ಅಂತರ್ಜಾಲದ ಸಹಾಯದಿಂದ ಮಾನಸಿಕ ಸಮಸ್ಯೆಗಳಿಗೆ ಕೌನ್ಸೆಲಿಂಗ್ ನೀಡುವುದೇ ಆನ್‌ಲೈನ್ ಥೆರಪಿ.
ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಹರಡಲು ತೊಡಗಿದಂದಿನಿಂದ ಮಾನಸಿಕ ಸಮಸ್ಯೆಗಳಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ. ಲಾಕ್‌ಡೌನ್‌ನಿಂದ ಉಂಟಾದ ಆತಂಕ ಹಾಗೂ ಒತ್ತಡ, ಜೊತೆಗೆ ಕೊರೋನಾ ಕುರಿತ ಭಯ ಎಲ್ಲವೂ ಸೇರಿ ಸಮಸ್ಯೆ ಬೆಳೆಯುತ್ತಿದೆ. ಹೀಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ಬಹುತೇಕ ಬಾರಿ ಥೆರಪಿಯು ಅದ್ಬುತ ಮೆಡಿಸಿನ್ ಆಗಿ ಕೆಲಸ ಮಾಡುತ್ತದೆ. ಈಗ ಲಾಕ್‌ಡೌನ್ ಇರುವುದರಿಂದ ಫೇಸ್ ಟು ಫೇಸ್ ಥೆರಪಿಗೆ ಒಳಗಾಗುವುದು ಕಷ್ಟವಾಗಬಹುದು. ಆದರೆ, ಆನ್‌ಲೈನ್ ಥೆರಪಿಯಂತೂ ಇದ್ದೇ ಇದೆಯಲ್ಲ... ಅಗತ್ಯವಿರುವವರು ಅದರ ಸಹಾಯ ಪಡೆದುಕೊಳ್ಳಬಹುದು.
ಏನಿದು ಆನ್‌ಲೈನ್ ಥೆರಪಿ?
ಅಂತರ್ಜಾಲದ ಸಹಾಯದಿಂದ ಮಾನಸಿಕ ಸಮಸ್ಯೆಗಳಿಗೆ ಕೌನ್ಸೆಲಿಂಗ್ ನೀಡುವುದೇ ಆನ್‌ಲೈನ್ ಥೆರಪಿ. ಇದಕ್ಕಾಗಿ ಫೋನ್, ಲ್ಯಾಪ್‌ಟಾಪ್ ಏನನ್ನಾದರೂ ಬಳಸಬಹುದು. ಚಾಟಿಂಗ್, ಫೋನ್ ಕಾಲ್ಸ್, ವಿಡಿಯೋ ಕಾಲ್- ಹೀಗೆ ವಿವಿಧ ವಿಧಗಳಲ್ಲಿ ಯಾವುದು ಕ್ಲೈಂಟ್‌ಗೆ ಅನುಕೂಲವೋ ಅದನ್ನು ಬಳಸಲು ಅವಕಾಶವಿದೆ. ಆನ್‌ಲೈನ್ ಥೆರಪಿ ಆರಾಮಾಗಿ ಸಾಗಲು ಇಲ್ಲಿವೆ ಕೆಲ ಟಿಪ್ಸ್.
ಸ್ಪೇಸ್ ಹಾಗೂ ಟೈಮ್
ಆನ್‌ಲೈನ್ ಥೆರಪಿಯ ಒಂದು ಪ್ರಯೋಜನ ಎಂದರೆ ಯಾವ ಟೈಮ್‌ನಲ್ಲಿ ಎಲ್ಲಿಂದ ಬೇಕಾದರೂ ಥೆರಪಿ ತೆಗೆದುಕೊಳ್ಳಬಹುದು. ಹಾಗಂಥ ಥೆರಪಿ ಸೆಶನ್‌ಗಳನ್ನು ಬೇಕಾಬಿಟ್ಟಿ ಸಮಯಕ್ಕೆ ಮುಂದೂಡಬೇಡಿ. ಸಾಮಾನ್ಯವಾಗಿ ಒಂದೇ ಸ್ಥಳ ಹಾಗೂ ದಿನದ ಸಮಯವನ್ನು ಆಯ್ಕೆ ಮಾಡಿಕೊಳ್ಳುವುದು ಥೆರಪಿಯ ದೃಷ್ಟಿಯಿಂದ ಹೆಚ್ಚು ಲಾಭಕರ. ಥೆರಪಿಯ ಭಾವನಾತ್ಮಕ ಭಾಗ ಇದನ್ನು ಬೇಡುತ್ತದೆ. ಬಾಲ್ಕನಿ ಅಥವಾ ಇತರೆ ಕೋಣೆಯಲ್ಲಿ ಬೇರಾರೂ ಬರುವುದಿಲ್ಲವೆಂಬುದನ್ನು ಖಚಿತಪಡಿಸಿಕೊಂಡು ಹೆಡ್‌ಫೋನ್ ಹಾಕಿಕೊಂಡು ಕುಳಿತರೆ, ಥೆರಪಿಗೆ ಬೇಕಾದ ಖಾಸಗಿತನ ಒದಗಿಸಿಕೊಳ್ಳಬಹುದು. ನಿಮಗೆ ಎಲ್ಲಿ ಸುರಕ್ಷತಾ ಭಾವನೆ ಬರುತ್ತದೆಯೋ ಮನೆಯ ಆ ಸ್ಥಳವನ್ನು ಥೆರಪಿ ತೆಗೆದುಕೊಳ್ಳಲು ಆಯ್ಕೆ ಮಾಡಿಕೊಳ್ಳಿ. ಥೆರಪಿ ಸಂದರ್ಭದಲ್ಲಿ ಒಂದು ವೇಳೆ ನಿಮಗೆ ಅಳು ಒತ್ತರಿಸಿಕೊಂಡು ಬಂದಲ್ಲಿ ಕೂಡಾ ಅದನ್ನು ಫ್ರೀಯಾಗಿ ಮಾಡುವಂತ ಸ್ಥಳ, ಸಮಯ ಆರಿಸಿಕೊಳ್ಳಿ.
ಮುಖತಃ ಥೆರಪಿಸ್ಟ್ ಭೇಟಿಯಾದ ಗಾಢತೆ ಆನ್‌ಲೈನ್ ಥೆರಪಿಯಲ್ಲಿ ಸಿಗುವುದು ಕಷ್ಟವೇ. ಅಥವಾ ಕೆಲವರಿಗೆ ಹೀಗೆ ಮುಖಾಮುಖಿಯಾಗದಿರುವುದೇ ಹೆಚ್ಚು ಕಂಫರ್ಟ್ ಎನಿಸಬಹುದು. ಎರಡೂ ವಿಧಾನದಲ್ಲಿ ಕೂಡಾ ಆರಂಭದ ಸೆಶನ್‌ನಲ್ಲಿ ಥೆರಪಿಸ್ಟ್ ಹಾಗೂ ಕ್ಲೈಂಟ್ ನಡುವೆ ಒಂದು ಕಂಫರ್ಟ್ ಸ್ಥಾಪನೆಯಾಗಲು ಸಮಯ ಹಿಡಿಯುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಥೆರಪಿಸ್ಟ್ ಜೊತೆ ಸಿಂಕ್ ಆಗುತ್ತಿಲ್ಲವೆಂದು ಅಸಮಾಧಾನ ಪಟ್ಟುಕೊಳ್ಳಬೇಡಿ. ಅವರೊಂದಿಗೆ ಸಾಧ್ಯವಾದಷ್ಟು ಓಪನ್ ಆಗಿ ಮಾತನಾಡಿ. ನಿಧಾನವಾಗಿ ಥೆರಪಿಸ್ಟ್ ಜೊತೆ ಏನನ್ನು ಬೇಕಾದರೂ ಮಾತಾಡಬಲ್ಲೆನೆಂಬ ಕಾನ್ಪಿಡೆನ್ಸ್ ಬರುತ್ತದೆ.
undefined
ಫ್ಲೆಕ್ಸಿಬಲ್ ಆಗಿರಿ
ವಿಡಿಯೋ, ಚಾಟ್ ಅಥವಾ ಪೋನ್ ಕಾಲ್‌ಗಳಲ್ಲಿ ನಿಮಗೆ ಯಾವುದು ಹೆಚ್ಚು ಆರಾಮವೆನಿಸುತ್ತದೆ ಎಂಬುದನ್ನು ಎಲ್ಲವನ್ನೂ ಬಳಸಿ ನೋಡಿ ಕಂಡುಕೊಳ್ಳಿ. ಟೆಲಿಮೆಡಿಸಿನ್‌ನಲ್ಲಿ ಕೆಲ ಕೊರತೆಗಳಿರಬಹುದು. ಆದರೆ, ಪ್ರಯೋಜನಗಳೂ ಹಲವಿವೆ. ಎಲ್ಲವೂ ಆನ್‌ಲೈನ್ ಆಗುತ್ತಿರುವ ಈ ದಿನಗಳಲ್ಲಿ ಮಾನಸಿಕ ಸಮಸ್ಯೆಗಳಿಗೆ ಕೂಡಾ ಆನ್‌ಲೈನ್ ಥೆರಪಿ ಬಳಸುವುದು, ಟೆಲಿಮೆಡಿಸಿನ್ ಮೊರೆ ಹೋಗುವುದು ಕೂಡಾ ಸಾಮಾನ್ಯ ಜೀವನದ ಭಾಗವೇ ಆಗಿದೆ.
ನಿಮ್ಮ ಭಾವನೆಗಳನ್ನು ಎಕ್ಸ್‌ಪ್ರೆಸ್ ಮಾಡಿ
ಫೇಸ್ ಟು ಫೇಸ್ ಥೆರಪಿಸ್ಟ್ ಭೇಟಿಯಾದಾಗ ಅವರು ನಿಮ್ಮ ಮುಖಭಾವ, ದೇಹಭಾಷೆ ಎಲ್ಲವನ್ನೂ ಅಧ್ಯಯನ ಮಾಡಿ, ಮಾತಿಗೂ, ಭಾವನೆಗಳಿಗೂ ಮ್ಯಾಚ್ ಆಗುತ್ತಿದೆಯೇ ಎಂದು ನೋಡಲು ಸಾಧ್ಯವಾಗುತ್ತದೆ. ಆದರೆ ಆನ್‌ಲೈನ್ ಥೆರಪಿಯಲ್ಲಿ ವಿಡಿಯೋ ಕಾಲ್ ಅಲ್ಲದ ಹೊರತು ಹೀಗೆ ಗಮನಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಿಮ್ಮ ನೈಜ ಭಾವನೆಗಳು, ಆತಂಕಗಳು, ಆ ಕ್ಷಣದಲ್ಲಿ ನಿಮಗೆ ಏನನ್ನಿಸುತ್ತಿದೆಯೋ ಅವನ್ನು ಮುಜುಗರ ಬಿಟ್ಟು ಹೇಳಿಕೊಳ್ಳಿ. ಸಾಧ್ಯವಾದಷ್ಟು ವಿವರವಾಗಿ ಹೇಳಿ. ಇದರಿಂದ ಥೆರಪಿಸ್ಟ್‌ಗೆ ನಿಮ್ಮ ಸಮಸ್ಯೆ ಅರಿಯಲು ಸುಲಭವಾಗುತ್ತದೆ. ಇಷ್ಟಕ್ಕೂ ಯಾವ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದೀರೋ, ಆ ಸಮಸ್ಯೆಯನ್ನೇ ಹೇಳದೆ ಮತ್ತೊಬ್ಬರು ಪರಿಹಾರ ಹುಡುಕಿಕೊಡಲಿ ಎಂದು ನಿರೀಕ್ಷಿಸುವುದು ಸರಿಯಲ್ಲ ಅಲ್ಲವೇ?
ಫೀಡ್‌ಬ್ಯಾಕ್ ಕೊಡಿ
ನೀವು ಈ ಹೊಸ ರೀತಿಯ ಥೆರಪಿಗೆ ಎಷ್ಟು ಹೊಸಬರೋ, ಥೆರಪಿಸ್ಟ್ ಕೂಡಾ ಅಷ್ಟೇ ಹೊಸಬರು. ಹಾಗಾಗಿ, ಅವರು ಕೂಡಾ ಈ ಥೆರಪಿ ನೀಡುವ ಹಾದಿಯಲ್ಲಿ ಕೆಲ ತಪ್ಪುಗಳನ್ನು ಮಾಡಬಹುದು. ಯಾವುದಾದರೂ ವಿಷಯ ನಿಮಗೆ ಅಷ್ಟು ಸಹಾಯಕವೆನಿಸದಿದ್ದರೆ ಅವರಿಗೆ ಅದನ್ನು ತಿಳಿಸಿ. ಹಾಗಂಥ ಅವರ ಮೇಲೆ ನಂಬಿಕೆ ಕಳೆದುಕೊಳ್ಳುವ ಅಗತ್ಯ ಇಲ್ಲ. ಮಾತುಕತೆಯನ್ನು ಪಾರದರ್ಶಕವಾಗಿಟ್ಟುಕೊಳ್ಳುವುದು ಇಬ್ಬರಿಗೂ ಒಳ್ಳೆಯದು.