು ವಿರೋಧಿ ರಾಷ್ಟ್ರಗಳನ್ನು ನೆರೆಯ ರಾಷ್ಟ್ರಗಳಾಗಿ ಹೊಂದಿದ್ದರಿಂದ, ಭಾರತ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ಶೀಘ್ರವಾಗಿ ಗಳಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಆದರೂ, ಭಾರತದ ಪಾಲಿಗೆ ಅಣ್ವಸ್ತ್ರಗಳನ್ನು ಹೊಂದುವ ಪಯಣ ಸಂಕೀರ್ಣವೂ, ಸವಾಲಿನದೂ ಆಗಿತ್ತು.

'ಪಕ್ಷಪಾತಿ' ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದ

1960ರ ದಶಕದ ಶೀತಲ ಸಮರದ ಅವಧಿಯಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಸೋವಿಯತ್ ಒಕ್ಕೂಟಗಳೆರಡೂ ಅಪಾರ ಸಂಖ್ಯೆಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದವು. ಇದರಿಂದಾಗಿ ಜಗತ್ತಿನಾದ್ಯಂತ ಜನರು ಅಣ್ವಸ್ತ್ರಗಳನ್ನು ಇಲ್ಲವಾಗಿಸುವ ಸಲುವಾಗಿ, ಅವುಗಳ ಪ್ರಸರಣವನ್ನು ತಡೆಯಬೇಕೆಂದು ಆಗ್ರಹಿಸಿದರು. ಚೀನಾ ಸಹ ತನ್ನದೇ ಆದ ಅಣ್ವಸ್ತ್ರವನ್ನು ಪರೀಕ್ಷಿಸಿದಾಗ, ದೊಡ್ಡ ರಾಷ್ಟ್ರಗಳು ಇನ್ನಷ್ಟು ದೇಶಗಳು ಅಣ್ವಸ್ತ್ರ ಹೊಂದದಂತೆ ತಡೆಯಲು ಹೊಸ ಕಾನೂನುಗಳನ್ನು ಜಾರಿಗೆ ತರಬೇಕು ಎಂದು ಅಭಿಪ್ರಾಯ ಪಟ್ಟವು. ಇದು ಅಣ್ವಸ್ತ್ರಗಳ ಪ್ರಸರಣವನ್ನು ತಡೆಯುವ ಸಲುವಾಗಿ ಹೊಸ ಒಪ್ಪಂದವೊಂದನ್ನು ರೂಪಿಸಲು ಕೈಗೊಂಡ ಆರಂಭಿಕ ಉಪಾಯವಾಗಿತ್ತು.

1968ರಲ್ಲಿ, ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದ (ನಾನ್ ಪ್ರಾಲಿಫರೇಶನ್ ಟ್ರೀಟಿ) ಅಥವಾ ಎನ್‌ಪಿಟಿ ಅನ್ನು ರೂಪಿಸಲಾಯಿತು. ಈ ಒಪ್ಪಂದದ ಪ್ರಕಾರ, ಜನವರಿ 1, 1967ರ ಮುನ್ನ ಅಣ್ವಸ್ತ್ರ ಪರೀಕ್ಷೆ ನಡೆಸಿದ ರಾಷ್ಟ್ರಗಳು ಮಾತ್ರವೇ ಅಣ್ವಸ್ತ್ರ ಹೊಂದಬಹುದು ಎನ್ನಲಾಗಿತ್ತು. ಈ ನಿಗದಿತ ದಿನಕ್ಕಿಂತ ಮೊದಲು ಅಮೆರಿಕಾ, ರಷ್ಯಾ (ಹಿಂದಿನ ಸೋವಿಯತ್ ಒಕ್ಕೂಟ), ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್ ಮತ್ತು ಚೀನಾಗಳು ಮಾತ್ರವೇ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದವು. ಇನ್ನಷ್ಟು ಹೊಸ ದೇಶಗಳು ಅಣ್ವಸ್ತ್ರಗಳನ್ನು ಸಂಪಾದಿಸುವುದನ್ನು ತಡೆಯುವ ಉದ್ದೇಶವನ್ನು ಈ ಒಪ್ಪಂದ ಹೊಂದಿತ್ತು. ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳೂ ಈ ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿಕೊಂಡರೂ, ಭಾರತ ಇದಕ್ಕೆ ಸಹಿ ಹಾಕದಿರಲು ನಿರ್ಧರಿಸಿತು.
ಈ ಒಪ್ಪಂದ ಭಾರತದ ಕಳವಳಗಳಿಗೆ ಯಾವುದೇ ಬೆಲೆ ಕೊಡದಿದ್ದ ಕಾರಣ, ಭಾರತ ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಸಹಿ ಹಾಕದಿರಲು ನಿರ್ಧರಿಸಿತು ಎಂದು ಅಂತಾರಾಷ್ಟ್ರೀಯ ಸಂಬಂಧಗಳ ಅಧ್ಯಯನ ನಡೆಸುವ ಸುಮಿತ್ ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ. ಜಗತ್ತಿನ ಇತರ ರಾಷ್ಟ್ರಗಳು ಅಣ್ವಸ್ತ್ರ ಹೊಂದಲು ಪ್ರಯತ್ನ ನಡೆಸದಿರಲು ಒಪ್ಪುವುದಕ್ಕೆ ಪ್ರತಿಯಾಗಿ, ಈ ಒಪ್ಪಂದ ಈಗಾಗಲೇ ಅಣ್ವಸ್ತ್ರಗಳನ್ನು ಹೊಂದಿರುವ ರಾಷ್ಟ್ರಗಳ ಕುರಿತು ಯಾವುದೇ ಕ್ರಮ ಕೈಗೊಳ್ಳುತ್ತಿರಲಿಲ್ಲ ಎನ್ನುವುದು ಭಾರತದ ಕಾಳಜಿಯಾಗಿತ್ತು.

ಪೋಖ್ರಾನ್-1 ಮತ್ತದರ ಪರಿಣಾಮಗಳು

1970ರ ದಶಕದಲ್ಲಿ, ಭಾರತ ಅಣ್ವಸ್ತ್ರ ಪರೀಕ್ಷೆ ನಡೆಸುವ ಸಾಮರ್ಥ್ಯವನ್ನೂ ಪಡೆದುಕೊಂಡಿತ್ತು. ಹೋಮಿ ಜಹಾಂಗೀರ್ ಭಾಭಾ ಅವರ ಹಾದಿಯಲ್ಲೇ ಸಾಗಿ, ಅಣುಶಕ್ತಿ ಇಲಾಖೆಯ ನೇತೃತ್ವ ವಹಿಸಿದ್ದ ವಿಕ್ರಮ್ ಸಾರಾಭಾಯಿ ಅವರು ಭಾರತದ ಪರಮಾಣು ಸಾಮರ್ಥ್ಯವನ್ನು ಬಹಳಷ್ಟು ವೃದ್ಧಿಸಿದರು. ಇದೆಲ್ಲದರ ಪರಿಣಾಮವಾಗಿ, ಭಾರತ ಅಣ್ವಸ್ತ್ರ ಪರೀಕ್ಷೆ ನಡೆಸುವುದಕ್ಕೆ ಕೇವಲ ರಾಜಕೀಯ ನಿರ್ಧಾರದ ಅಗತ್ಯವಷ್ಟೇ ಬಾಕಿ ಇತ್ತು. ಈ ಸಮಯದಲ್ಲಿ ಅಂತಾರಾಷ್ಟ್ರೀಯ ಸಮುದಾಯ ಅಣ್ವಸ್ತ್ರ ಪ್ರಸರಣವಾಗುವ ಕುರಿತು ಬಹಳಷ್ಟು ಆತಂಕಗಳನ್ನು ಹೊಂದಿತ್ತು.

ಲಾಲ್ ಬಹಾದ್ದೂರ್ ಶಾಸ್ತ್ರಿಯವರು 1966ರಲ್ಲಿ ಅನಿರೀಕ್ಷಿತವಾಗಿ ಮೃತಪಟ್ಟ ಬಳಿಕ, ಇಂದಿರಾ ಗಾಂಧಿಯವರು ಭಾರತದ ಪ್ರಧಾನಿಯಾಗಿ ನೇಮಕಗೊಂಡರು. ಇಂದಿರಾ ಗಾಂಧಿಯವರು ಪ್ರಧಾನಿಯಾದ ಆರಂಭದಲ್ಲಿ, ಬಹಳಷ್ಟು ಜನರು ಆಕೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಕೈಗೊಂಬೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದೇ ಭಾವಿಸಿದ್ದರು. ಆದರೆ,‌ ಕಾಲಕ್ರಮದಲ್ಲಿ ಇಂದಿರಾ ಗಾಂಧಿ ತಾನು ಓರ್ವ ಸಮರ್ಥ ನಾಯಕಿ ಎಂದು ಸಾಬೀತುಪಡಿಸಿದರು. ಇಂದಿರಾ ಗಾಂಧಿ 1971ರಲ್ಲಿ ಪಾಕಿಸ್ತಾನದ ವಿರುದ್ಧದ ಕಠಿಣ ಯುದ್ಧದಲ್ಲಿ ಭಾರತವನ್ನು ಮುನ್ನಡೆಸಿ, ಗೆಲುವು ಸಾಧಿಸಿದರು. ಬಳಿಕ ನಡೆದ ಸಾರ್ವತ್ರಿಕ ಚುನಾವಣೆಯಲ್ಲೂ ಭರ್ಜರಿ ಜಯ ಸಾಧಿಸಿದರು.

ಮೇ 18, 1974ರಂದು, ಇಂದಿರಾ ಗಾಂಧಿಯವರ ನಾಯಕತ್ವದಲ್ಲಿ, ಭಾರತ ಪೋಖ್ರಾನ್ ಪರೀಕ್ಷಾ ನೆಲದಲ್ಲಿ ತನ್ನ ಮೊದಲ ಪರಮಾಣು ಪರೀಕ್ಷೆಯನ್ನು ನೆರವೇರಿಸಿತು. ಈ ಕಾರ್ಯಾಚರಣೆಗೆ 'ಆಪರೇಶನ್ ಸ್ಮೈಲಿಂಗ್ ಬುದ್ಧ' ಎಂದು ಹೆಸರಿಡಲಾಗಿತ್ತು. ಇದನ್ನು ಭಾರತ' 'ಶಾಂತಿಯುತ ಅಣ್ವಸ್ತ್ರ ಪರೀಕ್ಷೆ' ಎಂದು ಕರೆದು, ಇದನ್ನು ಯುದ್ಧದಲ್ಲಿ ಬಳಸುವ ಉದ್ದೇಶ ತನಗಿಲ್ಲ ಎಂದು ಸ್ಪಷ್ಟಪಡಿಸಿತ್ತು. ಆದರೆ, ಇತರ ರಾಷ್ಟ್ರಗಳು ಭಾರತದ ಪರಮಾಣು ಪರೀಕ್ಷೆ ಕೇವಲ ಶಾಂತಿಯುತ ಉದ್ದೇಶಗಳಿಗೆ ಸೀಮಿತ ಎನ್ನುವುದನ್ನು ನಂಬಲು ಸಿದ್ಧವಿರಲಿಲ್ಲ. ಈ ಪರೀಕ್ಷೆ ನಡೆಸಿದ್ದಕ್ಕೆ ಬಹುಪಾಲು ಜಗತ್ತು ಭಾರತವನ್ನು ಟೀಕಿಸಿತ್ತು. ಇನ್ನು ಅಮೆರಿಕಾ ಮತ್ತು ಕೆನಡಾದಂತಹ ದೇಶಗಳು ಭಾರತದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿದವು. ಇಂತಹ ದಂಡನೆಗಳ ಪರಿಣಾಮವಾಗಿ, ಭಾರತದ ಪರಮಾಣು ತಂತ್ರಜ್ಞಾನದ ಪ್ರಗತಿ ಸ್ವಲ್ಪಮಟ್ಟಿಗೆ ನಿಧಾನಗೊಂಡಿತು.

ಎರಡು ಅಣ್ವಸ್ತ್ರ ಪರೀಕ್ಷೆಗಳ ನಡುವಿನ ಅವಧಿ

ಜಾಗತಿಕ ಒತ್ತಡಗಳ ಜೊತೆಗೆ, ಭಾರತದ ಅಣ್ವಸ್ತ್ರ ಮಹತ್ವಾಕಾಂಕ್ಷೆಗೆ ಆಂತರಿಕ ಸವಾಲುಗಳೂ ಎದುರಾಗಿದ್ದವು. 1975ರ ತುರ್ತು ಪರಿಸ್ಥಿತಿ ಮತ್ತು ಸರ್ಕಾರದ ಸಂಪೂರ್ಣ ನಿಯಂತ್ರಣ, ಪರಮಾಣು ಶಸ್ತ್ರಾಸ್ತ್ರಗಳ ವಿರುದ್ಧ ಪ್ರಧಾನಿ ಮೊರಾರ್ಜಿ ದೇಸಾಯಿಯವರ ನಿಲುವುಗಳು ಭಾರತದ ಅಣ್ವಸ್ತ್ರ ಕಾರ್ಯಕ್ರಮವನ್ನು ನಿಲುಗಡೆಗೆ ತಂದವು. ಆದರೆ, 1980ರಲ್ಲಿ ಇಂದಿರಾ ಗಾಂಧಿಯವರು ಮರಳಿ ಪ್ರಧಾನಿಯಾದ ಬಳಿಕ, ಪರಮಾಣು ಶಸ್ತ್ರಾಸ್ತ್ರಗಳನ್ನು ರೂಪಿಸುವ ಭಾರತದ ಕನಸಿಗೆ ಮರಳಿ ಜೀವ ಬಂತು. ಪಾಕಿಸ್ತಾನ ಕ್ಷಿಪ್ರವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿದ್ದುದೂ ಭಾರತದ ನಿಲುವಿಗೆ ಕಾರಣವಾಗಿತ್ತು.

1983ರಲ್ಲಿ, ಇಂದಿರಾ ಗಾಂಧಿಯವರ ಸರ್ಕಾರ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ (ಡಿಆರ್‌ಡಿಓ) ಹೆಚ್ಚಿನ ಹಣಕಾಸಿನ ನೆರವು ಒದಗಿಸಿದರು. ಭಾರತದ ಕ್ಷಿಪಣಿ ಅಭಿವೃದ್ಧಿ ಯೋಜನೆಗಳ ಮುಖ್ಯಸ್ಥರಾಗಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರನ್ನು ನೇಮಿಸಲಾಯಿತು. ಇದೇ ವರ್ಷದಲ್ಲಿ, ಭಾರತ ಪ್ಲುಟೋನಿಯಂ ಅನ್ನು ಆಯುಧಗಳಲ್ಲಿ ಬಳಸುವಷ್ಟು ಮೇಲ್ಮಟ್ಟಕ್ಕೆ ಒಯ್ಯುವ ಸಾಮರ್ಥ್ಯವನ್ನೂ ಸಂಪಾದಿಸಿತು. 1980ರ ದಶಕದಲ್ಲಿ, ಭಾರತ ತನ್ನ ಪ್ಲುಟೋನಿಯಂ ಸಂಗ್ರಹವನ್ನು ಹೆಚ್ಚಿಸುತ್ತಾ ಸಾಗಿತು.

1990ರ ದಶಕದ ಆರಂಭದಲ್ಲಿ, ಭಾರತಕ್ಕೆ ತನ್ನ ಅಣ್ವಸ್ತ್ರ ಯೋಜನೆಗಳನ್ನು ಮುಂದುವರಿಸಲು ಅವಶ್ಯಕವಾದ ದೊಡ್ಡ ಉತ್ತೇಜನ ಲಭಿಸಿತು. 1991ರಲ್ಲಿ ಸೋವಿಯತ್ ಒಕ್ಕೂಟ ಪತನ ಹೊಂದಿದ ಬಳಿಕ, ಭಾರತಕ್ಕೆ ಒಂದು ಪ್ರಮುಖ ಮಿಲಿಟರಿ ಬೆಂಬಲಿಗನ ಕೊರತೆ ಉಂಟಾಯಿತು. ಪ್ರಧಾನಿ ಇಂದಿರಾ ಗಾಂಧಿಯವರು 1971ರಲ್ಲಿ ಯುಎಸ್ಎಸ್ಆರ್ ಜೊತೆಗೆ 20 ವರ್ಷಗಳ ರಕ್ಷಣಾ ಒಪ್ಪಂದ ನಡೆಸಿದ ಸಂದರ್ಭದಿಂದ, 1990ರಲ್ಲಿ ಸೋವಿಯತ್ ಒಕ್ಕೂಟದ ಪತನದ ವೇಳೆಗೆ ರಕ್ಷಣಾ ವಲಯದಲ್ಲಿ ಸಾಕಷ್ಟು ಬದಲಾವಣೆಗಳು ಸಂಭವಿಸಿದ್ದವು. ಇದೇ ಅವಧಿಯಲ್ಲಿ, ಪಾಕಿಸ್ತಾನದ ಅಣ್ವಸ್ತ್ರ ಹೊಂದುವ ಮಹತ್ವಾಕಾಂಕ್ಷಿ ಪ್ರಯತ್ನಗಳ ಹೊರತಾಗಿಯೂ, ಅಮೆರಿಕಾ ಪಾಕಿಸ್ತಾನಕ್ಕೆ ನಿರಂತರವಾಗಿ ಮಿಲಿಟರಿ ನೆರವು ಒದಗಿಸುತ್ತಾ ಬಂದಿತ್ತು. ಈ ಒತ್ತಡಕ್ಕೆ ಇನ್ನಷ್ಟು ಹೆಚ್ಚುವರಿ ಸೇರ್ಪಡೆ ಎಂಬಂತೆ, ವಿಶ್ವಸಂಸ್ಥೆ ಕಾಂಪ್ರಹೆನ್ಸಿವ್ ಟೆಸ್ಟ್ ಬ್ಯಾನ್ ಟ್ರೀಟಿ (ಸಿಟಿಬಿಟಿ) ಎಂಬ ಒಪ್ಪಂದವನ್ನು ರೂಪಿಸುವ ಕುರಿತಾದ ಮಾತುಕತೆಯಲ್ಲಿ ನಿರತವಾಗಿತ್ತು. ಈ ಸಿಟಿಬಿಟಿ ಒಪ್ಪಂದ ಎಲ್ಲ ಅಣ್ವಸ್ತ್ರ ಪರೀಕ್ಷೆಗಳನ್ನು ನಿರ್ಬಂಧಿಸುವ ಗುರಿ ಹೊಂದಿದ್ದು, 1996ರಲ್ಲಿ ಜಾರಿಗೆ ತರುವ ಗುರಿ ಹೊಂದಿತ್ತು. ಆದರೆ, ಭಾರತ ಈ ಒಪ್ಪಂದದ ಭಾಗವಾಗಲು ಒಪ್ಪಿಗೆ ಸೂಚಿಸಿರಲಿಲ್ಲ. ಈ ಅವಧಿಯಲ್ಲಿ, ವಿಶ್ವನಾಥ್ ಪ್ರತಾಪ್ ಸಿಂಗ್ ಅವರು ಭಾರತದ ಪ್ರಧಾನಿಯಾಗಿದ್ದರು.

ಈ ವೇಳೆಗಾಗಲೇ ಭಾರತಕ್ಕೆ ಅಣ್ವಸ್ತ್ರ ಪರೀಕ್ಷೆ ನಡೆಸಲು ಸಮಯ ಕಳೆದು ಹೋಗುತ್ತಿದೆ ಎನ್ನುವ ವಿಚಾರ ಅನುಭವಕ್ಕೆ ಬರತೊಡಗಿತ್ತು. ಆದ್ದರಿಂದ, 1995ರಲ್ಲಿ ಭಾರತದ ಪ್ರಧಾನ ಮಂತ್ರಿಯಾಗಿದ್ದ ಪಿ ವಿ ನರಸಿಂಹ ರಾವ್ ಅವರು ಅದೇ ವರ್ಷದ ಡಿಸೆಂಬರ್ ತಿಂಗಳಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಲು ಅನುಮತಿ ನೀಡಿದರು. ಆದರೆ ಹಲವಾರು ಪ್ರಾಯೋಗಿಕ ಮತ್ತು ರಾಜಕೀಯ ಕಾರಣಗಳಿಂದ ಈ ಪರೀಕ್ಷೆ ಮುಂದೂಡಲ್ಪಟ್ಟಿತು.

ಪೋಖ್ರಾನ್ 2: ಭಾರತದ ಅಣ್ವಸ್ತ್ರ ಸಾಮರ್ಥ್ಯದ ಅನಾವರಣ

ರಾಜಕೀಯ ಅಸ್ಥಿರತೆ ಮತ್ತು ಅಣ್ವಸ್ತ್ರ ಪರೀಕ್ಷೆ ನಡೆಸುವ ಇಚ್ಛಾಶಕ್ತಿಯ ಕೊರತೆಗಳ ನಡುವೆಯೇ ಒಂದಷ್ಟು ವರ್ಷಗಳು ಕಳೆದು ಹೋಗಿದ್ದವು. ಆದರೆ ಅದೃಷ್ಟವಶಾತ್ 1998ರಲ್ಲಿ ಭಾರತದ ಪರಿಸ್ಥಿತಿ ಬದಲಾಗತೊಡಗಿತ್ತು. ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ, ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ನಾಯಕತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಸರ್ಕಾರ ರಚಿಸಿತ್ತು. ಅಧಿಕಾರಕ್ಕೆ ಬರುವ ಮುನ್ನ, ಎನ್‌ಡಿಎ ಭಾರತದ ಮಿಲಿಟರಿ ಸಾಮರ್ಥ್ಯಕ್ಕೆ ಅಣ್ವಸ್ತ್ರ ಸಾಮರ್ಥ್ಯವನ್ನೂ ಸೇರಿಸುವುದನ್ನು ತನ್ನ ಚುನಾವಣಾ ಪ್ರಣಾಳಿಕೆಯ ಪ್ರಮುಖ ಅಂಶವಾಗಿಸಿತ್ತು.

ನೌಕಾಪಡೆಗೆ 'ಇಂಫಾಲ್‌' ಬಲ: ರಾಡಾರ್ ಕಣ್ತಪ್ಪಿಸಿ ಬರುವ ಗೈಡೆಡ್‌ ಮಿಸೈಲ್‌ ಹೊಡೆದುರುಳಿಸುವ ಶಕ್ತಿ

1998ರಲ್ಲಿ, ಚೀನಾದ ಬೆಂಬಲದೊಡನೆ ಅಭಿವೃದ್ಧಿ ಪಡಿಸಿದ್ದ ಘೋರಿ ಕ್ಷಿಪಣಿಯನ್ನು ಪಾಕಿಸ್ತಾನ ಯಶಸ್ವಿಯಾಗಿ ಪರೀಕ್ಷಿಸಿತು. ಅದೇ ವರ್ಷದ ಮೇ ತಿಂಗಳಲ್ಲಿ, ಪಾಕಿಸ್ತಾನದ ಸಾಮರ್ಥ್ಯಕ್ಕೆ ಭಾರತ ತನ್ನ ಆಪರೇಶನ್ ಶಕ್ತಿಯ ಮೂಲಕ ತಕ್ಕ ಪ್ರತ್ಯುತ್ತರ ನೀಡಿತು. 1974ರಲ್ಲಿ, ಭಾರತ ತನ್ನ ಪರಮಾಣು ಪರೀಕ್ಷೆಯನ್ನು ಶಾಂತಿಯುತ ಉದ್ದೇಶಗಳಿಗಾಗಿ ಎಂದಿತ್ತಾದರೂ, 1998ರ ಪರಮಾಣು ಪರೀಕ್ಷೆಗಳು ಭಾರತವನ್ನು ಸ್ಪಷ್ಟವಾಗಿ ಅಣ್ವಸ್ತ್ರ ಸಜ್ಜಿತ ರಾಷ್ಟ್ರವಾಗಿ ರೂಪಿಸುತ್ತಿದ್ದವು. ಪೋಖ್ರಾನ್ 2 ಎಂದು ಹೆಸರಾದ ಈ ಪರೀಕ್ಷೆಗಳ ಬಳಿಕ, ಭಾರತ ಸರ್ಕಾರ ತನ್ನ ಬಳಿ ಈಗ ಪರಮಾಣು ಶಸ್ತ್ರಾಸ್ತ್ರಗಳಿವೆ ಎಂದು ಜಗತ್ತಿಗೆ ಘೋಷಿಸಿತು.

1998ರ ಭಾರತದ ಅಣ್ವಸ್ತ್ರ ಪರೀಕ್ಷೆಗಳ ಪರಿಣಾಮವಾಗಿ, ಅಮೆರಿಕ ಸೇರಿದಂತೆ ಹಲವು ದೇಶಗಳು ಭಾರತದ ಮೇಲೆ ನಿರ್ಬಂಧಗಳನ್ನು ಹೇರಿದವು. ಆದರೆ, ಈ ಬಾರಿಯ ಪ್ರತಿರೋಧಗಳು 1974ರಲ್ಲಿನ ಭಾರತದ ಮೊದಲ ಪರಮಾಣು ಪರೀಕ್ಷೆಗಳ ಸಂದರ್ಭದಲ್ಲಿದ್ದಷ್ಟು ತೀಕ್ಷ್ಣವಾಗಿರಲಿಲ್ಲ. ಕ್ಷಿಪ್ರವಾಗಿ ಬೆಳೆಯುತ್ತಿದ್ದ ಭಾರತದ ಆರ್ಥಿಕತೆ ಮತ್ತು ಭಾರತದ ಬೃಹತ್ ಮಾರುಕಟ್ಟೆಯನ್ನು ಬಳಸುವ ವಿದೇಶಗಳ ಹಂಬಲದ ಕಾರಣದಿಂದ ಭಾರತಕ್ಕೆ ಈ ಎಲ್ಲ ಟೀಕೆ, ಪ್ರತಿರೋಧಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಯಿತು. ಈ ಅಣ್ವಸ್ತ್ರ ಪರೀಕ್ಷೆಗಳು ಭಾರತಕ್ಕೆ ತನ್ನನ್ನು ತಾನು ಅತ್ಯಂತ ಪ್ರಬಲ ರಾಷ್ಟ್ರಗಳ ಸಾಲಿನಲ್ಲಿ ಸ್ಥಾಪಿಸಲೂ ಪೂರಕವಾಯಿತು.

click me!