ನಿರ್ಭಯಾ ಗ್ಯಾಂಗ್ ರೇಪ್ ಕೇಸ್ ಸಾಗಿಬಂದ ಹಾದಿ..!

By Suvarna News  |  First Published Jan 8, 2020, 2:57 PM IST

ರೇಪ್‌ ರಕ್ಕಸರಿಗೆ ಅಂತೂ ಗಲ್ಲು! ನಿರ್ಭಯಾ ಹಂತಕರು ಜ.22ರ ಬೆಳಗ್ಗೆ 7 ಗಂಟೆಗೆ ನೇಣುಗಂಬಕ್ಕೆ |  ಡೆತ್‌ ವಾರಂಟ್‌ ಜಾರಿಗೊಳಿಸಿದ ದಿಲ್ಲಿ ನ್ಯಾಯಾಲಯ | ವಿಕೃತ ಗ್ಯಾಂಗ್‌ರೇಪಿಸ್ಟ್‌ಗಳ ಶಿಕ್ಷೆ ಜಾರಿಗೆ ಕಡೆಗೂ ಮುಹೂರ್ತ


ನವದೆಹಲಿ (ಜ. 08): ದಿಲ್ಲಿಯಲ್ಲಿ 2012 ರ ಡಿ. 6ರಂದು ರಾತ್ರಿ ಖಾಸಗಿ ಬಸ್‌ನಲ್ಲಿ ಸ್ನೇಹಿತನ ಜತೆ ಅರೆವೈದ್ಯಕೀಯ ವಿದ್ಯಾರ್ಥಿನಿ ಮನೆಗೆ ಮರಳುತ್ತಿದ್ದಳು. ಈಕೆಯ ಮೇಲೆ ಬಸ್ಸಿನ ಚಾಲಕ ಹಾಗೂ ಆತನ 5 ಸ್ನೇಹಿತರು ಬಸ್ಸಲ್ಲೇ ಭೀಕರವಾಗಿ ಅತ್ಯಾಚಾರ ಎಸಗಿ, ಬಸ್ಸಿನಿಂದ ಹೊರಗೆಸೆದಿದ್ದರು. ಬಳಿಕ ಸಂತ್ರಸ್ತೆಯನ್ನು ಸಫ್ದರ್‌ಜಂಗ್‌ ಆಸ್ಪತ್ರೆಗೆ ದಾಖಲಿಸಿ, ನಂತರ ಸಿಂಗಾಪುರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಡಿ.29ರಂದು ಸಂತ್ರಸ್ತೆ ಸಿಂಗಾಪುರದಲ್ಲಿ ಅಸುನೀಗಿದ್ದಳು.

ಅತ್ತ ಗಲ್ಲಿಗೆ ಪ್ರ್ಯಾಕ್ಟೀಸ್, ಇತ್ತ ಆಪ್ತರ ಮೀಟಿಂಗ್ಸ್: INSIDE ತಿಹಾರ್!

Latest Videos

ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಘಟನೆಯ ಸಂಪೂರ್ಣ ವಿವರ ಇಲ್ಲಿದೆ ನೋಡಿ! 

ನಿರ್ಭಯಾ ಗ್ಯಾಂಗ್ ರೇಪ್ ಕೇಸ್ ಸಾಗಿಬಂದ ಹಾದಿ..! 

2012 ರ ಡಿ. 16 - ದೆಹಲಿಯಲ್ಲಿ ಚಲಿಸುತ್ತಿರುವ ಬಸ್ಸಿನಲ್ಲಿ ಅಪ್ರಾಪ್ತ ಸೇರಿ ಒಟ್ಟು ಆರು ದುರುಳರು, ಓರ್ವ ಅಪ್ರಾಪ್ತನಿಂದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ. ಯುವತಿ ಮೇಲೆ ಮಾರಣಾಂತಿಕ ಹಲ್ಲೆ.

2013 ರ ಜ.3 - ಈ ಪ್ರಕರಣ ಸಂಬಂಧ ದೆಹಲಿ ಪೊಲೀಸರಿಂದ ಐವರು ಆರೋಪಿಗಳ ಚಾರ್ಜ್‌ಶೀಟ್ ಸಲ್ಲಿಕೆ.

2013 ರ ಮಾ. 21- ಈ ಕೇಸ್‌ನ ಐವರು ಆರೋಪಿಗಳಲ್ಲಿ ಓರ್ವನಾದ ಬಸ್ ಚಾಲಕ ರಾಮ್ ಸಿಂಗ್ ಭಾರೀ ಬಿಗಿ ಭದ್ರತೆಯಿರುವ ತಿಹಾರ್ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ.

2013 ರ ಸೆ.13- ನಾಲ್ವರಿಗೆ ತ್ವರಿತ ನ್ಯಾಯಾಲಯದಿಂದ ಗಲ್ಲು ಶಿಕ್ಷೆ. 2005 ರ ಮಾ.15 ರಂದು ದೋಷಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ತ್ವರಿತ ನ್ಯಾಯಾಲಯ ತೀರ್ಪನ್ನು ಎತ್ತಿ ಹಿಡಿದ ದೆಹಲಿ ಹೈಕೋರ್ಟ್

2015 ರ ಡಿ.20 - 3 ವರ್ಷಗಳ ಕಾಲ ಬಾಲಾಪರಾಧಿ ಕೇಂದ್ರದಲ್ಲಿದ್ದ ಪ್ರಕರಣದ ದೋಷಿಯ ಬಿಡುಗಡೆಗೆ ತಡೆ ಹೇರಲು ದೆಹಲಿ ನ್ಯಾಯಾಲಯ ನಕಾರ.

2017  ರ ಮಾ. 27 - ನಿರ್ಭಯಾ ಗ್ಯಾಂಗ್‌ರೇಪ್ ಪ್ರಕರಣದ ವಿಚಾರಣೆ ಆರಂಭಿಸಿದ ಸುಪ್ರೀಂ ಕೋರ್ಟ್

2018 ರ ಮೇ 05- ನಾಲ್ವರು ದೋಷಿಗಳ ಗಲ್ಲು ಶಿಕ್ಷೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

2018 ರ ಡಿ.13- ಪ್ರಕರಣದ ನಾಲ್ವರು ದೋಷಿಗಳಿಗೆ ತ್ವರಿತವಾಗಿ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಕೋರಿ ಸಂತ್ರಸ್ತೆ ನಿರ್ಭಯಾ ಪೋಷಕರು ಪಟಿಯಾಲ ಕೋರ್ಟ್ ಮೊರೆ

2009 ರ ಡಿ.02- ದೆಹಲಿ ಸರ್ಕಾರದ ಶಿಫಾರಸ್ಸಿನ ಮೇರೆಗೆ ಗ್ಯಾಂಗ್‌ರೇಪ್ ದೋಷಿ ವಿನಯ್ ಶರ್ಮಾ ಸಲ್ಲಿಸಿದ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ ಕೇಂದ್ರ ಗೃಹ ಇಲಾಖೆ.

2019 ರ ಡಿ.18 - ತಮ್ಮ ವಿರುದ್ಧದ ತೀರ್ಪನ್ನು ಮರು ಪರಿಶೀಲನೆಗೆ ಕೋರಿದ ಮತ್ತೋರ್ವ ದೋಷಿ ಅಕ್ಷಯ್ ಅರ್ಜಿ ಸುಪ್ರೀಂನಿಂದ ತಿರಸ್ಕಾರ.

ತಿಹಾರ್‌ ಜೈಲಲ್ಲಿ 4 ನೇಣುಗಂಬ ಸಿದ್ಧ: ನಿರ್ಭಯಾ ರೇಪಿಸ್ಟ್‌ಗೆ ಒಮ್ಮೆಗೇ ಗಲ್ಲು?

ದೆಹಲಿ ಗ್ಯಾಂಗ್‌ ರೇಪಿಸ್ಟ್‌ಗಳು 

ರಾಮ್ ಸಿಂಗ್

ದಕ್ಷಿಣ ದೆಹಲಿಯ ಕೊಳಗೇರಿ ನಿವಾಸಿ ರಾಮ್ ಸಿಂಗ್ (33) ವೃತ್ತಿಯಲ್ಲಿ ಚಾಲಕ. ದೇಶವನ್ನೇ ಬೆಚ್ಚಿ ಬೀಳಿಸಿದ್ದ 2012 ರ ದೆಹಲಿ ಸಾಮೂಹಿಕ ಅತ್ಯಾಚಾರ ಘಟನೆಯ ಮುಖ್ಯದೋಷಿ. ಚಲಿಸುತ್ತಿರುವ ಬಸ್ಸಿನಲ್ಲಿ ಯುವತಿ ಮೇಲೆ ಅಪ್ರಾಪ್ತ ಸೇರಿ ಉಳಿದವರು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾಗ, ಆ ಬಸ್ಸನ್ನು ಇವನೇ ಚಾಲನೆ ಮಾಡುತ್ತಿದ್ದ. 2013 ರ ಮಾ.21 ರಂದು ತಿಹಾರ್ ಜೈಲಿನಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ ಸ್ಥಿತಿಯಲ್ಲಿ ಆತನ ಮೃತದೇಹ ಕಂಡುಬಂದಿತ್ತು.

ವಿನಯ್ ಶರ್ಮಾ

ದಕ್ಷಿಣ ದೆಹಲಿಯ ರವಿದಾಸ್ ಕೊಳಗೇರಿ ನಿವಾಸಿಯಾಗಿರುವ 20 ವರ್ಷದ ವಿನಯ್ ಶರ್ಮಾ ಮಾತ್ರವೇ ದಿಲ್ಲಿ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಭಾಗಿಯಾದ ಹಾಗೂ ತಕ್ಕಮಟ್ಟಿಗೆ ಇಂಗ್ಲಿಷ್ ಭಾಷೆ ಬಲ್ಲ ದೋಷಿ. ಆದರೆ, ತನ್ನ ವಿರುದ್ಧದ ಗ್ಯಾಂಗ್‌ರೇಪ್, ದರೋಡೆ, ಸಾಕ್ಷ್ಯ ನಾಶ ಎಲ್ಲ ಆರೋಪಗಳನ್ನು ನಿರಾಕರಿಸಿದ್ದ ಇವನು, ನಿರ್ಭಯಾ ಘಟನೆ ನಡೆದಾಗ, ತಾನು ಮತ್ತು ಮತ್ತೋರ್ವ ದೋಷಿ ಪವನ್
ಅನ್ಯ ಕಾರ‌್ಯಕ್ರಮದಲ್ಲಿ ಭಾಗವಹಿಸಿದ್ದೆವು ಎಂದು ಕೋರ್ಟ್‌ನಲ್ಲಿ ಹೇಳಿದ್ದ.

ಅಕ್ಷಯ್ ಠಾಕೂರ್

ಬಿಹಾರ ಮೂಲದವನಾದ 28 ವರ್ಷದ ಅಕ್ಷಯ್ ಠಾಕೂರ್, ದೆಹಲಿ ನಿರ್ಭಯಾ ಗ್ಯಾಂಗ್‌ರೇಪ್ ಪ್ರಕರಣದ 6 ದುರುಳರ ಪೈಕಿ ಓರ್ವ. ಅರ್ಧದಲ್ಲೇ ಶಾಲೆ ಬಿಟ್ಟ ಈತ ಜೀವನೋಪಾಯಕ್ಕಾಗಿ 2011 ರಲ್ಲಿ ದೆಹಲಿಗೆ ವಲಸೆ ಬಂದಿದ್ದ. ಈ ವೇಳೆ ಬಸ್ಸಿನ ಕ್ಲೀನರ್ ಆಗಿ ಸೇರಿಕೊಂಡಿದ್ದ ಇವನು, ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರದಲ್ಲಿ ಭಾಗಿಯಾಗಿದ್ದ. ಆದರೆ, ಒಂದು ಕೂಸಿನ ತಾಯಿಯಾದ ಇವನ ಪತ್ನಿ, ಈ ಕೃತ್ಯದಲ್ಲಿ ತನ್ನ ಪತಿ ಭಾಗಿಯಾಗಿಲ್ಲ ಎಂದೇ ನಂಬಿದ್ದಾಳೆ.

ಮುಕೇಶ್ ಸಿಂಗ್

ಮುಕೇಶ್ ಸಿಂಗ್ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣ ನಡೆದ ಬಸ್ಸಿನ ಚಾಲಕ ರಾಮ್‌ಸಿಂಗ್ ಸಹೋದರನಾಗಿದ್ದು, ರಾಮ್‌ದಾಸ್ ಕೊಳಗೇರಿ ನಿವಾಸಿಯಾಗಿದ್ದಾನೆ. ಆದರೆ, ಈ ನಿರ್ಭಯಾ ಗ್ಯಾಂಗ್ ರೇಪ್‌ನಲ್ಲಿ ತನ್ನ ಪಾತ್ರವೇನೂ ಇಲ್ಲ. ಯುವತಿ ಮೇಲೆ ತಾನು ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ಅಥವಾ ಹಲ್ಲೆ ನಡೆಸಿಲ್ಲ. ಈ ಘಟನೆ ವೇಳೆ ತಾನು ಬಸ್ಸನ್ನು ಮಾತ್ರವೇ ಚಾಲನೆ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದ.

ಅಪ್ರಾಪ್ತ ಎಂದಿದ್ದ ನಿರ್ಭಯಾ ರೇಪಿಸ್ಟ್ ಪವನ್ ಅರ್ಜಿ ವಜಾ

ಪವನ್ ಗುಪ್ತಾ

ಗ್ಯಾಂಗ್ ರೇಪ್ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ದೆಹಲಿ ಪೊಲೀಸರು, ಹಣ್ಣಿನ ವ್ಯಾಪಾರಿಯಾಗಿದ್ದ 19 ವರ್ಷದ ಪವನ್ ಗುಪ್ತನನ್ನು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದರು. ಇವನ ವಿರುದ್ಧವೂ
ಯುವತಿ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ, ಸಾಕ್ಷ್ಯನಾಶ, ಅಪರಾಧೀಕರಣದ ಪಿತೂರಿ, ದರೋಡೆ ಸೇರಿ ಇನ್ನಿತರ ಕೇಸ್‌ಗಳನ್ನು ದಾಖಲಿಸಿಕೊಳ್ಳಲಾಗಿದೆ. ಇವನ ತಂದೆ ಮಾತ್ರ ಈ ದುಷ್ಕೃತ್ಯದಲ್ಲಿ ತನ್ನ ಮಗನ ಪಾತ್ರ ಇಲ್ಲವೆಂದು ಪ್ರತಿಪಾದಿಸಿದ್ದರು.

ಅಪ್ರಾಪ್ತ ಯುವಕ ಉತ್ತರ ಪ್ರದೇಶ ಮೂಲದ ಈ ಅಪ್ರಾಪ್ತ ಯುವಕ, ಕುಟುಂಬದ ಬಡತನದಿಂದಾಗಿ 11 ವರ್ಷದವನಿದ್ದಾಗಲೇ ಮನೆ ಬಿಟ್ಟು ಬಂದಿದ್ದ. ಇವನ ತಂದೆಯೂ ಮಾನಸಿಕ ಅಸ್ವಸ್ತನಾಗಿದ್ದ ಕಾರಣಕ್ಕಾಗಿ, ಕುಟುಂಬ ಸ್ಥಿತಿ ಹದಗೆಟ್ಟಿತ್ತು. ಹೀಗಾಗಿ, ದುಡಿಯಲೆಂದು ದೆಹಲಿಗೆ ಬಂದಿದ್ದ ಇವನು ನಿರ್ಭಯಾ ಗ್ಯಾಂಗ್‌ರೇಪ್ ಕೃತ್ಯದಲ್ಲಿ ಭಾಗಿಯಾಗಿದ್ದ. ಆದರೆ, ಅಪ್ರಾಪ್ತನಾದ ಕಾರಣ ಬಾಲಾಪರಾಧಿ ಕೇಂದ್ರದಲ್ಲಿ 3 ವರ್ಷ ಶಿಕ್ಷೆ ಅನುಭವಿಸಿ, 2015 ರಲ್ಲಿ ಬಿಡುಗಡೆಯಾಗಿದ್ದಾನೆ.

 

click me!