ಡಯಾಬಿಟಿಸ್ ಇದು ಕಾಮನ್ ಆಗ್ತಿದೆ. ಆದ್ರೆ ಇದ್ರಲ್ಲಿ ಪುರುಷರು ಮುಂದಿದ್ದಾರೆ. ಭಾರತದಲ್ಲಿ ಈ ಸಕ್ಕರೆ ಖಾಯಿಲೆ ಮಹಿಳೆಯರಿಗಿಂತ ಪುರುಷರನ್ನು ಹೆಚ್ಚಾಗಿ ಕಾಡಲು ಅನೇಕ ಕಾರಣವಿದೆ. ಜಡ ಜೀವನಶೈಲಿ ಕೂಡ ಇದ್ರಲ್ಲಿ ಒಂದು.
ಭಾರತವನ್ನು ಪ್ರಪಂಚದ ಮಧುಮೇಹ ರಾಜಧಾನಿ ಎಂದೇ ಕರೆಯಲಾಗುತ್ತದೆ. ಇಡೀ ವಿಶ್ವದ ಮಧುಮೇಹ ರೋಗಿಗಳಲ್ಲಿ ಶೇಕಡಾ 17ರಷ್ಟು ಭಾರತದಲ್ಲಿದ್ದಾರೆ. ಸದ್ಯ ಮಧುಮೇಹಿಗಳ ಸಂಖ್ಯೆ ಸುಮಾರು 8 ಕೋಟಿಯಷ್ಟಿದ್ದು, 20 ವರ್ಷಗಳ ನಂತರ ಈ ಸಂಖ್ಯೆ 13.5 ಕೋಟಿಗೆ ಏರಲಿದೆ ಎಂದು ಅಂದಾಜಿಸಲಾಗಿದೆ. ಸಕ್ಕರೆ ಕಾಯಿಲೆಗೆ ಕಾರಣವೇನು ಹಾಗೆ ಭಾರತದಲ್ಲಿ ಇದ್ರ ಏರಿಕೆ ಹಿಂದೆ ಏನು ಕಾರಣವಿದೆ ಎಂಬುದನ್ನು ನಾವಿಂದು ನಿಮಗೆ ಹೇಳ್ತೇವೆ.
ಮಧುಮೇಹ (Diabetes) ಆನುವಂಶಿಕ ಅಥವಾ ಜೀವನಶೈಲಿಗೆ ಸಂಬಂಧಿಸಿದ ಖಾಯಿಲೆ (Disease). ಇದ್ರಲ್ಲಿ ಶೇಕಡಾ 95ಕ್ಕಿಂತ ಹೆಚ್ಚು ಜನರು ಟೈಪ್ -2 ಮಧುಮೇಹವನ್ನು ಹೊಂದಿದ್ದಾರೆ. ಅಂದರೆ ಆಹಾರ, ದೈಹಿಕ ಚಟುವಟಿಕೆ, ಒತ್ತಡ, ನಿದ್ರೆ ಮತ್ತು ಜೀನ್‌ಗಳಂತಹ ಅನೇಕ ಅಂಶಗಳು ಅವರ ಮಧುಮೇಹಕ್ಕೆ ಕಾರಣವಾಗ್ತಿದೆ. ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆ (Woman) ಯರಲ್ಲಿ ಮಧುಮೇಹ ಕಡಿಮೆ ಎನ್ನಬಹುದು. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (NFHS-5) ವರದಿಯ ಪ್ರಕಾರ, ಶೇಕಡಾ 12.4 ರಷ್ಟು ಮಹಿಳೆಯರು ಮತ್ತು ಶೇಕಡಾ 14.5 ರಷ್ಟು ಪುರುಷರು ಮಧುಮೇಹದಿಂದ ಬಳಲುತ್ತಿದ್ದಾರೆ.
ಬೆಳಗ್ಗೆ ಎದ್ದ ಮೇಲೆ ಮತ್ತೆ ಮಲಗಬೇಕೆನಿಸಿದರೆ, ಈ ರೋಗವಿರಬಹುದು!
ಪುರುಷರಿಗಿಂತ ಮಹಿಳೆಯರಲ್ಲಿ ಮಧುಮೇಹ ಕಡಿಮೆ ಏಕೆ? : ಮಧುಮೇಹ ಮೊದಲೇ ಹೇಳಿದಂತೆ ಜೀವನ ಶೈಲಿಯಿಂದ ಬರುತ್ತದೆ. ಪುರುಷರಲ್ಲಿ ದೈಹಿಕ ಸಕ್ರಿಯತೆ ಕಡಿಮೆ. ಮಹಿಳೆಯರು ಪುರುಷರಿಗಿಂತ ಹೆಚ್ಚು ಸಕ್ರಿಯರಾಗಿದ್ದಾರೆ. ವಯಸ್ಸಾದ ನಂತರವೂ ಮಹಿಳೆಯರು ಮನೆಕೆಲಸಗಳನ್ನು ಮಾಡ್ತಾರೆ. ಇದು ಅವರನ್ನು ದೈಹಿಕವಾಗಿ ಸದೃಢವಾಗಿರಿಸುತ್ತದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಮಹಿಳೆಯರು ಪುರುಷರಿಗಿಂತ ಹೆಚ್ಚು ಫಿಟ್ ಆಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ವರದಿಯ ಪ್ರಕಾರ, 30 ವರ್ಷ ಮೇಲ್ಪಟ್ಟ ಶೇಕಡಾ 9ರಷ್ಟು ಮಹಿಳೆಯರು ಮಧುಮೇಹದಿಂದ ಬಳಲುತ್ತಿದ್ದರೆ, 30 ವರ್ಷ ಮೇಲ್ಪಟ್ಟ ಶೇಕಡಾ 11.3ರಷ್ಟು ಪುರುಷರಲ್ಲಿ ಮಧುಮೇಹವಿದೆ. ಮಹಿಳೆಯರಲ್ಲಿ ಮಧುಮೇಹ ಸಂಖ್ಯೆ ಕಡಿಮೆ ಇರೋದು ಖುಷಿ ವಿಷ್ಯವಾದ್ರೂ ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸದಿರುವುದು ಬೇಸರದ ಸಂಗತಿಯಾಗಿದೆ. ಅವರು ತಮಗಾಗಿ ಪ್ರತ್ಯೇಕ ಅಡುಗೆ ಮಾಡ್ತಿಲ್ಲ. ಪುರುಷರಿಗೆ ಇಷ್ಟವಾದ ಅಡುಗೆ ತಯಾರಿಸಿ ಅದನ್ನೇ ಸೇವನೆ ಮಾಡ್ತಿದ್ದಾರೆ. ಎರಡನೆಯದಾಗಿ ಮನೆಯ ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು ಮಹಿಳೆಯರು ಅಡುಗೆ ತಯಾರಿಸುತ್ತಾರೆ. ತಮ್ಮ ಖರ್ಚನ್ನು ಅವರು ಕಡಿಮೆ ಮಾಡುವ ಪ್ರಯತ್ನ ನಡೆಸುತ್ತಾರೆ.
ಈಗಿನ ಹುಡುಗೀರೇಕೆ ಬೇಗ ಋತುಮತಿಯಾಗ್ತಾರೆ? ಇದು ಆರೋಗ್ಯವೋ, ಅನಾರೋಗ್ಯವೋ?
ಮಧುಮೇಹದಂತಹ ಕಾಯಿಲೆಗಳನ್ನು ನಿಯಂತ್ರಿಸಲು ಹಣಕ್ಕಿಂತ ಜಾಗೃತಿ ಮುಖ್ಯವಾಗಿದೆ. ಭಾರತದಲ್ಲಿ ಮಧುಮೇಹದ ಮೊದಲ ಸಮಸ್ಯೆ ಲಿಂಗಾವದ್ರೆ ಎರಡನೇಯದು ಜಾಗೃತಿ . ಮಧುಮೇಹದ ಬಗ್ಗೆ ದೇಶದಲ್ಲಿ ಜನರಿಗೆ ಹೆಚ್ಚಿನ ಶಿಕ್ಷಣ ಮತ್ತು ಅರಿವು ಸಿಗ್ತಿಲ್ಲ. ಆರೋಗ್ಯದ ಬಗ್ಗೆ ಜಾಗರೂಕರಾಗದ ಎಲ್ಲರಿಗೂ ಈಗ ಮಧುಮೇಹದ ಅಪಾಯ ಕಾಡ್ತಿದೆ. NFHS-5 ವರದಿಯ ಪ್ರಕಾರ ಶೇಕಡಾ 17.4ರಷ್ಟು ಶಾಲೆಗೆ ಹೋಗದ ಮಹಿಳೆಯರಲ್ಲಿ ಸಕ್ಕರೆ ಖಾಯಿಲೆ ಕಂಡುಬಂದಿದೆ. ಕನಿಷ್ಠ 11 ವರ್ಷಗಳ ಕಾಲ ಶಾಲೆಗೆ ಹಾಜರಾದ ಮಹಿಳೆಯರಲ್ಲಿ ಮಧುಮೇಹದ ಮಟ್ಟ ಕಡಿಮೆ. ಅವರ ಸಂಖ್ಯೆ ಕೇವಲ ಶೇಕಡಾ 8.4 ರಷ್ಟು ಎಂದು ವರದಿಯಲ್ಲಿ ಹೇಳಲಾಗಿದೆ.
ಕಡಿಮೆ ನಿದ್ರೆ (Less Sleep) ಮತ್ತು ಹೆಚ್ಚಿನ ಒತ್ತಡ (Excess of Stress) : ಯುವಕರಲ್ಲಿ ಮಧುಮೇಹಕ್ಕೆ ಮುಖ್ಯ ಕಾರಣವೆಂದರೆ ಕಡಿಮೆ ನಿದ್ರೆ ಮತ್ತು ಹೆಚ್ಚಿನ ಒತ್ತಡ. ಪ್ರತಿ 4 ಭಾರತೀಯರಲ್ಲಿ ಒಬ್ಬರು 4 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುತ್ತಾರೆ. ದೇಶದಲ್ಲಿ 8 ಗಂಟೆ ನಿದ್ದೆ ಮಾಡುವವರ ಸಂಖ್ಯೆ ಕೇವಲ ಶೇಕಡಾ 6ರಷ್ಟಿದೆ. ನಿದ್ರೆಯ ಕೊರತೆ ಮತ್ತು ಒತ್ತಡದಿಂದ ಚಯಾಪಚಯ ಕ್ರಿಯೆ ಸರಿಯಾಗಿ ಆಗುವುದಿಲ್ಲ. ಹಾಗೆಯೇ ನಮ್ಮ ಆಹಾರ ಪದ್ಧತಿಯ ಬದಲಾವಣೆ ಮಧುಮೇಹಕ್ಕೆ ಕಾರಣವಾಗುತ್ತಿದೆ.
ಪಾಲಿಶ್ ಮಾಡಿದ ಅಕ್ಕಿ, ಬೇಳೆ (Polished Rice and Dal): ನಗರದಂತೆ ಈಗ ಹಳ್ಳಿಯಲ್ಲೂ ಪಾಲಿಶ್ ಅಕ್ಕಿ, ಬೇಳೆ ಮಾರಾಟ ಮಾಡಲಾಗ್ತಿದೆ. ಇದು ಫೈಬರ್ ಅಥವಾ ಇತರ ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ಇದ್ರಿಂದ ಮಧುಮೇಹ ಕಾಡುತ್ತದೆ.
ಬೊಜ್ಜು (Obesity) ಕೂಡ ಮಧುಮೇಹಕ್ಕೆ (Dieabetic) ಕಾರಣ : ದೇಹದ ಒಟ್ಟು ಕೊಬ್ಬು ಅಥವಾ ಹೊಟ್ಟೆಯ ಸುತ್ತಲಿನ ಕೊಬ್ಬು ನೇರವಾಗಿ ಇನ್ಸುಲಿನ್ ಪ್ರತಿರೋಧ ಮತ್ತು ಮಧುಮೇಹದ ಜೊತೆ ಸಂಬಂಧ ಹೊಂದಿದೆ.
ಭಾರತದಲ್ಲಿ ಮಧುಮೇಹ ಬೆಚ್ಚಾಗಲು ಆನುವಂಶಿಕತೆ, ಇನ್ಸುಲಿನ್ ಪ್ರತಿರೋಧ ಕಾರಣ. ಇನ್ಸುಲಿನ್ ಪ್ರತಿರೋಧ ಎಂದರೆ ಸ್ನಾಯುಗಳು, ಕೊಬ್ಬು ಮತ್ತು ಯಕೃತ್ತಿನ ಜೀವಕೋಶಗಳು ಗ್ಲೂಕೋಸ್ ಅನ್ನು ಸರಿಯಾಗಿ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂದರೆ, ಗ್ಲೂಕೋಸ್ ರಕ್ತದಲ್ಲಿಯೇ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಈ ಕಾರಣದಿಂದಲೇ ಭಾರತೀಯರಲ್ಲಿ ಇನ್ಸುಲಿನ್ ಪ್ರಮಾಣವೂ ಹೆಚ್ಚಿದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. ಮೂರನೇಯದು ಜೀವನಶೈಲಿಯಲ್ಲಿ ಬದಲಾವಣೆ.