ಪದೇ ಪದೇ ಸಿಹಿ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದಲ್ಲ. ಸಿಹಿ ಪದಾರ್ಥ ಬೊಜ್ಜು, ಕ್ಯಾನ್ಸರ್ ನಂತಹ ರೋಗಕ್ಕೆ ಕಾರಣವಾಗುತ್ತದೆ. ದಿನಕ್ಕೆ ಎರಡು ಮೂರು ಬಾರಿಯಾದ್ರೂ ಸಿಹಿ ತಿನ್ನುತ್ತಿದ್ದೀರಿ ಎಂದಾದ್ರೆ ಎಚ್ಚೆತ್ತುಕೊಳ್ಳುವುದು ಒಳ್ಳೆಯದು.
ಒಮ್ಮೊಮ್ಮೆ ಸಿಹಿ ತಿನ್ಬೇಕು ಅಂತಾ ಮನಸ್ಸಾಗುತ್ತೆ. ಏನು ಮಾಡಿದ್ರೂ ಸಿಹಿ ತಿನ್ನುವ ಆಸೆ ಕಂಟ್ರೋಲ್ ಗೆ ಬರೋದಿಲ್ಲ. ನಮಗಿಷ್ಟವಾದ ಸಿಹಿ ತಿಂಡಿ ತಿನ್ನಲು ಸಾಧ್ಯವಾಗಿಲ್ಲ ಎಂದಾಗ ಜನರು ಸಕ್ಕರೆ ಬಾಯಿಗೆ ಹಾಕಿಕೊಳ್ತಾರೆ. ಇದು ಬಹುತೇಕ ಎಲ್ಲರ ಅನುಭವಕ್ಕೆ ಬಂದಿರುತ್ತದೆ. ಯಾವುದೇ ಸಮಾರಂಭವಿಲ್ಲ, ಹಬ್ಬವಿಲ್ಲ, ಇದ್ದಕ್ಕಿದ್ದ ಹಾಗೆ ಸಿಹಿ ಬೇಕು, ಇಷ್ಟದ ಸ್ವೀಟ್ ತಿನ್ನಬೇಕು ಎಂಬ ಹಂಬಲ ಶುರುವಾಗೋದು ಸಾಮಾನ್ಯ ಸಂಗತಿ. ಇದನ್ನು ನಾವು ಸಿಹಿ ತಿನ್ನುವ ಬಯಕೆ ಎನ್ನಬಹುದು. ಆದ್ರೆ ಸಿಹಿ ತಿನ್ನುವ ಬಯಕೆ ಹಾಗೂ ಸಿಹಿ ತಿನ್ನುವ ಚಟಕ್ಕೆ ವ್ಯತ್ಯಾಸವಿದೆ.
ಸಾಮಾನ್ಯವಾಗಿ ಎಲ್ಲರೂ ಸಿಹಿ (Sweet) ತಿನ್ನುವ ಬಯಕೆ ಹೊಂದಿರುತ್ತಾರೆ. ಆದ್ರೆ ಇದೇ ಸ್ವೀಟ್ ತಿನ್ನುವ ಚಟವಲ್ಲ. ಸಿಹಿ ತಿನ್ನುವ ವ್ಯಸನ ಹೊಂದಿರುವವರಿಗೆ ಅದನ್ನು ಕಂಟ್ರೋಲ್ ಮಾಡಲು ಸಾಧ್ಯವಾಗುವುದಿಲ್ಲ. ಪ್ರತಿ ದಿನ ಸ್ವೀಟ್ ಬೇಕು. ಒಂದು, ಎರಡು ಸ್ವೀಟ್ ಗೆ ಅವರು ನಿಲ್ಲೋದಿಲ್ಲ. ಅರಿವಿಲ್ಲದೆ ಹೆಚ್ಚು ಸ್ವೀಟ್ ತಿನ್ನುತ್ತಾರೆ. ಇದ್ರಿಂದ ಮಧುಮೇಹ (Diabetes), ಬೊಜ್ಜು, ಕ್ಯಾನ್ಸರ್ ನಂತಹ ರೋಗಕ್ಕೆ ಬಲಿಯಾಗ್ತಾರೆ. ವಿಚಿತ್ರವೆಂದ್ರೆ ಬಹುತೇಕರಿಗೆ ನಾವು ಸಕ್ಕರೆ (Sugar) ವ್ಯಸನಿಗಳು ಎಂಬ ಸಂಗತಿಯೇ ತಿಳಿದಿರೋದಿಲ್ಲ. ನಾವಿಂದು ಸಕ್ಕರೆ ವ್ಯಸನಿಗಳ ಲಕ್ಷಣದ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಸ್ವೀಟ್ ವ್ಯಸನಿಗಳ ಲಕ್ಷಣ :
ಹಸಿವಾದಾಗ್ಲೂ ಸಿಹಿ ಸೇವನೆ : ಜನರು ಹಸಿವಾದಾಗ ಹೊಟ್ಟೆ ತುಂಬಿಸಿಕೊಳ್ಳಲು ಆಹಾರ ಸೇವನೆ ಮಾಡ್ತಾರೆ. ಆದ್ರೆ ಸಿಹಿ ತಿನ್ನುವ ಚಟಕ್ಕೆ ಬಿದ್ದಿರುವ ಜನರು ಹಸಿವಾದಾಗ ಅಥವಾ ಹಸಿವಾಗದೆ ಇದ್ದಾಗ ಕೂಡ ಸಿಹಿಯನ್ನೇ ಸೇವನೆ ಮಾಡ್ತಾರೆ. ಅವರಿಗೆ ಸ್ವೀಟ್ ಸೇವನೆ ಮಾಡಿದ್ರೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇಲ್ಲವೆಂದ್ರೆ ಚಡಪಡಿಕೆ ಶುರುವಾಗುತ್ತದೆ.
ಊಟವಾದ್ಮೇಲೆ ಸ್ವೀಟ್ ಬೇಕು : ಊಟವಾದ್ಮೇಲೆ ಅನೇಕರು ಸ್ವೀಟ್ ತಿನ್ನಲು ಇಚ್ಛಿಸ್ತಾರೆ. ಆದ್ರೆ ಈ ಇಚ್ಛೆ ಅಪರೂಪಕ್ಕೊಮ್ಮೆ ಕಾಣಿಸಿಕೊಳ್ಳುತ್ತದೆ. ಸ್ವೀಟ್ ವ್ಯಸನಿಗಳು ಹಾಗಲ್ಲ. ಅವರು ಪ್ರತಿ ಊಟದ ನಂತ್ರವೂ ಸಿಹಿ ಪದಾರ್ಥ ತಿನ್ನುತ್ತಾರೆ. ನೀವೂ ಪ್ರತಿ ದಿನ ಊಟ ಮಾಡಿದ ನಂತ್ರ ಸಿಹಿ ತಿನ್ನುತ್ತಿದ್ದರೆ ನಿಮಗೂ ಸಿಹಿ ತಿನ್ನುವ ಚಟ ಶುರುವಾಗಿದೆ ಎಂದೇ ಅರ್ಥ.
ಕಾರ್ಬೋಹೈಡ್ರೇಟ್ ಆಹಾರಕ್ಕೆ ಒಲವು : ಸಿಹಿ ಅಂದಾಗ ಅದು ಸಕ್ಕರೆಗೆ ಮಾತ್ರ ಸೀಮಿತವಲ್ಲ. ಸಕ್ಕರೆ ಹಾಗೂ ಗ್ಲುಕೋಸ್ ನಮ್ಮ ದೇಹಕ್ಕೆ ಇಂಧನದ ರೀತಿಯಲ್ಲಿ ಕೆಲಸ ಮಾಡುತ್ತದೆ. ಸಿಹಿ ತಿನ್ನುವ ಚಟಕ್ಕೆ ಬಿದ್ದಿರುವ ಜನರು ಕಾರ್ಬೋಹೈಡ್ರೇಟ್ ಭರಿತ ಆಹಾರವನ್ನು ಹೆಚ್ಚು ಸೇವನೆ ಮಾಡ್ತಾರೆ. ಕಾರ್ಬೋಹೈಡ್ರೇಟ್ ಪದಾರ್ಥಗಳಲ್ಲಿ ಗ್ಲುಕೋಸ್ ಇರುತ್ತದೆ.
Neem ಎಲೆ ಮಾತ್ರವಲ್ಲ, ಇದರ ಮರದ ಅಂಗ ಅಂಗದಲ್ಲೂ ಔಷಧವಿದೆ
ಬದಲಾಗುವ ಟೇಸ್ಟ್ ಬಡ್ : ನಮ್ಮ ದೇಹಕ್ಕೆ ಒಂದೇ ವಸ್ತುವನ್ನು ಪದೇ ಪದೇ ನೀಡಿದ್ರೆ ಅದು ಒಗ್ಗಿಕೊಳ್ಳುತ್ತದೆ. ನಾಲಿಗೆ ರುಚಿ ವಿಷ್ಯದಲ್ಲೂ ಇದೂ ಸತ್ಯ. ಪದೇ ಪದೇ ಸಿಹಿ ತಿನ್ನುತ್ತಿದ್ದರೆ ನಾಲಿಗೆ ಸಿಹಿಗೆ ಹೊಂದಿಕೊಳ್ಳುತ್ತದೆ. ಹಾಗಾಗಿ ಅದಕ್ಕೆ ನೀವು ನೀಡಿದ ಸಕ್ಕರೆ ಸಿಹಿ ಎನ್ನಿಸುವುದಿಲ್ಲ. ಆಗ ಜನರು ಮತ್ತಷ್ಟು ಸಿಹಿ ಸೇವನೆ ಮಾಡ್ತಾರೆ. ಒಂದ್ವೇಳೆ ಸಕ್ಕರೆ ಹಾಕಿದ್ರೂ ನಿಮ್ಮ ಟೀ ರುಚಿ ಎನ್ನಿಸುತ್ತಿಲ್ಲ ಎಂದಾದ್ರೆ, ಹೆಚ್ಚುವರಿ ಸಕ್ಕರೆಯನ್ನು ನೀವು ಹಾಕಿಕೊಳ್ತಿದ್ದೀರಿ ಎಂದಾದ್ರೆ ನೀವು ಕೂಡ ಈ ಚಟಕ್ಕೆ ಬಿದ್ದಿದ್ದೀರಿ ಎಂದರ್ಥ.
ಕೋವಿಡ್ ಗೆದ್ದವರಲ್ಲಿ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚಳ !
ತಿಂದ್ಮೇಲೆ ಹೊಟ್ಟೆ ಊದಿಕೊಳ್ಳುತ್ತಾ? : ಅನೇಕರು ಗ್ಯಾಸ್ ಸಮಸ್ಯೆ ಹೊಂದಿರುತ್ತಾರೆ. ಗ್ಯಾಸ್ ಗೆ ಅನೇಕ ಕಾರಣವಿದೆ. ಅದ್ರಲ್ಲಿ ಈ ಕಾರಣವೂ ಸೇರಿದೆ. ನೀವು ಹೆಚ್ಚೆಚ್ಚು ಸಕ್ಕರೆ ಸೇವನೆ ಮಾಡಿದಾಗ ಅದು ಜೀರ್ಣಾಂಗದ ಮೇಲೆ ಪರಿಣಾಮ ಬೀರುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇದ್ರಿಂದ ಹೊಟ್ಟೆ ಊದಿಕೊಳ್ಳುತ್ತದೆ.