ಜಮ್ಮುಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಸೇನೆ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಲಷ್ಕರ್ ಎ ತೊಯ್ಬಾ ಸಂಘಟನೆಗೆ ಸೇರಿದ 5 ಉಗ್ರರನ್ನು ಹತ್ಯೆಗೈಯಲಾಗಿದೆ. ಜತೆಗೆ ರಜೌರಿಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ಉಗ್ರ ಬಲಿಯಾಗಿದ್ದಾನೆ.
ರಜೌರಿ/ ಶ್ರೀನಗರ (ನವೆಂಬರ್ 18, 2023): ಜಮ್ಮು ಕಾಶ್ಮೀರದಲ್ಲಿ 2 ಕಡೆ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ 6 ಉಗ್ರರನ್ನು ಹತ್ಯೆಗೈಯಲಾಗಿದೆ. ಗುರುವಾರ - ಶುಕ್ರವಾರ 2 ದಿನಗಳ ಕಾಲ ನಡೆದ ಕಾರ್ಯಾಚರಣೆ ವೇಳೆ ಉಗ್ರರ ಹತ್ಯೆಯಾಗಿದೆ ಎಂದು ತಿಳಿದುಬಂದಿದೆ.
ಜಮ್ಮುಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಸೇನೆ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಲಷ್ಕರ್ ಎ ತೊಯ್ಬಾ ಸಂಘಟನೆಗೆ ಸೇರಿದ 5 ಉಗ್ರರನ್ನು ಹತ್ಯೆಗೈಯಲಾಗಿದೆ. ಕುಲ್ಗಾಂ ಜಿಲ್ಲೆಯ ನೇಹಮಾ ಗ್ರಾಮದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ಪಡೆದ ಭದ್ರತಾ ಪಡೆಗಳು, ಗುರುವಾರವೇ ಇಡೀ ಪ್ರದೇಶವನ್ನು ಸುತ್ತುವರೆದಿದ್ದವು. ಬಳಿಕ ಸತತ 18 ತಾಸು ನಡೆದ ಕಾರ್ಯಾಚರಣೆಯಲ್ಲಿ 5 ಉಗ್ರರನ್ನು ಹತ್ಯೆಗೈಯಲಾಗಿದೆ. ಮೃತ ಉಗ್ರರ ಶವಗಳನ್ನು ಡ್ರೋನ್ ಮೂಲಕ ಪತ್ತೆಹಚ್ಚಲಾಯಿತು ಎಂದು ಐಜಿಪಿ (ಕಾಶ್ಮೀರ ವಲಯ) ವಿ.ಕೆ. ಬಿರ್ದಿ ಹೇಳಿದ್ದಾರೆ.
ಮೃತ ಉಗ್ರರನ್ನು ಸಮೀರ್ ಅಹ್ಮದ್ ಶೇಕ್, ಯಾಸಿರ್ ಬಿಲಾಲ್ ಭಟ್, ದಾನಿಶ್ ಅಹ್ಮದ್ ಥೋಕರ್, ಹನ್ಜುಲ್ಲಾ ಯಾಕೂಬ್ ಶಾ ಮತ್ತು ಉಬೈದ್ ಅಹ್ಮದ್ ಪದಾರ್ ಎಂದು ಗುರುತಿಸಲಾಗಿದೆ.
ಇದನ್ನು ಓದಿ: ಡ್ರೋನ್ ಮೂಲಕ ಉಗ್ರರನ್ನು ಸಾಗಿಸಲು ಲಷ್ಕರ್ ಪ್ರಯತ್ನ: ಪಂಜಾಬ್‌ನಲ್ಲಿ ಉಗ್ರನ ಇಳಿಸಿರೋ ದೃಶ್ಯ ಸೆರೆ!
ರಜೌರಿಯಲ್ಲೂ ಓರ್ವ ಉಗ್ರ ಬಲಿ:
ಶುಕ್ರವಾರ ರಜೌರಿಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ಉಗ್ರ ಬಲಿಯಾಗಿದ್ದಾನೆ. ಬಳಿಕ ಆತನಿಂದ ಎಕೆ-47 ರೈಫಲ್, 3 ಮ್ಯಾಗಜಿನ್, 3 ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯ ಬಳಿ ಕ್ಯಾತೆ ತೆಗೆದಿರುವ ಪಾಕಿಸ್ತಾನ ಸೇನಾ ಪಡೆಗಳು, ರಾತ್ರಿ ಸತತ 7 ಗಂಟೆಗಳ ಕಾಲ ಶೆಲ್ ಮತ್ತು ಗುಂಡಿನ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಕರ್ನಾಟಕ ಮೂಲದ ಯೋಧ ಬಸವರಾಜ್ ಸೇರಿದಂತೆ ಇಬ್ಬರು ಬಿಎಸ್‌ಎಫ್ ಯೋಧರು ಮತ್ತು ರಜನಿ ದೇವಿ ಎಂಬ ಓರ್ವ ಮಹಿಳೆಗೆ ಗಾಯಗಳಾಗಿವೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಯಾವುದೇ ಸಮಯದಲ್ಲಿ ಚುನಾವಣೆಗೆ ಸಿದ್ಧ: ಕೇಂದ್ರ ಸರ್ಕಾರ
ಈ ಕುರಿತು ಮಾಹಿತಿ ನೀಡಿದ್ದ ಭಾರತೀಯ ಸೇನೆ, ‘ಗುರುವಾರ ರಾತ್ರಿ 9.15ರ ವೇಳೆಗೆ ಪಾಕ್ ರೇಂಜರ್ಸ್‌ಗಳು ಭಾರತದ ಅರ್ನಿರ್ಯಾ ಪ್ರದೇಶಕ್ಕೆ ಹೊಂದಿಕೊಂಡ ಅಂತಾರಾಷ್ಟ್ರೀಯ ಗಡಿ ಪ್ರದೇಶದ ಸೇನಾ ಪೋಸ್ಟ್‌ಗಳನ್ನು ಗುರಿಯಾಗಿಸಿ ಶೆಲ್ ದಾಳಿ ನಡೆಸಿದರು. ಈ ವೇಳೆ ಕೆಲವು ಶೆಲ್‌ಗಳು ಜನವಸತಿ ಪ್ರದೇಶಗಳಿಗೂ ತಲುಪಿ ರಜನಿ ದೇವಿ ಎಂಬ ಮಹಿಳೆ ಗಾಯಗೊಂಡಿದ್ದಾಳೆ’ ಎಂದಿದ್ದರು.
ಇದನ್ನೂ ಓದಿ: ಪಾಕ್ ದಾಳಿಯಲ್ಲಿ ಕರ್ನಾಟಕದ ಯೋಧನಿಗೆ ತೀವ್ರ ಗಾಯ: ಸತತ 7 ತಾಸು ಅಪ್ರಚೋದಿತ ದಾಳಿ ನಡೆಸಿದ ಪಾಕ್ ಸೇನೆ