ನನ್ನ ತವರು ರಾಜ್ಯ ಕರ್ನಾಟಕ, ಚಿಕ್ಕೋಡಿಯಲ್ಲಿ ಕಳೆದ ನೆನಪು ಜೀವಂತ: ವಿದೇಶಾಂಗ ಸಚಿವ

By Ajit HanamakkanavarFirst Published Aug 18, 2022, 9:44 AM IST
Highlights

ಪ್ರಧಾನಿ ಮೋದಿಯ ಕನಸು ಈಡೇರಿದರೆ ಭಾರತ ಯಾವ ದೇಶಕ್ಕೂ ತಲೆಬಾಗುವ ಅಗತ್ಯವೇ ಇಲ್ಲ, ಆತ್ಮನಿರ್ಭರ ಭಾರತ ಎನ್ನುವುದೊಂದು ಕಾರ್ಯತಂತ್ರ: ಜೈಶಂಕರ್‌

ಬೆಂಗಳೂರು(ಆ.18):  ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ದೇಶದ ವಿದೇಶಾಂಗ ನೀತಿಯ ವಿಚಾರವಾಗಿ ಕನ್ನಡಪ್ರಭದ ಸೋದರ ಸಂಸ್ಥೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ‘ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ದೇಶದ ಭದ್ರತೆಗಳಿಗಿರುವ ಸವಾಲುಗಳು, ಆತ್ಮನಿರ್ಭರತೆಯ ಅಗತ್ಯ ಮೊದಲಾದ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ ಅವರು ಕರ್ನಾಟಕದಲ್ಲಿರುವ ತಮ್ಮ ಬೇರನ್ನೂ ನೆನಪಿಸಿಕೊಂಡಿದ್ದಾರೆ.

ಕಳೆದ 75 ವರ್ಷಗಳಲ್ಲಿ ಭಾರತ ಸಾಗಿ ಬಂದ ಹಾದಿಯನ್ನು ಹೇಗೆ ವಿವರಿಸುತ್ತೀರಿ

ಬ್ರಿಟಿಷರ ವಸಾಹತಾಗಿದ್ದ ಭಾರತ ಇಂದು ಸ್ವತಂತ್ರ ಸ್ವಾವಲಂಬಿ ರಾಷ್ಟ್ರ. ನಮ್ಮ ದೇಶ ಆಹಾರದ ಉತ್ಪಾದನೆಯಲ್ಲೂ ಸ್ವಾವಲಂಬನೆ ಸಾಧಿಸಿದೆ. ಭಾರತ ಸಾಗಿ ಬಂದ ಹಾದಿ ಕಠಿಣವಾಗಿತ್ತು, ಸಾಕಷ್ಟುಸಮಸ್ಯೆಗಳಿದ್ದವು. ಆದರೂ ಇಂದು ದೇಶದ ಏಕತೆ ಹಾಗೂ ಭದ್ರತೆ ಸದೃಢವಾಗಿದೆ. ಕಳೆದ ಒಂದು ದಶಕದಲ್ಲಿ ದೇಶದ ಅಭಿವೃದ್ಧಿಯ ಗತಿ ಸುಧಾರಿಸಿದೆ. ನಾವು ದೊಡ್ಡ ಗುರಿಗಳನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಎಲ್ಲ ಮನೆಗಳಿಗೂ ವಿದ್ಯುತ್‌ಶಕ್ತಿ ಹಾಗೂ ನೀರು ಪೂರೈಕೆ, ಆರೋಗ್ಯ ಹಾಗೂ ಶಿಕ್ಷಣದ ಸೌಲಭ್ಯ ಸಿಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಎಲ್ಲ ಕಾರ್ಯಗಳು ಮೊದಲಿನಿಂದಲೂ ನಡೆಯುತ್ತಿದ್ದರೂ ದಶಕದಿಂದೀಚೆಗೆ ಇದರ ವೇಗ ಹೆಚ್ಚಿದೆ.

ಮೋದಿ ನಾಯಕತ್ವದಿಂದ ವಿದೇಶಾಂಗ ನೀತಿಯಲ್ಲಿ ಮಹತ್ತರ ಬದಲಾವಣೆ, ಜೈಶಂಕರ್ ಜೊತೆ ಸಂವಾದ!

75 ವರ್ಷಗಳ ಹಾದಿಯನ್ನು ಪ್ರತಿಯೊಬ್ಬ ಭಾರತೀಯನಿಗೂ ನೆನಪಿಸಲು ‘ಹರ್‌ ಘರ್‌ ತಿರಂಗಾ’ ಅಭಿಯಾನ ನಡೆಸಲಾಯಿತೇ?

ನನ್ನ ಪ್ರಕಾರ ಭಾರತೀಯರಿಗೆ ದೇಶದ ಪಯಣವನ್ನು ನೆನಪಿಸುವ ಅಗತ್ಯವಿಲ್ಲ. ಆದರೆ ದೇಶಾಭಿಮಾನವನ್ನು ಪೋತ್ಸಾಹಿಸಲು ಈ ಅಭಿಯಾನ ನೆರವಾಗಿದೆ. ಭಾರತೀಯರು ದೇಶಭಕ್ತರಾಗಿದ್ದು, ಅವರು ದೇಶದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸಲು ಸದಾ ಸಿದ್ಧವಾಗಿರುತ್ತಾರೆ. ಹರ್‌ ಘರ್‌ ತಿರಂಗಾ ಅಭಿಯಾನ ನಮ್ಮೆಲ್ಲರನ್ನೂ ಪ್ರೋತ್ಸಾಹಿಸುವ ಪ್ರಯತ್ನ.

ಇತ್ತೀಚೆಗೆ ಭಾರತದ ವಿದೇಶಾಂಗ ನೀತಿಯಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಅದರ ಬಗ್ಗೆ ಮಾಹಿತಿ ನೀಡುತ್ತೀರಾ?

ದೇಶದ ವಿದೇಶಾಂಗ ನೀತಿಯಲ್ಲಿ ಆದ ಬದಲಾವಣೆ ಒಂದೇ ಕ್ಷಣದಲ್ಲಿ ಆಗಿದ್ದಲ್ಲ. ಇದು ಹಂತ ಹಂತವಾಗಿ ನಡೆದ ಪ್ರಕ್ರಿಯೆ. ನಮ್ಮ ದೇಶದ ಅಡಿಪಾಯ ಸದೃಢವಾಗಿದೆ. ನಾಯಕತ್ವ ಸಶಕ್ತವಾಗಿದೆ. ನಮ್ಮ ಪ್ರಧಾನಿ ತಮ್ಮದೇ ಆದ ದೃಷ್ಟಿಕೋನವನ್ನು, ಅಭಿವೃದ್ಧಿಯ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ. ಮುಂದಿನ ಪೀಳಿಗೆಯು ದೇಶವನ್ನು ಜಾಗತಿಕವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಮನಾಗಿ ಕಾಣಬೇಕು ಎಂಬುದು ಅವರ ಮಹತ್ವಾಕಾಂಕ್ಷೆ. ಅವರು ಜಾಗತಿಕ ಮಟ್ಟದಲ್ಲಿ ಭಾರತದ ವಿಶಿಷ್ಟಸಂಸ್ಕೃತಿ ಹಾಗೂ ಪರಂಪರೆಯನ್ನು ಎತ್ತಿ ಹಿಡಿಯುವ ಬಯಕೆ ಹೊಂದಿದ್ದಾರೆ. ಉದಾಹರಣೆಗೆ ಯೋಗಕ್ಕೆ ಜಾಗತಿಕ ಮನ್ನಣೆ ಸಿಕ್ಕಿದ್ದು ಭಾರತೀಯರಿಗೆ ಒಂದು ಹೆಮ್ಮೆಯ ಸಂಗತಿ. ದೇಶದ ಗಡಿ ಹಾಗೂ ಆಂತರಿಕ ಭದ್ರತೆ ವಿಚಾರಗಳು ಮಾತ್ರವಲ್ಲದೇ ವಿದೇಶಗಳಲ್ಲಿ ಭಾರತೀಯರು ತೊಂದರೆಗೆ ಸಿಲುಕಿದ್ದರೆ ಅವರ ರಕ್ಷಣೆಗಾಗಿಯೂ ಸರ್ಕಾರ ಶ್ರಮಿಸಿದೆ. ಉಕ್ರೇನ್‌ ಹಾಗೂ ಅಪ್ಘಾನಿಸ್ತಾನದಲ್ಲಿ ನಡೆದಿದ್ದನ್ನು ಸ್ಮರಿಸಿಕೊಳ್ಳಬಹುದು. ಇಂದು ಭಾರತವು 3 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಶೀಘ್ರವೇ ನಾವು ಅತಿ ಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರವಾಗಿಯೂ ಹೊರಹೊಮ್ಮಲಿದ್ದೇವೆ. ನಾವು ಅಗಾಧ ಸಾಮರ್ಥ್ಯ ಹೊಂದಿದ್ದೇವೆ. ಬೆಂಗಳೂರು ಕೂಡಾ ಈ ಸಾಮರ್ಥ್ಯ ಪ್ರದರ್ಶಿಸುತ್ತಿದೆ. ವಿಶ್ವದ ಆರ್ಥಿಕತೆ ಅಥವಾ ರಾಜಕಾರಣದಲ್ಲಿ ದೇಶದ ಅಭಿಪ್ರಾಯಕ್ಕೆ ಮನ್ನಣೆ ಸಿಗುತ್ತಿದೆ. ಜಾಗತಿಕ ವಿಚಾರಗಳಲ್ಲಿ ನಮ್ಮ ದೇಶದ ನಿಲುವು ಏನಿದೆ ಎಂಬುದಕ್ಕೂ ಮಹತ್ವ ನೀಡಲಾಗುತ್ತದೆ.

ಶಕ್ತಿಶಾಲಿ ರಾಷ್ಟ್ರಗಳ ಯಾವುದೇ ಒತ್ತಡಕ್ಕೂ ಬಲಿಯಾಗದೇ ಭಾರತವು ಉಕ್ರೇನಿನ ವಿಚಾರದಲ್ಲಿ ತನ್ನದೇ ಆದ ಸ್ವತಂತ್ರ ನಿಲುವನ್ನು ಹೊಂದಿತ್ತು. ಅದು ಹೇಗೆ ಸಾಧ್ಯವಾಯಿತು?

ನಾವು ದೇಶದ ಹಿತಾಸಕ್ತಿಯ ಬಗ್ಗೆ ಸ್ಪಷ್ಟನಿಲುವು ಹೊಂದಿದ್ದೆವು. ಕಳೆದ 45 ವರ್ಷಗಳಿಂದಲೂ ನಾನು ವಿದೇಶಾಂಗ ವ್ಯವಹಾರದ ವಿಚಾರದಲ್ಲಿ ಸಕ್ರಿಯವಾಗಿದ್ದೇನೆ. ಈ ಅವಧಿ ಸಾಕಷ್ಟುಬದಲಾವಣೆಗಳಿಗೆ ಸಾಕ್ಷಿಯಾಗಿದೆ. ದೇಶದ ನಾಯಕತ್ವವು ವಿದೇಶಾಂಗ ವಿಚಾರದಲ್ಲಿ ತನ್ನ ನಿಲುವು ವ್ಯಕ್ತಪಡಿಸುವ ನಿಟ್ಟಿನಲ್ಲಿ ಮಹತ್ವಪೂರ್ಣವಾದದ್ದು. ನಾಯಕತ್ವ ವಹಿಸಿದವರಿಗೆ ದೇಶ ಹಾಗೂ ಅಂತಾರಾಷ್ಟ್ರೀಯ ರಾಜಕಾರಣದ ಅರಿವು ಇರಬೇಕು. ದೇಶದ ಪ್ರಧಾನಿ ಸ್ಪಷ್ಟನಿಲುವು ಹೊಂದಿದ್ದರೆ, ಪ್ರಬಲ ರಾಷ್ಟ್ರೀಯವಾದಿಯಾಗಿದ್ದರೆ, ದೇಶದ ಹಿತಾಸಕ್ತಿ ಕಾಪಾಡಲು ಕಠಿಣ ನಿರ್ಧಾರ ಕೈಗೊಳ್ಳುವ ಎದೆಗಾರಿಕೆ ಹೊಂದಿದ್ದರೆ ಅದು ದೇಶದ ನಿಲುವು ನಿರ್ಧಾರವಾಗುವ ವಿಚಾರದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ ದೇಶದ ನಾಯಕ ಕೈಗೊಂಡ ನಿರ್ಧಾರಗಳನ್ನು ಯಾವುದೇ ಒತ್ತಡಕ್ಕೆ ಬಲಿಯಾಗದೇ ಅನುಷ್ಠಾನಗೊಳಿಸುವ ಪರಿ ಅತ್ಯಂತ ಮುಖ್ಯವಾದದ್ದು.

ಹಿಂದೆ ಅಧಿಕಾರಿಯಾಗಿದ್ದ ನಿಮಗೆ ರಾಜಕೀಯ ಪ್ರವೇಶಿಸುವ ವಿಚಾರ ಹೇಗೆ ಬಂತು?

2011ರಲ್ಲಿ ನಾನು ಚೀನಾದಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸುವಾಗ ಮೊಟ್ಟಮೊದಲ ಬಾರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದೆ. ನಾನು ವಾಷಿಂಗ್ಟನ್‌ನಲ್ಲಿ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದರು. ಆಗಲೂ ಒಮ್ಮೆ ಅವರನ್ನು ಭೇಟಿಯಾಗಿದ್ದೆ. ನಾನು 3 ವರ್ಷ ವಿದೇಶಾಂಗ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದೇನೆ. ಒಬ್ಬ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುವುದಕ್ಕೂ ಒಂದು ಪಕ್ಷಕ್ಕೆ ಸೇರಿ ಸಚಿವನಾಗಿ ಕೆಲಸ ಮಾಡುವುದಕ್ಕೂ ವ್ಯತ್ಯಾಸಗಳಿವೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಹೊರತುಪಡಿಸಿ ಬೇರೆ ಯಾವ ಪ್ರಧಾನಿಯೂ ನನ್ನನ್ನು ರಾಜಕೀಯ ಸೇರುವಂತೆ ಆಹ್ವಾನಿಸಿದ್ದರೆ ನಾನು ಒಪ್ಪಿಕೊಳ್ಳುತ್ತಿರಲಿಲ್ಲ. ನನ್ನ ಕುಟುಂಬದಲ್ಲಿ ಯಾರೂ ರಾಜಕೀಯದಲ್ಲಿದ್ದವರಲ್ಲ. ನನಗೆ ಎಂದಿಗೂ ರಾಜಕೀಯ ಪ್ರವೇಶಿಸಬೇಕು ಎನ್ನುವ ಆಸೆಯೂ ಇರಲಿಲ್ಲ. 2019ರಲ್ಲಿ ನಾನು ವಿದೇಶಾಂಗ ಸಚಿವನಾಗಿ ಅಧಿಕಾರ ಸ್ವೀಕರಿಸಿದೆ. ಏಕೆಂದರೆ ಆ ವೇಳೆಯಲ್ಲಿ ನಾನು ಆ

ಜವಾಬ್ದಾರಿ ವಹಿಸಿಕೊಳ್ಳುವುದು ಅಗತ್ಯ ಎನಿಸಿತ್ತು. ದೇಶದ ವಿದೇಶಾಂಗ ನೀತಿಯನ್ನು ಬಲಪಡಿಸಲು ರಾಜಕೀಯ ಪ್ರವೇಶಿಸಿದೆ ಎನ್ನಬಹುದು.

ಇತ್ತೀಚೆಗೆ ಚೀನಾ ಆರ್ಥಿಕ ಯುದ್ಧದ ನೀತಿ ಅನುಸರಿಸುತ್ತಿದೆ. ಬಿಕ್ಕಟ್ಟಿಗೊಳಗಾದ ಶ್ರೀಲಂಕಾ ಸೇರಿದಂತೆ ನಮ್ಮ ನೆರೆಯ ರಾಷ್ಟ್ರಗಳಲ್ಲಿ ಚೀನಾ ಹೂಡಿಕೆ ಮಾಡುತ್ತಿರುವುದನ್ನು ಕಾಣಬಹುದು. ಅದು ಭಾರತಕ್ಕೆ ಅಪಾಯವೇ?
ಸರ್ಕಾರದ ಕೆಲವು ನೀತಿಗಳು, ಕೋವಿಡ್‌ ಬಿಕ್ಕಟ್ಟು, ಪ್ರವಾಸೋದ್ಯಮದಲ್ಲಿ ಕುಸಿತ ಮೊದಲಾದವು ಶ್ರೀಲಂಕಾದ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿವೆ. ಚೀನಾ ಈ ಅವಕಾಶ ಬಳಸಿ ಅಲ್ಲಿ ಹೂಡಿಕೆಗೆ ಮುಂದಾಗಿದೆ. ಇತ್ತೀಚೆಗೆ ರಷ್ಯಾ ಉಕ್ರೇನಿನ ಮೇಲೆ ದಾಳಿ ಮಾಡಿ ಪಾಶ್ಚಿಮಾತ್ಯ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಹಲವಾರು ರಾಷ್ಟ್ರಗಳು ರಷ್ಯಾ ಮೇಲೆ ಆರ್ಥಿಕ ನಿರ್ಬಂಧ ಹೇರಿದ್ದವು. ಹೀಗಾಗಿ ಸೇನೆಯನ್ನು ಬಳಸದೇ ಆರ್ಥಿಕ ಮಾರ್ಗಗಳ ಮೂಲಕವೂ ಇನ್ನೊಂದು ದೇಶದ ಮೇಲೆ ಒತ್ತಡ ಹೇರುವುದು ಹಿಂದಿನಿಂದಲೂ ರಾಷ್ಟ್ರಗಳು ಅನುಸರಿಸುತ್ತಿರುವ ಪದ್ಧತಿಯಾಗಿದೆ. ಹೀಗಾಗಿಯೇ ನಾನು ಪ್ರಧಾನಿಯ ನಿಲುವು ಸ್ಪಷ್ಟವಾಗಿರುವುದು ಅತಿ ಮುಖ್ಯ ಎನ್ನುತ್ತೇನೆ. ಮೋದಿಯವರು ಆತ್ಮನಿರ್ಭರ ಭಾರತ ಎನ್ನುತ್ತಾರೆ.

ಇದು ಕೇವಲ ರಾಜಕೀಯ ಘೋಷಣೆಯಲ್ಲ. ನನ್ನ ಪ್ರಕಾರ ಇದು ಒಂದು ಕಾರ್ಯತಂತ್ರ. ಏಕೆಂದರೆ ನಾವು ಆತ್ಮ ನಿರ್ಭರರಾಗಿದ್ದಾಗ ಯಾವುದೇ ವಿಚಾರಕ್ಕೂ ಇನ್ನೊಂದು ದೇಶದ ಮೇಲೆ ಅವಲಂಬಿತರಾಗಬೇಕಾಗಿಲ್ಲ. ನಾವು ಇನ್ನೊಂದು ದೇಶದ ಮೇಲೆ ಅವಲಂಬಿತರಾಗಿದ್ದಾಗ ಆ ರಾಷ್ಟ್ರಗಳು ನಮ್ಮ ದೌರ್ಬಲ್ಯಗಳನ್ನು ಬಳಸಿ ನಮ್ಮ ಮೇಲೆ ಒತ್ತಡ ಹೇರುವ ಸಾಧ್ಯತೆಗಳಿರುತ್ತವೆ. ರಾಷ್ಟ್ರೀಯ ಭದ್ರತೆ, ಆರ್ಥಿಕ ಅಭಿವೃದ್ಧಿ, ಸಾಮಾಜಿಕ ನ್ಯಾಯ ಇದು ಮೋದಿ ಸರ್ಕಾರದ ಅಜೆಂಡಾ ಆಗಿದೆ. ಆತ್ಮನಿರ್ಭರ ಭಾರತ ಇದೆಲ್ಲವನ್ನೂ ಒಳಗೊಂಡಿದೆ.

ಪ್ರಸ್ತುತ ಭಾರತ ಭದ್ರತೆಗಿರುವ ಅತಿದೊಡ್ಡ ಸವಾಲು ಯಾವುದು?

ಕಳೆದ 75 ವರ್ಷಗಳಲ್ಲಿ ದೇಶ ಯಾವ ಸವಾಲುಗಳನ್ನು ಎದುರಿಸುತ್ತಿದೆ ಎಂಬುದನ್ನು ತಿಳಿದುಕೊಂಡಿದ್ದೇವೆ. ನೆರೆಯ ರಾಷ್ಟ್ರಗಳು ಒಂದೆಡೆ ಗಡಿ ಭಾಗದಲ್ಲಿ ಒಳನುಗ್ಗಲು ಹೊಂಚು ಹಾಕುತ್ತಿದ್ದರೆ, ಇನ್ನೊಂದೆಡೆ ಭಯೋತ್ಪಾದನೆಯನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಸವಾಲುಗಳಿಗೆ ಪರಿಹಾರವೇ ಇಲ್ಲ ಎಂದಲ್ಲ. ಖಂಡಿತವಾಗಿಯೂ ಪರಿಹಾರವಿದೆ. ಆದರೆ ದೇಶದ ನಾಯಕರಿಗೆ ಕಾರ್ಯತಂತ್ರದ ಬಗ್ಗೆ ಸ್ಪಷ್ಟನಿಲುವು ಇದ್ದಾಗಲೇ ಅವರು ಆ ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದೆ. ಗಡಿ ಭಾಗಗಳಲ್ಲಿ ಏನೆಲ್ಲ ಸಮಸ್ಯೆಗಳಿವೆ ಎಂಬುದು ನಮಗೆಲ್ಲರಿಗೂ ತಿಳಿದ ವಿಚಾರ. ಆದರೆ ಗಡಿ ಭಾಗದ ಮೂಲಸೌಕರ್ಯಗಳನ್ನು ಅಭಿವೃದ್ಧಿ ಮಾಡಿ ಆ ಸಮಸ್ಯೆಗಳನ್ನು ಪರಿಹಾರ ಮಾಡಲು ಈ ಮೊದಲು ಪ್ರಯತ್ನ ನಡೆದಿರಲಿಲ್ಲ. ಆದರೆ ಕಳೆದ 8 ವರ್ಷಗಳಲ್ಲಿ ಗಡಿಭಾಗದಲ್ಲಿ ಹಲವಾರು ರಸ್ತೆ ಹಾಗೂ ಸೇತುವೆಗಳು ನಿರ್ಮಾಣವಾಗಿವೆ. ಲಡಾಖ್‌ನಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿದ್ದಕ್ಕಾಗಿಯೇ ಇಂದು ನಮ್ಮ ಯೋಧರು ಅಲ್ಲಿ ಹೆಚ್ಚಿನ ತೊಂದರೆ ಇಲ್ಲದೇ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿದೆ.

ಉ​ಕ್ರೇನ್‌ ವೈದ್ಯ​ ವಿದ್ಯಾ​ರ್ಥಿ​ಗಳ ಶಿಕ್ಷಣಕ್ಕೆ ಶೀಘ್ರ ಪರಿಹಾರ: ಕೇಂದ್ರ ಸಚಿವ ಜೈಶಂಕರ್‌

2024ರ ಚುನಾವಣೆ ಬಗ್ಗೆ ನಿಮ್ಮ ಅಭಿಪ್ರಾಯವೇನು?

ನಾನು ರಾಜಕೀಯ ಪ್ರವೇಶಿಸಿದ ನಂತರ ತಿಳಿದುಕೊಂಡಿದ್ದೇನೆಂದರೆ, ರಾಜಕೀಯ ಹೊರಗಿನಿಂದ ಬಹಳ ಸುಲಭ ಎನಿಸುತ್ತದೆ. ಆದರೆ ಅದು ಅಷ್ಟುಸುಲಭವಲ್ಲ. ರಾಜಕೀಯದಲ್ಲಿರುವವರು ಜನರ ಆಶೋತ್ತರಗಳನ್ನು ಪೂರೈಸಲು ಶ್ರಮಿಸುವುದು ಅಗತ್ಯ. 2014 ಹಾಗೂ 2019ರ ಚುನಾವಣೆ ಗೆಲ್ಲುವುದೂ ಸುಲಭವೇನಾಗಿರಲಿಲ್ಲ. ಪ್ರಸ್ತುತ ಸರ್ಕಾರದಿಂದ ಜನರ ನಿರೀಕ್ಷೆಗಳೂ ಹೆಚ್ಚಾಗಿವೆ. ಈ ನಿರೀಕ್ಷೆಗಳನ್ನು ಪೂರ್ಣಗೊಳಿಸುವುದು ಸವಾಲಿನ ಕೆಲಸ. ಇದಕ್ಕಾಗಿ ಪ್ರಯತ್ನ ಮುಂದುವರೆದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಉಪ್ಪಿಟ್ಟನ್ನು ನೆನಪಿಸಿಕೊಂಡಿದ್ದೀರಿ. ಕರ್ನಾಟಕದೊಂದಿಗಿನ ನಿಮ್ಮ ನಂಟೇನು?

1962ರಲ್ಲಿ ನಾನು ಮೊದಲ ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದೆ. ನನ್ನ ತಾತ ಎಚ್‌.ಎ.ಎಲ್‌. ಮುಖ್ಯಸ್ಥರಾಗಿದ್ದರು. ಅವರು ಬೆಂಗಳೂರಿನ ಕಂಟೋನ್ಮೆಂಟ್‌ನಲ್ಲಿ ವಾಸ್ತವ್ಯ ಹೂಡಿದ್ದರು. ನನ್ನ ಪಾಲಕರು ಕೆಲ ಕಾಲಕ್ಕಾಗಿ ವಿದೇಶಕ್ಕೆ ತೆರಳಿದಾಗ ನಾನು ಬೆಂಗಳೂರಿನ ಕಿಂಗ್‌ ಜಾರ್ಜ್‌ ಶಾಲೆಯಲ್ಲಿ ಓದಿದ್ದೆ. ಅದನ್ನು ಈಗ ಬೆಂಗಳೂರು ಮಿಲಿಟರಿ ಸ್ಕೂಲ್‌ ಎಂದು ಕರೆಯಲಾಗುತ್ತದೆ. ನಾನು ಸೇವೆಗೆ ಸೇರುವವರೆಗೂ ಹಲವಾರು ಬಾರಿ ಬೆಂಗಳೂರಿಗೆ ಭೇಟಿ ನೀಡಿದ್ದೇನೆ. ನಾನು ದೆಹಲಿಯವನಾಗಿದ್ದ ಕಾರಣ ಯುಪಿಎಸ್‌ಸಿಯಲ್ಲೂ ಕರ್ನಾಟಕವನ್ನೇ ನನ್ನ ತವರು ರಾಜ್ಯ ಎಂದು ಹೇಳಿದ್ದೆ. ಬಳಿಕ ಬೆಳಗಾವಿಯ ಚಿಕ್ಕೋಡಿಯಲ್ಲಿ 4 ತಿಂಗಳು ಕಳೆದಿದ್ದೆ. ಅಂದಿನ ನೆನಪುಗಳು ಇನ್ನೂ ಜೀವಂತವಾಗಿವೆ.
 

click me!