ಹಂದಿ ಮಾಂಸ ಸಂಬಂಧಿ ಉತ್ಪನ್ನಗಳ ಅಂತಾರಾಜ್ಯ ಮಾರಾಟ ಹಾಗೂ ಸಾಗಾಣಿಕೆ ಮೇಲೆ ನಿರ್ಬಂಧ ಹೇರಲಾಗಿದೆ.
ತಿರುವನಂತಪುರ(ಜು.23): ಕೋವಿಡ್ ಹಾಗೂ ಮಂಕಿಪಾಕ್ಸ್ ಪತ್ತೆಯಾಗಿದ್ದ ಕೇರಳದಲ್ಲಿ ಈಗ ಹಂದಿಜ್ವರ ಪತ್ತೆಯಾಗಿದೆ. ವಯನಾಡಿನಲ್ಲಿರುವ 2 ಹಂದಿ ಸಾಕಣೆ ಕೇಂದ್ರಗಳಲ್ಲಿ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿದೆ. ಈ ರೋಗವು ಹಂದಿಗಳಲ್ಲಿ ಸಾಂಕ್ರಾಮಿಕವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಸುಮಾರು 300 ಹಂದಿಗಳನ್ನು ಕೊಲ್ಲಲು ಆದೇಶಿಸಿದೆ. ರಾಜ್ಯ ಪಶುಸಂಗೋಪನಾ ಸಚಿವೆ ಜೆ. ಚಿಂಚು ರಾಣಿ ಹಂದಿ ಜ್ವರವನ್ನು ಹರಡದಂತೆ ತಡೆಯಲು ಎಲ್ಲ ಹಂದಿ ಸಾಕಣೆ ಕೇಂದ್ರಗಳು ಜೈವಿಕ ಭದ್ರತೆ ಹಾಗೂ ತ್ಯಾಜ್ಯ ವಿಲೇವಾರಿ ಕಾರ್ಯವಿಧಾನವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಆದೇಶಿಸಿದ್ದಾರೆ. ಅಲ್ಲದೇ ಹಂದಿ, ಹಂದಿ ಮಾಂಸ ಸಂಬಂಧಿ ಉತ್ಪನ್ನಗಳ ಅಂತಾರಾಜ್ಯ ಮಾರಾಟ ಹಾಗೂ ಸಾಗಾಣಿಕೆ ಮೇಲೆ ನಿರ್ಬಂಧ ಹೇರಲಾಗಿದೆ.
ಮನಂತವಾಡಿ ಪ್ರದೇಶದ ಹಂದಿ ಸಾಕಾಣಿಕಾ ಕೇಂದ್ರಗಳಲ್ಲಿ ಇದ್ದಕ್ಕಿದ್ದಂತೇ 23 ಹಂದಿಗಳು ಮೃತಪಟ್ಟಿದ್ದವು. ಈ ಹಿನ್ನೆಲೆಯಲ್ಲಿ ಹಂದಿಗಳ ಮಾದರಿಗಳನ್ನು ಪರೀಕ್ಷೆಗಾಗಿ ಭೋಪಾಲ್‌ನಲ್ಲಿರುವ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಎನಿಮಲ್ ಡಿಸೀಸ್‌ಗೆ ಕಳಿಸಲಾಗಿದ್ದು, ಹಂದಿಗಳಿಗೆ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದೆ. ಹೀಗಾಗಿ ಸುಮಾರು 300 ಹಂದಿಗಳನ್ನು ಕೊಂದು ಭೂಮಿಯಲ್ಲಿ ಆಳವಾಗಿ ಹೂಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ಇನ್ನು ಯಾವುದೇ ಭಾಗಗಳಲ್ಲಿ ಹಂದಿಗಳ ಅಸಹಜ ಸಾವು ಕಂಡುಬಂದಲ್ಲಿ ಕೂಡಲೇ ಪಶುವೈದ್ಯರಿಗೆ ಸೂಚಿಸಬೇಕು ಎಂದು ಹೇಳಿದ್ದಾರೆ.
ಭಾರತದಲ್ಲಿ 3ನೇ ಮಂಕಿಪಾಕ್ಸ್ ಪ್ರಕರಣ ದೃಢ, ಕೇರಳದಲ್ಲಿ ಹೈ ಅಲರ್ಟ್!
ಕೀನ್ಯಾದಲ್ಲಿ ಮೊದಲ ಕೇಸು:
ಆಫ್ರಿಕನ್ ಹಂದಿ ಜ್ವರ ಸಾಂಕ್ರಾಮಿಕ ರೋಗವಾಗಿದ್ದು, ಸಾಕು ಹಂದಿಗಳಿಗೆ ಮಾರಣಾಂತಿಕವೆನಿಸಿದೆ. ಇದು ಮೊಟ್ಟಮೊದಲ ಬಾರಿ 1921ರಲ್ಲಿ ಕೀನ್ಯಾದಲ್ಲಿ ಪತ್ತೆಯಾಗಿತ್ತು. ಆದರೆ ಈ ರೋಗ ಹಂದಿಗಳಿಂದ ಮಾನವರಿಗೆ ಹರಡುವುದಿಲ್ಲ.