ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ ಕಾರ್ನಾಡು ಸದಾಶಿವ ರಾಯರು, ಸರ್ವ ಸಂಪತ್ತು ಸಮಾಜಕ್ಕೆ ಅರ್ಪಿಸಿದ ಮಹಾತ್ಮ ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷವಾಗಿ ಸದಾಶಿವರಾಯರ ನೆನಪು
ಸಂದೀಪ್ ವಾಗ್ಲೆ, ಮಂಗಳೂರು.
ಮಂಗಳೂರಿನಲ್ಲಿ ಸುಪ್ರಸಿದ್ಧವಾಗಿರುವ ಕೆ.ಎಸ್. ರಾವ್ ರಸ್ತೆ ಹೆಚ್ಚಿನವರಿಗೆ ಗೊತ್ತು. ಆದರೆ ಈ ಹೆಸರಿನ ಹಿಂದಿನ ವ್ಯಕ್ತಿತ್ವ, ತ್ಯಾಗ, ಸಮರ್ಪಣಾ ಮನೋಭಾವ ಹೊಸ ಪೀಳಿಗೆಯ ಹೆಚ್ಚಿನವರಿಗೆ ಗೊತ್ತಿಲ್ಲ. ಅವರೇ ಕಾರ್ನಾಡು ಸದಾಶಿವ ರಾವ್. ದಕ್ಷಿಣ ಭಾರತ ಗಾಂಧಿ ಎಂದೇ ಹೆಸರಾದವರು. ತನ್ನಿಡೀ ಜೀವನವನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿ, ಸಮಾಜ ಸುಧಾರಣೆಗಾಗಿ, ದೀನ ದಲಿತರ, ಕೆಳವರ್ಗದ ಅಭಿವೃದ್ಧಿಗಾಗಿ ವ್ಯಯಿಸಿದ ಧೀಮಂತ ವ್ಯಕ್ತಿ.
ಈಗಿನ ಕೆಎಸ್ ರಾವ್ ರಸ್ತೆ(K.S.Rao)ಯಲ್ಲೇ ಕಾರ್ನಾಡು ಸದಾಶಿವ ರಾವ್(Karnadu sadashiva rayaru) ಅವರ ಮನೆಯಿತ್ತು. ಆ ಕಾರಣಕ್ಕಾಗಿಯೇ ಈ ರಸ್ತೆಗೆ ಅವರ ಹೆಸರನ್ನೇ ಇಡಲಾಗಿದೆ. ಆದರೆ ಬಿಷಪ್ ಹೌಸ್‌ಗೆ ಹತ್ತಿರದಲ್ಲೇ ಇದ್ದ ಅವರ ಮನೆಯನ್ನು ಉಳಿಸಿಕೊಳ್ಳುವಲ್ಲಿ ಆಡಳಿತ ವಿಫಲವಾಗಿತ್ತು. ಆದರೆ ತನ್ನೆಲ್ಲ ಸಂಪತ್ತನ್ನು ಸಮಾಜಕ್ಕಾಗಿ ಮುಡಿಪಾಗಿಟ್ಟಕಾರ್ನಾಡು ಸದಾಶಿವ ರಾಯರ ಮಾನವ ಪ್ರೀತಿ, ದೇಶದ ಬಗೆಗಿನ ಅಭಿಮಾನ ಮಾತ್ರ ಅಜರಾಮರವಾಗಿದೆ.
ದೇಶಭಕ್ತಿ ಹವಾ: ಇಂದು ಮನೆ ಮನೆಯಲ್ಲಿ ತಿರಂಗಾ ಹಾರಾಟ
ದಕ್ಷಿಣ ಭಾರತ(South India)ದಲ್ಲಿ ಅದರಲ್ಲೂ ಕರ್ನಾಟಕ ಮತ್ತು ಕರಾವಳಿ ಭಾಗದಲ್ಲಿ ಸ್ವಾತಂತ್ರದ ಕಿಚ್ಚನ್ನು ಹಚ್ಚಿದ ಕಾರ್ನಾಡ್ ಸದಾಶಿವ ರಾಯರು ಮೂರು ಬಾರಿ ಜೈಲುವಾಸ ಅನುಭವಿಸಿದವರು. 1881ರಲ್ಲಿ ಮಂಗಳೂರಿ(Mangaluru)ನ ಆಗಿನ ಅತ್ಯಂತ ಶ್ರೀಮಂತ ಮನೆತನದ ಏಕೈಕ ಪುತ್ರ. ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿ(Madras Presidency College)ನಲ್ಲಿ ಕಲಿತು, ಮುಂಬೈನಲ್ಲಿ ವಕೀಲ ಶಿಕ್ಷಣ ಪೂರೈಸಿದರು. ಇದೇ ಸಮಯದಲ್ಲಿ ಕಾಂಗ್ರೆಸ್ ಸಂಘಟನೆಯ ಮೂಲಕ ಗಾಂಧೀಜಿ ನಾಯಕತ್ವದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಕರೆ ನೀಡಲಾಗಿತ್ತು. ಸದಾಶಿವ ರಾಯರು ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು.
ಕರ್ನಾಟಕದಲ್ಲಿ ಹೋರಾಟದ ಕಿಚ್ಚು: 1919ರ ಹೊತ್ತಿಗೆ ಕಾರ್ನಾಡು ಸದಾಶಿವ ರಾಯರು ಸ್ವಾತಂತ್ರ್ಯ ಚಳವಳಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು. ಗಾಂಧೀಜಿಯ ಸತ್ಯಾಗ್ರಹ ಚಳವಳಿಗೆ ಸ್ವಯಂ ಸೇವಕರಾಗಿ ಕರ್ನಾಟಕದಿಂದ ಭಾಗಿಯಾದ ಮೊದಲಿಗರು ಎನ್ನುವ ಖ್ಯಾತಿ ಅವರದ್ದು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ವಿಸ್ತರಿಸುವ ಪ್ರಮುಖ ಜವಾಬ್ದಾರಿ ಅವರಿಗಿತ್ತು. 1919ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಮತ್ತು ರೌಲೆಟ್ ಕಾಯ್ದೆ ವಿರುದ್ಧ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಸತ್ಯಾಗ್ರಹ ನಡೆಸಿದವರು ಕಾರ್ನಾಡ್ ಸದಾಶಿವ ರಾಯರು. ಈ ಹೋರಾಟದ ಫಲವಾಗಿ ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ದೊಡ್ಡ ಮಟ್ಟಕ್ಕೆ ಹೆಚ್ಚಿತು. ಅವರ ಮನೆಗೆ ದೇಶದ ಮಹಾನ್ ನಾಯಕರು ಬಂದು ಹೋರಾಟದ ರೂಪುರೇಷೆ ತಯಾರಿಸುತ್ತಿದ್ದರು.
ಇಂಥ ಹೊತ್ತಿನಲ್ಲೇ 1921ರಲ್ಲಿ ಅವರ ಏಕೈಕ ಪುತ್ರಿ ಕಿರಿಯ ವಯಸ್ಸಿನಲ್ಲೇ ಸಾವನ್ನಪ್ಪಿದರು. ನಂತರದ ದಿನಗಳಲ್ಲಿ ಅವರ ಮಗ ಮತ್ತು ಪತ್ನಿ ಕೂಡ ಸಾವನ್ನಪ್ಪಿದರು. ಇದರಿಂದ ಜರ್ಝರಿತರಾದ ಸದಾಶಿವ ರಾಯರು ಗಾಂಧೀಜಿ ಅವರ ಸಾಬರಮತಿ ಆಶ್ರಮಕ್ಕೆ ತೆರಳಿದರು. ಅದೇ ಸಮಯದಲ್ಲಿ ಕರ್ನಾಟಕದಲ್ಲಿ ಪ್ರವಾಹದಿಂದ ಜನ ತೊಂದರೆಗೆ ಸಿಲುಕಿದ್ದನ್ನು ಕೇಳಿ ಮತ್ತೆ ದಕ್ಷಿಣ ಕನ್ನಡಕ್ಕೆ ಆಗಮಿಸಿ ಪರಿಹಾರ ಕಾರ್ಯದಲ್ಲಿ ತೊಡಗಿದರು. ತಮ್ಮ ಸರ್ವ ಸಂಪತ್ತನ್ನೂ ಜನ ಹಿತಕ್ಕಾಗಿ ವಿನಿಯೋಗಿಸಿದರು.
ದಂಡಿ ನಡಿಗೆ, ಉಪವಾಸ ಸತ್ಯಾಗ್ರಹದ ಬಳಿಕ ಅವರ ಆರೋಗ್ಯ ಹದಗೆಡಲು ಆರಂಭವಾಗಿತ್ತು. 1936ರಲ್ಲಿ ಫೈಜಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ ಅವರಿಗೆ ಜ್ವರ ಬಾಧೆ ಆರಂಭವಾಗಿತ್ತು. ಮುಂಬೈಗೆ ವಾಪಸ್ಸಾದ ಕಾರ್ನಾಡರು 1937 ಜನವರಿ 9ರಂದು ಇಹಲೋಕ ತ್ಯಜಿಸಿದರು. ತನ್ನ ಇಡೀ ಜೀವನವನ್ನೇ ಸ್ವಾತಂತ್ರ್ಯಕ್ಕಾಗಿ ಮೀಸಲಿಟ್ಟಕಾರ್ನಾಡರು, ಎಲ್ಲ ಸಂಪತ್ತನ್ನು ಬಡವರ, ದೀನ, ದಲಿತರ ಏಳಿಗೆಗಾಗಿ ವಿನಿಯೋಗಿಸಿದ್ದರು. ಅವರು ಸಾವನ್ನಪ್ಪಿದಾಗ ಶವಸಂಸ್ಕಾರಕ್ಕೂ ಹಣವಿರಲಿಲ್ಲವಂತೆ.
ಸಮಾಜ ಸುಧಾರಣೆ: ಜಾತಿ ತಾರತಮ್ಯ, ಮೂಢನಂಬಿಕೆ ವಿರುದ್ಧ ಹೋರಾಡಿದ್ದ ಸದಾಶಿವ ರಾವ್, ಕೆಳ ವರ್ಗದವರಿಗೆ ದೇವಸ್ಥಾನ ಪ್ರವೇಶಕ್ಕೆ ಅನುವು ಮಾಡಲು ಪರಿಶ್ರಮಿಸಿದರು. ವಿಧವೆಯರು ಮತ್ತು ಬಡ ಮಹಿಳೆಯರಿಗೆ ಸಹಾಯ ಮಾಡಲು ಮಹಿಳಾ ಸಭೆಯನ್ನು ಸ್ಥಾಪಿಸಿದ್ದರು. ತಿಲಕ್ ವಿದ್ಯಾಲಯ ಹೆಸರಿನಲ್ಲಿ ಮನೆಯಲ್ಲಿ ಶಾಲೆಯನ್ನು ನಿರ್ಮಿಸಿ ಸಮಾಜದ ಎಲ್ಲ ವರ್ಗದ ಜನರಿಗೆ ಮುಕ್ತವಾಗಿ ನೇಯ್ಗೆ ಮತ್ತು ಇತರ ಕರಕುಶಲ ತರಬೇತಿ ನೀಡಿದರು. ಹಿಂದಿ ಭಾಷೆಯನ್ನು ಜನರಿಗೆ ಪರಿಚಯಿಸಿದ್ದರು. ಅವರ ಸಾಮಾಜಿಕ ಕೆಲಸಗಳಿಂದಲೇ ಜನರು ಅವರನ್ನು ಗುರುತಿಸುವಂತಾಗಿದೆ.
Har Ghar Tiranga: ಏಕಾಂಗಿ ವೃದ್ಧನಿಗೆ ಮನೆ ನಿರ್ಮಿಸಿ ಕೊಟ್ಟ ANF ಸಿಬ್ಬಂದಿ
ಮಹಾತ್ಮಾ ಗಾಂಧೀಜಿಯವರು ಕಾರ್ನಾಡರ ಮರಣದ ನಂತರ ಅವರ ಮನೆಗೆ ಬಂದು ಕಾರ್ನಾಡರ ತಾಯಿಯವರನ್ನು ಭೇಟಿ ಮಾಡಿದ್ದರು. ಮಾತ್ರವಲ್ಲದೆ ಅಂತಹ ಸುಪುತ್ರನನ್ನು ಹಡೆದ ಮಹಾಮಾತೆಯಾದ ತಮಗೆ ನಮಸ್ಕರಿಸುತ್ತೇನೆ ಎಂದು ಅವರ ಪಾದಗಳಿಗೆ ಎರಗಿದ್ದರು.