
ತರಕಾರಿಗಳ ಪೌಷ್ಟಿಕಾಂಶದ ವಿಚಾರಕ್ಕೆ ಬಂದಾಗ ಆಲೂಗಡ್ಡೆ ಸ್ವಲ್ಪ ವಿವಾದಾಸ್ಪದ ತರಕಾರಿ ಎನ್ನಬಹುದು. ಏಕೆಂದರೆ, ತೂಕ ಇಳಿಕೆ ಮಾಡಲು ಬಯಸುವವರು, ಮಧುಮೇಹಿಗಳು, ಗ್ಯಾಸ್ಟ್ರಿಕ್ ಸಮಸ್ಯೆ ಉಳ್ಳವರು ಆಲೂಗಡ್ಡೆ ತಿನ್ನುವುದು ಕಡಿಮೆ. ಆಲೂಗಡ್ಡೆ ಹೆಚ್ಚು ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ತರಕಾರಿ ಆಗಿರುವುದರಿಂದ ಮಧುಮೇಹಿಗಳಿಗೆ ಹಾನಿಕರ. ಹಾಗೆಯೇ, ಆಲೂಗಡ್ಡೆಯ ಕರಿದ ತಿನಿಸುಗಳು ತೂಕ ಮತ್ತು ದೇಹದಲ್ಲಿ ಕೊಬ್ಬನ್ನು ಹೆಚ್ಚಿಸುತ್ತವೆ. ಹಾಗಿದ್ದರೆ ಆಲೂಗಡ್ಡೆಯಿಂದ ಆರೋಗ್ಯಕ್ಕೆ ಏನೂ ಪ್ರಯೋಜನವಿಲ್ಲವೇ ಎಂದು ಕೇಳಬಹುದು. ಹಾಗೇನಿಲ್ಲ. ಆಹಾರ ಪರಿಪೂರ್ಣವಾಗಲು ಆಲೂಗಡ್ಡೆ ಕೂಡ ಇರಬೇಕು. ಅದನ್ನು ಹೇಗೆ ಬಳಕೆ ಮಾಡುತ್ತೇವೆ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ಪೌಷ್ಟಿಕಾಂಶಗಳನ್ನು ಗಮನದಲ್ಲಿರಿಸಿ ಆಹಾರ ಸೇವನೆ ಮಾಡುವ ಇಂದಿನ ದಿನಗಳಲ್ಲಿ ಆಲೂಗಡ್ಡೆ ವಿಲನ್ ಎಂಬಂತಾಗಿದೆ. ಅಸಲಿಗೆ, ಆಲೂಗಡ್ಡೆಯಲ್ಲಿ ಹಲವು ಉತ್ತಮ ಅಂಶಗಳಿರುತ್ತವೆ. ಅದನ್ನು ಬಳಕೆ ಮಾಡುವ ವಿಧಾನದ ಬಗ್ಗೆ ಸಾಕಷ್ಟು ಜನರಿಗೆ ಅರಿವಿಲ್ಲ ಎನ್ನುವುದು ಆಹಾರ ತಜ್ಞರ ಅನಿಸಿಕೆ. ಉದಾಹರಣೆಗೆ, ಆಲೂಗಡ್ಡೆಯನ್ನು ಅನ್ನದೊಂದಿಗೆ ಬೆರೆಸಿ ತಿನ್ನಬಾರದು ಎನ್ನುತ್ತಾರೆ. ಆಗ ಆ ಆಹಾರ ಅತಿಯಾದ ಕಾರ್ಬೋಹೈಡ್ರೇಟ್ ಹೊಂದುತ್ತದೆ. ಇದು ಸರಿಯಲ್ಲ. ಹೀಗಾಗಿ, ಬಳಕೆ ಮಾಡುವ ವಿಧಾನ ಅರಿಯುವುದು ಅಗತ್ಯ.
ಆಲೂ ಏನೆಲ್ಲ ಹೊಂದಿರುತ್ತೆ?
ಆಲೂಗಡ್ಡೆಯಲ್ಲಿ (Potato) ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ (Complex Carbohydrate) ಇರುತ್ತದೆ. ನಾರಿನಂಶ (Fibre), ವಿಟಮಿನ್, ಖನಿಜಾಂಶಗಳು ಕೂಡ ಇರುತ್ತವೆ. ವಿಟಮಿನ್ ಸಿ, ಐರನ್ (Iron), ಮ್ಯಾಗ್ನೆಸಿಯಂ, ಫಾಸ್ಪರಸ್, ವಿಟಮಿನ್ ಬಿ6, ಪೊಟ್ಯಾಸಿಯಂ, ಆಂಟಿಆಕ್ಸಿಡಂಟ್ ಅನ್ನು ಒಳಗೊಂಡಿರುವ ಆಲೂಗಡ್ಡೆ ದೇಹಕ್ಕೆ ಖಂಡಿತವಾಗಿ ಬೇಡವಾದ ಅಂಶಗಳನ್ನು ಒಳಗೊಂಡಿಲ್ಲ.
ಪ್ರೊಟೀನ್‌ಗಾಗಿ ಹಸಿ ಮೊಟ್ಟೆ ತಿನ್ನೋ ಅಭ್ಯಾಸವಿದ್ಯಾ? ಇಷ್ಟೆಲ್ಲಾ ತೊಂದ್ರೆ ಆಗುತ್ತೆ ಗೊತ್ತಿರ್ಲಿ
200-150 ಗ್ರಾಮ್ ಆಲೂಗಡ್ಡೆಯಲ್ಲಿ 150 ಕ್ಯಾಲರಿ (Calorie) ಇರುತ್ತದೆ. ಇದರಲ್ಲಿ ಕೊಬ್ಬಿನ (Fat) ಅಂಶವೇ ಇಲ್ಲ. ನೀರಿನಿಂದ ಕೂಡಿರುತ್ತದೆ. ಆದರೆ, ಅಧಿಕ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಇರುವುದರಿಂದ ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಹಾಗೆಯೇ, ಗ್ಲೈಸೆಮಿಕ್ ಇಂಡೆಕ್ಸ್ (Glycaemic Index) ಹೆಚ್ಚು ಹೊಂದಿರುವುದರಿಂದ ರಕ್ತದ ಸಕ್ಕರೆ ಮಟ್ಟ ಏರಿಕೆಯಾಗಲು ಕೊಡುಗೆ ನೀಡುತ್ತದೆ. ಹೀಗಾಗಿ, ಆಲೂಗಡ್ಡೆಯನ್ನು ಹಸಿರು ಸೊಪ್ಪಿನ ಜತೆ ಬಳಕೆ ಮಾಡುವುದು ಸೂಕ್ತ.
ಪ್ರೊಟೀನ್ (Protein) ಜತೆ ಸೇರಿಸೋದು ಸಲ್ಲದು
ಆಲೂಗಡ್ಡೆಯನ್ನು ಬೇರೆ ತರಕಾರಿಗಳೊಂದಿಗೆ ಸ್ವಲ್ಪ ಪ್ರಮಾಣದಲ್ಲಿ ಬೇಯಿಸಿ ಸಲಾಡ್ ನಂತೆ ಸೇವಿಸುವುದು ಉತ್ತಮ ಎನ್ನುವುದು ಆಹಾರ ತಜ್ಞರ ಸಲಹೆ. ಇದನ್ನು ಪ್ರೊಟೀನ್ ಭರಿತವಾಗಿರುವ ಆಹಾರದೊಂದಿಗೆ ಸೇರಿಸುವುದು ಕೂಡ ಒಳ್ಳೆಯದಲ್ಲ. ಸ್ಟಾರ್ಚ್ (Starch) ಅಂಶವಿರುವ ಆಲೂಗಡ್ಡೆ ಹಾಗೂ ಪ್ರೊಟೀನ್ ಸೇರಿದಾಗ ಜೀರ್ಣಕ್ರಿಯೆಗೆ ಸಮಸ್ಯೆ ಆಗುತ್ತದೆ. ಹಾಗೆಯೇ, ಆಲೂಗಡ್ಡೆಯನ್ನು ಫ್ರೈ (Fry) ಮಾಡಬಾರದು. ಆಲೂ ಚಿಪ್ಸ್ ಖಂಡಿತವಾಗಿ ಒಳ್ಳೆಯದಲ್ಲ. ಬೇಯಿಸಿ (Boil, Bake, Steam) ಸೇವಿಸಬೇಕು. ದಿನವೂ ಮಧ್ಯಮ ಗಾತ್ರದ ಆಲೂ ಸೇವನೆ ಮಾಡುವುದರಿಂದ ಏನೂ ಸಮಸ್ಯೆ ಇಲ್ಲ ಎನ್ನಲಾಗುತ್ತದೆ.
ಆಲೂಗಡ್ಡೆಯ ಇನ್ನೊಂದು ಮಹತ್ವದ ಅಂಶವೆಂದರೆ, ಇದು ನಾರಿನಂಶ ಹೊಂದಿರುತ್ತದೆ. ಕರಗದ ಹಾಗೂ ಕರಗುವ ಎರಡೂ ರೀತಿಯ ನಾರಿನ ಅಂಶ ಹೊಂದಿರುವುದರಿಂದ ಜೀರ್ಣಕ್ರಿಯೆಗೆ (Digest) ಉತ್ತಮವಾಗಿದೆ. ನಾರಿನಂಶ ರಕ್ತದ ಸಕ್ಕರೆ ಮಟ್ಟವನ್ನು ರೆಗ್ಯುಲೇಟ್ ಮಾಡುವ ಗುಣವನ್ನೂ ಹೊಂದಿರುತ್ತದೆ ಎನ್ನುವುದು ಮುಖ್ಯವಾದ ಅಂಶ.
ವೃತ್ತಿಗಾಗಿ ಈ ವಿಚಾರಗಳೊಂದಿಗೆ ರಾಜಿ ಮಾಡಿಕೊಳ್ಳಲೇ ಬೇಡಿ, ದುಬಾರಿ ಬೆಲೆ ತೆರಬೇಕಾಗುತ್ತೆ
ಕರಿದ ಆಲೂ
ಆಲೂಗಡ್ಡೆಯನ್ನು ಸಿಪ್ಪೆಯ ಸಮೇತ ಬೇಯಿಸಿ ಸೇವಿಸುವುದು ಹೆಚ್ಚು ಉತ್ತಮ. ಆಲೂಗಡ್ಡೆಯಿಂದ ಮಾಡುವ ಆಹಾರ ಪದಾರ್ಥಗಳಿಗೆ ಚೀಸ್, ಬೆಣ್ಣೆ ಅಥವಾ ಕ್ರೀಮುಗಳನ್ನು ಸೇರಿಸಬಾರದು. ಇತರೆ ತರಕಾರಿ (Vegetable) ಮತ್ತು ಸೊಪ್ಪಿನೊಂದಿಗೆ ಸೇರಿಸಿ ಸೇವನೆ ಮಾಡಬೇಕು. ಆದರೆ, ಆಲೂಗಡ್ಡೆಯನ್ನು ಸಾಮಾನ್ಯವಾಗಿ ಕರಿದು ಅಥವಾ ಚೀಸ್, ಬೆಣ್ಣೆ ಇತ್ಯಾದಿ ಸೇರಿಸಿ ಮಾಡುವ ಕರಿ ಅಥವಾ ಸಾಗು ರೂಪದಲ್ಲಿ ಸೇವನೆ ಮಾಡುವುದೇ ಹೆಚ್ಚಾಗಿ ಕಂಡುಬರುತ್ತದೆ. ಈ ಮಾದರಿ ಸಮತೋಲನದ ಆಹಾರ ಎನಿಸುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.