ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ಹಿಂದೆ ಪ್ರಕಟಿಸಿದ್ದಂತೆ ಅಸ್ಸಾಂನ ಬಿಜೆಪಿ ಸರ್ಕಾರ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ಕಾಯ್ದೆಯನ್ನು ರದ್ದುಗೊಳಿಸಿ, ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿಯನ್ನು ಕಡ್ಡಾಯಗೊಳಿಸುವ ಕಾಯ್ದೆಯನ್ನು ಅಂಗೀಕರಿಸಿದೆ.
ಗುವಾಹಟಿ (ಆ.30): ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ಹಿಂದೆ ಪ್ರಕಟಿಸಿದ್ದಂತೆ ಅಸ್ಸಾಂನ ಬಿಜೆಪಿ ಸರ್ಕಾರ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ಕಾಯ್ದೆಯನ್ನು ರದ್ದುಗೊಳಿಸಿ, ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿಯನ್ನು ಕಡ್ಡಾಯಗೊಳಿಸುವ ಕಾಯ್ದೆಯನ್ನು ಅಂಗೀಕರಿಸಿದೆ. ತನ್ಮೂಲಕ, ಏಕರೂಪದ ನಾಗರಿಕ ಸಂಹಿತೆ ಜಾರಿಯತ್ತ ಇನ್ನೊಂದು ಹೆಜ್ಜೆ ಇರಿಸಿದೆ.
ಈವರೆಗೆ ಅಸ್ಸಾಂನಲ್ಲಿ 1935ರ ಅಸ್ಸಾಂ ಮುಸ್ಲಿಂ ವಿವಾಹಗಳ ಮತ್ತು ವಿಚ್ಛೇದನಗಳ ನೋಂದಣಿ ಕಾಯ್ದೆ ಜಾರಿಯಲ್ಲಿತ್ತು. ಅದರಡಿ ಮುಸ್ಲಿಂ ಜನಾಂಗದಲ್ಲಿ ಬಾಲ್ಯವಿವಾಹಕ್ಕೆ ಅವಕಾಶವಿತ್ತು. ಜೊತೆಗೆ, ವಿವಾಹ ಮತ್ತು ವಿಚ್ಛೇದನಗಳನ್ನು ಸರ್ಕಾರದ ಬದಲು ಮುಸ್ಲಿಂ ಸಮುದಾಯದ ಕಾಜಿಗಳು ನೋಂದಣಿ ಮಾಡಿಕೊಳ್ಳುತ್ತಿದ್ದರು. ಈ ಕಾಯ್ದೆಯನ್ನು ರದ್ದುಪಡಿಸುವ ಮಸೂದೆಯನ್ನು ಗುರುವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.
ಬಿಜೆಪಿಗರು, ಆರೆಸ್ಸೆಸ್ ವಿರುದ್ಧ ರಾಜ್ಯ ಸರ್ಕಾರ ಕೆಐಎಡಿಬಿ ಭೂ ಪ್ರತ್ಯಸ್ತ್ರ: ಸಚಿವ ಎಂ.ಬಿ.ಪಾಟೀಲ್
ಬಳಿಕ ‘ಅಸ್ಸಾಂ ಮುಸ್ಲಿಂ ವಿವಾಹಗಳ ಕಡ್ಡಾಯ ನೋಂದಣಿ ಮತ್ತು ವಿಚ್ಛೇದನಗಳ ಮಸೂದೆ-2024’ ಮಂಡಿಸಿ ಅಂಗೀಕರಿಸಲಾಯಿತು. ಈ ಮಸೂದೆಯ ಪ್ರಕಾರ ಮುಸ್ಲಿಮರು ಇನ್ನುಮುಂದೆ ಕಾಜಿಗಳ ಬದಲು ಸರ್ಕಾರಿ ವ್ಯವಸ್ಥೆಯಲ್ಲಿ ವಿವಾಹ ನೋಂದಣಿಯನ್ನು ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ ಹಾಗೂ ಕೋರ್ಟ್‌ನಲ್ಲೇ ವಿಚ್ಛೇದನ ಪಡೆಯಬೇಕಾಗುತ್ತದೆ.
‘ಈವರೆಗೆ ಕಾಜಿಗಳು ನೋಂದಣಿ ಮಾಡಿದ ಮುಸ್ಲಿಂ ಮದುವೆಗಳು ಊರ್ಜಿತವಾಗಿಯೇ ಇರುತ್ತವೆ. ಆದರೆ, ಇನ್ನುಮುಂದೆ ನಡೆಯುವ ಮದುವೆಗಳನ್ನು ಸರ್ಕಾರದಲ್ಲಿ ನೋಂದಣಿ ಮಾಡಿಸಬೇಕಾಗುತ್ತದೆ. ನಾವು ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಯಾವುದೇ ರೀತಿ ಹಸ್ತಕ್ಷೇಪ ಮಾಡುತ್ತಿಲ್ಲ. ಆದರೆ, ಇಸ್ಲಾಂ ಪ್ರಕಾರ ನಿಷಿದ್ಧವಾದ ಮದುವೆಗಳು ನೋಂದಣಿಯಾಗದಂತೆ ತಡೆಯುತ್ತಿದ್ದೇವೆ. ಜೊತೆಗೆ, ಬಾಲ್ಯ ವಿವಾಹಗಳ ನೋಂದಣಿಯನ್ನು ತಡೆಯುತ್ತಿದ್ದೇವೆ’ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸದನದಲ್ಲಿ ಹೇಳಿದರು.
ಪರಪ್ಪನ ಅಗ್ರಹಾರದಲ್ಲಿ ನನಗೆ ಸಿಂಗಲ್ ಇಡ್ಲಿ ಕೊಟ್ಟಿರಲಿಲ್ಲ: ಕರವೇ ನಾರಾಯಣಗೌಡ
ಮಸೂದೆಗಳನ್ನು ಮಂಡಿಸಿದ ಕಂದಾಯ ಸಚಿವ ಜೋಗೆನ್ ಮೋಹನ್, ‘ಹೊಸ ಕಾಯ್ದೆಯಿಂದ ಬಹುಪತ್ನಿತ್ವಕ್ಕೆ ಕಡಿವಾಣ ಬೀಳಲಿದೆ. ವಿವಾಹಿತ ಮುಸ್ಲಿಂ ಮಹಿಳೆಯರಿಗೆ ಗಂಡನ ಮನೆಯಲ್ಲಿ ವಾಸಿಸುವ ಹಕ್ಕು ಹಾಗೂ ಜೀವನಾಂಶದ ಹಕ್ಕು ಲಭಿಸಲಿದೆ. ವಿಧವೆಯರಿಗೆ ಪತಿಯ ಆಸ್ತಿಯ ಮೇಲೆ ಹಕ್ಕು ಸಿಗಲಿದೆ. ಮುಸ್ಲಿಂ ಪುರುಷರು ಮದುವೆಯ ಬಳಿಕ ಪತ್ನಿಯರನ್ನು ತೊರೆಯುವುದಕ್ಕೆ ಕಡಿವಾಣ ಬೀಳಲಿದೆ’ ಎಂದು ಹೇಳಿದರು. ಆದರೆ, ಹೊಸ ಕಾಯ್ದೆಯಿಂದ ಇಸ್ಲಾಂನಲ್ಲಿರುವ ಬಹುಪತ್ನಿತ್ವ ಪದ್ಧತಿ ರದ್ದಾಗುವುದಿಲ್ಲ ಎಂದು ತಿಳಿದುಬಂದಿದೆ.