ಇಡೀ ದಿನ ದುಡಿದು ಬಂದು ಪೌಷ್ಟಿಕ ಆಹಾರ ತಯಾರಿಸಿ ತಿನ್ಬೇಕೆಂದ್ರೆ ಯಾರಿಗಾದ್ರೂ ಬೇಸರವಾಗೋದು ಸಹಜ. ಸುಲಭವಾಗಿ ಸಿಗುವ ಆಹಾರವನ್ನು ಬಾಯಿಗೆ ಹಾಕಿ ಮಲಗ್ತೇವೆ. ಆದ್ರೆ ಈ ಅಭ್ಯಾಸ ಅನಾರೋಗ್ಯಕ್ಕೆ ದಾರಿ ಮಾಡುತ್ತೆ. ಹಾಗಾಗಿ ಕೆಲಸದ ಮಧ್ಯೆ ಕೆಲ ಆಹಾರ ಸೇವನೆ ಮಾಡೋದು ಆರೋಗ್ಯಕ್ಕೆ ಒಳ್ಳೆಯದು.
ಜನರು ಸಮಯದ ಜೊತೆ ಹಣ (Money) ಕ್ಕಾಗಿ ಓಡ್ತಿದ್ದಾರೆ. ಪ್ರತಿಯೊಬ್ಬರೂ ಕೆಲಸ (Work) ದಲ್ಲಿ ಬ್ಯುಸಿ. ಕಚೇರಿ ಕೆಲಸ, ಮನೆ ಕೆಲಸ ಹೀಗೆ ಬೇರೆ ಬೇರೆ ಕೆಲಸದ ಕಾರಣದಿಂದಾಗಿ ವೈಯಕ್ತಿಕ ಕೆಲಸಕ್ಕೆ ಸಮಯ ನೀಡಲು ಸಾಧ್ಯವಾಗ್ತಿಲ್ಲ. ಬೆಳಿಗ್ಗೆ ಎದ್ದಾಗಿನಿಂದ ಶುರುವಾಗುವ ಓಟ ರಾತ್ರಿ ಮಲಗುವವರೆಗೂ ಮುಂದುವರೆದಿರುತ್ತದೆ. ವೃತ್ತಿ (Career) ಜೀವನ ಹಾಗೂ ವೈಯಕ್ತಿಯ ಜೀವನವನ್ನು ಬ್ಯಾಲೆನ್ಸ್ ಮಾಡುವುದು ಕಷ್ಟವಾಗುತ್ತದೆ. ಇಡೀ ದಿನ ದಣಿದು ಬಂದವರಿಗೆ ಮನೆಯಲ್ಲಿ ಆರೋಗ್ಯಕರ ಆಹಾರ ತಯಾರಿಸಲು ಪುರುಸೊತ್ತಿರೋದಿಲ್ಲ. ತರಾತುರಿಯಲ್ಲಿ, ಬೇಗ ಸಿದ್ಧವಾಗುವ ಆಹಾರಕ್ಕೆ ಅನಿವಾರ್ಯವಾಗಿ ಮೊರೆ ಹೋಗ್ತಾರೆ. ಸಂಸ್ಕರಿಸಿದ ಆಹಾರ, ಪ್ಯಾಕ್ ಮಾಡಿದ ಆಹಾರಗಳು, ಸಿದ್ಧ ಆಹಾರಗಳು ನಮ್ಮ ಹೊಟ್ಟೆ ಸೇರುತ್ತವೆ. ಈ ಆಹಾರಗಳು ನಮ್ಮ ಹೊಟ್ಟೆ ತುಂಬಿಸುತ್ತವೆ ನಿಜ. ಆದ್ರೆ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳು ದೇಹವನ್ನು ಸೇರುವುದಿಲ್ಲ. ಇದ್ರಿಂದ ದೇಹ ದುರ್ಬಲಗೊಳ್ಳುತ್ತದೆ. ದೇಹ ಶಕ್ತಿ ಕಳೆದುಕೊಳ್ಳುತ್ತದೆ. ದಿನ ಕಳೆದಂತೆ ಒಂದೊಂದೇ ಸಮಸ್ಯೆ ನಮ್ಮನ್ನು ಕಾಡಲು ಶುರುವಾಗುತ್ತದೆ. ಬರೀ ದೈಹಿಕ ಅನಾರೋಗ್ಯ ಮಾತ್ರವಲ್ಲ ಮಾನಸಿಕ ಅನಾರೋಗ್ಯವೂ ನಮ್ಮನ್ನು ಹಿಂಬಾಲಿಸುತ್ತದೆ. ಸರಿಯಾಗಿ ಒಂದು ಕಡೆ ಕುಳಿತು, ಆರೋಗ್ಯಕರ, ಪೌಷ್ಟಿಕದ ಆಹಾರ ಸೇವನೆ ಮಾಡದ ಕಾರಣ ಹಾಗೂ ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದೆ ಇರುವುದ್ರಿಂದ ಮನಸ್ಸು ಒತ್ತಡಕ್ಕೊಳಗಾಗುತ್ತದೆ. ಪ್ರತಿಯೊಬ್ಬರೂ ಕೆಲಸದ ಮಧ್ಯೆ ತಮ್ಮ ಆರೋಗ್ಯಕ್ಕೆ ಸಮಯ ಮೀಸಲಿಡಬೇಕು. ಪ್ರತಿ ದಿನ ಸೇವನೆ ಮಾಡುವ ಆಹಾರದ ಬಗ್ಗೆ ವಿಶೇಷ ಕಾಳಜಿವಹಿಸಬೇಕು. ಆಹಾರ ಆರೋಗ್ಯಕರವಾಗಿದ್ದರೆ ದೇಹ ಆರೋಗ್ಯವಾಗಿರುತ್ತದೆ. ದೇಹ ರೋಗ ಮುಕ್ತವಾದ್ರೆ ಕೆಲಸ ಸರಳವಾಗುತ್ತದೆ. ಯಾವುದೇ ಒತ್ತಡ, ನೋವು, ಸಮಸ್ಯೆಯಿಲ್ಲದೆ ಕೆಲಸವನ್ನು ಮಾಡಬಹುದು. ಇಡೀ ದಿನ ಕೆಲಸ ಮಾಡುವವರು ನೀವಾಗಿದ್ದರೆ, ನಿಮ್ಮ ಆಹಾರ ಹೇಗಿರಬೇಕು ಎಂಬುದನ್ನು ನಾವು ಹೇಳ್ತೇವೆ.
ಡಯೆಟ್ ನಲ್ಲಿರಲಿ ಹಣ್ಣು – ತರಕಾರಿ : ಹಣ್ಣು – ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದು. ಇದನ್ನು ನಾವು ಪ್ರತ್ಯೇಕವಾಗಿ ಹೇಳ್ಬೇಕಾಗಿಲ್ಲ. ಹಣ್ಣು ಮತ್ತು ತರಕಾರಿಯಲ್ಲಿ ಅನೇಕ ರೀತಿಯ ಪೋಷಕಾಂಶವಿರುತ್ತದೆ. ಇದು ಆರೋಗ್ಯಕರ ದೇಹಕ್ಕೆ ಬಹಳ ಒಳ್ಳೆಯದು. ಹಸಿರು ತರಕಾರಿಗಳು ಮತ್ತು ಹಣ್ಣುಗಳಲ್ಲಿ ಬಹಳಷ್ಟು ವಿಟಮಿನ್ ಗಳು, ಖನಿಜಗಳು, ಫೈಬರ್ ಇರುತ್ತದೆ. ಇದು ದೇಹವನ್ನು ಆರೋಗ್ಯಕರವಾಗಿರಿಸುತ್ತದೆ. ಹಣ್ಣು ಹಾಗೂ ತರಕಾರಿಯನ್ನು ದಿನಕ್ಕೆ ಒಮ್ಮೆ ತಿಂದ್ರೆ ಸಾಲುವುದಿಲ್ಲ. ನೀವು ಅದನ್ನು ದಿನದಲ್ಲಿ ನಾಲ್ಕರಿಂದ ಐದು ಬಾರಿಯಾದ್ರೂ ಸೇವನೆ ಮಾಡ್ಬೇಕು. ಕಚೇರಿಗೆ ಹೋಗುವ ಮೊದಲು ಹಣ್ಣುಗಳನ್ನು ಕತ್ತರಿಸಿ ಬಾಕ್ಸ್ ಗೆ ಹಾಕಿಕೊಳ್ಳಿ. ಹಾಗೆಯೇ ಜ್ಯೂಸ್ ತಯಾರಿಸಿ ತೆಗೆದುಕೊಂಡು ಹೋಗಿ. ತರಕಾರಿಯನ್ನು ಸ್ವಲ್ಪ ಬೇಯಿಸಿ ಅದನ್ನು ಬಾಕ್ಸ್ ಗೆ ಹಾಕಿ. ನಿಮಗೆ ಸ್ವಲ್ಪ ಬಿಡುವು ಸಿಕ್ಕಾಗೆಲ್ಲ ಇವುಗಳಲ್ಲಿ ಒಂದನ್ನು ಸೇವನೆ ಮಾಡ್ತಿರಿ. ಸಾಮಾನ್ಯವಾಗಿ ಒಂದೇ ಬಾರಿ ಎಲ್ಲ ಆಹಾರ ತಿನ್ನಲು ನಮಗೆ ಸಾಧ್ಯವಿಲ್ಲ. ಹಾಗಾಗಿ ಆಹಾರ ಸೇವನೆಗೆ ನೀವು ಟೈಂ ನಿಗದಿಪಡಿಸಿಕೊಳ್ಳಬಹುದು.
ಇದನ್ನೂ ಓದಿ: ಇವೆಲ್ಲೂ ತಿಂದ್ರೆ ಕಣ್ಣೇ ಹೋಗಬಹುದು, ಇರಲಿ ಎಚ್ಚರ!
ನೀರು ಕುಡಿದ್ರೆ ಆನೆ ಬಲ : ನಮ್ಮ ದೇಹಕ್ಕೆ ನೀರು ಬಹಳ ಮುಖ್ಯ. ಋತು ಯಾವುದೇ ಇರಲಿ, ಕೆಲಸದ ಒತ್ತಡ ಎಷ್ಟೇ ಇರಲಿ, ನೀರು ಕುಡಿಯುವುದನ್ನು ಮಾತ್ರ ಮರೆಯಬೇಡಿ. ನಿಮ್ಮ ಕೆಲಸದ ಟೇಬಲ್ ಮೇಲೆ ನೀರಿನ ಬಾಟಲ್ ಇರುವಂತೆ ನೋಡಿಕೊಳ್ಳಿ. ಅದ್ರ ಮೇಲೆ ಕಣ್ಣು ಹಾದಾಗೆಲ್ಲ ನೀವು ನೀರನ್ನು ಕುಡಿಯಬೇಕು. ದ್ರವ ಆಹಾರ ಸೇವಿಸುವುದರಿಂದ, ದೇಹದಲ್ಲಿ ಶಕ್ತಿಯ ಮಟ್ಟ ದಿನವಿಡೀ ಇರುತ್ತದೆ. ನೀರು ದೇಹದ ಉಷ್ಣತೆಯನ್ನು ಕಾಪಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಚರ್ಮ ಮತ್ತು ಕೂದಲು ಆರೋಗ್ಯಕ್ಕೆ ಇದು ಒಳ್ಳೆಯದು.
ಕಚೇರಿಯಲ್ಲಿರಲಿ ಡ್ರೈ ಫ್ರೂಟ್ಸ್ : ಈ ಒಣ ಬೀಜಗಳನ್ನು ನೀವು ಸುಲಭವಾಗಿ ತೆಗೆದುಕೊಂಡು ಹೋಗಬಹುದು. ನಿಮ್ಮ ಕಚೇರಿ ಡ್ರಾನಲ್ಲಿ ಒಣ ಬೀಜಗಳನ್ನು ನೀವು ಇಟ್ಟುಕೊಳ್ಳಬಹುದು. ಇವು ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತವೆ. ಆರೋಗ್ಯಕ್ಕೆ ಅಗತ್ಯವಾದ ಜೀವಸತ್ವಗಳು, ಖನಿಜಗಳು ಇದರಲ್ಲಿವೆ. ಪ್ರತಿದಿನ ನೀರಿನಲ್ಲಿ ನೆನೆಸಿದ 3-4 ಬಾದಾಮಿ ಮತ್ತು 1-2 ವಾಲ್‌ನಟ್ಸ್ ಸೇವಿಸಿ. ಬಾದಾಮಿಯು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
ಇದನ್ನೂ ಓದಿ: ಕೆಂಪಕ್ಕಿಯೋ, ಬಿಳಿ ಅಕ್ಕಿಯೋ, ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಯಾವುದು ?
ರಾಗಿ, ಜೋಳ ಸೇವನೆ : ಗೋಧಿ ರೊಟ್ಟಿ ಹಾಗೂ ಅನ್ನವನ್ನು ಸೇವಿಸುವವರ ಸಂಖ್ಯೆ ಹೆಚ್ಚು. ಕೆಪ್ಪು ಹಾಗೂ ಕಂದು ಬಣ್ಣದ ಅನ್ನ ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಬಿಳಿ ಅನ್ನ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಇದ್ರ ಬದಲು ನೀವು ರಾಗಿ ಮತ್ತು ಜೋಳಕ್ಕೆ ಆದ್ಯತೆ ನೀಡಿ. ಇದರಲ್ಲಿ ಫೈಬರ್, ಪ್ರೊಟೀನ್, ಆ್ಯಂಟಿಆಕ್ಸಿಡೆಂಟ್ ಗಳಿದ್ದು, ಇವು ಆರೋಗ್ಯ ವೃದ್ಧಿಸುತ್ತವೆ. ರಾಗಿ ರೊಟ್ಟಿಯನ್ನು ಬಾಕ್ಸ್ ಗೆ ಹಾಕಿಕೊಂಡ್ರೆ ಒಳ್ಳೆಯದು.