ಎರಡು ಮೂರು ದಿನಗಳ ಹಿಂದೆ ನಡುರಾತ್ರಿ ಕಳೆದು ಒಂದೂವರೆ ಗಂಟೆಯ ನಂತರ, ಅಂದರೆ ಸುಮಾರು 1.32ರ ರಾತ್ರಿಯೂ ಅಲ್ಲದ ಬೆಳಗೂ ಅಲ್ಲ ಬ್ರಾಹ್ಮೀ ಮುಹೂರ್ತದಲ್ಲಿ ಫೇಸ್‌ಬುಕ್ ಸ್ಟೇಟಸ್ ಅಪ್‌ಡೇಟ್ ಮಾಡುತ್ತಿದೆ. ನಾನು ‘ಪೋಸ್ಟ್’ ಅನ್ನುವ ಬಟನ್ ಒತ್ತಿದ ಎರಡೇ ಸೆಕೆಂಡಿಗೆ ಎಂಟು ಲೈಕುಗಳು ಬಂದು ಬಿದ್ದವು. ಬಹುಶಃ ಅಮೆರಿಕಾದಲ್ಲಿರುವ ಮಂದಿ ಇರಬೇಕು. ನಮ್ಮ ಇರುಳು ಅವರ ಹಗಲಲ್ಲವೇ ಎಂದುಕೊಂಡು ನೋಡಿದರೆ ಲೈಕು ಒತ್ತಿದವರು ಬೆಂಗಳೂರು, ಶಿವಮೊಗ್ಗೆ, ದಾವಣಗೆರೆ, ಮಂಗಳೂರಿನ ಗೆಳೆಯರಾಗಿದ್ದರು.
ಅವರಲ್ಲೊಬ್ಬರ ಫೋನಿಗೆ ಒಂದು ಮಿಸ್ ಕಾಲ್ ಕೊಟ್ಟೆ. ಬಹುಶಃ ಅರ್ಧ ರಿಂಗ್ ಆಗುವಷ್ಟರಲ್ಲಿ ನಾನು ಫೋನ್ ಕತ್ತರಿಸಿದ್ದೆ. ಮರುಕ್ಷಣವೇ ಅವರಿಂದ ಫೋನ್ ಬಂತು. ‘ಇದೇನ್ರೀ ನಡುರಾತ್ರಿಯಲ್ಲೂ ಎದ್ದಿದ್ದೀರಲ್ಲ’ ಅಂದೆ. ಅವರು ಜೋರಾಗಿ ನಕ್ಕು, ‘ಈ ಲಾಕ್ ಡೌನ್ ಕೃಪೆಯಿಂದ ಹಗಲು ರಾತ್ರಿಗಳು ಅಳಿಸಿಹೋಗಿವೆ ಕಣ್ರೀ’ ಅಂದರು.
ಬಹಳ ವರ್ಷಗಳ ಹಿಂದೆ ಸಿಟಿ ಬ್ಯಾಂಕಿನ ಒಂದು ಜಾಹೀರಾತು ಹೋರ್ಡಿಂಗು ಬೆಂಗಳೂರಲ್ಲಿ ತಲೆಯೆತ್ತಿತ್ತು. ಅದರಲ್ಲಿ ಬೆಂಗಳೂರಿನ ರಾತ್ರಿಯ ಒಂದು ಫೋಟೋದ ಜೊತೆಗೆ ‘ಸಿಟಿ ನೆವರ್ ಸ್ಲೀಫ್ಸ್’ ಎಂಬ ಬರಹವೂ ಇತ್ತು. ಅದು ಕ್ರಮೇಣ ನಿಜವಾಗುತ್ತಾ ಬಂದು ಮೆಟ್ರೋಸಿಟಿಗಳ ಮಂದಿಯ ಹಗಲು ರಾತ್ರಿಗಳು ಯಾವುದೋ ಬಿಂದುವಿನಲ್ಲಿ ಬೆರೆಯತೊಡಗಿದವು. ಯಾರು ಎಷ್ಟುಗಂಟೆಗೆ ನಿದ್ದೆ ಮಾಡುತ್ತಾರೆ ಅನ್ನುವುದನ್ನು ಮತ್ಯಾರೋ ನೋಡಬಹುದಿತ್ತು. ಈಗಲೂ ಸದಾ ಅನ್ ಲೈನ್ ಇರುವ ವಾಟ್ಸಪ್, ಫೇಸ್‌ಬುಕ್ಕಲ್ಲಿ ಬೀಳುವ ಸ್ಟೇಟಸ್ಸು, ಇನ್‌ಸ್ಟಾಗ್ರಾಮ್ ಅಕೌಂಟಲ್ಲಿ ಕಾಣಿಸುವ ಮೆಚ್ಚುಗೆ, ವಾಟ್ಸಪ್ ಸ್ಟೇಟಸ್ಸನ್ನು ಮತ್ಯಾರೋ ನೋಡಿದ ಸೂಚನೆಗಳೆಲ್ಲ ನಮಗೆ ಗೊತ್ತಿರುವ ಜಗತ್ತಿನಲ್ಲಿ ಯಾರೆಲ್ಲ ಎಚ್ಚರವಾಗಿದ್ದಾರೆ ಅನ್ನುವುದನ್ನು ಹೇಳುತ್ತಿರುತ್ತದೆ.
undefined
ಈಗಾಗಲೇ ನಿದ್ದೆಗೆಟ್ಟಿರುವ ಮಂದಿಯ ನಿದ್ದೆಗೆಡಿಸುವಲ್ಲಿ ಲಾಕ್ ಡೌನ್ ಪಾತ್ರವೇನು? ಬಹುಶಃ ಲಾಕ್‌ಡೌನ್ ಎಲ್ಲರ ದಿನಚರಿಯನ್ನೂ ಬದಲಾಯಿಸಿದೆ. ಬೆಳಗ್ಗೆ ಆರು ಗಂಟೆಗೆ ಏಳೋದು, ಎಂಟು ಗಂಟೆಗೆ ತಿಂಡಿ, ಒಂಬತ್ತಕ್ಕೆ ಸ್ನಾನ, ಹತ್ತು ಗಂಟೆಗೆ ಆಫೀಸು, ರಾತ್ರಿ ಒಂಬತ್ತಕ್ಕೆ ಮನೆಗೆ ವಾಪಸ್ಸು, ಹನ್ನೊಂದಕ್ಕೆ ನಿದ್ರೆ ಎನ್ನುವ ಕಟ್ಟುನಿಟ್ಟಾದ ದಿನಚರಿಯನ್ನು ಹೊಂದಿರುವ ವೈದ್ಯರಾದ ಗಿರಿಧರ ಸೋಮಯಾಜಿ ಹೇಳುವಂತೆ, ಅವರ ದಿನಚರಿಯೂ ಪೂರ್ತಿ ಬದಲಾಗಿದೆ.
‘ನಾನು ಡೆಂಟಿಸ್ಟ್. ಮನೆಯಿಂದ ಕೆಲಸ ಮಾಡುವುದೂ ನನಗೆ ಸಾಧ್ಯವಿಲ್ಲ. ಮನೆ ಬಿಟ್ಟು ಹೋಗುವ ಹಾಗೂ ಇಲ್ಲ. ಈ ಮೂವತ್ತೆರಡು ದಿನಗಳಲ್ಲಿ ನಾನು ಸುಮಾರು ಸಿನಿಮಾ ನೋಡಿದೆ, ಎರಡು ಜನ್ಮಕ್ಕಾಗುವಷ್ಟುಹಗಲು ನಿದ್ದೆ ಮಾಡಿದೆ, ಕಿಟಕಿಯಿಂದ ನಮ್ಮ ಮನೆಯ ಎದುರಿನ ರಸ್ತೆಯನ್ನು ನೋಡುತ್ತಾ ಮತಿಭ್ರಾಂತನಂತೆ ಕುಳಿತಿದ್ದೆ. ಹಗಲು ನಿದ್ದೆ ಮಾಡಿದ್ದರಿಂದ ರಾತ್ರಿ ನಿದ್ದೆ ಬರುತ್ತಿರಲಿಲ್ಲ. ರಾತ್ರಿ ನಿದ್ದೆ ಬರಲು ಏನೇನು ಮಾಡಬೇಕೆಂದು ವೈದ್ಯನಾಗಿ ನನಗೆ ಚೆನ್ನಾಗಿಯೇ ಗೊತ್ತಿದೆ. ಆದರೆ ನಮಗೆ ಗೊತ್ತಿರುವುದನ್ನೆಲ್ಲ ನಾವೆಲ್ಲಿ ಮಾಡುತ್ತೇವೆ? ಹೀಗಾಗಿ ರಾತ್ರಿ ಕೂಡ ಹೊತ್ತಲ್ಲದ ಹೊತ್ತಲ್ಲಿ ಸಿನಿಮಾ ನೋಡುವುದು, ಹಾಡು ಕೇಳುವುದು, ಏನಾದರೂ ಗೀಚುವುದು, ದೋಸೆ ಮಾಡಿಕೊಂಡು ತಿನ್ನುವುದು.. ಎಲ್ಲ ನಡೆದಿದೆ. ಒಂದೇ ತಿಂಗಳಲ್ಲಿ ನನ್ನ ಬದುಕು ಹೇಗೆ ಬದಲಾಗಿದೆ ಎಂದರೆ ಎಷ್ಟೋ ಸಲ ನಡುರಾತ್ರಿ ಹನ್ನೆರಡೂವರೆಗೆ ಹಸಿವಾಗುತ್ತದೆ. ಅಂದರೆ ನನ್ನ ಮಿದುಳು ನೀನು ಚುರುಕಾಗಿದ್ದೀ. ಏನಾದರೂ ತಿನ್ನು ಎಂದು ಅಜ್ಞಾಪಿಸುತ್ತದೆ.’
ನಿದ್ದೆ, ಊಟದ ವಿಚಾರದಲ್ಲಿ ಒಂದು ನಿಯಮಿತವಾದ ಲಯವನ್ನು ನಮ್ಮ ದೇಹವೇ ಅನುಸರಿಸುತ್ತದೆ. ನೀವು ಬೆಳಗ್ಗೆ ಎಂಟು ಗಂಟೆಗೆ ನಾಲ್ಕು ದಿನ ಎದ್ದರೆ ಐದನೇ ದಿನ ಎಂಟು ಗಂಟೆಗೇ ಎಚ್ಚರಾಗುತ್ತದೆ. ಒಂಬತ್ತು ಗಂಟೆಗೆ ಬ್ರೇಕ್‌ಫಾಸ್ಟ್ ಮಾಡುತ್ತಿದ್ದರೆ, ಒಂಬತ್ತು ಗಂಟೆಯಾಗುತ್ತಿದ್ದಂತೆ ಹಸಿವಾಗುತ್ತದೆ. ಹೀಗೆ ದೇಹ ಮಾಡಿಕೊಂಡಿರುವ ರೊಟೀನನ್ನುಲಾಕ್‌ಡೌನ್ ನುಚ್ಚುನೂರು ಮಾಡಿದೆ. ಯಾವಾಗಲೋ ತಿನ್ನುವುದು, ಯಾವಾಗಲೋ ಮಲಗುವುದು, ದೇಹಕ್ಕೆ ಬೇಡದಷ್ಟುಮನರಂಜನೆ ತುಂಬಿಕೊಳ್ಳಲು ನೋಡುವುದು- ಇವೆಲ್ಲ ಸೇರಿ ದೇಹವನ್ನು ಮನಸ್ಸನ್ನೂ ದಿಕ್ಕುಗೆಡಿಸಿವೆ.
ನಿದ್ರೆ ಕಸಿದ ಲಾಕ್‍ಡೌನ್; ರಾತ್ರಿ ನಿದ್ರೆ ಬರುತ್ತಿಲ್ಲ ಎನ್ನೋದೇ ಬಹುತೇಕರ ಅಳಲು
ಮನೋವೈದ್ಯ ಶರಣ್ ಸಾರಥಿ ಹೇಳುವಂತೆ ಅರ್ಧ ನೋಡಿದ ಸಿನಿಮಾಗಳು, ಅರ್ಧ ಓದಿದ ಕಾದಂಬರಿಗಳು, ಅರ್ಧ ಕೇಳಿದ ಕತೆಗಳು ಮನಸ್ಸನ್ನು ಹದಗೆಡಿಸುತ್ತವೆ. ನೀವು ಯಾವುದಾದರೂ ಒಂದು ಚಿತ್ರವನ್ನು ಕುತೂಹಲಕಾರಿ ಹಂತದ ತನಕ ನೋಡಿ ಅಲ್ಲಿಗೇ ನಿಲ್ಲಿಸಿ ನಿದ್ದೆ ಮಾಡಿ. ನಿಮ್ಮ ಮನಸ್ಸಿನಲ್ಲಿ ನಿದ್ದೆಯಲ್ಲಿಯೂ ಆ ಕತೆ ಓಡುತ್ತಿರುತ್ತದೆ. ನಿರಂಬಳವಾಗಿ ನಿದ್ದೆ ಮಾಡಲು ಅದು ಅವಕಾಶ ಮಾಡಿಕೊಡುವುದೇ ಇಲ್ಲ. ಸುದ್ದಿಯ ವಿಚಾರದಲ್ಲೂ ಅಷ್ಟೇ. ದಿನವೂ ಸುದ್ದಿಯ ಹಿಂದೆ ಬಿದ್ದರೆ, ಥಟ್ಟನೆ ಎಚ್ಚರವಾದಾಗ
ಮತ್ತೇನಾಗಿರಬಹುದು ಎಂಬ ಪ್ರಶ್ನೆ ಕಾಡುತ್ತದೆ. ಆ ಪ್ರಶ್ನೆ ಸದಾ ಎಚ್ಚರವಾಗಿಯೇ ಇರುತ್ತದೆ.
ಹೆಚ್ಚಿನವರಿಗೆ ಎದ್ದೊಡನೆ ವಾಟ್ಸಪ್, ಫೇಸ್‌ಬುಕ್ ನೋಡುವ ಚಟವಿರುತ್ತದೆ. ಇವೆರಡೂ ನಮಗೆ ಬೇಡದ ಸುದ್ದಿ ಮತ್ತು ಮನರಂಜನೆಯನ್ನು ನಮ್ಮೊಳಗೆ ತುಂಬುತ್ತದೆ. ನಿದ್ದೆಯ ಸೈಕಲ್ ಬದಲಾಗಲಿಕ್ಕೆ ಅದೂ ಕಾರಣ.
ನಿದ್ದೆಗೇನು ಮಾಡಬೇಕು?
1. ಒಂದು ನಿಯಮಿತ ವೇಳೆಯಲ್ಲಿ ಮಲಗುವುದನ್ನು ರೂಢಿ ಮಾಡಿಕೊಳ್ಳಿ.
2. ಹಗಲು ನಿದ್ದೆ ಮಾಡಬೇಡಿ.
ನಿದ್ರೆ ಕೊರತೆ ನಿಮ್ಮ ಕರಿಯರ್‌ಗೆ ಎರವಾಗುತ್ತದೆ, ಜೋಕೆ!
3. ಕಾಫಿ, ಟೀ, ಕುರುಕು ತಿಂಡಿ ಮಲಗುವ ಹೊತ್ತಿಗೆ ಕುಡಿಯದಿರಿ, ತಿನ್ನದಿರಿ.
4. ರಾತ್ರಿ ತಣ್ಣೀರಿನ ಸ್ನಾನ ಮಾಡಿ.
5. ಎದ್ದ ತಕ್ಷಣ ಕಿಟಕಿ ತೆರೆಯಿರಿ ಅಥವಾ ಟೆರೇಸಿಗೆ ಹೋಗಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಿ.
6. ಲಾಕ್‌ಡೌನ್ ಅಂದರೆ ಬಿಡುವು ಅನ್ನುವ ಮನಸ್ಥಿತಿಯನ್ನು ಕಿತ್ತುಹಾಕಿ. ಅದಕ್ಕೂ ಒಂದು ಶಿಸ್ತಿರಲಿ.
7. ಮಲಗುವುದಕ್ಕೆ ಕನಿಷ್ಠ ಎರಡು ಗಂಟೆಗೆ ಮೊದಲು ಫೋನು, ಟೀವಿ, ಸಂಗೀತವನ್ನೆಲ್ಲ ನಿಲ್ಲಿಸಿ.
8. ಫೋನನ್ನು ದೂರ ಇಟ್ಟು, ಸೈಲೆಂಟ್ ಮೋಡ್‌ನಲ್ಲಿಟ್ಟು ನಿದ್ದೆ ಮಾಡಿ.
9. ಸಾಧ್ಯವಾದರೆ ಒಬ್ಬರೇ ಮಲಗಲು ಯತ್ನಿಸಿ.
10. ಬೆಡ್‌ರೂಮಲ್ಲಿ ನಿದ್ದೆ ಬರದೇ ಇದ್ದರೆ, ಜಾಗ ಬದಲಾಯಿಸಿ. ಸೋಫಾ, ನೆಲ, ಅಡುಗೆಮನೆ ಎಲ್ಲೆಂದರಲ್ಲಿ ಚೆನ್ನಾಗಿ ನಿದ್ದೆ ಬರಬಹುದು.