Menstrual cup: ಬಳಸಲು ಮುಜುಗರವೇ? ಋತುಸ್ರಾವ ಕಪ್ ಬಗ್ಗೆ ಇರೋ ಮಿಥ್‌ಗಳಿವು

By Suvarna NewsFirst Published Nov 12, 2021, 5:01 PM IST
Highlights

ಇಂದು ಋತುಸ್ರಾವದ ಕಪ್ ಮಹಿಳೆಯರಲ್ಲಿ ಜನಪ್ರಿಯವಾಗುತ್ತಿದೆ. ಆದರೆ ಈಗಲೂ ಅನೇಕ ತಪ್ಪು ಕಲ್ಪನೆಗಳಿವೆ. ಬನ್ನಿ ಅವುಗಳನ್ನು ನಿವಾರಿಸಿಕೊಳ್ಳೋಣ.

ವಿವಿಧ ಕಾರಣಗಳಿಂದಾಗಿ ಬಹಳಷ್ಟು ಮಹಿಳೆಯರಿಗೆ ಋತುಸ್ರಾವ (Menstruation) ಅಹಿತಕರವಾಗಿರುತ್ತದೆ. ಒಂದು ಪ್ರಮುಖ ಕಾರಣವೆಂದರೆ ರಕ್ತಸ್ರಾವವನ್ನು ತಡೆಯುವುದು. ಪ್ಯಾಡ್‌ಗಳು (Sanitary pad) ಮತ್ತು ಟ್ಯಾಂಪೂನ್‌ಗಳ ಬಳಕೆಯು ರಕ್ರಸ್ರವಾ ತಡೆಯುವಲ್ಲಿ ಬಹಳ ವರ್ಷಗಳಿಂದ ಬಳಕೆಯಾಗುತ್ತಿದೆ. ಇತ್ತೀಚೆಗೆ ಮುಟ್ಟಿನ ಕಪ್‌ಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಇವು ರಕ್ತವವನ್ನು ಸಂಗ್ರಹಿಸುತ್ತವೆ. ಋತುಚಕ್ರದ ಕಪ್ (Menstrual cup), ಪ್ಯಾಡ್ ಅಥವಾ ಟ್ಯಾಂಪೂನ್‌ಗಿಂತ ತುಲನಾತ್ಮಕವಾಗಿ ಉತ್ತಮ ಮತ್ತು ಹೆಚ್ಚು ಪರಿಸರಸ್ನೇಹಿ ಆಯ್ಕೆಯಾಗಿದೆ. ಋತುಚಕ್ರದ ಪ್ರತಿ ದಿನ ಒಬ್ಬಾಕೆ ಕನಿಷ್ಟ ಮೂರರಿಂದ ನಾಲ್ಕು ಪ್ಯಾಡ್‌ ಬಳಸಿದರೆ, ಅದರಿಂದ ಉತ್ಪಾದನೆಯಾಗುವ ತ್ಯಾಜ್ಯದ ಪ್ರಮಾಣ ಲೆಕ್ಕಹಾಕಿದರೆ, ಕಪ್ ಉತ್ತಮ. ಆದರೆ ಕಪ್ ಬಗ್ಗೆ ಕೆಲವು ಮಿಥ್‌ಗಳು ಅಥವಾ ತಪ್ಪು ಗ್ರಹಿಕೆಗಳಿವೆ. ಅವುಗಳನ್ನು ಹೋಗಲಾಡಿಸಬೇಕಾಗಿದೆ.

ಮಿಥ್ 1- ಕನ್ಯತ್ವ ಕೆಡುತ್ತದೆ (Virginity)
ಕನ್ಯತ್ವದ ಕುರಿತಾದ ಆತಂಕವು ಇಲ್ಲಿಯೂ ಇದೆ. ಕಪ್‌ ಅನ್ನು ನಿರಂತರವಾಗಿ ಧರಿಸುವುದರಿಂದ, ಕನ್ಯಾಪೊರೆ ಹರಿಯಬಹುದು ಎಂದು ಕೆಲವರು ಭಾವಿಸುತ್ತಾರೆ. ತಜ್ಞರ ಪ್ರಕಾರ, ಮಹಿಳೆಯ ದೇಹದಲ್ಲಿ 'ಕನ್ಯತ್ವ ಸೂಚಕ' ಎಂದು ಯಾವುದೂ ಇಲ್ಲ. ಕನ್ಯತ್ವದ ಗುರುತು ಎಂದು ಹಲವರು ಪರಿಗಣಿಸುವ ಕನ್ಯಾಪೊರೆಯು ಮಹಿಳೆಯ ಜೀವಿತಾವಧಿಯಲ್ಲಿ ಯಾವುದೇ ಸಮಯದಲ್ಲಿ ಛಿದ್ರವಾಗಬಹುದಾದ ಒಂದು ಅಂಗಾಂಶ. ಇದು ವ್ಯಾಯಾಮ, ತೂಕ ಎತ್ತುವುದು, ಸೈಕ್ಲಿಂಗ್ ಇತ್ಯಾದಿಗಳಿಂದಾಗಿರಬಹುದು. ಕಪ್ ಧರಿಸುವುದರಿಂದ ಇದು ಹರಿಯದು. ಆದ್ದರಿಂದ ಅಂತಹ ಮಿಥ್ ನಂಬುವುದನ್ನು ಬಿಟ್ಟುಬಿಡಿ.

ಮಿಥ್ 2- ಯೋನಿಯೊಳಗೆ ಹೋಗಬಹುದು! (Vagina)
ಬಹಳಷ್ಟು ಮಹಿಳೆಯರಲ್ಲಿ ಒಂದು ಸಾಮಾನ್ಯ ಚಿಂತೆ ಎಂದರೆ ತಮ್ಮ ಯೋನಿಯೊಳಗೆ ತೂರಿಸಿದ ಕಪ್ ಹಾಗೇ ಒಳಗೆ ಕಣ್ಮರೆಯಾಗಬಹುದು ಎಂಬುದು. ನೀವು ಮುಟ್ಟಿನ ಕಪ್ ಧರಿಸಿದ್ದೀರಿ ಎಂದು ತಿಳಿಯಲು ಇರುವ ಏಕೈಕ ಮಾರ್ಗವೆಂದರೆ ಅಲ್ಲಿ ಕೈ ಬೆರಳು ಹಾಕಿ ನೋಡುವುದು. ಆದರೆ ಇದು ಹೊರಗೂ ಗೊತ್ತಾಗವುದಿಲ್ಲ. ಹಾಗೇ ಇದು ತುಂಬಾ ಒಳಗೂ ಹೋಗುವುದಿಲ್ಲ. ಯೋನಿರಂಧ್ರದ ತುಂಬಾ ಒಳಗೆ ಆಳವಾಗಿ ಇದನ್ನು ಇಡಬೇಕಾಗಿಲ್ಲ. ಕಪ್ ಕೂಡ ಅದನ್ನು ತೆಗೆಯಲು ಸಹಾಯ ಮಾಡುವ ಕಾಂಡದೊಂದಿಗೆ ಬರುತ್ತದೆ. ಕಪ್ ಅನ್ನು ಒಳಸೇರಿಸಿದ ನಂತರ ಅದನ್ನು ಹೊರತೆಗೆಯಲು ಅಭ್ಯಾಸ ಮಾಡಿಕೊಳ್ಳಬೇಕು. ಅದು ಎಲ್ಲಿ ಇಟ್ಟಿದ್ದೀರೋ ಅಲ್ಲಿಯೇ ಇರುತ್ತದೆ; ತಾನಾಗಿ ಒಳಗೆ ಜಾರುವುದಿಲ್ಲ.

Pregnancy and Women Health: ಈ ವಿಷಯಗಳನ್ನು ಯಾವತ್ತೂ ಇಗ್ನೋರ್ ಮಾಡಬಾರದು

ಮಿಥ್ 3- ಒಂದೇ ಗಾತ್ರ ಎಲ್ಲರಿಗೂ ಸರಿ (Size)
ಪ್ರತಿಯೊಬ್ಬರೂ ವಿಭಿನ್ನವಾಗಿರುತ್ತಾರೆ ಮತ್ತು ಪ್ರತಿ ಮಹಿಳೆಯ ಋತುಚಕ್ರವೂ ಸಹ. ವ್ಯಕ್ತಿಯ ಎತ್ತರ, ತೂಕ, ವಯಸ್ಸು ಮತ್ತು ಸಂತಾನೋತ್ಪತ್ತಿ ಇತಿಹಾಸದ ಆಧಾರದ ಮೇಲೆ, ಅಗತ್ಯವಿರುವ ಕಪ್‌ನ ಗಾತ್ರವು ಭಿನ್ನವಾಗಿರಬಹುದು. ಹೆಚ್ಚಿನ ಬ್ರಾಂಡ್‌ಗಳು ತಮ್ಮ ವಿಶಿಷ್ಟ ಗಾತ್ರವನ್ನು ಹೊಂದಿವೆ ಮತ್ತು ಅವುಗಳನ್ನು ಆನ್‌ಲೈನ್‌ನಲ್ಲಿ ಅಥವಾ ಬಾಕ್ಸ್‌ನಲ್ಲಿಯೇ ಉತ್ಪನ್ನ ಮಾಹಿತಿಯ ಭಾಗವಾಗಿ ಉಲ್ಲೇಖಿಸಬಹುದು. ಆದಾಗ್ಯೂ, ಒಂದು ಕಪ್ ಅನ್ನು ಬಳಸಿದ ನಂತರವೇ ಯಾವುದು ಉತ್ತಮವಾಗಿ ಹೊಂದಿಕೊಳ್ಳುತ್ತದೆ ಎಂಬುದನ್ನು ಕಂಡುಹಿಡಿಯಬಹುದು. ನಿಮಗೆ ಬೇಕಾದ ಕಪ್‌ನ ಬಗ್ಗೆ ನೀವೇ ಸರಿಯಾಗಿ ಸಂಶೋಧನೆ ಮಾಡಿ ಹಾಗೂ ಸೂಕ್ತವಾದ ಬಾಂಡ್‌ಗಳನ್ನು ಪ್ರಯತ್ನಿಸಿ.

ಮಿಥ್ 4- ಮೂತ್ರ ಮಾಡಿದಾಗಲೆಲ್ಲಾ ತೆಗೆಯಬೇಕು (Myth)
ಇದೂ ನಿಜವಲ್ಲ. ಮಹಿಳೆಯರಲ್ಲಿ ಈ ಭಾಗದಲ್ಲಿ ಮೂರು ರಂಧ್ರಗಳಿವೆ- ಯೋನಿ, ಮೂತ್ರನಾಳ ಮತ್ತು ಗುದದ್ವಾರ. ಕಪ್ ಯೋನಿಯೊಳಗೆ ಮಾತ್ರ ಹೋಗುತ್ತದೆ ಮತ್ತು ಹೀಗಾಗಿ, ಮೂತ್ರ ವಿಸರ್ಜಿಸಲು ನೀವು ನಿಮ್ಮ ಕಪ್ ಅನ್ನು ತಾಂತ್ರಿಕವಾಗಿ ತೆಗೆಯುವ ಅಗತ್ಯವಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ, ಕಪ್ ಮೂತ್ರನಾಳದ ಗೋಡೆಗಳ ಮೇಲೆ ಒತ್ತಡವನ್ನು ಬೀರಬಹುದು ಮತ್ತು ಸ್ವಲ್ಪ ಕಿರಿಕಿರಿ ಉಂಟುಮಾಡಬಹುದು. ಆ ಸಂದರ್ಭದಲ್ಲಿ, ನೀವು ಅದನ್ನು ತೆಗೆದು ಮತ್ತೆ ಹಾಕಿಕೊಳ್ಳಬಹುದು. ಸಮಸ್ಯೆ ಮುಂದುವರಿದರೆ, ಕಪ್ ಗಾತ್ರವನ್ನು ಬದಲಾಯಿಸಿಕೊಳ್ಳಬಹುದು.

ರಾತ್ರಿ ವೇಳೆ ಮಗು ಆಗಾಗ ಎಚ್ಚರಗೊಳ್ಳುತ್ತಿದ್ದರೆ ಈ ಟ್ರಿಕ್ಸ್ ಪಾಲಿಸಿ

ಮಿಥ್ 5- ದೀರ್ಘಾವಧಿ ಬಳಕೆಗೆ ಕೆಟ್ಟದು
ಮುಟ್ಟಿನ ಕಪ್ ಅನ್ನು ವೈದ್ಯಕೀಯ ದರ್ಜೆಯ ಸಿಲಿಕಾನ್‌ನಿಂದ ತಯಾರಿಸಲಾಗುತ್ತದೆ ಮತ್ತು ಇದನ್ನು ಸುಮಾರು ಐದರಿಂದ ಎಂಟು ವರ್ಷಗಳ ದೀರ್ಘಾವಧಿಯ ಬಳಕೆಗೆ ಅನುಮೋದಿಸಲಾಗಿದೆ. ಪ್ರತಿ ಮೂರು ನಾಲ್ಕು ಗಂಟೆಗಳಿಗೊಮ್ಮೆ ಕಪ್ ಅನ್ನು ಖಾಲಿ ಮಾಡುವುದು ಅತ್ಯಗತ್ಯ, ವಿಶೇಷವಾಗಿ ರಕ್ತಸ್ರಾವ ಅಧಿಕವಾಗಿದ್ದಾಗ. ಕಪ್ ಅನ್ನು ಪುನಃ ಒಳಸೇರಿಸುವ ಮೊದಲು ಬಿಸಿ ನೀರು ಮತ್ತು ಸೌಮ್ಯವಾದ ಸಾಬೂನಿನಿಂದ ಸ್ವಚ್ಛಗೊಳಿಸುವುದು ಕೂಡ ಮುಖ್ಯವಾಗಿದೆ. ಪಿರಿಯಡ್ಸ್ ಸಮಯದಲ್ಲಿ ಸರಿಯಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಕಡ್ಡಾಯ.

ಮಿಥ್ 6- ರಕ್ತ ಉಕ್ಕಿ ಹರಿಯಬಹುದು (Blood)
ಸಾಮಾನ್ಯ ಕಪ್ ಕನಿಷ್ಠ 20 ಮಿಲಿ ಸಾಮರ್ಥ್ಯ ಹೊಂದಿದೆ, ಮತ್ತು ಹೆಚ್ಚಿನ ಮಹಿಳೆಯರಿಗೆ ಇದು ಈ ಅವಧಿಯ ಸರಾಸರಿ ರಕ್ತಸ್ರಾವದ ಪ್ರಮಾಣಕ್ಕಿಂತ ದೊಡ್ಡದೇ. ದೊಡ್ಡ ಗಾತ್ರದ ಕಪ್‌ಗಳೂ ಇವೆ ಮತ್ತು ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿವೆ. ನೀವು ಮೊದಲ ಬಾರಿಗೆ ಕಪ್ ಅನ್ನು ಬಳಸುವಾಗ ನಿಮ್ಮ ರಕ್ರಸ್ರಾವದ ಪ್ರಮಾಣ ಪರಿಶೀಲಿಸಲು ಚೆಕ್ ಮಾಡಿಕೊಳ್ಳಿ. ಮತ್ತು ದಿನದಲ್ಲಿ ಎಷ್ಟು ಬಾರಿ ಕಪ್ ಅನ್ನು ಖಾಲಿ ಮಾಡಬೇಕೆಂಬ ಕಲ್ಪನೆ ನಿಮಗಾಗುತ್ತದೆ. ಪ್ರತಿ ಮೂರರಿಂದ ನಾಲ್ಕು ಗಂಟೆಗಳಿಗೊಮ್ಮೆ ಕಪ್ಪನ್ನು ಪರಿಶೀಲಿಸಿ. ಗರಿಷ್ಠ ಅವಧಿಯು ಆರರಿಂದ ಎಂಟು ಗಂಟೆಗಳಿಗಿಂತ ಹೆಚ್ಚಿರಬಾರದು.

click me!