ಕೊಪ್ಪಳ ಜಿಲ್ಲೆಯ ಬಹದ್ದೂರು ಬಂಡಿ ಕೋಟೆ ನಿಜಾಮರ ಜತೆಗಿನ ಹೋರಾಟವಷ್ಟೇ ಅಲ್ಲ, ರೈತ ಬಂಡಾಯದ ಮೂಲಕ ನಡೆದ ಸ್ವಾತಂತ್ರ್ಯ ಹೋರಾಟಕ್ಕೂ ಸಾಕ್ಷಿಯಾಗಿ ನಿಂತಿದೆ.
ಕೊಪ್ಪಳ ಜಿಲ್ಲೆಯ ಬಹದ್ದೂರು ಬಂಡಿ ಕೋಟೆ ನಿಜಾಮರ ಜತೆಗಿನ ಹೋರಾಟವಷ್ಟೇ ಅಲ್ಲ, ರೈತ ಬಂಡಾಯದ ಮೂಲಕ ನಡೆದ ಸ್ವಾತಂತ್ರ್ಯ ಹೋರಾಟಕ್ಕೂ ಸಾಕ್ಷಿಯಾಗಿ ನಿಂತಿದೆ. ವೀರಪ್ಪ ದೇಸಾಯಿ ಎಂಬ ಹೋರಾಟಗಾರ ಸ್ವತಂತ್ರ ಸೇನೆ ಕಟ್ಟಿಬ್ರಿಟಿಷರು ಮತ್ತು ನಿಜಾಮರು ಇಬ್ಬರ ವಿರುದ್ಧವೂ ಹೋರಾಡಿ ಈ ಭಾಗದಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದು ಇತಿಹಾಸದಲ್ಲಿ ದಾಖಲಾಗಿದೆ.
1800ರ ಅವಧಿಯಲ್ಲಿ ಬ್ರಿಟಿಷರು ಮತ್ತು ನಿಜಾಮರ ದಬ್ಬಾಳಿಕೆಯಿಂದ ಜನ ಬೇಸತ್ತಿದ್ದರು. ಇದನ್ನು ಅವಲೋಕನ ಮಾಡುತ್ತಿದ್ದ ಕಲಿಕೇರಿ ಗ್ರಾಮದ ವೀರಪ್ಪ ದೇಸಾಯಿ ಅವರು ಸ್ವಾತಂತ್ರ್ಯಕ್ಕಾಗಿ ಈ ಭಾಗದಲ್ಲಿ ಮೊದಲ ಬಾರಿ ಕಹಳೆ ಊದಿದರು. ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿದ್ದರೂ ದೇಸಾಯಿ ಮನೆತನದ ವೀರಪ್ಪ ಅವರು ಸ್ವಾತಂತ್ರ್ಯಕ್ಕಾಗಿ ಸಿಡಿದು ನಿಂತರು. ರೈತರ ಚಳವಳಿ ಸಂಘಟನೆ ಮಾಡಿದರು. ಕರವಿರೋಧಿ ಚಳವಳಿ ಜತೆಗೆ ಸ್ವಾತಂತ್ರ್ಯಕ್ಕಾಗಿನ ಹೋರಾಟ ಶುರು ಮಾಡಿದರು.
undefined
India@75: ಹುತಾತ್ಮ ರಾಯಣ್ಣ ಚರಿತ್ರೆ ಹೇಳುವ ಬೆಳಗಾವಿಯ ನಂದಗಡ
ಇದಕ್ಕಾಗಿ ಸುಮಾರು 500 ಸೈನಿಕರ ಶಸ್ತ್ರಸಜ್ಜಿತ ಸೈನ್ಯ ಕಟ್ಟಿ, ಕೊಪ್ಪಳ ಕೋಟೆ ಮತ್ತು ಬಹದ್ದೂರು ಬಂಡಿ ಕೋಟೆಯಲ್ಲಿ ಅಳ್ವಿಕೆ ನಡೆಸಿದರು. ಆಗ ಹೈದರಾಬಾದ್ ನಿಜಾಮರು ಮತ್ತು ಬ್ರಿಟಿಷರು ಜಂಟಿಯಾಗಿ ವೀರಪ್ಪ ದೇಸಾಯಿ ವಿರುದ್ಧ ಯುದ್ಧ ಸಾರಿದರು. ಅಲ್ವಸ್ವಲ್ಪ ಬಂಡಾಯಗಾರರು ಇರಬಹುದು ಎಂದು ಸಣ್ಣ ಸೈನ್ಯದೊಂದಿಗೆ ದಾಳಿ ಮಾಡಿದ ಬ್ರಿಟಿಷರು ಮತ್ತು ನಿಜಾಮರಿಗೆ ಸುಮಾರು 500 ಸೈನಿಕರು ಹಾಗೂ ರೈತ ಸಮುದಾಯದ ಬೆಂಬಲದೊಂದಿಗೆ ವೀರಪ್ಪ ಭಾರೀ ಆಘಾತ ಕೊಟ್ಟರು.
ಇದರಿಂದ ಸಿಟ್ಟಿಗೆದ್ದ ಬ್ರಿಟಿಷ್ ಅಧಿಕಾರಿಗಳು ದೊಡ್ಡ ಪಡೆಯನ್ನೇ ಕರೆಸಿಕೊಂಡರು. ಅಶ್ವದಳವೂ ಸೇರಿ ಮದ್ದುಗುಂಡುಗಳನ್ನು ಅಪಾರ ಪ್ರಮಾಣದಲ್ಲಿ ತರಿಸಿ, ವೀರಪ್ಪ ದೇಸಾಯಿ ಬೆನ್ನಟ್ಟಿದರು. ವೀರಪ್ಪ ದೇಸಾಯಿ ಅವರು ಕಲಿಕೇರಿ ಗ್ರಾಮದಲ್ಲಿ ಸಂಗ್ರಹಿಸಿಟ್ಟಿದ್ದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸಂಗ್ರಹದ ಮೇಲೆ ದಾಳಿ ಮಾಡಲು ಯೋಜನೆ ಹಾಕಿದರು. ಅದರಂತೆ ಬ್ರಿಟಿಷರ ಒಂದು ಪಡೆ 1819ರ ಮೇ 7ರಂದು ಗದಗ-ಡಂಬಳ ಮೂಲಕ ಆಗಮಿಸಿ ಅಳವಂಡಿಯಲ್ಲೇ ಬಿಡಾರ ಹೂಡಿತು.
ವೀರಪ್ಪ ದೇಸಾಯಿಯನ್ನು ಸುತ್ತುವರಿದು ದಾಳಿಗೆ ಮುಂದಾಯಿತು. ಈ ವೇಳೆ ಬ್ರಿಟಿಷರ ಜತೆಗಿನ ಕಾದಾಟದಲ್ಲಿ ಹಿನ್ನಡೆ ಅನುಭವಿಸಿದ ವೀರಪ್ಪ ದೇಸಾಯಿ ಅವರು ಕೊನೆಗೆ ತಪ್ಪಿಸಿಕೊಂಡು ಪರಾರಿಯಾದರು. ನಂತರ ಅಜ್ಞಾತವಾಗುಳಿದು ಜೀವಮಾನದುದ್ದಕ್ಕೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದರು ಎಂದು ಇತಿಹಾಸಕಾರರು ಹೇಳುತ್ತಾರೆ. ಅದಾದ ಮೇಲೆ ವೀರಪ್ಪ ದೇಸಾಯಿ ಎಲ್ಲಿ ಹೋದರು ಎನ್ನುವ ಕುರಿತು ಸರಿಯಾದ ಮಾಹಿತಿ ಎಲ್ಲೂ ದಾಖಲಾಗಿಲ್ಲ. ಈ ಕುರಿತು ಇನ್ನಷ್ಟುಸಂಶೋಧನೆ ಆಗಬೇಕಿದೆ ಎನ್ನುತ್ತಾರೆ ಸ್ಥಳೀಯ ಇತಿಹಾಸಕಾರರು.
ಸಿಪಾಯಿ ದಂಗೆಗೂ ಮೊದಲೇ ಬ್ರಿಟಿಷರು ಹೈದ್ರಾಬಾದ್-ಕರ್ನಾಟಕ ಭಾಗದಲ್ಲಿ ಎದುರಿಸಿದ ಮೊದಲ ಸಶಸ್ತ್ರ ದಂಗೆ ವೀರಪ್ಪ ದೇಸಾಯಿ ಮೂಲಕ ಎದುರಿಸಿದರು ಎನ್ನುವುದು ಅನೇಕ ಸ್ಥಳೀಯ ಇತಿಹಾಸಕಾರರ ವಾದ. ವೀರಪ್ಪ ದೇಸಾಯಿ ಆ ಸಮಯದಲ್ಲೇ ರೈತ ಬಂಡಾಯ ಸಾರಿದ್ದು, ರೈತರ ಬೆಂಬಲದೊಂದಿಗೆ ಸೈನ್ಯ ಕಟ್ಟಿದ್ದು ನಿಜಾಮರು ಕೂಡ ತಮ್ಮ ಚರಿತ್ರೆಯಲ್ಲಿ ದಾಖಲು ಮಾಡಿದ್ದಾರೆ.
India@75:ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ತುಂಬಿದ ಬೆಳಗಾವಿ ಹುದಲಿ ರಾಷ್ಟ್ರೀಯ ಶಾಲೆ
ಕರಭಾರ ಮತ್ತು ರೈತರ ಶೋಷಣೆಯನ್ನು ಮುಂದಿಟ್ಟುಕೊಂಡು ವೀರಪ್ಪ ದೇಸಾಯಿ ಬ್ರಿಟಿಷರ ಮತ್ತು ನಿಜಾಮರ ವಿರುದ್ಧ ಶಸ್ತ್ರಾಸ್ತ್ರ ಹೋರಾಟ ಮಾಡಿದ ಮಹಾನ್ ನಾಯಕ ಎನ್ನುತ್ತಾರೆ ನಿವೃತ್ತ ಇತಿಹಾಸ ಉಪನ್ಯಾಸಕ ಎಂ.ಎಂ.ಕಂಬಾಳಿಮಠ.
ತಲುಪುದು ಹೇಗೆ?
ಕೊಪ್ಪಳ ನಗರ ಕೇಂದ್ರದಿಂದ ಬಹದ್ದೂರ್ ಬಂಡಿ ಕೋಟೆ ಕೇವಲ ನಾಲ್ಕೈದು ಕಿ.ಮೀ. ದೂರದಲ್ಲಿದೆ. ಖಾಸಗಿ ವಾಹನದ ಮೂಲಕ ಇಲ್ಲಿಗೆ ತಲುಪಬಹುದಾಗಿದೆ.
ಸೋಮರಡ್ಡಿ ಅಳವಂಡಿ