1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಘೋಷಿಸಿದ್ದ ತುರ್ತು ಪರಿಸ್ಥಿತಿ ದೇಶದ ರಾಜಕೀಯ ಪುಟಗಳಲ್ಲಿ ಪ್ರಮುಖ ಘಟನೆಯಾಗಿ ದಾಖಲಾಗಿದೆ. ಬರೋಬ್ಬರಿ 21 ತಿಂಗಳುಗಳ ಕಾಲ ಅಸ್ತಿತ್ವದಲ್ಲಿದ್ದ ತುರ್ತು ಪರಿಸ್ಥಿತಿ ಘೋಷಣೆಯಾಗಿ ಇಂದಿಗೆ 45 ವರ್ಷಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯ ಘೋಷಣೆಯ ಹಿಂದಿನ ಕಾರಣ, ತುರ್ತುಸ್ಥಿತಿ ವೇಳೆಯ ದಿನಗಳು ಹೇಗಿದ್ದವು ಎಂಬ ಇತ್ಯಾದಿ ಕುತೂಹಲಕಾರಿ ಮಾಹಿತಿಯನ್ನು ಇಲ್ಲಿ ಸವಿಸ್ತಾರವವಾಗಿ ನೀಡಲಾಗಿದೆ.
ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದು ಏಕೆ?
1971ರ ಮಹಾ ಚುನಾವಣೆಗಳಲ್ಲಿ ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷ ಭಾರೀ ಪ್ರಮಾಣದಲ್ಲಿ ಚುನಾವಣಾ ಅಕ್ರಮದಲ್ಲಿ ತೊಡಗಿತ್ತು ಎಂದು ಆರೋಪಿಸಿ ವಿರೋಧ ಪಕ್ಷಗಳು ಸಣ್ಣಪುಟ್ಟಪ್ರತಿಭಟನೆ ನಡೆಸುತ್ತಿದ್ದವು. ಈ ನಡುವೆ, 1971ರ ಚುನಾವಣೆಗಳಲ್ಲಿ ಇಂದಿರಾ ಗಾಂಧಿ ಎದುರು ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಲ್ಲಿ ಸೋಲನುಭವಿಸಿದ್ದ ಜನತಾ ಪಾರ್ಟಿ ಅಭ್ಯರ್ಥಿ ರಾಜ ನಾರಾಯಣ್ ಅವರು, ಇಂದಿರಾ ಅವರು ಅಧಿಕಾರದ ದುರುಪಯೋಗ ಮಾಡಿಕೊಂಡು, ಚುನಾವಣೆಯಲ್ಲಿ ಜಯಗಳಿಸಿದ್ದಾರೆ ಎಂದು ಅಲಹಾಬಾದ್ ಹೈಕೋರ್ಟ್ ಮೊರೆಹೋಗಿದ್ದರು. ನಾಲ್ಕು ವರ್ಷ ವಿಚಾರಣೆಯ ಬಳಿಕ, 1975ರ ಜೂನ್ 12ರಂದು ನ್ಯಾಯಾಲಯವು ಪ್ರಧಾನಿಯನ್ನು ತಪ್ಪಿತಸ್ಥೆ ಎಂದು ಘೋಷಿಸಿ, ಇಂದಿರಾ ಆಯ್ಕೆಯನ್ನೇ ರದ್ದುಗೊಳಿಸಿತ್ತಲ್ಲದೆ, ಅಕ್ರಮ ಎಸಗಿದ್ದಕ್ಕಾಗಿ 6 ವರ್ಷಗಳ ಕಾಲ ಚುನಾವಣೆಗೇ ಸ್ಪರ್ಧಿಸದಂತೆಯೂ ನಿರ್ಬಂಧಿಸಿತು. ಕಾಂಗ್ರೆಸ್ ಆಳ್ವಿಕೆಯಿದ್ದ ಉತ್ತರ ಪ್ರದೇಶದ ಸರ್ಕಾರ ಅಧಿಕಾರವನ್ನು ದುರುಪಯೋಗ ಮಾಡಿದ್ದು ಸಾಬೀತಾಗಿತ್ತು. ತೀರ್ಪು ಹೊರ ಬಿದ್ದ ಬಳಿಕ, ಜಯಪ್ರಕಾಶ್ ನಾರಾಯಣ್, ರಾಜ ನಾರಾಯಣ್ ಮತ್ತು ಮೊರಾರ್ಜಿ ದೇಸಾಯಿ ಮುಂತಾದ ನಾಯಕರೆಲ್ಲರೂ ನೇತೃತ್ವ ವಹಿಸಿ ಪ್ರತಿಭಟನೆ ತೀವ್ರಗೊಳಿಸಿದ್ದರು.
undefined
ಎಮರ್ಜೆನ್ಸಿಗೆ ಸಲಹೆ ನೀಡಿದ್ದು ರೇ
ಈ ಘಟನೆ ಬೆನ್ನಲ್ಲೇ ಇಂದಿರಾ ಗಾಂಧಿ ಅವರ ನಂಬಿಕಸ್ಥ ಆಪ್ತ ಸಿದ್ಧಾರ್ಥ ಶಂಕರ್ ರೇ (ಪಶ್ಚಿಮ ಬಂಗಾಳದ ಅಂದಿನ ಮುಖ್ಯಮಂತ್ರಿ) ಅವರಿಗೆ ತೀರ್ಪಿನಲ್ಲಿನ ಲೋಪದೋಷ ಪತ್ತೆ ಹಚ್ಚುವಂತೆ ಸೂಚಿಸಲಾಗಿತ್ತು. 1975 ಜೂನ್ 25, ಸಂಜೆ 3.30ರ ಸಮಯ ಭಾರತ ಮತ್ತು ಅಮೆರಿಕ ಸಂವಿಧಾನವನ್ನು ಇಡೀ ಅರ್ಧ ದಿನ ಓದಿದ ರೇ ಕೊನೆಗೂ ‘ಲೋಪದೋಷ’ ಕಂಡು ಹಿಡಿದಿದ್ದರು. ಮತ್ತು ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಬೇಕೆಂಬ ಸಲಹೆ ನೀಡಿದರು.
ಲಾಕ್‌ಡೌನ್ ನಿರ್ಬಂಧವೇ ಕಹಿಯಾಗಿದ್ದ ನಮಗೆ, 1975ರ ತುರ್ತು ಪರಿಸ್ಥಿತಿ ಊಹಿಸಲು ಸಾಧ್ಯವೇ?
ವಿಪಕ್ಷ ನಾಯಕರೆಲ್ಲಾ ಜೈಲಿಗೆ
ಆಪ್ತ ಸಿದ್ಧಾರ್ಥ ಶಂಕರ ರೇ ಅವರು ಸಲಹೆ ನೀಡಿದ್ದೇ ತಡ ಇಂದಿರಾ ಕಣ್ಣರಳಿಸಿದರು, ರಾಷ್ಟ್ರಪತಿ ಫಕ್ರುದ್ದೀನ್ ಆಲಿ ಅಹ್ಮದ್ ಸಹಿ ಪಡೆಯಲು ಅಧಿಕೃತ ದಾಖಲೆ ಸಿದ್ಧಪಡಿಸಲೂ ಸಮಯವಿರಲಿಲ್ಲ. ಅಂತೂ ಅದೇ ದಿನ ಸಂಜೆ 5.30ರ ವೇಳೆಗೆ ಇಂದಿರಾ ಗಾಂಧಿ ಮತ್ತು ರೇ ರಾಷ್ಟ್ರಪತಿ ನಿವಾಸಕ್ಕೆ ತೆರಳಿ ನಿರೀಕ್ಷೆಯಂತೆಯೇ ಅಧ್ಯಕ್ಷರ ಸಹಿ ಪಡೆದರು. ಇಂದಿರಾ ಮನೆಗೆ ಹಿಂದಿರುಗುವಷ್ಟರಲ್ಲಿ ಅವರ ಪಡೆ, ವಿರೋಧ ಪಕ್ಷಗಳ ನಾಯಕರ ಬಂಧನಕ್ಕೆ ಅರೆಸ್ಟ್ ವಾರೆಂಟ್ ಪಟ್ಟಿಯನ್ನೂ ಸಿದ್ಧಪಡಿಸಿತ್ತು. ಅದೇ ದಿನ ರಾತ್ರಿ ಅರೆಸ್ಟ್ ವಾರೆಂಟ್ ಕೂಡ ಹೊರಬಿತ್ತು. ಅಪರಾತ್ರಿ 2 ಗಂಟೆ ವೇಳೆಗೆ ಬಹುತೇಕ ವಿಪಕ್ಷ ನಾಯಕರು ಜೈಲಿನಲ್ಲಿದ್ದರು. ಈ ನಡುವೆ, ಅಪರಾತ್ರಿ 3 ಗಂಟೆವರೆಗೂ ತುರ್ತುಸ್ಥಿತಿ ಭಾಷಣದ ಕರಡು ಸಿದ್ಧಪಡಿಸಿ ಇಂದಿರಾ ಸಣ್ಣ ನಿದ್ರೆಗೆ ಹೋಗಿದ್ದರು. ಜೂನ್ 26ರ ಬೆಳಿಗ್ಗೆ 7 ಗಂಟೆ ಇಂದಿರಾ ಗಾಂಧಿ ಆಲ್ ಇಂಡಿಯಾ ರೇಡಿಯೋ ಮುಖಾಂತರ ತುರ್ತು ಪರಿಸ್ಥಿತಿ ಹೇರಿಕೆಯ ಅಧಿಕೃತ ಘೋಷಣೆ ಮಾಡಿದರು. ಸರ್ಕಾರದ ವಿರುದ್ಧ ಆಳವಾದ ಮತ್ತು ವ್ಯಾಪಕವಾದ ಪಿತೂರಿ ನಡೆಯುತ್ತಿದೆ. ಆಂತರಿಕ ಕ್ಷೋಭೆಗಳಿಂದ ರಾಷ್ಟ್ರವನ್ನು ರಕ್ಷಿಸಲು ತುರ್ತುಪರಿಸ್ಥಿತಿ ಅನಿವಾರ‍್ಯ ಎಂದು ಹೇಳುವ ಮೂಲಕ ಜನರಿಗೆ ಮನವರಿಕೆ ಮಾಡಲು ಯತ್ನಿಸಿದರು.
ಮಾಧ್ಯಮಗಳಿಗೆ ಮೂಗುದಾರ
ತುರ್ತು ಪರಿಸ್ಥಿತಿ ಘೋಷಣೆಯಾಗುತ್ತಿದ್ದಂತೆಯೇ ಮಾಧ್ಯಮವನ್ನೂ ಸೆನ್ಸಾರ್‌ಗೆ ಒಳಪಡಿಸಲಾಯ್ತು. ಎಲ್ಲಾ ವರದಿಗಳನ್ನು ಸರ್ಕಾರದ ಆದೇಶದ ಬಳಿಕವಷ್ಟೇ ಪ್ರಕಟಿಸಬೇಕಿತ್ತು. ತುರ್ತುಪರಿಸ್ಥಿತಿ ವಿರುದ್ಧದ ಯಾವುದೇ ಬರಹ ಪ್ರಕಟಗೊಂಡರೆ ಸುದ್ದಿ ಸಂಪಾದಕರು ಜೈಲಿಗೇ ಹೋಗಬೇಕಿತ್ತು. ಹೆಚ್ಚಿನ ಪತ್ರಿಕೆಗಳು ಸರ್ಕಾರ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತದೆಂಬ ಭಯದಲ್ಲಿ ತಟಸ್ಥ ನೀತಿಯನ್ನು ಹೊಂದಿದ್ದವು. ಆದಾಗ್ಯೂ ಸರ್ಕಾರದ ವಿರುದ್ಧ ವಿಭಿನ್ನ ರೀತಿಯಲ್ಲಿ ಸಂಪಾದಕರು ಪ್ರತಿಭಟಿಸಲು ಆರಂಭಿಸಿದರು. ಇಂಡಿಯನ್ ಎಕ್ಸ್‌ಪ್ರೆಸ್ ಸಂಪಾದಕೀಯದ ಸ್ಥಳವನ್ನು ಖಾಲಿ ಬಿಟ್ಟು ಸರ್ಕಾರದ ವಿರುದ್ಧ ಪ್ರತಿಭಟನೆ ದಾಖಲಿಸಿತು. ಮಾಧ್ಯಮದ ಮೇಲಿನ ಸೆನ್ಸಾರ್‌ಶಿಪ್ ಕುರಿತು ದೊಡ್ಡ ಮಟ್ಟದಲ್ಲಿ ವದಂತಿ ಹಬ್ಬಿತು. ಅದನ್ನು ಹತ್ತಿಕ್ಕಲು ಇಂದಿರಾ ಗಾಂಧಿ ಸರ್ವಾಧಿಕಾರಿ ಧೋರಣೆ ತಾಳಿದರು. ಜನರಿಗೆ ಸುದ್ದಿ ತಲುಪಿಸಲು ಸರ್ಕಾರದಿಂದಲೇ ಪ್ರಾಯೋಜಿತಗೊಂಡ ವಿಡಿಯೋಗಳನ್ನು ಟಿವಿಯಲ್ಲಿ ಪ್ರಸಾರ ಮಾಡಲು ಆರಂಭಿಸಿದರು.
ವಿಧಿಯ ಕೈವಾಡ ಆ ವರ್ಷ 2 ದುರಂತ ನಡೆಯಿತು; ಶಾಸ್ತ್ರಿ ನಿಧನರಾದರು, ಇಂದಿರಾ ಪ್ರಧಾನಿಯಾದರು!
ಜೈಲಲ್ಲಿ ಜಾಗ ಇಲ್ಲದೆ ಕಂಬಕ್ಕೆ ಕಟ್ಟಿಹಾಕಿದರು!
ಆಂತರಿಕ ಭದ್ರತಾ ಕಾಯ್ದೆ (ಮಿಸಾ)ಯಡಿ ಎಲ್ಲಾ ರೀತಿಯ ಧರಣಿ, ಸತ್ಯಾಗ್ರಹ, ಪ್ರತಿಭಟನೆಗಳನ್ನು ನಿಗ್ರಹಿಸಲಾಯಿತು. ಸಾಮಾನ್ಯರು ಜಗಳವಾಡಿಕೊಂಡರೂ, ತುರ್ತು ಪರಿಸ್ಥಿತಿ ಬಗ್ಗೆ ಕ್ಷುಲ್ಲಕ ಟೀಕೆ ಮಾಡಿದರೂ ಸಹ ಇಂದಿರಾ ಸರ್ಕಾರ ಜೈಲಿಗೆ ಅಟ್ಟುತ್ತಿತ್ತು. ಪರಿಣಾಮ ವೈಯಕ್ತಿಕ ಮತ್ತು ರಾಜಕೀಯ ದ್ವೇಷದಿಂದಾಗಿ ಹಲವು ಬಾರಿ ಮಿಸಾ ಕಾಯ್ದೆ ದುರುಪಯೋಗವಾಯಿತು. ಹೀಗೆ ವಿನಾಕಾರಣ ಬಂಧನದಿಂದಾಗಿ ಜೈಲುಗಳೇ ಭರ್ತಿಯಾದಾಗ ಕಂಬಗಳಿಗೇ ಹಗ್ಗ ಹಾಕಿ ಜನರನ್ನು ಕಟ್ಟಲಾರಂಭಿಸಿದರು. ಮುಗ್ಧ ಜನಸಾಮಾನ್ಯರು ಕ್ಷುಲ್ಲಕ ಕಾರಣಗಳಿಂದಾಗಿ ಹೇಗೆ ಜೈಲು ಸೇರಿದರು ಎಂದು ಪ್ರಮುಖ ಸಿನಿಮಾ ನಿರ್ಮಾಪಕರೊಬ್ಬರು 1978ರಲ್ಲಿ ‘ಜಮೀರ್ ಕೆ ಬಂದಿ’ ಎಂಬ ಸಾಕ್ಷ್ಯಚಿತ್ರವನ್ನೇ ನಿರ್ಮಿಸಿದ್ದರು.
ಸಿಖ್ ವೇಷಧಾರಿಯಾಗಿದ್ದ ಮೋದಿ!
ತುರ್ತುಪರಿಸ್ಥಿತಿ ರಾಜಮನೆತನಗಳನ್ನೂ ಬಿಟ್ಟಿರಲಿಲ್ಲ. ರಾಜಮಾತಾ ವಿಜಯರಾಜೇ ಸಿಂಧಿಯಾ ಮತ್ತು ಮಹಾರಾಣಿ ಗಾಯತ್ರಿ ದೇವಿ ಅವರನ್ನೂ ಸಹ ಜೈಲಿಗಟ್ಟಲಾಗಿತ್ತು. ಆರ್‌ಎಸ್‌ಎಸ್‌ನಂಥ ಸಂಘಟನೆಗಳನ್ನು ನಿಷೇಧಿಸಿ, ಪ್ರಮುಖ ನಾಯಕರನ್ನೆಲ್ಲಾ ಬಂಧಿಸಲಾಗಿತ್ತು. ಆದಾಗ್ಯೂ ಜನರಿಗೆ ವಾಸ್ತವಿಕ ಸುದ್ದಿ ನೀಡುತ್ತಾ, ಅರಿವು ಮೂಡಿಸುತ್ತಾ ತಳಮಟ್ಟದಲ್ಲಿ ಒಂದಿಷ್ಟುಜನ ಕೆಲಸ ಮಾಡುತ್ತಿದ್ದರು. ಆಗ ಯುವಕರಾಗಿದ್ದ ಈಗಿನ ಪ್ರಧಾನಿ ನರೇಂದ್ರ ಮೋದಿ ಮತ್ತು ಇಂದಿರಾ ಗಾಂಧಿಯ ಪ್ರಮುಖ ಟೀಕಾಕಾರರಾಗಿದ್ದ ಡಾ.ಸುಬ್ರಮಣಿಯನ್ ಸ್ವಾಮಿ ಸಹ ಬಂಧನದಿಂದ ತಪ್ಪಿಸಿಕೊಳ್ಳಲು ಸಿಖ್ ವೇಷಧಾರಿಗಳಾಗಿ, ಸಂದೇಶ ಸಾರುವವರಂತೆ ಕಾಣಿಸಿಕೊಂಡಿದ್ದರು.
ಇಂದಿರಾ ನಂತರ ನಿರ್ಮಲಾ: ಬಜೆಟ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು
ಅತ್ತ ಸಂಜಯ್ ಗಾಂಧಿ: ರಾಜಕೀಯ ಬೆಳವಣಿಗೆ
1970ರ ದಶಕದ ಆರಂಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಇಂದಿರಾ ಗಾಂಧಿಯವರ ಪ್ರಾಬಲ್ಯ ಮೇಲುಗೈ ಸಾಧಿಸಿದ್ದರೂ, ಅತ್ತ ಅವರ ಪುತ್ರ ಸಂಜಯ್ ಗಾಂಧಿ ತಮ್ಮ ರಾಜಕೀಯ ಪ್ರವೇಶಕ್ಕೆ ಹಾದಿ ರೂಪಿಸುತ್ತಿದ್ದರು. ರಾಜಕೀಯದಲ್ಲಿ ಅವರ ಮೊದಲ ಕೆಲಸ, ‘ಮಾರುತಿ ಕಾರು ಯೋಜನೆ’. ಯಾವುದೇ ಅನುಭವ ಇಲ್ಲದಿದ್ದರೂ ಕಂಪನಿಯ ಮುಖ್ಯಸ್ಥರಾಗಿ ಅವರನ್ನು ನೇಮಿಸಲಾಯಿತು. ಅದರಲ್ಲಿ ಅವರು ತಮ್ಮ ರಾಜಕೀಯ ಸ್ಥಾನವನ್ನು ಬಳಸಿಪಡಿಸಿಕೊಂಡು, ಭೂಮಿಯನ್ನು ಕಸಿದುಕೊಳ್ಳಲು ಮತ್ತು ಸಂಬಂಧಿಕರನ್ನು ಕಂಪನಿಯ ವ್ಯವಸ್ಥಾಪಕರಾಗಿ ನೇಮಿಸಲು ಬಳಸಿಕೊಂಡರು ಎನ್ನಲಾಗಿದೆ. 1970 ಮತ್ತು ತುರ್ತು ಪರಿಸ್ಥಿತಿ ವೇಳೆ ಇಂದಿರಾ ಗಾಂಧಿಯವರ ನಿರ್ಧಾರಗಳಿಂದ ಸಂಜಯ ಗಾಂಧಿ ಸಾಕಷ್ಟುಪ್ರಭಾವಿತರಾಗಿದ್ದರು. ಹಾಗಾಗಿ ಸ್ವಾಭಾವಿಕವಾಗಿ ಇಂದಿರಾ ಗಾಂಧಿ ಉತ್ತರಾಧಿಕಾರಿ ಸಂಜಯ್ ಗಾಂಧಿ ಎಂದೇ ಬಿಂಬಿತರಾಗಿದ್ದರು. ಹಲವಾರು ಬಾರಿ ಇಂದಿರಾ ಗಾಂಧಿಯವರನ್ನೂ ಮೂಲೆಗೆ ಸರಿಸಿ ಸರ್ಕಾರದ ನಿರ್ಣಯಗಳಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಕುಲದೀಪ್ ನಾಯರ್ ಅವರೊಂದಿಗಿನ ಸಂದರ್ಶನದಲ್ಲಿ, ಸಂಜಯ್ ಅವರು ಅನಿರ್ದಿಷ್ಟಾವಧಿವರೆಗೆ ತುರ್ತು ಪರಿಸ್ಥಿತಿಯನ್ನು ವಿಸ್ತರಿಸಲು, ಪ್ರಜಾಪ್ರಭುತ್ವ ಸಂಸ್ಥೆಗಳನ್ನು ತೊಡೆದುಹಾಕಲು ಮತ್ತು ಇಂದಿರಾ ಅವರ ಸರ್ವಾಧಿಕಾರವನ್ನು ಶಾಶ್ವತವಾಗಿ ಸ್ಥಾಪಿಸಲು ಯೋಜಿಸಿದ್ದಾಗಿ ಒಪ್ಪಿಕೊಂಡಿದ್ದರು.
ಕಾಂಗ್ರೆಸ್‌ನಲ್ಲಿ ಎರಡು ಶಕ್ತಿ ಕೇಂದ್ರದ ಉದಯ
ಸಂಜಯ್ ಬಣ ರಚನೆಯಾಗಿದ್ದ ಹೊರತಾಗಿಯೂ ಪಕ್ಷದ ಕಾರ‍್ಯಕರ್ತರ ನಿಷ್ಠೆಯು ಹೈಕಮಾಂಡ್ (ಇಂದಿರಾ ಗಾಂಧಿ) ಕಡೆಗೆ ಇತ್ತು. ಇದು ಆಂತರಿಕವಾಗಿ ಒಂದು ಹೋರಾಟ ಮತ್ತು ಎರಡು ಶಕ್ತಿ ಕೇಂದ್ರವನ್ನು ರಚಿಸಿದಂತಾಗಿತ್ತು. ಇದರಿಂದಾಗಿ ಸಂಜಯ್ ಗಾಂಧಿ ತಮ್ಮದೇ ಆದ ನಿಷ್ಠಾವಂತ ಪಡೆಯೊಂದನ್ನು ಕಾಂಗ್ರೆಸ್ ಯುವ ಘಟಕದ ರೂಪದಲ್ಲಿ ಪೋಷಿಸಲು ಕಾರಣವಾಯಿತು. ಇದು ತುರ್ತು ಪರಿಸ್ಥಿತಿ ವೇಳೆ ‘ರೌಡಿ ಕಾಂಗ್ರೆಸ್’ ಎಂದೇ ಖ್ಯಾತವಾಯಿತು. ಅಧಿಕಾರವನ್ನು ಸವಿಯುತ್ತಿದ್ದ (ಹೊಣೆಗಾರಿಕೆ ಇಲ್ಲದೆ) ಸಂಜಯ್ ಗಾಂಧಿಗೆ ಇದರಿಂದ ಇಂದಿರಾ ನೇತೃತ್ವದ ಕಾಂಗ್ರೆಸ್ ಅನ್ನು ಎದುರಿಸಲು ಮತ್ತು ಪೀಡಿಸಲು ಸಾಧ್ಯವಾಯಿತು.
6 ತಿಂಗಳಲ್ಲಿ ಕಾಂಗ್ರೆಸ್‌ಗೆ 60 ಲಕ್ಷ ಸದಸ್ಯರು ಸೇರ್ಪಡೆ
ಇದೇ ವೇಳೆ ಯುವ ಕಾಂಗ್ರೆಸ್ ಬೆಳವಣಿಗೆಗೆ ರಾಷ್ಟಾ್ರದ್ಯಂತ ನೇಮಕಾತಿಗೆ ಸಂಜಯ ಗಾಂಧಿ ಕರೆ ನೀಡಿದರು. ಯಾವುದೇ ಶುಲ್ಕ ಇಲ್ಲದೆ ದೇಶದ ಯಾವುದೇ ಭಾಗದಿಂದಲೂ ಯುವ ಕಾಂಗ್ರೆಸ್ ಘಟಕದ ಸದಸ್ಯತ್ವ ಪಡೆಯಬಹುದು ಎಂದು ಘೋಷಿಸಿದರು. ಪರಿಣಾಮ ಕೆಲವೇ ತಿಂಗಳುಗಳಲ್ಲಿ ಯುವ ಕಾಂಗ್ರೆಸ್ ಸದಸ್ಯರ ಸಂಖ್ಯೆ 60 ಲಕ್ಷಕ್ಕೆ ತಲುಪಿತ್ತು!
ಬರೋಬ್ಬರಿ 21 ತಿಂಗಳು ಅಸ್ತಿತ್ವದಲ್ಲಿತ್ತು ತುರ್ತು ಪರಿಸ್ಥಿತಿ
1975 ಜೂನ್ 25ರಂದು ಆಂತರಿಕ ಕ್ಷೋಭೆಯಿಂದ ದೇಶದ ಆಂತರಿಕ ಭದ್ರತೆಗೆ ಅಪಾಯವಿದೆ ಎಂದು ಇಂದಿರಾ ತುರ್ತು ಪರಿಸ್ಥಿತಿ ಘೋಷಣೆ ಮಾಡಿದರು. ಅದೇನು ಒಂದೋ ಎರಡೋ ತಿಂಗಳಿಗೆ ಮುಗಿದ ತುರ್ತು ಪರಿಸ್ಥಿತಿ ಅಲ್ಲ. 1975 ಜೂನ್ 26ರಿಂದ 1977 ಮಾಚ್‌ರ್ 21ರ ವರೆಗೆ ಬರೋಬ್ಬರಿ 21 ತಿಂಗಳು ತುರ್ತು ಪರಿಸ್ಥಿತಿ ಅಸ್ತಿತ್ವದಲ್ಲಿ ಇತ್ತು. 1977ರಲ್ಲಿ ಪುನಃ ಚುನಾವಣೆಗಳನ್ನು ಘೋಷಿಸುವವರೆಗೂ, ಸಂವಿಧಾನದ ನಿಯಮದ ಪ್ರಕಾರ, ಪ್ರತಿ ಆರು ತಿಂಗಳಿಗೊಮ್ಮೆ ಪ್ರಧಾನಿ ಪ್ರಸ್ತಾಪದನ್ವಯ ರಾಷ್ಟ್ರಪತಿ ಅವರು ತುರ್ತು ಪರಿಸ್ಥಿತಿ ಮುಂದುವರಿಸಲು ಅನುಮತಿ ಕೊಡುತ್ತಲೇ ಹೋದರು. ಅಂತಿಮವಾಗಿ ಇಂದಿರಾ ಗಾಂಧಿ ಅವರು ಮಾಚ್‌ರ್ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲು ತೀರ್ಮಾನಿಸಿದರು. ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸಲಾಯಿತು. 1977ರ ಮಾಚ್‌ರ್ 23ರಂದು ತುರ್ತು ಪರಿಸ್ಥಿತಿಯು ಅಧಿಕೃತವಾಗಿ ಕೊನೆಗೊಂಡಿತು.