ಔಷಧಿ ನಕಲಿನಾ ಅನ್ನೋ ಆತಂಕ ಬೇಕಿಲ್ಲ, ಇನ್ಮುಂದೆ ಕ್ಯೂಆರ್ ಕೋಡ್ ಮೂಲಕ ಚೆಕ್ ಮಾಡ್ಬೋದು

By Suvarna News  |  First Published Oct 5, 2022, 11:42 AM IST

ಇವತ್ತಿನ ಕಾಲದಲ್ಲಿ ಯಾವುದನ್ನೂ ಕಣ್ಣುಮುಚ್ಚಿ ನಂಬುವಂತಿಲ್ಲ. ಎಲ್ಲದರಲ್ಲೂ ಅಸಲಿಯಂತೆಯೇ ನಕಲಿ ಸಹ ಹೆಚ್ಚು ಸಾಮಾನ್ಯವಾಗಿದೆ. ಔಷಧಿಗಳ ವಿಚಾರದಲ್ಲಿಯೂ ಈ ಸಮಸ್ಯೆ ಕಾಡ್ತಿದೆ. ಹಾಗಂತ ಆರೋಗ್ಯದ ವಿಚಾರ ಬಂದಾಗ ರಿಸ್ಕ್‌ ತೆಗೆದುಕೊಳ್ಳೋಕೆ ಆಗಲ್ಲ. ಹೀಗಾಗಿ ಸರ್ಕಾರ ಮೆಡಿಸಿನ್‌ಗಳ ಅಸಲೀಯತ್ತು ಚೆಕ್‌ ಮಾಡಲುಟ್ರ್ಯಾಕ್ ಮತ್ತು ಟ್ರೇಸ್ ಕಾರ್ಯವಿಧಾನವನ್ನು ಪ್ರಾರಂಭಿಸಲು ಯೋಜಿಸಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


ಮಾರುಕಟ್ಟೆಯಲ್ಲಿ ನಕಲಿ ಔಷಧಿಗಳ ಚಲಾವಣೆಯಲ್ಲಿರುವುದನ್ನು ಪತ್ತೆಹಚ್ಚಲು ಮತ್ತು ನಿಭಾಯಿಸಲು ಭಾರತ ಸರ್ಕಾರವು ಹೊಸ ಯೋಜನೆಯೊಂದನ್ನು ಸಿದ್ಧಪಡಿಸಿದೆ. ಮೆಡಿಸಿನ್ ಪ್ಯಾಕ್‌ನಲ್ಲಿ ಬಾರ್‌ಕೋಡ್‌ಗಳು ಅಥವಾ ಕ್ಯೂಆರ್ ಕೋಡ್‌ಗಳನ್ನು ಮುದ್ರಿಸುವ ಮೂಲಕ ಟ್ರ್ಯಾಕ್ ಮತ್ತು ಟ್ರೇಸ್ ಕಾರ್ಯವಿಧಾನವನ್ನು ಪ್ರಾರಂಭಿಸಲು ಸರ್ಕಾರ ಯೋಜಿಸಿದೆ. ಆಯ್ದ ಔಷಧಿಗಳನ್ನು ಬಾರ್ ಕೋಡ್, ಕ್ಯೂಆರ್ ಕೋಡ್ ವ್ಯಾಪ್ತಿಯಲ್ಲಿ ತರಲಿದ್ದು ತದನಂತರ ಕ್ರಮೇಣ ಇಡೀ ಫಾರ್ಮಾ ಕ್ಷೇತ್ರವನ್ನು ಇದರಡಿಯಲ್ಲಿ ತರಲು ಚಿಂತಿಸಲಾಗುತ್ತಿದೆ. ಒಂದು ದಶಕದ ಹಿಂದೆ ಪರಿಕಲ್ಪನೆ ಮಾಡಲಾದ ಈ ಕ್ರಮವು ಔಷಧಿಗಳ ಗುಣಮಟ್ಟವನ್ನು ಖಚಿತಪಡಿಸುತ್ತದೆ ಎಂದು ತಿಳಿದುಬಂದಿದೆ. 

ಫೇಕ್‌ ಮೆಡಿಸಿನ್ಸ್ ಪತ್ತೆ ಹಚ್ಚಲು ಕ್ಯೂ ಆರ್‌ ಕೋಡ್
ಇಂದಿನ ದಿನಗಳಲ್ಲಿ ತಂತ್ರಜ್ಞಾನ (Technology) ಸಾಕಷ್ಟು ಪ್ರಗತಿಸಿ ಸಾಧಿಸಿದೆ. ಜಸ್ಟ್‌ ಮೊಬೈಲ್‌ನ ಒಂದು ಕ್ಲಿಕ್‌ನಿಂದ ದಿನಸಿ, ಆಹಾರ (Food), ತರಕಾರಿ (Vegetables), ಪೀಠೋಪಕರಣ ಎಲ್ಲವೂ ಮನೆ ಮುಂದಿರುತ್ತದೆ. ಮಾತ್ರವಲ್ಲ ಆನ್‌ಲೈನ್ ಮೂಲಕ ಮೆಡಿಸಿನ್‌ಗಳನ್ನು ಸಹ ತರಿಸಿಕೊಳ್ಳಬಹುದು. ಆದರೆ, ದುರದೃಷ್ಟವಶಾತ್ ನಕಲಿ ಔಷಧಿಗಳೂ (Medicines) ಸಹ ಈಗ ಪ್ರಚಲಿತದಲ್ಲಿರುವ ಕಾರಣ ಹೀಗೆ ಟ್ಯಾಬ್ಲೆಟ್‌ಗಳನ್ನು ತರಿಸಿಕೊಳ್ಳುವುದು ಕಷ್ಟ.

Tap to resize

Latest Videos

undefined

ಹೀಗಾಗಿಯೇ ಈ ಕ್ಯೂ ಆರ್‌ ಕೋಡ್ ಹಲವರಿಗೆ ನೆರವಾಗಲಿದೆ. ಇದೀಗ ಕೇಂದ್ರವು ಸಾಕಷ್ಟು ಬೇಡಿಕೆಯಲ್ಲಿರುವ, ಹೆಚ್ಚು ಖರೀದಿಸಲ್ಪಡುವ ಸುಮಾರು 300 ಔಷಧಿಗಳ ತಯಾರಕರಿಗೆ ಅವರು ಉತ್ಪಾದಿಸುವ ಔಷಧಿಗಳ ಪೊಟ್ಟಣಗಳ ಮೇಲೆ ಬಾರ್ ಕೋಡ್ ಅಥವಾ ಕ್ಯೂಆರ್ ಕೋಡ್ ನಮೂದಿಸುವಂತೆ ಶೀಘ್ರದಲ್ಲೇ ಸೂಚಿಸಲಿದೆ ಎಂದು ವರದಿಯಾಗಿದೆ.

34 ಅಗತ್ಯ ಔಷಧಗಳ ದರ ಇಳಿಕೆ ಮಾಡಿದ ಕೇಂದ್ರ ಸರ್ಕಾರ

ಆರಂಭಿಕ ಹಂತದಲ್ಲಿ 300 ಹೆಚ್ಚು ಔಷಧಿಗಳ ಮೇಲೆ ಲೇಬಲ್‌ 
ಬಾರ್‌ಕೋಡ್‌ಗಳು ಅಥವಾ ತ್ವರಿತ ಪ್ರತಿಕ್ರಿಯೆ (QR) ಕೋಡ್‌ಗಳನ್ನು ಆರಭಿಕ ಹಂತದಲ್ಲಿ 300 ಹೆಚ್ಚು ಮಾರಾಟವಾಗುವ ಔಷಧಿಗಳ 'ಪ್ರಾಥಮಿಕ' ಪ್ಯಾಕೇಜಿಂಗ್ ಲೇಬಲ್‌ಗಳ ಮೇಲೆ ಅಂಟಿಸಲಾಗುತ್ತದೆ. ಪ್ರಾಥಮಿಕವು ಮಾರಾಟ ಮಾಡಬಹುದಾದ ವಸ್ತುಗಳನ್ನು ಒಳಗೊಂಡಿರುವ ಬಾಟಲಿ, ಕ್ಯಾನ್, ಜಾರ್ ಅಥವಾ ಟ್ಯೂಬ್‌ನಂತಹ ಮೊದಲ ಹಂತದ ಉತ್ಪನ್ನ ಪ್ಯಾಕೇಜಿಂಗ್ ಆಗಿದೆ. ವ್ಯಾಪಕವಾಗಿ ಮಾರಾಟವಾಗುವ ಪ್ರತಿಜೀವಕಗಳು, ಹೃದಯ, ನೋವು ನಿವಾರಕ ಮಾತ್ರೆಗಳು (Pain killers) ಮತ್ತು ಪ್ರತಿ ಸ್ಟ್ರಿಪ್‌ಗೆ 100 ರೂ.ಗಿಂತ ಹೆಚ್ಚಿನ MRP ಹೊಂದಿರುವ ಅಲರ್ಜಿ-ವಿರೋಧಿ ಔಷಧಗಳನ್ನು ಈ ಹಂತದಲ್ಲಿ ಸೇರಿಸಲಾಗುವುದು ಎಂದು ತಿಳಿದುಬಂದಿದೆ.

ಔಷಧದ ನೈಜತೆಯನ್ನು ಪರಿಶೀಲಿಸಲು ಅವಕಾಶ
ದೃಢೀಕರಣಕ್ಕೆ ಅನುಕೂಲವಾಗುವಂತೆ ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳೊಂದಿಗೆ ಸ್ಪಷ್ಟವಾದ ಡೇಟಾವನ್ನು ಸಂಗ್ರಹಿಸುವ ಪ್ರಾಥಮಿಕ ಅಥವಾ ದ್ವಿತೀಯ ಪ್ಯಾಕೇಜ್ ಲೇಬಲ್‌ನಲ್ಲಿ ಬಾರ್‌ಕೋಡ್‌ಗಳು ಅಥವಾ ಕ್ಯೂಆರ್ ಕೋಡ್‌ಗಳನ್ನು ಅಂಟಿಸುವಂತೆ ಕೇಂದ್ರವು ಜೂನ್‌ನಲ್ಲಿ ಫಾರ್ಮಾ ಕಂಪನಿಗಳಿಗೆ ವಿನಂತಿಸಿತ್ತು. ಒಮ್ಮೆ ಈ ಕಾರ್ಯವಿಧಾನವು ಜಾರಿಗೆ ಬಂದರೆ, ಗ್ರಾಹಕರು ಸಚಿವಾಲಯವು ಅಭಿವೃದ್ಧಿಪಡಿಸಿದ ಪೋರ್ಟಲ್‌ನಲ್ಲಿ (ವೆಬ್‌ಸೈಟ್) ಅನನ್ಯ ID ಕೋಡ್ ಅನ್ನು ನಮೂದಿಸುವ ಮೂಲಕ ಔಷಧದ ನೈಜತೆಯನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ನಂತರ ಅದನ್ನು ಮೊಬೈಲ್ ಫೋನ್ ಅಥವಾ ಪಠ್ಯ ಸಂದೇಶವನ್ನು ಬಳಸಿಕೊಂಡು ಟ್ರ್ಯಾಕ್ ಮಾಡಬಹುದಾಗಿದೆ. ಈ ಮೂಲಕ ನೈಜವಾದ ಔಷಧಿಯ ಬಗ್ಗೆ ಮಾಹಿತಿಯನ್ನು (Information) ಹುಡುಕಿ ದೃಢಪಡಿಸಿಕೊಳ್ಳಬಹುದಾಗಿದೆ ಎಂಬುದು ಕೇಂದ್ರದ ಲೆಕ್ಕಾಚಾರವಾಗಿದೆ.

ರೋಗಿಗಳಿಗೆ ಡೋಲೋ ಮಾತ್ರೆ ಶಿಫಾರಸಿಗಾಗಿ ವೈದ್ಯರಿಗೆ 1,000 ಕೋಟಿ ರೂ ಖರ್ಚು, ವರದಿ ಕೇಳಿದ ಸುಪ್ರೀಂ!

ವಿಶ್ವಸಂಸ್ಥೆಯ ವರದಿ
ಈ ನಡೆಯು ನಿಜಕ್ಕೂ ಭಾರತದಲ್ಲಿ ಸದ್ಯ ಮಾರಾಟವಾಗುತ್ತಿದೆ ಎನ್ನಲಾಗುವ ಕೆಲವು ನಕಲಿ ಔಷಧಿಗಳನ್ನು ಖರೀದಿಸಲಾಗದಂತೆ ಕಡಿವಾಣ ಹಾಕಲಿದೆ. ಇನ್ನು ವಿಶ್ವ ಆರೋಗ್ಯ ಸಂಸ್ಥೆಯು (WHO) ತನ್ನ ವರದಿಯೊಂದರಲ್ಲಿ, ಜಾಗತಿಕವಾಗಿ ಮಾರಾಟವಾಗುವ ನಕಲಿ ಔಷಧಿ (Fake medicine)ಗಳಲ್ಲಿ ಸುಮಾರು 35 ಪ್ರತಿಶತದಷ್ಟು ಭಾರತದಿಂದ ಬರುತ್ತವೆ ಎಂದು ಉಲ್ಲೇಖಿಸಿದೆ. ಈ ಕ್ರಮಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು, ಈ ಕ್ರಮವನ್ನು ಕಡ್ಡಾಯ ಮಾಡುವ ಕುರಿತು ನಿರ್ಧರಿಸಲಾಗಿದ್ದು ಮೊದಲಿಗೆ ಕೆಲವು ಆಯ್ದ ಔಷಧಿಗಳನ್ನು ಬಾರ್ ಕೋಡ್, ಕ್ಯೂಆರ್ ಕೋಡ್ ವ್ಯಾಪ್ತಿಯಲ್ಲಿ ತರಲಿದ್ದು, ನಂತರ ಕ್ರಮೇಣ ಇಡೀ ಫಾರ್ಮಾ ಕ್ಷೇತ್ರವನ್ನು ಇದರಡಿಯಲ್ಲಿ ತರಲು ಚಿಂತಿಸಲಾಗುತ್ತಿದೆ. 

click me!