India@75: ಸ್ವತಂತ್ರ್ಯ ಹೋರಾಟಕ್ಕೆ ಶಿಸ್ತಿನ ಸಿಪಾಯಿಗಳ ನೀಡಿದ 'ಹಿಂದೂಸ್ತಾನಿ ಸೇವಾದಳ'

By Suvarna NewsFirst Published Jul 27, 2022, 10:09 AM IST
Highlights

ರಾಷ್ಟ್ರದ ಸ್ವಾತಂತ್ರ್ಯ ಹೋರಾಟ ಹುಬ್ಬಳ್ಳಿಯತ್ತ ತಿರುಗಿ ನೋಡುವಂತೆ ಮಾಡಿದ್ದು ಡಾ.ನಾರಾಯಣ ಸುಬ್ಬರಾವ್‌ ಹರ್ಡೀಕರ ಸ್ಥಾಪಿಸಿದ ‘ಹಿಂದೂಸ್ತಾನಿ ಸೇವಾದಳ’. ಅಸಂಖ್ಯಾತ ಶಿಸ್ತುಬದ್ಧ ಹೋರಾಟಗಾರರನ್ನು ರೂಪಿಸಿದ ಈ ದೇಶಭಕ್ತ ಸಂಘಟನೆ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಮತ್ತಷ್ಟುಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.

ರಾಷ್ಟ್ರದ ಸ್ವಾತಂತ್ರ್ಯ ಹೋರಾಟ ಹುಬ್ಬಳ್ಳಿಯತ್ತ ತಿರುಗಿ ನೋಡುವಂತೆ ಮಾಡಿದ್ದು ಡಾ.ನಾರಾಯಣ ಸುಬ್ಬರಾವ್‌ ಹರ್ಡೀಕರ ಸ್ಥಾಪಿಸಿದ ‘ಹಿಂದೂಸ್ತಾನಿ ಸೇವಾದಳ’. ಅಸಂಖ್ಯಾತ ಶಿಸ್ತುಬದ್ಧ ಹೋರಾಟಗಾರರನ್ನು ರೂಪಿಸಿದ ಈ ದೇಶಭಕ್ತ ಸಂಘಟನೆ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಮತ್ತಷ್ಟುಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.

1923ರ ನಾಗಪುರ ಧ್ವಜ ಸತ್ಯಾಗ್ರಹದಲ್ಲಿ ಬಂಧಿತರಾದ ಡಾ.ಹರ್ಡೀಕರ ಆಗ ಜೈಲಿನಲ್ಲಿದ್ದ ಕೈದಿಗಳ ದುಸ್ಥಿತಿ ಕಂಡು ಸ್ವಯಂಸೇವಾ ಸಂಘಟನೆ ಕಟ್ಟಲು ನಿರ್ಧರಿಸುತ್ತಾರೆ. ಕಾಕಿನಾಡದಲ್ಲಿ ನಡೆದ 38ನೇ ಕಾಂಗ್ರೆಸ್‌ ಸಭೆಯ ಫಲಿತಾಂಶವಾಗಿ ‘ಹಿಂದೂಸ್ತಾನಿ ಸೇವಾದಳ’ ಹೊರ ಹೊಮ್ಮುತ್ತದೆ. 1923ರ ಡಿ.27ರಂದು ಹುಟ್ಟಿದ ಸೇವಾದಳ 8 ವರ್ಷದಲ್ಲಿ ದೇಶವ್ಯಾಪಿಯಾಗಿತ್ತು. ನೆಹರು ಇದರ ಅಧ್ಯಕ್ಷರಾದರೆ, ಕಾರ್ಯದರ್ಶಿಯಾಗಿ ಹರ್ಡೀಕರ ಸಂಘಟನೆ ಮುನ್ನಡೆಸುತ್ತಾರೆ. ಹುಬ್ಬಳ್ಳಿಯಲ್ಲಿ ಸೇವಾದಳದ ಕೇಂದ್ರ ಕಚೇರಿ, ಬಾಗಲಕೋಟೆಯಲ್ಲಿ ಇದರ ವಿದ್ಯಾಪೀಠವಿತ್ತು.

India@75:ನೂರಾರು ಮಂದಿಯ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ಮಂಗಳೂರಿನ ಕೆನರಾ ಶಾಲೆ

ಸೇವಾದಳದ ಪಾತ್ರ:

ಹರ್ಡೀಕರ ದೇಶದ ಅನೇಕ ಹಳ್ಳಿಗಳಿಗೆ ತೆರಳಿ ಸೇವಾದಳ ಹುಟ್ಟು ಹಾಕಿ ಯುವ ಜನಾಂಗದಲ್ಲಿ ಸ್ವಾತಂತ್ರ್ಯದ ಬಗ್ಗೆ ಕಿಚ್ಚು ಮೂಡಿಸಿದರು. ಅವರನ್ನು ಸೇವಾದಳಕ್ಕೆ ಕರೆ ತಂದು ರಾಷ್ಟ್ರಪ್ರೇಮ, ಶಿಸ್ತು, ಸಂಘಟನೆ ಹಾಗೂ ದೈಹಿಕ, ಮಾನಸಿಕವಾಗಿ ಸದೃಢಗೊಳಿಸುವ ಕಾರ್ಯ ಮಾಡಿದರು. 1924ರ ಬೆಳಗಾವಿ ಅಖಿಲ ಭಾರತ ಕಾಂಗ್ರೆಸ್‌ ಸಭೆ, 1930ರ ಉಪ್ಪಿನ ಸತ್ಯಾಗ್ರಹ, 1932ರ ಕಾನೂನು ಭಂಗ ಹೋರಾಟದಲ್ಲೂ ಸೇವಾದಳದ ಪಾತ್ರ ಅಪಾರವಾಗಿತ್ತು. ಸಾಮಾಜಿಕ ಕಾರ್ಯದಲ್ಲೂ ಸಂಘಟನೆ ಸಕ್ರಿಯವಾಗಿತ್ತು.

ಗಾಂಧೀಜಿ ಅಣತಿಯಂತೆ 1931ರ ಆಗಸ್ಟ್‌ನಲ್ಲಿ ಸೇವಾದಳ ಕಾಂಗ್ರೆಸ್‌ನಲ್ಲಿ ಒಂದಾಯಿತು. ಸೇವಾದಳದ ಸ್ತ್ರೀಯರ ವಿಭಾಗವನ್ನು ಕಮಲಾದೇವಿ ಚಟ್ಟೋಪಾಧ್ಯಾಯ, ಉಮಾಬಾಯಿ ಕುಂದಾಪುರ ಮುನ್ನಡೆಸಿದರು. ಸೇವಾದಳ ದಿನದಿಂದ ದಿನಕ್ಕೆ ಬೆಳೆಯುತ್ತಿರುವುದನ್ನು ಸಹಿಸದ ಬ್ರಿಟಿಷ್‌ ಸರ್ಕಾರ 1932ರಲ್ಲಿ ಇದಕ್ಕೆ ನಿರ್ಬಂಧ ವಿಧಿಸಿತ್ತು.

ಸ್ವಾತಂತ್ರ್ಯ ದೊರೆತ ನಂತರ ಸೇವಾದಳ ಒಂದು ಪಕ್ಷಕ್ಕೆ ಸೀಮಿತವಾಗಬಾರದು ಎಂಬ ಉದ್ದೇಶದಿಂದ ಹರ್ಡೀಕರ ಅವರು 1950ರಲ್ಲಿ ಭಾರತೀಯ ಸೇವಾದಳ ಸ್ಥಾಪನೆ ಮಾಡಿದರು.

ಹರ್ಡೀಕರ ಸಂಘಟನೆಗಾಗಿ ದೇಶವ್ಯಾಪಿ ಸುತ್ತಾಡಿದರಾದರೂ ಹುಬ್ಬಳ್ಳಿಯೇ ಅವರ ಪ್ರಮುಖ ಕಾರ್ಯಕ್ಷೇತ್ರವಾಗಿತ್ತು. 1922ರ ಜ.18ರಂದು ಭಗಿನಿ ಮಂಡಳ ಸ್ಥಾಪಿಸಿದರು. ಇದರಡಿ ತಿಲಕ ಕನ್ಯಾಶಾಲೆ ತೆರೆಯಲಾಗಿತ್ತು. ಅಲ್ಲದೆ ಹುಬ್ಬಳ್ಳಿಯಲ್ಲಿ ‘ತಿಲಕ ಗ್ರಂಥ ಸಂಗ್ರಹ’, ವಾರ್ತಾ ಪ್ರಸಾರಕ ಸಂಘ ಶೈಕ್ಷಣಿಕ ಸಂಘಟನೆ ‘ಶಿಕ್ಷಣ ಪರಿಷತ್‌’, ಮಾರ್ಡನ್‌ ಕಮರ್ಷಿಯಲ್‌ ಇನ್‌ಸ್ಟಿಟ್ಯೂಟ್‌ ಸ್ಥಾಪಿಸಿದ್ದರು. ದುರ್ಗದ ಬೈಲು, ಲ್ಯಾಮಿಂಗ್ಟನ್‌ ಹೈಸ್ಕೂಲ್‌ ಇವರ ಕವಾಯತಿನ ಸ್ಥಳವಾಗಿತ್ತು.

India@75:ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ತುಂಬಿದ ಬೆಳಗಾವಿ ಹುದಲಿ ರಾಷ್ಟ್ರೀಯ ಶಾಲೆ

ತಲುಪುವುದು ಹೇಗೆ?

ಹರ್ಡೀಕರ ಅವರು ಕಾರ್ಯಕ್ಷೇತ್ರ ಮಾಡಿಕೊಂಡಿದ್ದ ಹುಬ್ಬಳ್ಳಿಯ ಲ್ಯಾಮಿಂಗ್ಟನ್‌ ಹೈಸ್ಕೂಲ್‌ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಿಂದ 1 ಕಿ.ಮೀ. ಅಂತರದಲ್ಲಿದೆ. ಹುಬ್ಬಳ್ಳಿಗೆ ರಾಜ್ಯದ ಎಲ್ಲ ಮೂಲೆಗಳಿಂದಲೂ ಬಸ್‌, ರೈಲು ವ್ಯವಸ್ಥೆಯಿದೆ. ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನಿಂದ 15 ಕಿ.ಮೀ. ದೂರದಲ್ಲಿರುವ ತಿಳವಳ್ಳಿಯಲ್ಲಿ ಹರ್ಡೀಕರ ಪುತ್ಥಳಿಯಿದ್ದು ಇಲ್ಲಿಗೆ ಬಸ್‌ ವ್ಯವಸ್ಥೆಯಿದೆ. ಇನ್ನು ಹರ್ಡೀಕರ್‌ ಸಮಾಧಿಯಿರುವ ಘಟಪ್ರಭಾ ಬೆಳಗಾವಿಯಿಂದ 70 ಕಿ.ಮೀ. ದೂರವಿದ್ದು ಬಸ್‌ ಮೂಲಕ ತಲುಪಬಹುದು.

- ಮಯೂರ ಹೆಗಡೆ/ಮಂಜುನಾಥ ಗದಗಿನ

click me!