ಎಚ್‌3ಎನ್‌2 ಸೋಂಕಿಗೆ ರಾಜ್ಯದಲ್ಲಿ ಮೊದಲ ಬಲಿ: ದೇಶದ ಮೊದಲ ಸಾವು ಹರ್ಯಾಣದಲ್ಲಿ

By Kannadaprabha NewsFirst Published Mar 11, 2023, 7:38 AM IST
Highlights

ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗಿ ಸಾರ್ವಜನಿಕರು ನಿಟ್ಟುಸಿರು ಬಿಡುವ ಮೊದಲೇ ಎಚ್‌3ಎನ್‌2 (ಇನ್‌ಫ್ಲುಯೆಂಜಾ ವೈರಸ್‌) ವ್ಯಾಪಕವಾಗಿ ಹರಡುತ್ತಿದ್ದು, ಮಾರಣಾಂತಿಕ ಸೋಂಕು ಕರ್ನಾಟಕದಲ್ಲಿ ಮೊದಲ ಬಲಿ ಪಡೆದಿರುವುದು ಆತಂಕ ಸೃಷ್ಟಿಸಿದೆ. 

ಬೆಂಗಳೂರು/ನವದೆಹಲಿ (ಮಾ.11): ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗಿ ಸಾರ್ವಜನಿಕರು ನಿಟ್ಟುಸಿರು ಬಿಡುವ ಮೊದಲೇ ಎಚ್‌3ಎನ್‌2 (ಇನ್‌ಫ್ಲುಯೆಂಜಾ ವೈರಸ್‌) ವ್ಯಾಪಕವಾಗಿ ಹರಡುತ್ತಿದ್ದು, ಮಾರಣಾಂತಿಕ ಸೋಂಕು ಕರ್ನಾಟಕದಲ್ಲಿ ಮೊದಲ ಬಲಿ ಪಡೆದಿರುವುದು ಆತಂಕ ಸೃಷ್ಟಿಸಿದೆ. ಮಾ.1ರಂದು ಹಾಸನ ಮೂಲದ 78 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಅವರಿಗೆ ಎಚ್‌3ಎನ್‌2 ವೈರಸ್‌ ಸೋಂಕು ತಗಲಿದ್ದು ಖಚಿತಗೊಂಡಿದೆ. ಫೆ.24ರಂದು ಜ್ವರ, ಕೆಮ್ಮು ಹಾಗೂ ಗಂಟಲುನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಅಸ್ತಮಾ ಕೂಡ ಇತ್ತು. 

ಹಾಸನದ ಹಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮಾ.1ರಂದು ಮೃತಪಟ್ಟಿದ್ದು, ಅವರ ಮಾದರಿಯನ್ನು ಇನ್‌ಫ್ಲೂಯೆಂಜಾ ಪರೀಕ್ಷೆಗೆ ಕಳುಹಿಸಿದ್ದಾಗ ಮಾ.3ರಂದು ಎಚ್‌3ಎನ್‌2 ಸೋಂಕು ದೃಢಪಟ್ಟಿದೆ. ಇದು ಎಚ್‌3ಎನ್‌2ಗೆ ರಾಜ್ಯದ ಮೊದಲ ಬಲಿಯಾಗಿದೆ. ಹರಾರ‍ಯಣದಲ್ಲಿ ಫೆ.8ರಂದು ಮೃತಪಟ್ಟ56 ವರ್ಷದ ವ್ಯಕ್ತಿಯು ಶ್ವಾಸಕೋಶದ ಕ್ಯಾನ್ಸರ್‌ ರೋಗಿಯಾಗಿದ್ದು, ಈತನಿಗೆ ಎಚ್‌3ಎನ್‌2 ವೈರಸ್‌ ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಹೀಗಾಗಿ ರಾಜ್ಯದ ಪ್ರಕರಣವನ್ನು ಎಚ್‌3ಎನ್‌2ಗೆ ದೇಶದ 2ನೇ ಬಲಿ ಎಂದು ಪರಿಗಣಿಸಲಾಗಿದೆ.

ಮಾರ್ಚ್‌ ಅಂತ್ಯದ ವೇಳೆಗೆ ಎಚ್‌3ಎನ್‌2 ಇಳಿಮುಖ: ಕೇಂದ್ರ ಸರ್ಕಾರ ಆಭಯ

ಎಚ್‌3ಎನ್‌2 ಹರಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಇಂಟಿಗ್ರೇಟೆಡ್‌ ಡಿಸೀಸ್‌ ಸರ್ವೆಲೆನ್ಸ್‌ ಪ್ರೋಗ್ರಾಂ (ಐಡಿಎಸ್‌ಪಿ) ನೆಟ್‌ವರ್ಕ್ ಮೂಲಕ ಕೇಂದ್ರವು ಎಲ್ಲಾ ರಾಜ್ಯಗಳ ಪ್ರಕರಣಗಳ ಮೇಲ್ವಿಚಾರಣೆ ಮಾಡುತ್ತಿದೆ. ಮಾರ್ಚ್‌ ತಿಂಗಳಾಂತ್ಯಕ್ಕೆ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಅಭಿಪ್ರಾಯಪಟ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್‌, ಇನ್‌ಫ್ಲುಯೆಂಜಾ ವೈರಸ್‌ನಿಂದಾಗಿ ಜನವರಿಯಿಂದ ಈವರೆಗೂ ದೇಶದಲ್ಲಿ 90 ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲಿ 26 ಇನ್‌ಫ್ಲೂಯೆಂಜಾ, 10 ಎಚ್‌1ಎನ್‌1 ಹಾಗೂ 16 ಎಚ್‌3ಎನ್‌ 2 ಪ್ರಕರಣಗಳು ವರದಿಯಾಗಿವೆ. ಈ ಸಂಬಂಧ ಸೋಂಕು ಲಕ್ಷಣ ಹೊಂದಿರುವವರು ಹಾಗೂ ಸೋಂಕಿತರ ಮೇಲೆ ನಿಗಾ ಇಡಲಾಗಿದೆ ಎಂದರು.

ಶೇ.92 ಮಂದಿಗೆ ಜ್ವರ: ಎಚ್‌3ಎನ್‌2 ವೈರಸ್‌ನಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳಲ್ಲಿ ಶೇ.92 ಮಂದಿಯಲ್ಲಿ ಜ್ವರ ಕಂಡು ಬಂದಿದ್ದು, ಶೇ.86 ಮಂದಿ ಕೆಮ್ಮು, ಶೇ.27 ಉಸಿರಾಟದ ತೊಂದರೆ, ಶೇ.16 ಉಬ್ಬಸ, ಶೇ.16 ನ್ಯುಮೋನಿಯಾ ಮತ್ತು ಶೇ.6 ಬಳಲಿಕೆಯನ್ನು ಹೊಂದಿದವರಾಗಿದ್ದಾರೆ. ಉಸಿರಾಟದ ತೊಂದರೆ ಹೊಂದಿರುವವರಲ್ಲಿ ಶೇ.10 ಮಂದಿಗೆ ಆಮ್ಲಜನಕದ ಅಗತ್ಯ ಹಾಗೂ ಶೇ.7 ಮಂದಿಗೆ ತೀವ್ರ ನಿಗಾ ಘಟಕದ ಆರೈಕೆಯ ಅಗತ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ.

ಹರ್ಯಾಣದಲ್ಲಿ ದೇಶದ ಮೊದಲ ಬಲಿ: ಹರ್ಯಾಣದ ಜಿಂದ್‌ ಜಿಲ್ಲೆಯಲ್ಲಿ ಫೆಬ್ರವರಿ 8ರಂದು ಮೃತಪಟ್ಟಶ್ವಾಸಕೋಶದ ಕ್ಯಾನ್ಸರ್‌ ರೋಗಿಯಲ್ಲಿ ಎಚ್‌3ಎನ್‌2 ವೈರಸ್‌ ಜ.17ರಂದೇ ದೃಢಪಟ್ಟಿತ್ತು. ಈಗ ಅದು ಬೆಳಕಿಗೆ ಬಂದಿದೆ. ಇದು ಎಚ್‌3ಎನ್‌2ಗೆ ಬಲಿಯಾದ ಮೊದಲ ಪ್ರಕರಣ

ಈವರೆಗೆ 5451 ಇನ್‌ಫ್ಲುಯೆಂಜಾ ಕೇಸ್‌: ಈ ವರ್ಷ ಜ.2ರಿಂದ ಮಾ.9ರವರೆಗೆ ದೇಶದಲ್ಲಿ ಎಚ್‌3ಎನ್‌2 ವೈರಸ್‌ ಸೇರಿದಂತೆ ಇನ್ನಿತರ ಮಾದರಿಯ 5, 451 ಇನ್‌ಫ್ಲುಯೆಂಜಾ ವೈರಸ್‌ ಪ್ರಕರಣಗಳು ದೃಢಪಟ್ಟಿವೆ ಎಂದೂ ಆರೋಗ್ಯ ಸಚಿವಾಲಯ ತಿಳಿಸಿದೆ.

ಜ್ವರ, ಮೈಕೈ ನೋವು ಪ್ರಮುಖ ಲಕ್ಷಣ: ಇತ್ತೀಚೆಗೆ ದೇಶದಲ್ಲಿ ಎಚ್‌3ಎನ್‌2 ವೈರಸ್‌ ಹರಡುವಿಕೆ ದಿಢೀರ್‌ ಹೆಚ್ಚಳವಾಗಿದೆ. ಇದು ಇನ್‌ಫ್ಲುಯೆಂಜಾ ವೈರಸ್‌ ಆಗಿದ್ದು, ವೈಜ್ಞಾನಿಕವಾಗಿ ‘ಇನ್‌ಫ್ಲುಯೆಂಜಾ ಎ ವೈರಸ್‌’ ಎಂದು ಕರೆಯಲಾಗುತ್ತದೆ. ಇದು ಪ್ರತಿ ವರ್ಷ ಕಾಣಿಸಿಕೊಳ್ಳುವ ವೈರಸ್‌ ಎಂದು ಹೇಳಲಾಗುತ್ತದೆ. ಮುಖ್ಯವಾಗಿ ಶ್ವಾಸಕೋಶದಲ್ಲಿ ಅನಾರೋಗ್ಯ ಉಂಟುಮಾಡುತ್ತದೆ. ಜ್ವರ, ಗಂಟಲು ಒಡೆಯುವುದು, ಕೆಮ್ಮು, ಮೈಕೈ ನೋವು ಹಾಗೂ ನೆಗಡಿ ಇದರ ಲಕ್ಷಣವಾಗಿದೆ. ಕೆಲವೊಮ್ಮೆ ವಾಂತಿಭೇದಿ ಹಾಗೂ ಉಸಿರಾಟದ ತೊಂದರೆಯೂ ಕಾಣಿಸಿಕೊಳ್ಳುತ್ತದೆ. ಮೂರು ದಿನಗಳ ನಂತರ ಜ್ವರ ವಾಸಿಯಾಗುತ್ತದೆ. ಆದರೆ ಕೆಮ್ಮು ಮೂರು ವಾರಗಳವರೆಗೂ ಇರಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಹೇಳಿದೆ. ಜ್ವರ ಹಾಗೂ ಮೈಕೈ ನೋವಿಗೆ ಪ್ಯಾರಾಸಿಟೆಮಾಲ್‌ ತೆಗೆದುಕೊಳ್ಳಬೇಕು. ವೈರಸ್‌ ಹರಡದಂತೆ ಮಾಸ್‌್ಕ ಧರಿಸುವುದು, ಕೈ ತೊಳೆದುಕೊಳ್ಳುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕ್ರಮಗಳನ್ನು ಅನುಸರಿಸಬೇಕು ಎಂದು ಐಸಿಎಂಆರ್‌ ಸಲಹೆ ನೀಡಿದೆ.

ಆಸ್ಪ್ರೇಲಿಯಾದಲ್ಲಿ ದೇಗುಲಗಳ ಮೇಲಿನ ದಾಳಿಗೆ ಪ್ರಧಾನಿ ಮೋದಿ ಆಕ್ಷೇಪ

ಸೋಂಕಿನ ಲಕ್ಷಣಗಳು: ಚಳಿ, ಕೆಮ್ಮುವುದು, ಜ್ವರ, ವಾಕರಿಕೆ, ವಾಂತಿ, ಗಂಟಲು ನೋವು, ಸ್ನಾಯುಗಳು ಮತ್ತು ದೇಹದಲ್ಲಿ ನೋವು, ಕೆಲ ಸಂದರ್ಭದಲ್ಲಿ ಅತಿಸಾರ, ಸೀನುವಿಕೆ ಮತ್ತು ಸೋರುವ ಮೂಗು ಎಚ್‌3ಎನ್‌2 ವೈರಸ್‌ನ ಸಾಮಾನ್ಯ ಲಕ್ಷಣಗಳು. ಯಾವುದೇ ವ್ಯಕ್ತಿ ಉಸಿರಾಟದ ತೊಂದರೆ, ಎದೆಯಲ್ಲಿ ನೋವು ಅಥವಾ ಅಸ್ವಸ್ಥತೆ ಹೊಂದಿದ್ದರೆ, ನಿರಂತರ ಜ್ವರ ಮತ್ತು ಆಹಾರ ತಿನ್ನುವಾಗ ಗಂಟಲು ನೋವು ಕಂಡುಬಂದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು. ನಿರ್ಲಕ್ಷ್ಯ ಮಾಡಿದಲ್ಲಿ ಶ್ವಾಸಕೋಶದ ಸೋಂಕು, ತೀವ್ರ ನ್ಯುಮೋನಿಯಾ, ತೀವ್ರ ಉಸಿರಾಟದ ತೊಂದರೆ, ಆಘಾತ ಮತ್ತು ಸಾವಿಗೆ ಕಾರಣವಾಗಬಹುದು ಎನ್ನುತ್ತಾರೆ ವೈದ್ಯರು.

ಎಚ್‌3ಎನ್‌2 ವೈರಸ್‌ ಹೊಸದೇನಲ್ಲ, ಇದು ಪ್ರತಿ ವರ್ಷ ಬರುತ್ತಲೇ ಇರುತ್ತದೆ. ಶೀತಗಾಲದಿಂದ ಬೇಸಿಗೆಗೆ ಬದಲಾಗುವ ಸಮಯಕ್ಕೆ ಇದು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ವಾತಾವರಣದಲ್ಲಿ ಬೆಳಗ್ಗೆ ತೀವ್ರ ಚಳಿ ಹಾಗೂ ಮಧ್ಯಾಹ್ನ ಬಿಸಿಲಿಗೆ ತೀವ್ರ ಸೆಖೆ ಇರುತ್ತದೆ. ಹೀಗೆ ಒಂದು ದಿನದಲ್ಲೇ ಎರಡು ರೀತಿ ವಾತಾವರಣ ಬದಲಾಗುವುದರಿಂದ ಮೂಗು ಒಣಗಿ ಶೀತ ಹಾಗೂ ಕೆಮ್ಮು ಕಾಣಿಸಿಕೊಳ್ಳುತ್ತದೆ. ಇದು ಇನ್‌ಫ್ಲೂಯೆಂಜಾ ವೈರಸ್‌ ಆಗಿರುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಆದರೆ ಕೋವಿಡ್‌ ಲಸಿಕೆಯಿಂದ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದು, ಇದಕ್ಕೆ ಆತಂಕ ಪಡುವ ಅಗತ್ಯವಿಲ್ಲ.
- ಡಾ.ವಿ. ರವಿ, ವೈರಾಣು ತಜ್ಞ ಹಾಗೂ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸದಸ್ಯ

click me!