ಏಪ್ರಿಲ್ 14 ಎಂಬುದು ಈಗ ದೇಶದ ಬಹುಜನ ಕಾಯ್ತಾ ಇರುವ ಸಂಗತಿ ಆಗಿಬಿಟ್ಟಿದೆ. ಕೆಲಸಕ್ಕೆ ಹೋಗಲು ಸಾಧ್ಯವಾಗದೆ ಮನೆಯಲ್ಲೇ ಉಳಿದವರು, ಒಮ್ಮೆ ಲಾಕ್‌ಡೌನ್ ಲಿಫ್ಟ್ ಮಾಡಿದರೆ ಸಾಕು, ಎದ್ದೆನೋ ಬಿದ್ದೆನೋ ಎಂದು ಕಚೇರಿಗೆ ಓಡಿಹೋಗಲು ರೆಡಿಯಾಗಿರುತ್ತಾರೆ.
ಏಪ್ರಿಲ್ 14 ಎಂಬುದು ಈಗ ದೇಶದ ಬಹುಜನ ಕಾಯ್ತಾ ಇರುವ ಸಂಗತಿ ಆಗಿಬಿಟ್ಟಿದೆ. ಕೆಲಸಕ್ಕೆ ಹೋಗಲು ಸಾಧ್ಯವಾಗದೆ ಮನೆಯಲ್ಲೇ ಉಳಿದವರು, ಒಮ್ಮೆ ಲಾಕ್‌ಡೌನ್ ಲಿಫ್ಟ್ ಮಾಡಿದರೆ ಸಾಕು, ಎದ್ದೆನೋ ಬಿದ್ದೆನೋ ಎಂದು ಕಚೇರಿಗೆ ಓಡಿಹೋಗಲು ರೆಡಿಯಾಗಿರುತ್ತಾರೆ. ಅಂಗಡಿ, ಮಾಲ್‌ಗಳಿಗೆ ಒಮ್ಮೆ ತೆರೆಯೋಣ ಎಂಬ ತವಕ. ಹಣವಿದ್ದೂ ಖರ್ಚು ಮಾಡಲು ಸಾಧ್ಯವಿಲ್ಲದವರಿಗೆ ಯಾವಾಗ ಥಿಯೇಟರ್ ಮಾಲ್‌ಗಳು ತೆರೆಯಬಹುದು ಎಂಬ ಆತುರ. ಹಣವಿಲ್ಲದೆ, ದುಡಿಯಲೂ ಸಾಧ್ಯವಿಲ್ಲದೆ ಬರಿಹೊಟ್ಟೆಯಲ್ಲಿ ಒದ್ದಾಡುತ್ತಿರುವವರಿಗೆ ಮಾತ್ರ ಯಾವಾಗ ತಮ್ಮ ಕೆಲಸಕ್ಕ ಅವಕಾಶ ಸಿಕ್ಕೀತು ಎಂಬ ಹಪಹಪಿ.
ಸರಕಾರಕ್ಕೂ ಈ ಸಂಕಷ್ಟ ಕಾಡುತ್ತಿದೆ. ಲಾಕ್‌ಡೌನ್ ಪೂರ್ತಿಯಾಗಿ ತೆಗೆದರೆ, ಯಾವ ಟೆಸ್ಟ್‌ಗೂ ಒಳಗಾಗದೆ ಒಳಗೆ ಇರುವ ಸೋಂಕಿತರೆಲ್ಲ ಬೀದಿಗೆ ಬಂದು ಮಹಾಮಾರಿಯ ಸಂಖ್ಯೆ ಒಮ್ಮೆಲೇ ದ್ವಿಗುಣಗೊಳ್ಳಲು ಕಾರಣವಾಗಬಹುದು ಎಂಬ ಆತಂಕ. ತೆಗೆಯದಿದ್ದರೆ, ಈಗಾಗಲೇ ಹಲವಾರು ಇಂಡಸ್ಟ್ರಿಗಳನ್ನು ಮುಚ್ಚಿಸಿದ ಆರ್ಥಿಕ ಸಂಕಷ್ಟ ಇನ್ನಷ್ಟು ಮುಂದುವರಿದು ಮತ್ತಷ್ಟು ಉದ್ಯೋಗಗಳನ್ನು ಕಸಿದುಕೊಂಡು, ಸಮಾಜದಲ್ಲಿ ದಂಗೆ ಸುಲಿಗೆ ಹೆಚ್ಚಬಹುದು ಎಂಬ ಆತಂಕ. ಇವುಗಳ ಮಾತು ಹಾಗಿರಲಿ. ಈಗ ಲಾಕ್‌ಡೌನ್ ತೆಗೆದ ಮೇಲೆ ಏನಾಗುತ್ತದೆ ಅನ್ನುವ ಸ್ಥಿತಿಯನ್ನೇ ನೋಡೋಣ.
ಕೊರೋನಾ ತಡೆಗಟ್ಟಲು ಥಟ್ಟಂತ ಹೇಳಬಲ್ಲ ಉಪಾಯಗಳು!
ಲಾಕ್‌ಡೌನ್ ಹಂತಹಂತವಾಗಿಯೇ ತೆರೆದರೂ ಜನರ ಓಡಾಟ ಹೆಚ್ಚಾಗುತ್ತದೆ. ಈಗ ಖಾಸಗಿ ಕ್ಲಿನಿಕ್‌ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ, ಇಷ್ಟರವರೆಗೆ ಕೆಮ್ಮು ಜ್ವರ ಅಂತಿದ್ದವರು ಮನೆಯಲ್ಲೇ ಕಷಾಯ ಮಾಡಿ ಕುಡಿದು ಸುಧಾರಿಸಿಕೊಳ್ಳುತ್ತಿದ್ದರು. ಇನ್ನು ಮುಂದೆ ಅವರೂ ಡಾಕ್ಟರ್ ಬಳಿಗೆ ಬರುತ್ತಾರೆ, ಕ್ಲಿನಿಕ್‌ಗೆ ಬರುವವರ ಸಂಖ್ಯೆ ಹೆಚ್ಚುತ್ತದೆ, ಸರಕಾರಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳು, ಶೀತ ಜ್ವರದಂಥ ಸಣ್ಣಪುಟ್ಟ ಕಾಯಿಲೆಗಳ ವೈರಸ್‌ಗಳು ಅತ್ತಿತ್ತ ಹರಡಲು ಹೇಳಿ ಮಾಡಿಸಿದ ಜಾಗಗಳು. ಇವುಗಳ ನಡುವೆ ಕೋವಿಡ್ ವೈರಸ್ ಯಾರಲ್ಲಿ ಇದೆ ಎಂದು ಪತ್ತೆ ಹಚ್ಚುವುದು ಹೇಗೆ? ಸಾಧ್ಯವೇ ಇಲ್ಲ. ಆರೋಗ್ಯವಂತ ವ್ಯಕ್ತಿಯಲ್ಲಿ ಈ ವೈರಸ್ ಏನೂ ಘಾತ ಮಾಡದೇ ಇರತ್ತದೆ, ಆದರೆ ಇತರರಿಗೆ ಹರಡುವ ಸಾಧ್ಯತೆಯೂ ಇರುತ್ತದೆ. ಕ್ಲಿನಿಕ್‌ಗಳು ಮಾತ್ರವಲ್ಲ, ಹಾಲಿನ ಬೂತ್‌ಗಳು, ಕಿರಾಣೀ ಅಂಗಡಿಗಳು, ಮಾಲ್‌ಗಳು, ಸಿನಿಮಾ ಥಿಯೇಟರ್‌ಗಳು ಎಲ್ಲೆಡೆಯೂ ಇದೇ ಕತೆ.
ಹೀಗಾಗಿ ಲಾಕ್‌ಡೌನ್ ತೆರೆದ ಒಂದು ವಾರ ಏನೂ ಆಗದು. ಆದರೆ ಲಾಕ್‌ಡೌನ್ ತೆರೆದ ನಂತರ ಜನರ ಓಡಾಟ ಜಾಸ್ತಿಯಾದ ಬಳಿಕ, ಒಂದು ವಾರದ ಬಳಿಕ ಮತ್ತೆ ಕೊರೊನಾ ಕೇಸ್‌ಗಳು ಜಾಸ್ತಿಯಾಗಬಹುದು. ಆದ್ದರಿಂದಲೇ ಬೆಂಗಳೂರಿನ ನಾರಾಯಣ ಹೃದಯಾಲಯದ ಹಿರಿಯ ಡಾಕ್ಟರ್ ದೇವಿ ಶೆಟ್ಟಿ ಅವರು ಹೇಳಿರುವುದು ಹೀಗೆ: ಲಾಕ್‌ಡೌನ್ ಬಳಿಕವೂ ಸಾಮಾಜಿಕ ಅಂತರ ಅಥವಾ ಸೋಶಿಯಲ್ ಡಿಸ್ಟೆನ್ಸ್ ಕಾಯ್ದುಕೊಳ್ಳಬೇಕು. ಇತರ ವ್ಯಕ್ತಿಗಳಿಂದ ಒಂದು ಮೀಟರ್ ದೂರ ಕಾಪಾಡಿಕೊಳ್ಳಬೇಕು. ಹೊರಗಡೆ ಓಡಾಡುವಾಗ ಮುಖಕ್ಕೆ ಮಾಸ್ಕ್ ಧರಿಸಿಕೊಂಡರೆ ಒಳ್ಳೆಯದು. ಜನಜಂಗುಳಿ ಇರುವಲ್ಲಿ ಹೋಗದೇ ಇದ್ದರೆ ಒಳ್ಳೆಯದು. ಅಂದರೆ ಈಗ ಇರುವಂತೆ ಆಗಲೂ ಇರಬೇಕು.
ಪ್ರಸ್ತುತ ನಮ್ಮ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮೂರು ಸಾವಿರಕ್ಕಿಂತಲೂ ಅಧಿಕವಾಗಿದೆ, ಸತ್ತವರ ಸಂಖ್ಯೆ ನೂರರ ಹತ್ತಿರ. ಸದ್ಯಕ್ಕೆ ಲಾಕ್‌ಡೌನ್ ಇರುವುದರಿಂಧ ಈಗಾಗಲೇ ಹರಡಿರುವ ಸೋಂಕಿತರ ಪತ್ತೆ ಮಾತ್ರ ಆದೀತು, ಇನ್ನಷ್ಟು ಸೋಂಕು ಆಗಿರಲಾರದು. ಆದರೆ ಲಾಕ್‌ಡೌನ್ ತೆಗೆದ ಬಳಿಕ ನಾವು ಜಾಗರೂಕರಾಗಿರದಿದ್ದರೆ, ಒಂದು ವಾರದ ಬಳಿಕ ಸೋಂಕಿತರ ಸಂಖ್ಯೆ ನಾಲ್ಕು ಪಟ್ಟು, ಎಂಟು ಪಟ್ಟು ಹೀಗೆ ಹೆಚ್ಚುತ್ತ ಹೋದೀತು ಎಂದು ಭಾರತೀಯ ವೈದ್ಯಕೀಯ ಸಂಸ್ಥೆ ಕೂಡ ಹೇಳಿದೆ.
ಆದರೆ ಇದಕ್ಕೆ ಹೆದರಿಕೊಂಡು ಲಾಕ್‌ಡೌನ್ ತೆಗೆಯದೇ ಇರಲು ಸಾಧ್ಯವೇ? ಸಾಧ್ಯವಿಲ್ಲ. ಯಾಕೆಂದರೆ ಲಕ್ಷಾಂತರ ಮಂದಿ ದಿನಗೂಲಿ ಮಾಡಿಯೇ ಬದುಕುವವರಿದ್ದಾರೆ. ಅವರಿಗೆಲ್ಲ ಅನ್ನವಿಲ್ಲದ ಪರಿಸ್ಥಿತಿ ಬರಬಹುದು. ಈಗೇನೋ ಸರಕಾರ ಸಹಾಯ ಮಾಡಬಹುದು. ಆದರೆ ಎಷ್ಟುದಿನ ಹೀಗೆ ಕೊಡಲು ಸಾಧ್ಯ? ಜೊತೆಗೆ ಕೆಳಮಧ್ಯಮ ವರ್ಗ ಹಾಗೂ ಮಧ್ಯಮ ವರ್ಗದ ಮಂದಿ ಕೂಡ ತಿಂಗಳ ಸಂಬಳ ನಂಬಿಕೊಂಡವರು. ಅನೇಕ ಸಣ್ಣಪುಟ್ಟ ಉದ್ಯಮಗಳು ಲಾಕ್‌ಡೌನ್ ಮುಂದುವರಿದರೆ ಮುಚ್ಚಿಯೇ ಹೋಗಬಹುದು. ಆಗ ಅದರಲ್ಲೂ ಲಕ್ಷಾಂತರ ನೌಕರರು ಬೀದಿಗೆ ಬೀಳುತ್ತಾರೆ. ಸರಕಾರಕ್ಕೂ ಸಮಾಜಕ್ಕೂ ಹೊರೆಯಾಗುವ ಸಾಧ್ಯತೆಗಳಿವೆ.
ಕೊರೋನಾ ಗೆಲ್ಲುವುದು ಹೇಗಣ್ಣಾ? ಡಾಕ್ಟರ್ ಕೊಡ್ತಾರೆ ಉತ್ತರ ಅಣ್ಣಾ!
ಈ ಪರಿಸ್ಥಿತಿ ಅಮೆರಿಕದಲ್ಲಿ ಈಗಾಗಲೇ ಸೃಷ್ಟಿಯಾಗಿದೆ. ಅಲ್ಲಿ ಕೊರೋನಾ ಸಾವುಗಳ ಜೊತೆಗೆ ಆರ್ಥಿಕ ದುರವಸ್ಥೆ ಕೂಡ ಮರಣ ಮೃದಂಗ ಬಾರಿಸುತ್ತದೆ. ಸಾವುಗಳ ಸಂಖ್ಯೆ ಹೆಚ್ಚಾದರೂ ಚಿಂತೆಯಿಲ್ಲ. ಲಾಕ್‌ಡೌನ್ ತೆಗೆಯುವುದಾಗಿ ಟ್ರಂಪ್ ಘೋಷಿಸಿದ್ದಾರೆ.