ವೃತ್ತಿ ಬದುಕು ಕೆಲವೊಮ್ಮೆ ಅಸಹನೀಯವಾಗಲು ಶುರುವಾಗುತ್ತದೆ. ಉಸಿರು ಕಟ್ಟಿದ ಭಾವನೆ ಉಂಟಾಗಿ ಉದ್ಯೋಗಿಯ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಕಂಡುಬರುತ್ತದೆ. ವೃತ್ತಿಯ ಒತ್ತಡದಿಂದ ಉದ್ಯೋಗಿ ಮಾನಸಿಕವಾಗಿ ಜರ್ಜರಿತವಾದ ಘಟನೆಗಳು ಸಾಕಷ್ಟಿವೆ. ಇಂತಹ ಸ್ಥಿತಿ ತಲುಪುವುದಕ್ಕೂ ಮುನ್ನ ಎಚ್ಚರಿಕೆ ವಹಿಸುವುದು ಸೂಕ್ತ.
“ವೃತ್ತಿ-ಖಾಸಗಿ ಬದುಕನ್ನು ಬ್ಯಾಲೆನ್ಸ್ ಮಾಡುವುದು’ ಎನ್ನುವ ಶಬ್ದದ ಗುಚ್ಛ ಇತ್ತೀಚೆಗೆ ಭಾರೀ ಕೇಳಿಬರುತ್ತದೆ. ಅಂದರೆ, ಇವೆರಡೂ ಒಂದೇ ಅಲ್ಲ, ಅಲ್ಲಿ ನಿಯಂತ್ರಣ ಮಾಡುವ, ಸಮತೋಲನದಿಂದ ಸಾಗುವ ಅಗತ್ಯವಿದೆ. ಹೀಗಾಗಿ, ಇದು ಒತ್ತಡವನ್ನು ತುಂಬುವಂಥದ್ದು. ವಾಸ್ತವವಾಗಿ, ವೃತ್ತಿ ಮತ್ತು ಖಾಸಗಿ ಜೀವನವನ್ನು ಬ್ಯಾಲೆನ್ಸ್ ಮಾಡುವುದು ಸವಾಲೇ ಸರಿ. ಖಾಸಗಿ ಜೀವನದ ಏರಿಳಿತಗಳು ಒಂದು ರೀತಿಯಲ್ಲಿದ್ದರೆ, ವೃತ್ತಿ ಬದುಕಿನ ಸರಮಾಲೆಗಳೇ ಬೇರೊಂದು ರೀತಿಯಲ್ಲಿ ಕಾಡುತ್ತವೆ. ಎಲ್ಲವೂ ಸುಖವಾಗಿರುವ ವ್ಯಕ್ತಿಯೇ ಇಲ್ಲ ಎನ್ನಬಹುದು. 2021ರಲ್ಲಿ ಮೈಕ್ರೋಸಾಫ್ಟ್ ನಡೆಸಿದ್ದ ಒಂದು ಅಧ್ಯಯನದ ಪ್ರಕಾರ, ಕೋವಿಡ್ ಸಮಯದಲ್ಲಿ ಶೇ.54ರಷ್ಟು ಉದ್ಯೋಗಿಗಳು ಅಧಿಕ ಕೆಲಸದ ಶ್ರಮ ನಿಭಾಯಿಸಿದ್ದರು. ಇತ್ತೀಚಿನ ವರದಿ ಪ್ರಕಾರ, ಶೇ.24ರಷ್ಟು ಉದ್ಯೋಗಿಗಳು ತಮ್ಮ ಆರೋಗ್ಯದ ಕಾರಣದಿಂದ ಉದ್ಯೋಗ ತೊರೆದಿದ್ದಾರೆ. ಅಧಿಕ ಕಾರ್ಯಭಾರದಿಂದ ಒತ್ತಡಕ್ಕೆ ಒಳಗಾಗಿ, ಉಸಿರು ಕಟ್ಟಿದ ಭಾವನೆ ಅವರಲ್ಲಿ ಮಡುಗಟ್ಟಿದೆ. ವ್ಯಕ್ತಿಗತ ದೃಷ್ಟಿಕೋನದಿಂದ ಈ ಸ್ಥಿತಿ ಅತ್ಯಂತ ಅಪಾಯಕಾರಿಯಾಗಿದ್ದು, ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುವಂಥದ್ದು. ಈ ವರದಿ ಪ್ರಕಾರ, ಬಹಳಷ್ಟು ಉದ್ಯೋಗಿಗಳು ತಮ್ಮ ಹಾಲಿ ಸಂಕಷ್ಟದಿಂದ ಪಾರಾಗಲು ಬೇರೆ ಉದ್ಯೋಗ ಹುಡುಕುತ್ತಿದ್ದಾರೆ. ಒಟ್ಟಿನಲ್ಲಿ ವೃತ್ತಿ ಜೀವನ ಸಾಕಷ್ಟು ಜನರನ್ನು ಹೈರಾಣಾಗಿಸಿದೆ.
ವೃತ್ತಿ ಜೀವನ (Work Life) ಒಂದು ಹಂತದಲ್ಲಿ ಸಾಕುಸಾಕೆನಿಸುತ್ತದೆ. “ಜೀವನದ ಹೋರಾಟಕ್ಕಾಗಿ ಖಾಸಗಿ (Personal) ಬದುಕನ್ನು ಕಳೆದುಕೊಂಡೆ’ ಎಂದು ಫೀಲ್ (Feel) ಆಗುವಂತೆ ಮಾಡುತ್ತದೆ. “ಎಲ್ಲ ಸುಖ-ಸಂತೋಷ ತೊರೆದೆ’ ಎನ್ನುವ ವಿಷಾದ (Regret) ಮೂಡಿಸುತ್ತದೆ. ಆದರೆ, ಇವೆಲ್ಲವೂ ಸಂಪೂರ್ಣವಾಗಿ ಸತ್ಯವೇ ಆಗಿರಬೇಕೆಂದಿಲ್ಲ. ಏಕೆಂದರೆ, ಜೀವನದಲ್ಲಿ ಅದುವರೆಗೆ ಅನುಭವಿಸಿದ ಸುಖ-ನೆಮ್ಮದಿ, ಹಣಕಾಸು (Financial) ಭದ್ರತೆಗಳು ವೃತ್ತಿಯಿಂದಲೇ ದಕ್ಕಿರುತ್ತವೆ. ಆದರೂ ಇಂಥದ್ದೊಂದು ಭಾವನೆ ಮಡುಗಟ್ಟಿದೆ ಎಂದಾದರೆ ನಿಮಗೆ ವೃತ್ತಿಯಿಂದ ಸ್ವಲ್ಪ ಸಮಯ ಬ್ರೇಕ್ (Break) ಬೇಕಾಗಿದೆ, ನೀವು ಮಾನಸಿಕವಾಗಿ ಖಿನ್ನರಾಗುತ್ತ ಸಾಗಿದ್ದೀರಿ ಎಂದರ್ಥ. ಇಂತಹ ಸಮಯದಲ್ಲಿ ಸ್ವಲ್ಪ ಸಮಯ ವೃತ್ತಿ ಜೀವನದಿಂದ ದೂರವಿರುವುದು ಕ್ಷೇಮಕರ. ನೀವೂ ಸಹ ಅನೇಕರಂತೆ ಉದ್ಯೋಗದ ಬದುಕಿನಿಂದ ಹೈರಾಣಾಗಿದ್ದರೆ ಎಚ್ಚರಿಕೆ ವಹಿಸಿ.
ಉದ್ಯೋಗಸ್ಥ ಮಹಿಳೆಯರು ಗರ್ಭಾವಸ್ಥೆಯಲ್ಲಿ ನೆನಪಿನಲ್ಲಿಡಬೇಕಾದ ವಿಷಯಗಳಿವು!
• ಕಿರು ಅವಧಿಯ ಬ್ರೇಕ್ ಸಾಕೆನಿಸದು
ಉದ್ಯೋಗಿಗೆ ಎಂಟು ಗಂಟೆಯ ಕೆಲಸದ ಅವಧಿ ಸಾಮಾನ್ಯ. ಹೆಚ್ಚು ಸಮಯ ಕೆಲಸ ಮಾಡುವುದು ಕೆಲವೊಮ್ಮೆ ಅನಿವಾರ್ಯ. ಆದರೆ, ದಿನಕ್ಕೆ ಕೆಲವು ಗಂಟೆಗಳ ಬಿಡುವು ಇದ್ದೇ ಇರುತ್ತದೆ. ಆದರೆ, ಇದಿಷ್ಟೇ ಸಾಕಾಗದು, ಉಸಿರು ಕಟ್ಟುತ್ತಿದೆ (Exhaust), ಜೀವ ಬತ್ತುತ್ತಿದೆ ಎನಿಸಿದಾಗ ಎಚ್ಚರಿಕೆ ವಹಿಸಿ. ಈ ಸ್ಥಿತಿ ಮುಂದುವರಿದರೆ ನಿಮ್ಮ ಸಾಮರ್ಥ್ಯ (Capacity), ಮಾನಸಿಕ ಆರೋಗ್ಯದ (Mental Health) ಮೇಲೆ ಪರಿಣಾಮವಾಗುತ್ತದೆ.
• ಸದಾಕಾಲ ರೇಗುವ (Fight) ಮನಸ್ಥಿತಿ
ಸಿಡುಕುತನ (Burnout), ರೇಗುವ ಮನಸ್ಥಿತಿ ಹೆಚ್ಚುತ್ತಿದ್ದರೆ ಅದು ನೀವು ಹೇಗೆ ಫೀಲ್ ಮಾಡಿಕೊಂಡಿದ್ದೀರಿ ಎನ್ನುವುದಕ್ಕಿಂತ ನಿಮ್ಮ ಮಿದುಳು (Brain) ಹೇಗೆ ಪ್ರತಿಕ್ರಿಯೆ ಮಾಡುತ್ತಿದೆ ಎಂದರ್ಥ. ದೀರ್ಘಕಾಲದ ಒತ್ತಡದಿಂದ ಮನಸ್ಸು, ದೇಹದ (Body) ವರ್ತನೆ ಬೇರೆಯಾಗುತ್ತದೆ. ದೇಹ ಒತ್ತಡಕ್ಕೆ ಒಳಗಾದಾಗ ನರವ್ಯವಸ್ಥೆಯ (Nervous System) ಮೇಲೆ ಪರಿಣಾಮ ಉಂಟಾಗುತ್ತದೆ.
ಏನೇನೋ ನೋವು, ಕೆಲಸದ ಟೆನ್ಷನ್‌ನಿಂದಲೂ ಕಾಡಬಹುದು, ಸರ್ವೆ ಹೇಳುವುದೇನು?
• ಸಮತೋಲನದ ನಿರ್ಧಾರ (Balanced Decision) ಕೈಗೊಳ್ಳಲು ವಿಫಲ
ಈ ಸ್ಥಿತಿಯಲ್ಲಿ ವ್ಯಕ್ತಿಯಲ್ಲಿ ಧನಾತ್ಮಕ (Positive) ವಿಚಾರಗಳು, ಉತ್ತಮ ಪ್ರೇರಣೆ ಕೆಲವೇ ಸಮಯವಿರುತ್ತವೆ. ಋಣಾತ್ಮಕ (Negative) ಚಿಂತನೆ ಹೆಚ್ಚಿ ನಿರಾಶಾವಾದಿಯಾಗುತ್ತಾನೆ. ಇದರಿಂದ ಕ್ರಮೇಣ ವಿವೇಚನೆ ಸಾಮರ್ಥ್ಯ ಕಳೆದುಕೊಂಡು, ಸಾಮಾಜಿಕವಾದ ಪರಿಣಾಮಗಳೂ ಕಾಣಿಸುತ್ತವೆ. ಏಕಾಗ್ರತೆಯ (Focus) ಕೊರತೆ, ಮರೆಯುವ ಸಮಸ್ಯೆ, ನಿದ್ರಾಹೀನತೆ ಉಂಟಾಗುತ್ತದೆ. ಇಂತಹ ಸಮಯದಲ್ಲಿ ದೀರ್ಘ ಬಿಡುವು ಪಡೆದುಕೊಳ್ಳಲು ಯತ್ನಿಸುವುದು ಒಳ್ಳೆಯದು.
ದೀರ್ಘ ಲೀವ್ (Leave) ಪಡ್ಕೊಳ್ಳೋದು ಹೇಗೆ?
ಮಾನಸಿಕವಾಗಿ ವಿಚಲಿತವಾದಾಗ, ಒತ್ತಡ ಅಧಿಕವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರತೊಡಗಿದಾಗ, ಖಿನ್ನತೆ ಉಂಟಾದಾಗ ದೀರ್ಘಾವಧಿ ಅಂದರೆ ಒಂದೆರಡು ತಿಂಗಳ ಕಾಲ ಮೆಂಟಲ್ ಹೆಲ್ತ್ ಬ್ರೇಕ್ ಪಡೆದುಕೊಳ್ಳುವ ಅವಕಾಶ ಇರುತ್ತದೆ. ಈ ಬಗ್ಗೆ ನೇರವಾಗಿ ಕಂಪೆನಿಯ ಮಾನವ ಸಂಪನ್ಮೂಲ ಅಧಿಕಾರಿ (HR) ಬಳಿ ಮನವಿ ಮಾಡಿಕೊಳ್ಳಬೇಕು. ಮಾನಸಿಕ ಆರೋಗ್ಯ ತಜ್ಞರ ಬಳಿ ಸಲಹೆ, ಮಾರ್ಗದರ್ಶನ ಕೊಡಿಸುವ ವ್ಯವಸ್ಥೆಯೂ ಸಾಕಷ್ಟು ಕಂಪೆನಿಗಳಲ್ಲಿದೆ. ಏಕಾಏಕಿ ಉದ್ಯೋಗಕ್ಕೆ (Profession) ರಾಜೀನಾಮೆ ನೀಡದೆ ಆಪ್ತಸಮಾಲೋಚನೆ, ಮನೋವೈದ್ಯರ ನೆರವಿನಿಂದ ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುವುದು ಉತ್ತಮ.