ನಾಗರೀಕತೆ ಬೆಳೆದು ಬಂದಂತೆಲ್ಲ ಸಾಂಕ್ರಾಮಿಕ ರೋಗಗಳೂ ಬೆಳೆದಿವೆ. ಲಕ್ಷಾಂತರ ಜನರ ಬಲಿ ಪಡೆದಿವೆ. ಅವುಗಳೆಲ್ಲ ಕೊನೆಯಾದದ್ದಾದರೂ ಹೇಗೆ?
ಕೋವಿಡ್ 19 ವೈರಸ್ಸಿಗೆ ಜಗತ್ತೇ ಮನೆಯೊಳಗೆ ಬಂಧಿಯಾಗಿದೆ. ಈ ಸಾಂಕ್ರಾಮಿಕ ರೋಗವು ಎಂದು ಕೊನೆಯಾಗುವುದೋ, ಕೊನೆಯಾಗುವುದೋ ಇಲ್ಲವೋ ಎಂಬ ಆತಂಕದಲ್ಲಿ ಜನಸಾಮಾನ್ಯರಿದ್ದಾರೆ. ಜಸ್ಟ್ ರಿಲ್ಯಾಕ್ಸ್ ಗಯ್ಸ್, ಇಂಥ ಡೆಡ್ಲಿ ಡಿಸೀಸ್ ಬಂದಿದ್ದು ಇದೇ ಮೊದಲಲ್ಲ. ಇತಿಹಾಸ ಕೆದಕಿದರೆ ಹಲವಾರು ಸಾಂಕ್ರಾಮಿಕ ರೋಗಗಳು ಜಗತ್ತನ್ನು ತಲ್ಲಣಗೊಳಿಸಿವೆ. ಅದೇ ಜಗತ್ತಿನ ಅಂತ್ಯ ಎಂದು ಭಾಸವಾಗುವಂತೆ ಮಾಡಿವೆ. ಆದರೆ, ಕಡೆಗೂ ನಾವು ಅವನ್ನೆಲ್ಲ ಗೆಲ್ಲುತ್ತಾ ಬಂದಿದ್ದೇವೆ. ಆದರೆ, ಲಕ್ಷಾಂತರ ಜನರು ಆ ಕಾಯಿಲೆಗೆ ಬಲಿಯಾದ ನಂತರವಷ್ಟೇ.
ನಾಗರೀಕತೆ ಬೆಳೆದು ಬಂದಂತೆಲ್ಲ ಸಾಂಕ್ರಾಮಿಕ ರೋಗಗಳೂ ಬೆಳೆದಿವೆ. ಹೆಚ್ಚು ಹೆಚ್ಚು ಜನ, ಪ್ರಾಣಿಗಳು ಒಟ್ಟಾಗಿ ಜೀವಿಸಲಾರಂಭಿಸಿದಂತೆಲ್ಲ ಅವರ ಸ್ವಚ್ಛತೆಯ ಕೊರತೆ, ದೇಹಕ್ಕೆ ಪೋಷಕಸತ್ವಗಳ ಕೊರತೆಯು ಹೊಸ ಕಾಯಿಲೆಗಳನ್ನು ಸ್ವಾಗತಿಸಿ ಕರೆತಂದಿವೆ. ಅದರಲ್ಲೂ ಹೊಸ ಹೊಸ ದೇಶಗಳಿಗೆ ವ್ಯಾಪಾರಿಗಳು ಹಡಗು ಹೊತ್ತು ತಿರುಗಲಾರಂಭಿಸಿದ ಬಳಿಕವಂತೂ ಕಾಯಿಲೆ ಹರಡುವ ರೋಗಾಣುಗಳೂ ಜಗತ್ತೆಲ್ಲ ಸುತ್ತಿ, ತಮ್ಮ ಸಾಮರ್ಥ್ಯಕ್ಕನುಗುಣವಾಗಿ ದೊಡ್ಡ ಮಟ್ಟದ ಬಲಿಯನ್ನೇ ಪಡೆದಿವೆ.
ಈ ಹಿಂದೆ ಬಂದ ಸಾಂಕ್ರಾಮಿಕ ಕಾಯಿಲೆಗಳು ಅಂತ್ಯ ಕಂಡಿದ್ದಾದರೂ ಹೇಗೆ ಎಂಬುದನ್ನಿಲ್ಲಿ ನೋಡೋಣ.
1. ಪ್ಲೇಗ್ ಆಫ್ ಜಸ್ಟೀನಿಯನ್
ಜಗತ್ತು ಕಂಡ ಅತಿ ಡೆಡ್ಲಿ ಸಾಂಕ್ರಾಮಿಕಗಳಲ್ಲಿ ಮೂರಕ್ಕೆ ಕಾರಣವಾದದ್ದು ಒಂದೇ ಬ್ಯಾಕ್ಟೀರಿಯಾ- ಅದೇ ಯೆರ್ಸೀನಿಯಾ ಪೆಸ್ಟಿಸ್. ಪ್ಲೇಗ್ ಮಹಾಮಾರಿಯನ್ನು ಹೊತ್ತು ಮೆರೆದಿದ್ದು ಇದೇ ಬ್ಯಾಕ್ಟೀರಿಯಾ. ಇಸವಿ 541 ಸಿಇನಲ್ಲಿ ಕಾನ್ಸ್‌ಟ್ಯಾಂಟಿನೋಪಲ್‌ಗೆ ಕಾಲಿಟ್ಟಿತು. ತಾನು ಕಾನ್ಸ್‌ಟ್ಯಾಂಟಿನೋಪಲ್‌ಗೆ ಸೋತ ಕಾರಣ ಗೌರವಸೂಚಕವಾಗಿವಾಗಿ ಈಜಿಪ್ಟ್ ಅಲ್ಲಿನ ರಾಜ ಜಸ್ಟೀನಿಯನ್‌ಗೆ ಬೇಳೆಕಾಳುಗಳನ್ನು ಮೆಡಿಟರೇನಿಯನ್ ಸಮುದ್ರದ ಮೂಲಕ ಕಳುಹಿಸಿಕೊಟ್ಟಿತ್ತು. ಇವುಗಳಲ್ಲಿದ್ದ ಪ್ಲೇಗ್ ಹರಡುವ ರೋಗಾಣುಗಳು ಅವನ್ನು ಹಡಗಿನಲ್ಲಿ ಸೇವಿಸಿದ ಇಲಿಗಳ ದೇಹ ಸೇರಿದವು. ಈ ಇಲಿಗಳು ಯೂರೋಪ್ ತಲುಪಿದ್ದೇ ಯೂರೋಪಿನ ಉದ್ದಗಲಕ್ಕೂ ಕಾಡ್ಗಿಚ್ಚಿನಂತೆ ಪ್ಲೇಗ್ ಹರಡಿತು. ಅಲ್ಲಿಂದ ಏಷ್ಯಾ, ಉತ್ತರ ಆಫ್ರಿಕಾ ಹಾಗೂ ಅರೇಬಿಯಾಕ್ಕೂ ಹಬ್ಬಿ ಸುಮಾರು 50 ದಶಲಕ್ಷ ಜನರ ಬಲಿ ಪಡೆಯಿತು. ಆ ಕಾಲಕ್ಕೆ ಅದು ಜಗತ್ತಿನ ಅರ್ಧ ಭಾಗದಷ್ಟು ಜನಸಂಖ್ಯೆಯಾಗಿತ್ತು!
ಈ ಕಾಯಿಲೆ ಬಗ್ಗೆ ಏನೊಂದು ಅರ್ಥವಾಗದಿದ್ದರೂ, ಕಾಯಿಲೆ ಬಂದವರಿಂದ ದೂರವುಳಿಯಬೇಕೆನ್ನುವಷ್ಟನ್ನು ಜನ ಅರ್ಥ ಮಾಡಿಕೊಂಡರು. ಇದು ಅಂತ್ಯ ಕಂಡ ಬಗ್ಗೆ ನಿಖರ ಕಾರಣಗಳು ತಿಳಿದಿಲ್ಲವಾದರೂ, ಉತ್ತಮ ರೋಗ ನಿರೋಧಕ ಶಕ್ತಿ ಹೊಂದಿದವರು ಉಳಿದರು ಎಂದು ನಂಬಲಾಗಿದೆ.
2. ಬ್ಲ್ಯಾಕ್ ಡೆತ್
ಮಧ್ಯಯುಗದಲ್ಲಿ ಮತ್ತೆ ಪ್ಲೇಗ್ ಮಹಾಮಾರಿ ಕಾಣಿಸಿಕೊಂಡು ಬ್ಲ್ಯಾಕ್ ಡೆತ್ ಹೆಸರು ಪಡೆದಿತ್ತು. 1347ನಲ್ಲಿ ಯೂರೋಪ್ ವ್ಯಾಪಿಸಿದ ಇದು 200 ದಶಲಕ್ಷ ಜನರನ್ನು ಕೇವಲ 4 ವರ್ಷಗಳಲ್ಲಿ ಬಲಿ ತೆಗೆದುಕೊಂಡು ಹೋಯಿತು.
ಇದನ್ನು ನಿಲ್ಲಿಸುವುದು ಹೇಗೆಂದು ತಿಳಿಯದಿದ್ದರೂ ಒಬ್ಬರಿಂದ ಒಬ್ಬರಿಗೆ ಹರಡುವ ಬಗ್ಗೆ ತಿಳಿಯಿತು. ಹಾಗಾಗಿ, ರಗುಸಾ ನಗರದ ಬಂದರಿನಲ್ಲಿ ಬರುವ ನಾವಿಕರು ಹಾಗೂ ಇತರೆ ಹಡಗು ಪ್ರಯಾಣಿಕರು 30 ದಿನಗಳ ಕಾಲ ಐಸೋಲೇಶನ್‌ನಲ್ಲಿದ್ದು ಕಾಯಿಲೆ ಬೀಳಲಿಲ್ಲ ಎಂದು ಸಾಬೀತುಪಡಿಸಿದರಷ್ಟೇ ಬಿಡುಗಡೆಯಾಗುತ್ತಿದ್ದರು. ನಂತರ ಈ ಕ್ವಾರೆಂಟೈನ್ ಅವಧಿಯನ್ನು 40 ದಿನಕ್ಕೆ ವಿಸ್ತರಿಸಲಾಯಿತು. ಅದೇ ಮೊದಲ ಬಾರಿಗೆ ಕ್ವಾರಂಟೈನ್ ಕಾನ್ಸೆಪ್ಟ್ ಶುರುವಾದದ್ದು. ಇದು ಕಾಯಿಲೆ ತಡೆವಲ್ಲಿ ಬಹಳಷ್ಟು ಯಶಸ್ವಿಯಾಯಿತು.
3. ದಿ ಗ್ರೇಟ್ ಪ್ಲೇಗ್ ಆಫ್ ಲಂಡನ್
ಬ್ಲ್ಯಾಕ್ ಡೆತ್ ಬಳಿಕ ಲಂಡನ್‌ಗೆ ಚೇತರಿಸಿಕೊಳ್ಳಲು ಅಂಥ ಸಮಯವೇನೂ ಸಿಗಲಿಲ್ಲ. 1348ರಿಂದ 1665ರವರೆಗೆ ಸರಾಸರಿ ಪ್ರತಿ 20 ವರ್ಷಗಳಿಗೊಮ್ಮೆ ಪ್ಲೇಗ್ ಮರುಕಳಿಸಿದೆ. ಈ 300 ವರ್ಷಗಳಲ್ಲಿ 40 ಬಾರಿ ಪ್ಲೇಗ್ ಮಹಾಮಾರಿ ಕಾಡಿದ್ದು, ಪ್ರತಿ ಬಾರಿ ಬಂದಾಗಳೂ ಲಂಡನ್‌ನ ಶೇ.20ರಷ್ಟು ಜನರನ್ನು ಬಲಿ ತೆಗೆದುಕೊಂಡು ಹೋಗಿದೆ.
1500ರ ಹೊತ್ತಿಗೆ ಇಂಗ್ಲೆಂಡ್ ಕಾಯಿಲೆ ಬಿದ್ದವರನ್ನು ಪ್ರತ್ಯೇಕವಾಗಿರಿಸಲು ಕಾನೂನನ್ನು ತಂದಿತು. ಪ್ಲೇಗ್ ಬಂದವರ ಕುಟುಂಬದ ಮನೆ ಬಾಗಿಲಿನ ಮೇಲೆ ಮಾರ್ಕ್ ಮಾಡಲಾಯಿತು. ಸೋಂಕು ಬಂದಿರುವವರು ಕುಟುಂಬದಲ್ಲಿದ್ದರೆ ಉಳಿದ ಸದಸ್ಯರು ಹೊರ ಹೋಗುವಾಗ ಬಿಳಿಯ ಕೋಲೊಂದನ್ನು ಹಿಡಿದು ಹೋಗಲು ಹೇಳಲಾಯಿತು. ಕಾಯಿಲೆ ಹರಡುತ್ತಿವೆ ಎಂದು ಭಾವಿಸಿ ಸಾವಿರಾರು ನಾಯಿ, ಬೆಕ್ಕುಗಳನ್ನು ಕೊಲ್ಲಲಾಯಿತು. ಕಡೆಯದಾಗಿ 1665ರಲ್ಲಿ ಬಂದ ಪ್ಲೇಗ್ ಲಂಡನ್‌ನ ಸುಮಾರು 1 ಲಕ್ಷ ಜನರನ್ನು ಬಲಿ ಪಡೆಯಿತು. ಈ ಸಂದರ್ಭದಲ್ಲಿ ಎಲ್ಲ ರೀತಿಯ ಮನರಂಜನೆಯನ್ನೂ ಬ್ಯಾನ್ ಮಾಡಲಾಗಿತ್ತು. ಜೊತೆಗೆ ಸಂತ್ರಸ್ತರನ್ನು ಒತ್ತಾಯಪೂರ್ವಕವಾಗಿ ಮನೆಯೊಳಗೇ ಉಳಿಸಿ ಕಾಯಿಲೆ ಹರಡದಂತೆ ನೋಡಿಕೊಳ್ಳಲಾಯಿತು. ಅಂಥವರ ಮನೆ ಬಾಗಿಲಿನಲ್ಲಿ 'ಲಾರ್ಡ್ ಹ್ಯಾವ್ ಮರ್ಸಿ ಅಪಾನ್ ಅಸ್' ಎಂದು ಬರೆಯಲಾಗಿತ್ತು. ಸತ್ತವರನ್ನು ಸಾಮೂಹಿಕವಾಗಿ ಹೂಳಲಾಯಿತು. ಒಟ್ಟಿನಲ್ಲಿ ಪ್ಲೇಗ್‌ಗೆ ಕೊನೆ ಹಾಡಲು ಕಡೆಗೂ ಯಶಸ್ವಿಯಾದರು.
4. ಸಿಡುಬು
ಅಬ್ಬಬ್ಬಾ, ಪ್ಲೇಗ್ ಗೆದ್ದೆವು ಎಂದು ನಿಟ್ಟುಸಿರಿಟ್ಟ ಜಗತ್ತಿಗೆ ಮತ್ತೊಂದು ಸಂಚಕಾರಿಯಾಗಿ ಬಂದದ್ದು ಸಿಡುಬು. ಶತಮಾನಗಳ ಕಾಲ ಯೂರೋಪ್, ಏಷ್ಯಾ ಹಾಗೂ ಅರೇಬಿಯಾವನ್ನು ಕಾಡಿದ ಸಿಡುಬು ಹತ್ತಿರಲ್ಲಿ ಮೂವರ ಪ್ರಾಣ ಬಲಿ ತೆಗೆದುಕೊಳ್ಳುತ್ತಿತ್ತು. ಬದುಕುಳಿದವರ ಮೈತುಂಬಾ ಕಲೆ ಉಳಿಸುವುದು ಮರೆಯುತ್ತಿರಲಿಲ್ಲ. 15ನೇ ಶತಮಾನದಲ್ಲಿ ಯೂರೋಪಿನ ವಿಶ್ವ ಪರಿಶೋಧಕರಿಂದ ಅಮೆರಿಕ ಹಾಗೂ ಮೆಕ್ಸಿಕೋಗೆ ಹಬ್ಬಿದ ಸಿಡುಬು ಶತಮಾನವೊಂದರಲ್ಲಿ 90-95 ಪ್ರತಿಶತದಷ್ಟು ಸ್ಥಳೀಯರನ್ನು ತೆಕ್ಕೆಗೆಳೆದುಕೊಂಡಿತು. ಮೆಕ್ಸಿಕೋದ ಜನಸಂಖ್ಯೆ 1.1. ಕೋಟಿಯಿಂದ 10 ಲಕ್ಷಕ್ಕಿಳಿದಿತ್ತು.
ಕಡೆಗೂ 18ನೇ ಶತಮಾನದ ಕಡೆಯಲ್ಲಿ ಸಿಡುಬಿಗೆ ಬ್ರಿಟಿಶ್ ಡಾಕ್ಟರ್ ಎಡ್ವರ್ಡ್ ಜೆನ್ನರ್ ವ್ಯಾಕ್ಸಿನೇಶನ್ ಕಂಡುಹಿಡಿದು ಲೋಕವನ್ನು ವೈರಸ್‌ನಿಂದ ರಕ್ಷಿಸಿದ. ಸಿಡುಬು ಜಗತ್ತಿನಿಂದ ಸಂಪೂರ್ಣ ಮರೆಯಾಗಲು ಮತ್ತೆರಡು ಶತಮಾನಗಳು ಬೇಕಾದವು.
5. ಕೊಲೆರಾ
19ನೇ ಶತಮಾನದ ಮಧ್ಯದಲ್ಲಿ ಕೊಲೆರಾ ಇಂಗ್ಲೆಂಡ್‌ಗೆ ಕಾಲಿಟ್ಟು ಸಾವಿರಾರು ಜನರ ಸಾವಿಗೆ ಕಾರಣವಾಯಿತು. ಲಂಡನ್‌ನ ಜನಪ್ರಿಯ ಬ್ರಾಡ್ ಸ್ಟ್ರೀಟ್ ಪಂಪಿನಿಂದ ತೆಗೆದ ಕುಡಿಯುವ ನೀರಿನಿಂದ ಈ ವೈರಸ್ ಹರಡುತ್ತಿದೆ ಎಂದು ವೈದ್ಯರೊಬ್ಬರು ಕಂಡುಹಿಡಿದ ಬಳಿಕ ಅದನ್ನು ಮುಚ್ಚಲಾಯಿತು. ನಂತರದಲ್ಲಿ ಕುಡಿಯುವ ನೀರಿನ ಸ್ವಚ್ಛತೆಯ ಬಗ್ಗೆ ಜಗತ್ತು ಹೆಚ್ಚು ಅಸ್ಥೆ ವಹಿಸತೊಡಗಿತು. ಈಗ ಜಗತ್ತಿನ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕೊಲೆರಾ ಇಲ್ಲವಾದರೂ ಕೆಲವೊಂದು ಸಣ್ಣ ಪುಟ್ಟ ದೇಶಗಳನ್ನಿನ್ನೂ ಕಾಡುತ್ತಿದೆ.