ಕೊರೋನಾದಿಂದಾಗಿ ಭಾರತೀಯ ಮಡಿಯತ್ತ ಈಗ ಎಲ್ಲರ ಚಿತ್ತ!

Suvarna News   | Asianet News
Published : Mar 20, 2020, 04:48 PM IST
ಕೊರೋನಾದಿಂದಾಗಿ ಭಾರತೀಯ ಮಡಿಯತ್ತ ಈಗ ಎಲ್ಲರ ಚಿತ್ತ!

ಸಾರಾಂಶ

ಮಡಿಯಿಂದರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಮಾಡಿಕೊಂಡು ಬಂದಿದ್ದ ರೂಢಿ ಎಂದು ಜಗತ್ತು ಈಗ ಅರ್ಥ ಮಾಡಿಕೊಳ್ಳುತ್ತಿದೆ. ಹೌದೋ ಅಲ್ಲವೋ ನೋಡಿ. ಆಧುನಿಕ ತಂತ್ರಜ್ಞಾನ ಹಾಗೂ ವಿಜ್ಞಾನದ ಸಂಕೇತವೇ ಎಂದು ತಿಳಿಯಲಾದ ವಿಮಾನ ನಿಲ್ದಾಣಗಳಲ್ಲಿ ಕೂಡ ಈಗ ಯಾರೂ ಯಾರನ್ನೂ ಮುಟ್ಟಿಸಿಕೊಳ್ಳುತ್ತಿಲ್ಲ.

ಕೊರೋನಾ ವೈರಸ್‌ ಭೀತಿ ಜಗತ್ತಿನ ಎಲ್ಲೆಡೆ ಹಬ್ಬಲು ಆರಂಭಿಸಿದಾಗ ನರೇಂದ್ರ ಮೋದಿಯವರು ಒಂದು ಸೂಚನೆ ನೀಡಿದರು: ಶೇಕ್‌ಹ್ಯಾಂಡ್‌ ಮಾಡೋ ಬದಲು ನಮಸ್ಕಾರ ಮಾಡಬಹುದಲ್ಲ ಅಂತ. ಅದನ್ನೇ ಟ್ರಂಪ್‌ ಬಂದಾಗ ಮಾಡಿಯೂ ತೋರಿಸಿದರು. ಮುಂದೆ ಕೆಲವೇ ದಿನಗಳಲ್ಲಿ, ಪರಸ್ಪರ ಕೈ ಮುಟ್ಟುವುದು ಅಪಾಯಕಾರಿ ಅಂತ  ಎಲ್ಲರಿಗೂ ಅರ್ಥವಾಯಿತು. ಆಗ ಇಸ್ರೇಲಿನ ಪ್ರಧಾನಿ ಬೆಂಜಮಿನ್‌ ನೆತಾನ್ಯಾಹು ಕೂಡ ಟಿವಿಯಲ್ಲಿ ಬಂದು, ಶೇಕ್‌ಹ್ಯಾಂಡ್‌ ಮಾಡೋ ಬದಲು ಲಕ್ಷಣವಾಗಿ ಭಾರತೀಯ ಪದ್ಧತಿಯ ರೂಢಿಯಲ್ಲಿ ನಮಸ್ಕಾರ ಮಾಡ್ರಪ್ಪಾ ಅಂತ ಹೇಳಿದರು. ಇತ್ತೀಚೆಗೆ ಬ್ರಿಟನ್‌ ರಾಜಕುಮಾರ ವಿಲಿಯಂ ಕೂಡ ಗಣ್ಯರನ್ನು ಭೇಟಿಯಾಗುವ ಸಂದರ್ಭದಲ್ಲಿ ಯಾರಿಗೂ ಶೇಕ್‌ಹ್ಯಾಂಡ್‌ ನೀಡದೆ, ಎಲ್ಲರಿಗೂ ಕೈ ಮುಗಿಯುತ್ತಾ ಹೋದ ವಿಡಿಯೋ ವೈರಲ್‌ ಆಗಿತ್ತು.

ಕಡೆಗೂ ಭಾರತೀಯ ನಮಸ್ಕಾರ ಫ್ಯಾಶನ್‌ ಆಗಿದೆ. ಅದಕ್ಕೆ ಕಾರಣ ಕೊರೋನಾ ವೈರಸ್‌ ಜ್ವರ. ನಮಸ್ಕಾರ ಮಾಡುವುದರಿಂದ ಇನ್ನೊಬ್ಬನ ಕೈ ಮುಟ್ಟಿ ಕ್ರಿಮಿಗಳನ್ನು ಬರಮಾಡಿಕೊಳ್ಳುವ ಅಪಾಯವಿಲ್ಲ. ವಂದನೆ ಗೌರವ ಸಲ್ಲಿಸಿದ ಹಾಗೆಯೂ ಆಯ್ತು. ಹೃದಯದ ಮುಂದೆ ಎರಡೂ ಕೈಗಳನ್ನು ತಂದು ಜೋಡಿಸಿ, ನಿನ್ನ ಹೃದಯದ ಜೊತೆ ನನ್ನ ಹೃದಯವೂ ಮಿಡಿಯುತ್ತಿದೆ ಎಂದು ಸೂಚಿಸುವುದು ಇದರ ಸಂಕೇತ. ಬಹಳ ಪ್ರಾಚೀನ ಹಾಗೂ ಅರ್ಥಪೂರ್ಣವಾದ ಗೌರವ ನಮನ ಇದು.

ನಡುಕ ಹುಟ್ಟಿಸಿರುವ ಕೊರೋನಾಗೆ ತಾಯತ ಮಾರಿದವ ಅರೆಸ್ಟ್ 

ಇದೇ ರೀತಿಯ ಇನ್ನೊಂದು ಭಾರತೀಯ ಕ್ರಮ ಮಡಿ. ಮಡಿ ಎಂದರೆ ಇದುವರೆಗೂ ಎಲ್ಲರೂ ದೂರ ಹಾರುತ್ತಿದ್ದರು. ಬರೀ ಸಾಂಪ್ರದಾಯಿಕ ಮಂದಿ ಮಾತ್ರ ಅದನ್ನು ಆಚರಿಸುತ್ತಿದ್ದರು. ಅನೇಕರು, ಮಡಿ ಎಂದರೆ ಭಾರತೀಯ ಸಮಾಜದಲ್ಲಿ ಉಚ್ಚ- ನೀಚ ಎಂಬ ಭೇದವನ್ನು ಕಾಪಾಡಲು ರಚಿಸಿಕೊಂಡ ವ್ಯವಸ್ಥೆ ಎಂದು ತಿಳಿದಿದ್ದರು. ಅದರಿಂಧ ಅಸ್ಪೃಶ್ಯತೆ ಹುಟ್ಟಿಕೊಂಡಿದೆ. ಅದನ್ನು ಕಾಪಾಡಲು ಮಡಿ ನೆರವಾಗಿದೆ ಎಂದು ಭಾವಿಸಿದ್ದರು. ಆದರೆ ಅದು ಹಾಗಲ್ಲ. ಮಡಿಯಿಂದರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಮಾಡಿಕೊಂಡು ಬಂದಿದ್ದ ರೂಢಿ ಎಂದು ಜಗತ್ತು ಈಗ ಅರ್ಥ ಮಾಡಿಕೊಳ್ಳುತ್ತಿದೆ.

ಹೌದೋ ಅಲ್ಲವೋ ನೋಡಿ. ಆಧುನಿಕ ತಂತ್ರಜ್ಞಾನ ಹಾಗೂ ವಿಜ್ಞಾನದ ಸಂಕೇತವೇ ಎಂದು ತಿಳಿಯಲಾದ ವಿಮಾನ ನಿಲ್ದಾಣಗಳಲ್ಲಿ ಕೂಡ ಈಗ ಯಾರೂ ಯಾರನ್ನೂ ಮುಟ್ಟಿಸಿಕೊಳ್ಳುತ್ತಿಲ್ಲ. ಬದಲಾಗಿ ದೂರದಿಂದಲೇ ಥರ್ಮಲ್‌ ಸ್ಕ್ಯಾನರ್‌ಗಳಲ್ಲಿ ಸ್ಕ್ಯಾನ್‌ ಮಾಡಿ, ಅವರ ಮೈ ಬಿಸಿ ಕಂಡುಬಂದರೆ ಕ್ವಾರಂಟೈನ್‌ಗಳಿಗೆ ನೂಕಲಾಗುತ್ತದೆ. ನೊವೆಲ್‌ ಕೊರೊನಾ ವೈರಸ್‌ ಕಾಯಿಲೆ ಈತನಿಗೆ ಎಂದು ಗೊತ್ತಾದರೆ ಸಾಕು, ಆತನ ಬಳಿ ಯಾರೂ ಸುಳಿಯುತ್ತಿಲ್ಲ. ಆತನ ಅತ್ಯಂತ ಆಪ್ತರು, ಬಂಧುಗಳು ಮಾತ್ರ ಆರೈಕೆಗೆ ನಿಲ್ಲುತ್ತಾರೆ. ಅದೂ ಆತನನ್ನು ಮುಟ್ಟಿಸಿಕೊಳ್ಳಲು ಹಿಂಜರಿಯುತ್ತಾರೆ. ಆತನ ಕೆಮ್ಮು, ಸೀನು, ನೆಗಡಿ ಇತ್ಯಾದಿಗಳಿಂದ ಹೊರಚಿಮ್ಮುವ ವಿಸರ್ಜನೆಯ ಹನಿಗಳಿಂದ ಕೊರೊನಾ ಹರಡುತ್ತದೆ ಎಂಬುದು ಎಲ್ಲರಿಗೆ ಈಗ ಗೊತ್ತಾಗಿರುವುದರಿಂದ, ಆ ಹನಿಗಳು ಸಿಡಿಯದಷ್ಟು ದೂರಕ್ಕೆ, ಅಂದರೆ ಕನಿಷ್ಠ ಆರು ಅಡಿಗಳ ಅಂತರವನ್ನು ಕಾಪಾಡಿಕೊಳ್ಳುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಜನ ಗುಂಪು ಸೇರುತ್ತಿಲ್ಲ. ಸೇರಿದರೂ ದೂರದಿಂದಲೇ ಮಾತಾಡಿಸಿ ಪರಾರಿಯಾಗುತ್ತಾರೆ. ಕಚೇರಿಗಳಲ್ಲಿ ಕೂಡ ಯಾರನ್ನಾದರೂ ಮುಟ್ಟಿದರೆ ಕೈ ತೊಳೆದುಕೊಂಡು ಬರುತ್ತಾರೆ ಅಥವಾ ಸ್ಯಾನಿಟೈಸರ್‌ ಬಳಸುತ್ತಾರೆ. ಮನೆಗಳಿಂದ ಹೊರಗೆ ಬರಬೇಡಿ ಎಂದು ಸರಕಾರವೇ ಹೇಳಿದೆ.

ಕೊರೋನಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸಿದ್ರೆ ಜೈಲಿಗೆ! 

ಹಿಂದಿನ ಭಾರತೀಯರು ಹೇಳಿದ್ದೇನು? ಇನ್ನೊಬ್ಬನ ಎಂಜಲು ತಿನ್ನಬೇಡಿ, ಊಟ ಮಾಡುವಾಗ ಮಾತಾಡಬೇಡಿ, ಯಾಕೆಂದರೆ ಅದರಿಂದ ಉಗುಳು ಸಿಡಿಯುತ್ತದೆ. ತುಂಬಾ ಹತ್ತಿರ ಕೂತುಕೊಂಡು ಊಟ ಮಾಡಬೇಡಿ. ಹೊರಗಿನಿಂದ ಬಂದವರ ಜೊತೆಗೆ, ಸ್ನಾನ ಮಾಡದೆ ಶುಚಿರ್ಭೂತರಾಗದೆ ಊಟಕ್ಕೆ ಕೂರಬೇಡಿ. ಅವರನ್ನು ಮುಟ್ಟಿಸಿಕೊಳ್ಳಬೇಡಿ. ಮನೆಯಲ್ಲೂ ಕೂಡ ಯಾರೂ ಸ್ನಾನ ಮಾಡದೆ ಅಡುಗೆ ಮಾಡಬೇಡಿ, ಇನ್ನೊಬ್ಬರಿಗೆ ಬಡಿಸಬೇಡಿ, ಊಟ ಮಾಡಬೇಡಿ.
 
ಇದರಲ್ಲಿ ತಪ್ಪೆಲ್ಲಿದೆ. ಇದಕ್ಕೆಲ್ಲ ಕಾರಣ ಏನು ಎಂದು ನಮ್ಮ ಹಿರಿಯರು ಹೇಳಲಿಲ್ಲ, ನಾವೂ ಕೇಳಲಿಲ್ಲ. ಅದು ಅವರ ತಪ್ಪಲ್ಲ. ಆದರೆ ಈಗ ಅರ್ಥವಾಗುತ್ತಿದೆ. ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಕ್ರಿಮಿಗಳನ್ನು, ವೈರಸ್‌ಗಳನ್ನು ತಡೆಯುವುದೇ ಈ ಮಡಿಯ ಉದ್ದೇಶವಾಗಿತ್ತು ಅನ್ನುವುದು. ಈ ಮಡಿಯ ಆಧುನಿಕ ಅವತಾರವೇ ಸೋಶಿಯಲ್‌ ಡಿಸ್ಟೆನ್ಸಿಂಗ್. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?
ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?