ಕೋಪದ ಕೈಗೆ ಬುದ್ಧಿ ಮಾತ್ರವಲ್ಲ,ತಟ್ಟೆ ಕೊಟ್ರು ಆಪತ್ತು ಫಿಕ್ಸ್. ಕೋಪದಲ್ಲಿರೋವಾಗ ತಿನ್ನೋದ್ರ ಮೇಲೂ ಕಂಟ್ರೋಲ್ ಇರಲ್ಲ. ಪರಿಣಾಮ ಹೊಟ್ಟೆ ಸಂಬಂಧಿ ಸಮಸ್ಯೆಗಳು ಕಾಡೋ ಸಾಧ್ಯತೆಗಳಿರುತ್ತವೆ. ಹೀಗಾಗಿ ಮನಸ್ಸು ಶಾಂತವಾದ ಬಳಿಕವೇ ತಟ್ಟೆಗೆ ಕೈ ಹಾಕೋದು ಒಳ್ಳೆಯದು.
ಬೆಳಗ್ಗೆ ಮನೆಯಲ್ಲಿ ಯಾವುದೋ ವಿಷಯಕ್ಕೆ ಹೆಂಡ್ತಿ ಅಥವಾ ಗಂಡನ ಜೊತೆ ಜಗಳವಾಡಿ ನಂತ್ರ ಆಫೀಸ್‍ಗೆ ಹೋದ್ರೆ ನಿಮ್ಮ ಮೂಡ್ ಹೇಗಿರುತ್ತೆ? ಕರಾಬು ಅಲ್ವಾ! ಜಗಳ, ವಾಗ್ವಾದದ ಹೊತ್ತಿನಲ್ಲಿ ಸಿಟ್ಟು ನೆತ್ತಿಗೇರುತ್ತೆ,ಆದ್ರೆ ನಂತರ ಮನಸ್ಸು ಸಮತೋಲನ ಕಳೆದುಕೊಂಡು ವಿಲವಿಲ ಒದ್ದಾಡುತ್ತ ಇಡೀ ದಿನವನ್ನು ಕೊಲ್ಲುತ್ತೆ. ಕೋಪ ಮನಸ್ಸಿನ ನೆಮ್ಮದಿಯನ್ನು ಮಾತ್ರ ಕಸಿಯೋದಿಲ್ಲ,ಬದಲಿಗೆ ನಿಮ್ಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತೆ. ನೀವು ಕೋಪಗೊಂಡಾಗ ಅಥವಾ ಒತ್ತಡದಲ್ಲಿದ್ದಾಗ ನಿಮ್ಮ ದೇಹ ಕೂಡ ಪ್ರತಿಕ್ರಿಯೆ ನೀಡಲು ಪ್ರಾರಂಭಿಸುತ್ತೆ. ನಿಮ್ಮ ನರ ಮಂಡಲ ಒತ್ತಡವನ್ನು ಹತ್ತಿಕ್ಕಲು ಶರೀರದ ಇತರ ಭಾಗಗಳಿಗೆ ಪ್ರಚೋದನೆ ನೀಡಲು ಪ್ರಾರಂಭಿಸುವ ಕಾರಣ ಕಾರ್ಟಿಸೋಲ್ ಎಂಬ ಹಾರ್ಮೋನ್ ಮಟ್ಟದಲ್ಲಿ ಏರಿಕೆಯಾಗುತ್ತದೆ. ಪರಿಣಾಮ ಕಿರಿಕಿರಿ, ಗೊಂದಲ, ಉದ್ವೇಗದ ಅನುಭವವಾಗುತ್ತದೆ. ಅಷ್ಟೇ ಅಲ್ಲ,ಕೆಲವೊಮ್ಮೆ ಇದ್ರಿಂದ ನೀವು ಭಾವನಾತ್ಮಕ ತಿನ್ನುವಿಕೆ ಅಥವಾ ಇಮೋಷನಲ್ ಈಟಿಂಗ್ ಅಭ್ಯಾಸಕ್ಕೆ ಬೀಳೋ ಅಪಾಯವೂ ಇದೆ.
ದೇಹ, ಮನಸ್ಸಿನ ಮೇಲೆ ಗಾಂಜಾ ಬೀರೋ ದುಷ್ಪರಿಣಾಮ ಒಂದೆರಡಲ್ಲ..!
ಈ ಒತ್ತಡವನ್ನು ತಾಳಿಕೊಳ್ಳೋಕೆ ಆಗಲ್ಲಪ್ಪ ಎಂದು ಮನಸ್ಸು ಪಿಸುಗುಟ್ಟಿದ ತಕ್ಷಣ ಕೆಲವರು ಸಿಗರೇಟ್ ಹೊಗೆ ಎಳೆದುಕೊಂಡು ರಿಲ್ಯಾಕ್ಸ್ ಆಗಲು ಪ್ರಯತ್ನಿಸುತ್ತಾರೆ. ಇನ್ನೂ ಕೆಲವರು ಸಿಕ್ಕಿದ್ದನ್ನೆಲ್ಲ ತಿನ್ನುತ್ತಲೇ ಇರುತ್ತಾರೆ. ಏನು ತಿಂದೆ, ಎಷ್ಟು ತಿಂದೆ ಎಂಬ ಪರಿವೇ ಇಲ್ಲದೆ ಬಾಯಿಗೆ ರೆಸ್ಟೇ ಕೊಡಲ್ಲ. ಈ ರೀತಿ ಒಂದೇ ಸಮನೆ ತಿನ್ನೋದ್ರಿಂದ ನಿಮ್ಮ ಮನಸ್ಸು ರಿಲ್ಯಾಕ್ಸ್ ಆಗ್ಬಹುದು, ಆದ್ರೆ ದೈಹಿಕ ಅಗತ್ಯಗಳು ಪೂರ್ಣಗೊಳ್ಳೋದಿಲ್ಲ. ಯಾಕೆ ಅಂತೀರಾ? ಇಂಥ ಸಮಯದಲ್ಲಿ ನೀವು ಏನು ತಿನ್ನುತ್ತಿದ್ದೀರಿ ಎಂಬ ಪರಿವೇ ನಿಮಗಿರೋದಿಲ್ಲ. ಹೀಗಾಗಿ ಬಹುತೇಕ ಸಂದರ್ಭದಲ್ಲಿ ನಿಮ್ಮ ಹೊಟ್ಟೆಗೆ ಸೇರೋದು ದೇಹಕ್ಕೆ ಯಾವುದೇ ಪೋಷಕಾಂಶಗಳನ್ನು ಪೂರೈಸದ ಜಂಕ್‍ಫುಡ್‍ಗಳೇ! ಕೋಪದ ಕೈಗೆ ಬುದ್ಧಿ ಕೊಡಬಾರ್ದು ಅಂತಾರೆ. ಹಾಗೆಯೇ ಸಿಟ್ಟಿನಲ್ಲಿರೋವಾಗ ಕೈಗೆ ಹಾಗೂ ಬಾಯಿಗೆ ಕೆಲ್ಸನೂ ಕೊಡಬಾರ್ದು,ಅಂದ್ರೆ ತಿನ್ನಬಾರ್ದು ಅಂತಾರೆ ಲೈಫ್‍ಸ್ಟೈಲ್ ಕೋಚ್ ಲುಕೆ ಕೌಟಿನ್ಹೋ. ಇತ್ತೀಚೆಗೆ ಇವರು ತಮ್ಮ ಇನ್‍ಸ್ಟ್ರಾಗ್ರಾಮ್ ಪೇಜ್‍ನಲ್ಲಿ ಹಂಚಿಕೊಂಡಿರೋ ವಿಡಿಯೋದಲ್ಲಿ ಕೋಪದಲ್ಲಿರೋವಾಗ ತಿನ್ನೋದ್ರಿಂದ ಏನೆಲ್ಲ ತೊಂದರೆಗಳು ಎದುರಾಗುತ್ತವೆ ಅನ್ನೋದನ್ನು ಸವಿಸ್ತರವಾಗಿ ವಿವರಿಸಿದ್ದಾರೆ.
ಪ್ರತಿದಿನ ಬಾಳೆ ಹಣ್ಣು ತಿಂದ್ರೆ ಕಣ್ಣಿಗೆ ಒಳ್ಳೇದು..! ಯಾಕೆ..? ಇಲ್ನೋಡಿ
ಕೋಪದಲ್ಲಿರೋವಾಗ ಏಕೆ ತಿನ್ನಬಾರ್ದು?
ನಮ್ಮ ಮೂಡ್ ಕೆಟ್ಟಿರೋವಾಗ, ಕೋಪ ನೆತ್ತಿಗೇರಿದಾಗ ಅಥವಾ ಉದ್ವೇಗದಲ್ಲಿರೋವಾಗ ನಮ್ಮ ಮನಸ್ಸು ಮಾತ್ರವಲ್ಲ, ಇಡೀ ಶರೀರವೇ ನಿಯಂತ್ರಣ ಕಳೆದುಕೊಳ್ಳುತ್ತೆ. ಶರೀರದ ಅಂಗಾಂಗಗಳ ಮೇಲೆ ಪರಿಣಾಮ ಬೀರುತ್ತೆ.ಲುಕೆ ಹೇಳೋ ಪ್ರಕಾರ ನಾವು ಒತ್ತಡದಲ್ಲಿರೋವಾಗ ನಮ್ಮ ಶರೀರಕ್ಕೆ ಆಹಾರವನ್ನು ಜೀರ್ಣಿಸಿಕೊಳ್ಳಲು ಹಾಗೂ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗೋದಿಲ್ವಂತೆ. ನಮ್ಮಲ್ಲಿ ಸಿಂಪಥೆಟಿಕ್ ಹಾಗೂ ಪ್ಯಾರಾಸಿಂಪಥೆಟಿಕ್ ಎಂಬ ಎರಡು ನರವ್ಯೂಹಗಳಿವೆ. ಇವೆರಡೂ ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ನಾವು ಕೋಪದಲ್ಲಿರೋವಾಗ ಸಿಂಪಥೆಟಿಕ್ ನರವ್ಯೂಹ ಸಕ್ರಿಯವಾಗುತ್ತದೆ. ಪರಿಣಾಮ ಜೀರ್ಣಕ್ರಿಯೆ ಸಮರ್ಪಕವಾಗಿ ಆಗೋದಿಲ್ಲ. ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಹಾಗೂ ಕೊಲೆಸ್ಟ್ರಾಲ್ ಏರಿಕೆಯಾಗುತ್ತದೆ. ಇದ್ರಿಂದಾಗಿಯೇ ದೇಹಕ್ಕೆ ಆಹಾರವನ್ನು ಜೀರ್ಣಿಸಿಕೊಳ್ಳಲು ಹಾಗೂ ಪೋಷಕಾಂಶಗಳನ್ನು ಹೀರಿಕೊಳ್ಳಲು ಕಷ್ಟವಾಗುತ್ತದೆ. ಅದೇ ನಮ್ಮ ಮನಸ್ಸು ಪ್ರಶಾಂತವಾಗಿರೋವಾಗ ಪ್ಯಾರಾಸಿಂಪಥೆಟಿಕ್ ನರವ್ಯೂಹ ಕಾರ್ಯನಿರ್ವಹಿಸುತ್ತದೆ. ಇದ್ರಿಂದಾಗಿ ಕಾರ್ಟಿಸೋಲ್ ಹಾರ್ಮೋನ್ ಮಟ್ಟದಲ್ಲಿ ಇಳಿಕೆಯಾಗುತ್ತದೆ ಹಾಗೂ ರಕ್ತದೊತ್ತಡ ತಗ್ಗುತ್ತದೆ. ಪರಿಣಾಮ ಜೀರ್ಣಕ್ರಿಯೆ ಚೆನ್ನಾಗಿ ನಡೆದು ಅಗತ್ಯ ಪೋಷಕಾಂಶಗಳನ್ನು ದೇಹ ಸಮರ್ಪಕವಾಗಿ ಹೀರಿಕೊಳ್ಳುತ್ತದೆ.
ಕೊರೋನಾಗಿಂತ ಎದೆ ನೋವಿನ ಬಗ್ಗೆ ಗೂಗಲ್ ಮಾಡೋರೆ ಹೆಚ್ಚು..!
ಏನೆಲ್ಲ ತೊಂದ್ರೆ ಎದುರಾಗಬಹುದು?
ಕೋಪದಲ್ಲಿರೋವಾಗ ತಿಂದ್ರೆ ಹೊಟ್ಟೆಸಂಬಂಧಿ ಸಮಸ್ಯೆಗಳು ಕಾಡೋದು ಪಕ್ಕಾ ಅಂತಾರೆ ಲುಕೆ. ಹೊಟ್ಟೆಯುಬ್ಬರ, ಆಸಿಡಿಟಿ, ಅತಿಸಾರದಂತಹ ಸಮಸ್ಯೆಗಳಿಗೆ ಕೋಪದಲ್ಲಿರೋವಾಗ ಆಹಾರ ಸೇವಿಸಿರೋದು ಕಾರಣವಾಗಿರಬಹುದು. ಒಂದು ವೇಳೆ ನಿಮಗೆ ಈ ಮೊದಲೇ ಜೀರ್ಣಕ್ರಿಯೆ ಅಥವಾ ಕರುಳು ಸಂಬಂಧಿ ಸಮಸ್ಯೆಯಿದ್ರೆ ಈ ತೊಂದ್ರೆಗಳು ತುಸು ಹೆಚ್ಚೇ ಕಾಣಿಸಿಕೊಳ್ಳುತ್ತವೆ. ಇನ್ನು ಕೋಪದಲ್ಲಿರೋವಾಗ ಆಹಾರ ಸೇವಿಸೋದ್ರಿಂದ ಏನು, ಎಷ್ಟು ತಿಂದ್ರಿ ಎಂಬುದು ನಿಮಗೆ ಗೊತ್ತೇ ಆಗಲ್ಲ. ಟಿವಿ ನೋಡುತ್ತ ಊಟ ಮಾಡಿದ್ರೆ ತಟ್ಟೆ ಖಾಲಿಯಾಗಿದ್ದು ಹೇಗೆ ತಿಳಿಯಲ್ಲವೋ ಹಾಗೆಯೇ ಇದು. ಅಂದ್ರೆ ಕೋಪದಲ್ಲಿರೋವಾಗ ಹೊಟ್ಟೆ ಹಾಗೂ ಮಿದುಳಿನ ನಡುವಿನ ಸಂಪರ್ಕ ಕಡಿತಗೊಳ್ಳುತ್ತೆ. ಹೀಗಾಗಿ ಹೊಟ್ಟೆಯಿಂದ ಮಿದುಳಿಗೆ ಸಾಕು ಎಂಬ ಸಂದೇಶ ರವಾನೆಯಾಗೋದಿಲ್ಲ. ಪರಿಣಾಮ ಅತಿಯಾಗಿ ತಿಂದು ಆರೋಗ್ಯ ಕೆಡುತ್ತೆ. ಮತ್ತೊಂದು ಸಮಸ್ಯೆಯೆಂದ್ರೆ ಕರುಳಿನಲ್ಲಿರೋ ಬ್ಯಾಕ್ಟೀರಿಯಾಗಳು ರಕ್ತವನ್ನು ಸೇರದಂತೆ ತಡೆಯುವ ವ್ಯವಸ್ಥೆಯು ನಾವು ಕೋಪಗೊಂಡಿರೋವಾಗ ದುರ್ಬಲಗೊಳ್ಳುತ್ತೆ, ಇದ್ರಿಂದ ಬ್ಯಾಕ್ಟೀರಿಯಾಗಳು ರಕ್ತವನ್ನು ಸೇರಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ ಅನ್ನೋದು ಲುಕೆ ಅಭಿಪ್ರಾಯ.
ನೀವು ಏನ್ ಮಾಡ್ಬಹುದು?
ಹಾಗಾದ್ರೆ ಕೋಪಗೊಂಡಾಗ ಏನು ಮಾಡ್ಬೇಕು? ತಕ್ಷಣ ಊಟ ಅಥವಾ ತಿಂಡಿ ಸೇವಿಸಬೇಡಿ. ಸ್ವಲ್ಪ ಹೊತ್ತು ರಿಲ್ಯಾಕ್ಸ್ ಮಾಡಿ. ದೀರ್ಘವಾದ ಉಸಿರು ತೆಗೆದುಕೊಳ್ಳಿ. ಮನಸ್ಸು ಶಾಂತವಾದ ಬಳಿಕ ಆಹಾರ ಸೇವಿಸಬೇಕು. ಇನ್ನು ಊಟವಾದ ಬಳಿಕ ರಕ್ತದೊತ್ತಡ ತುಸು ಹೆಚ್ಚುತ್ತದೆ. ಇದೇ ಕಾರಣಕ್ಕೆ ಆ ಸಮಯದಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಬೇಕು ಎನ್ನೋದು. ಊಟದ ಬಳಿಕ ವ್ಯಾಯಾಮ ಹಾಗೂ ಸ್ನಾನ ಮಾಡಲೇಬಾರ್ದು ಎಂಬ ಸಲಹೆಯನ್ನು ಕೂಡ ಲುಕೆ ನೀಡಿದ್ದಾರೆ.