National Nutrition Week: ಆರಂಭ ಉತ್ತಮವಾಗಿದ್ರೆ ಅನಾರೋಗ್ಯದ ಪ್ರಶ್ನೆ ಎಲ್ಲಿ?

By Suvarna NewsFirst Published Sep 1, 2022, 5:51 PM IST
Highlights

ಅಪೌಷ್ಠಿಕತೆ ದೇಶವನ್ನು ಇನ್ನೂ ಕಾಡ್ತಿದೆ. ಮಕ್ಕಳಿಗೆ ಸರಿಯಾದ ಆಹಾರ ಸಿಗ್ತಿಲ್ಲ. ಪೋಷಕಾಂಶದ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇಲ್ಲದಿರುವುದೇ ಇದಕ್ಕೊಂದು ಕಾರಣ. ಶಿಶುವಿರುವಾಗ್ಲೇ ಮಕ್ಕಳಿಗೆ ಸರಿಯಾದ ಆಹಾರ ಬಿದ್ರೆ ಮುಂದೆ ಅವರು ಹಾಸಿಗೆ ಹಿಡಿಯೋದನ್ನು ದೊಡ್ಡ ಮಟ್ಟಿಗೆ ತಪ್ಪಿಸಬಹುದು.  
 

ಜೀವನದ ನಿಜವಾದ ಸಂಪತ್ತು ಆರೋಗ್ಯ.  ಇತ್ತೀಚಿನ ದಿನಗಳಲ್ಲಿ ಉತ್ತಮ ಆರೋಗ್ಯ ಬಹಳ ಮುಖ್ಯವಾಗಿದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಸರಿಯಾಗಿದ್ರೆ ಜಗತ್ತಿನ ಯಾವುದೇ ಸಮಸ್ಯೆಯನ್ನೂ ಎದುರಿಸಬಹುದು. ಉತ್ತಮ ಆರೋಗ್ಯಕ್ಕೆ ಪೋಷಕಾಂಶದ ಅಗತ್ಯವಿದೆ. ಅನೇಕರಿಗೆ ಇದ್ರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಪ್ರೋಟೀನ್, ವಿಟಮಿನ್ ಮತ್ತು ಖನಿಜಗಳಂತಹ ಪೋಷಕಾಂಶಗಳು ದೇಹಕ್ಕೆ  ಅಗತ್ಯವಿರುತ್ತವೆ. ಉತ್ತಮ ಆರೋಗ್ಯ ಹಾಗೂ ಪೋಷಕಾಂಶದ ಬಗ್ಗೆ ತಿಳಿಸಿಕೊಡಲು ರಾಷ್ಟ್ರೀಯ ಪೋಷಣೆ ಸಪ್ತಾಹವನ್ನು ಪ್ರತಿ ವರ್ಷ ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 7 ರವರೆಗೆ ದೇಶಾದ್ಯಂತ ಆಚರಿಸಲಾಗುತ್ತದೆ. ರಾಷ್ಟ್ರೀಯ ಪೋಷಣೆ ಸಪ್ತಾಹವು ದೇಶದಾದ್ಯಂತ ಪೌಷ್ಟಿಕಾಂಶದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಈ ವರ್ಷದ ರಾಷ್ಟ್ರೀಯ ಪೋಷಣೆ ಸಪ್ತಾಹದ ಥೀಮ್ ಸ್ಮಾರ್ಟ್. ಇಂದು ನಾವು ಸ್ಮಾರ್ಟ್ ಫೀಡಿಂಗ್ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳೋಣ.

ಸ್ಮಾರ್ಟ್ ಫೀಡಿಂಗ್ (Smart Feeding ) : ಹುಟ್ಟಿದ ಎರಡು ವರ್ಷಗಳ ಕಾಲ ಶಿಶುವಿಗೆ ಅತ್ಯುತ್ತಮ ಪೋಷಕಾಂಶ ನೀಡುವುದು ಸ್ಮಾರ್ಟ್ ಫೀಡಿಂಗ್ ನ ಪ್ರಮುಖ ಅಂಶವಾಗಿದೆ. ಆರಂಭದ ಸ್ತನಪಾನ ಹಾಗೂ ಎರಡು ವರ್ಷಗಳ ಕಾಲ ಸ್ತನಪಾನವನ್ನು (Breast Feeding) ಜಾರಿಯಲ್ಲಿಡುವುದರ ಜೊತೆಗೆ ಅಗತ್ಯ ಪೋಷಕಾಂಶ (Vitamins), ವಯಸ್ಸಿಗೆ ತಕ್ಕಂತೆ ಪೂರಕ ಆಹಾರ (Food) ನೀಡುವುದು ಇಲ್ಲಿ ಮಹತ್ವ ಪಡೆಯುತ್ತದೆ. ಆರಂಭದಿಂದಲೇ ಮಕ್ಕಳಿಗೆ ಪೋಷಕಾಂಶ ನೀಡುವುದು ಮುಖ್ಯ. ಇಲ್ಲವೆಂದ್ರೆ ಮಕ್ಕಳ (Children ) ಬೆಳವಣಿಗೆ ಸರಿಯಾಗಿ ಆಗುವುದಿಲ್ಲ. ಮಕ್ಕಳು ಅಪೌಷ್ಠಿಕತೆಯಿಂದ (Malnutrition) ನರಳುತ್ತಾರೆ. ಅದನ್ನು ತಪ್ಪಿಸಬೇಕೆಂದ್ರೆ ಆರು ತಿಂಗಳ ನಂತ್ರ ಮಕ್ಕಳಿಗೆ ಪೂರಕ ಆಹಾರ ನೀಡಲು ಶುರು ಮಾಡ್ಬೇಕು. 

ಶಿಶುಗಳಿಗೆ ಪೂರಕ ಆಹಾರದ ಅವಶ್ಯಕತೆ : ಆರು ತಿಂಗಳವರೆಗೆ ತಾಯಿ ಹಾಲನ್ನು ಮಾತ್ರ ಮಗುವಿಗೆ ನೀಡ್ಬೇಕೆಂದು ವೈದ್ಯರು ಸಲಹೆ ನೀಡ್ತಾರೆ. ಆದ್ರೆ ಆರು ತಿಂಗಳ ನಂತ್ರ ಮಕ್ಕಳ ಬೆಳವಣಿಗೆ ವೇಗ ಪಡೆಯುತ್ತದೆ. ಆಗ ತಾಯಿ ಹಾಲಿನಲ್ಲಿರುವ ಪೋಷಕಾಂಶ ಮಕ್ಕಳಿಗೆ ಸಾಲುವುದಿಲ್ಲ. ಹಾಗಾಗಿ ಮಕ್ಕಳಿಗೆ ತಾಯಿ ಹಾಲಿನ ಜೊತೆಗೆ ಇತರ ಪೂರಕ ಆಹಾರವನ್ನು ಅವಶ್ಯಕವಾಗಿ ನೀಡಬೇಕಾಗುತ್ತದೆ. 

ಪೂರಕ ಆಹಾರ ನೀಡುವ ಮೊದಲಿನ ಕ್ರಮಗಳು :ಶಿಶುಗಳಿಗೆ ಪೂರಕ ಆಹಾರವನ್ನು ನೀಡುವು ಮೊದಲು ಕೆಲವೊಂದು ಸಂಗತಿಗಳನ್ನು ತಿಳಿದಿರಬೇಕಾಗುತ್ತದೆ.

NATIONAL NUTRITION WEEK 2022: ಪೌಷ್ಟಿಕಾಂಶ ಸಪ್ತಾಹದ ಇತಿಹಾಸ ಮತ್ತು ಮಹತ್ವ

• ಆರು ತಿಂಗಳ ನಂತ್ರ ಸ್ತನಪಾನವನ್ನು ನಿಲ್ಲಿಸಬೇಕಾಗಿಲ್ಲ. ಮಗುವಿಗೆ ಅಗತ್ಯವಿದೆ ಎನ್ನಿಸಿದ್ರೆ ನೀವು ಎರಡು ವರ್ಷದವರೆಗೂ ಸ್ತನಪಾನ ಮುಂದುವರಿಸಬಹುದು. 
• ಮಕ್ಕಳಿಗೆ ಆಹಾರವನ್ನು ನಿಧಾನವಾಗಿ, ತಾಳ್ಮೆಯಿಂದ ನೀಡುವುದು ಮುಖ್ಯವಾಗುತ್ತದೆ. ಮಕ್ಕಳಿಗೆ ತಿನ್ನಲು ನೀವು ಪ್ರೋತ್ಸಾಹಿಸಬೇಕು. ಆದ್ರೆ ಒತ್ತಾಯ ಮಾಡುವ ಅಗತ್ಯವಿಲ್ಲ. ಹಾಗೆ ಮಕ್ಕಳು ಸದಾ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು. ಮಕ್ಕಳ ಮೇಲೆ ಸದಾ ಒಂದು ಕಣ್ಣಿರಬೇಕು. 
•  ನೈರ್ಮಲ್ಯ ಕೂಡ ಮುಖ್ಯವಾಗುತ್ತದೆ. ಮಕ್ಕಳಿಗೆ ಆಹಾರ ನೀಡುವ ವೇಳೆ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು. ಹಾಗೆಯೇ ಸರಿಯಾದ ಆಹಾರ ನಿರ್ವಹಣೆ ಅಭ್ಯಾಸಗಳನ್ನು ಅನುಸರಿಸಬೇಕು.
• ಪೂರಕ ಆಹಾರ ನೀಡಬೇಕು ಎನ್ನುವ ಕಾರಣಕ್ಕೆ ಮಗುವಿಗೆ ಅತಿಯಾದ ಆಹಾರವನ್ನು ನೀಡಬಾರದು. ಆರು ತಿಂಗಳ ಮಗುವಿಗೆ ನೀವು ಹೆಚ್ಚಿನ ಆಹಾರ ನೀಡಿದ್ರೆ ಅಜೀರ್ಣವಾಗುತ್ತದೆ. ಹಾಗಾಗಿ ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಪೂರಕ ಆಹಾರವಿರಲಿ. ಮಗು ಬೆಳೆದಂತೆ ಆಹಾರ ಪ್ರಮಾಣವನ್ನು ಹೆಚ್ಚಿಸಿ.  
•  ಮಗು ಬೆಳೆದಂತೆ ಊಟದಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಹಾಗೂ ಬೇರೆ ಬೇರೆ ಆಹಾರವನ್ನು ನೀಡುವುದು ಮುಖ್ಯವಾಗುತ್ತದೆ.  
• ಶಿಶುಗಳ ವಯಸ್ಸಿಗೆ ಅನುಗುಣವಾಗಿ ಆಹಾರವನ್ನು ನೀಡಬೇಕು.  6-8 ತಿಂಗಳ ಮಕ್ಕಳಿಗೆ ದಿನಕ್ಕೆ 2-3 ಬಾರಿ ಆಹಾರ ನೀಡಬೇಕು.   9-23 ತಿಂಗಳ ವಯಸ್ಸಿನ ಮಕ್ಕಳಿಗೆ ದಿನಕ್ಕೆ 3-4 ಬಾರಿ ಆಹಾರ ನೀಡಬೇಕು. ಅಗತ್ಯವಿದೆ ಎನ್ನಿಸಿದ್ರೆ 1-2 ಬಾರಿ ಹೆಚ್ಚುವರಿ ತಿಂಡಿ ನೀಡಬಹುದು. 

Baby Health: ಮಕ್ಕಳನ್ನು ಕಾಡುವ ಗ್ಯಾಸ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ಮಕ್ಕಳ ಬಾಲ್ಯವೇ (Childhood) ಅವರ ಉತ್ತಮ ಆರೋಗ್ಯಕ್ಕೆ (health) ಅಡಿಪಾಯ. ಹಾಗಾಗಿ ಮನೆಯಲ್ಲಿ ತಯಾರಿಸಿದ ಆಹಾರಕ್ಕೆ ಹೆಚ್ಚು ಮಹತ್ವ ನೀಡಿ. 
• ಮನೆಯಲ್ಲಿ ಸದಾ ತಾಜಾ ಹಣ್ಣುಗಳನ್ನು ಇಟ್ಟಿರಿ. ಮಕ್ಕಳಿಗೆ ಹಣ್ಣನ್ನು ನೀಡುವುದು ಮುಖ್ಯ. 
• ಮನೆಯ ಫ್ರಿಜ್ ನಲ್ಲಿ ಪೋಷಕಾಂಶಗಳಿಂದ ಕೂಡಿದ ಆಹಾರವನ್ನು ಸದಾ ಇಟ್ಟಿರಿ. ಜಂಕ್ ಫುಡ್ (Junk Food) ನಿಂದ ದೂರವಿರಿ. 
• ಪ್ರತಿ ದಿನ ಒಂದೇ ಹಣ್ಣು ನೀಡುವ ಬದಲು ಬೇರೆ ಬೇರೆ ಹಣ್ಣು, ತರಕಾರಿ ಮಿಕ್ಸ್ ಮಾಡಿ ಅದನ್ನು ಮಿಕ್ಸಿ ಮಾಡಿ, ರುಚಿಯಾದ ಆಹಾರವನ್ನು ಮಕ್ಕಳಿಗೆ ನೀಡಿ. 
• ಮಕ್ಕಳಿಗೂ ತಿಂಡಿ ಪ್ಲಾನ್ ಮಾಡಲು ಹೇಳಿ ಹಾಗೆ ನಿಮ್ಮ ಆಹಾರ ತಯಾರಿ ವೇಳೆ ಮಕ್ಕಳನ್ನು ಜೊತೆಗೆ ಸೇರಿಸಿಕೊಳ್ಳಿ, ಆಗ ಮಕ್ಕಳು ಆಹಾರ ಸೇವನೆ ಮಾಡಲು ಹೆಚ್ಚು ಆಸಕ್ತಿ ತೋರುತ್ತಾರೆ. 
• ಮನೆಯವರೆಲ್ಲ ಆರೋಗ್ಯಕರ ಆಹಾರ ಸೇವನೆ ಮಾಡಿದ್ರೆ ಮಗು ಕೂಡ ಇದನ್ನು ರೂಢಿಸಿಕೊಳ್ಳುತ್ತದೆ ಎಂಬುದನ್ನು ಮರೆಯಬೇಡಿ. 
 

click me!