Health Tips: ಮಕ್ಕಳು ಸದಾ ಸುಸ್ತು ಅಂತಿದ್ದರೆ ಫ್ಯಾಟಿ ಲಿವರ್‌ ಆಗಿರಬಹುಹು, ಪಾಲಕರೇ ಎಚ್ಚರ

By Suvarna News  |  First Published Aug 2, 2023, 5:24 PM IST

ವಯಸ್ಕರು, ಹಿರಿಯರು ಎನ್ನದೇ ಎಲ್ಲರಲ್ಲೂ ಫ್ಯಾಟಿ ಲಿವರ್‌ ಸಮಸ್ಯೆ ಇಂದು ಹೆಚ್ಚುತ್ತಿದೆ. ದೇಶದ ಶೇ.35ರಷ್ಟು ಮಕ್ಕಳಲ್ಲೂ ಈ ಸಮಸ್ಯೆಯಿದೆ ಎಂದರೆ ಇದರ ಅಗಾಧತೆ ಊಹಿಸಬಹುದು. ಮೇಲ್ನೋಟಕ್ಕೆ ಸಮಸ್ಯೆ ಎಂದೇ ಭಾಸವಾಗದ ಫ್ಯಾಟಿ ಲಿವರ್‌ ತೊಂದರೆ ಮುಂದೊಮ್ಮೆ ಬಹುದೊಡ್ಡ ಪೀಡೆಯಾಗಿ ಕಾಡಬಹುದು. ಹೀಗಾಗಿ, ಈಗಲೇ ಎಚ್ಚರ ವಹಿಸಬೇಕು. 
 


ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರಲ್ಲೂ ಹೊಟ್ಟೆ ದಪ್ಪಗಿರುವುದನ್ನು ಕಾಣುತ್ತೇವೆ. ಹಿಂದೆಲ್ಲ ಹೊಟ್ಟೆ ಬರುವುದು ಕೇವಲ ವಯಸ್ಸಾದ ಹಿರಿಯರಿಗೆ ಮಾತ್ರವಾಗಿತ್ತು. ಈಗ ಹಾಗೇನಿಲ್ಲ, ಹೊಟ್ಟೆ ದೊಡ್ಡದಾಗುವ ಸಮಸ್ಯೆ ಮಹಿಳೆಯರು, ಮಕ್ಕಳು, ನಲ್ವತ್ತು ಮೀರದ ಪುರುಷರಲ್ಲೂ ಅತಿ ಸಾಮಾನ್ಯವಾಗಿದೆ. ಇದನ್ನು ಫ್ಯಾಟಿ ಲಿವರ್‌ ಸಮಸ್ಯೆ ಎಂದು ಕರೆಯಲಾಗುತ್ತದೆ. ಅಂದರೆ, ಲಿವರ್‌ ಕೊಬ್ಬಿನಿಂದಾಗಿ ಊದಿಕೊಳ್ಳುತ್ತದೆ. ಫ್ಯಾಟಿ ಲಿವರ್‌ ಸಮಸ್ಯೆ ಭಾರತದಲ್ಲಿ ಗರಿಷ್ಠ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎನ್ನುತ್ತವೆ ವೈದ್ಯಕೀಯ ದಾಖಲೆಗಳು. ಆಲ್ಕೋಹಾಲ್‌ ಸೇವನೆ ಮಾಡುವವರಲ್ಲಿ ಅತಿ ಸಾಮಾನ್ಯವಾಗಿರುವ ಈ ಸಮಸ್ಯೆ ಇತ್ತೀಚೆಗೆ ಮಕ್ಕಳಲ್ಲೂ ಗಮನಾರ್ಹವಾಗಿ ಹೆಚ್ಚುತ್ತಿದೆ. ಇದನ್ನು ಪೀಡಿಯಾಟ್ರಿಕ್‌ ನಾನ್‌ ಆಲ್ಕೋಹಾಲಿಕ್‌ ಫ್ಯಾಟಿ ಲಿವರ್‌ ಡಿಸೀಸ್‌ ಎಂದು ಕರೆಯಲಾಗುತ್ತಿದೆ. ಅಂದರೆ, ಇದೊಂದು ಡಿಸೀಸ್‌ ಎಂದು ಪರಿಗಣಿಸಲ್ಪಟ್ಟಿದೆ. ಲಿವರ್‌ ನಲ್ಲಿ ಕೊಬ್ಬು ಜಮಾವಣೆಯಾಗಿ ರಕ್ತದ ಹರಿವಿಗೆ ಅಡ್ಡಿಯಾಗುತ್ತದೆ. ಜಡತ್ವದ ಜೀವನಶೈಲಿಯೇ ಇದಕ್ಕೆ ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ. ಸಕ್ಕರೆಭರಿತ ಆಹಾರ, ಅತಿಯಾಗಿ ಸಂಸ್ಕರಿತ ಆಹಾರ ಸೇವಿಸುವ ಹಾಗೂ ದೈಹಿಕ ಕಸರತ್ತು, ಆಟೋಟಗಳಲ್ಲಿ ಭಾಗಿಯಾಗದ ಮಕ್ಕಳಲ್ಲಿ ಈ ಸಮಸ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. 

ದೆಹಲಿಯ ಏಮ್ಸ್‌ (AIIMS) ಸಂಸ್ಥೆ ನಡೆಸಿದ್ದ ಒಂದು ಅಧ್ಯಯನದ (Study) ಪ್ರಕಾರ, ಶೇ.38ರಷ್ಟು ಭಾರತೀಯರು ನಾನ್‌ ಆಲ್ಕೋಹಾಲಿಕ್‌ ಫ್ಯಾಟಿ ಲಿವರ್‌ ಡಿಸೀಸ್‌ (Non-Alcoholic Fatty Liver Disease) ಗೆ ತುತ್ತಾಗಿದ್ದಾರೆ. ಅಷ್ಟೇ ಅಲ್ಲ, ಶೇ.35ರಷ್ಟು ಮಕ್ಕಳಲ್ಲೂ ಸಹ ಫ್ಯಾಟಿ ಲಿವರ್‌ ಸಮಸ್ಯೆ ಇದೆ. ಅಸಲಿಗೆ, ಫ್ಯಾಟಿ ಲಿವರ್‌ ರೋಗವು ಜೀವನಶೈಲಿಗೆ (Life Style) ಸಂಬಂಧಿಸಿದೆ. ದೈಹಿಕ ಚಟುವಟಿಕೆ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ. ಆಹಾರಶೈಲಿಯಲ್ಲಿ (Food) ಆಗಿರುವ ವ್ಯತ್ಯಾಸವೂ ಕೊಡುಗೆ ನೀಡುತ್ತದೆ. ಮೇಲ್ನೋಟಕ್ಕೆ ಸಮಸ್ಯೆ (Problem) ಎಂದು ಭಾಸವಾಗದ ಈ ಸಮಸ್ಯೆಯಿಂದ ಕ್ರಮೇಣ ಭಾರೀ ಪರಿಣಾಮ ಉಂಟಾಗುತ್ತದೆ. ಈ ರೋಗವನ್ನು ಆರಂಭದಲ್ಲೇ ಗುರುತಿಸಬಹುದು. ಮಕ್ಕಳಲ್ಲಿ ಆರಂಭಿಕ ಹಂತದಲ್ಲಿ ಹಲವು ಲಕ್ಷಣಗಳು (Signs) ಗೋಚರವಾಗುತ್ತವೆ. ಆಗ ಎಚ್ಚೆತ್ತುಕೊಂಡರೆ ಸಮಸ್ಯೆ ಆಗುವುದನ್ನು ಸುಲಭದಲ್ಲಿ ತಪ್ಪಿಸಲು ಸಾಧ್ಯ.

ಮಕ್ಕಳು ಹುಷಾರು ತಪ್ಪಿದಾಗ, ಸಾಮಾನ್ಯ ಜ್ವರವಲ್ಲ ಅಂತ ತಿಳ್ಕೊಳ್ಳೋದು ಹೇಗೆ?

Latest Videos

undefined

ಮಕ್ಕಳಲ್ಲಿ ಫ್ಯಾಟಿ ಲಿವರ್‌ ಲಕ್ಷಣಗಳು
•    ಸ್ಪಷ್ಟವಾಗಿ ಹೇಳಲು ಸಾಧ್ಯವಾಗದ ಸುಸ್ತು (Tiredness) ಮತ್ತು ದೌರ್ಬಲ್ಯ (Weakness). ದೇಹ ದೊಡ್ಡದಾಗಿದ್ದರೂ ಶಕ್ತಿ ಇಲ್ಲದೆ ಸುಸ್ತಾಗಬಹುದು. ಇದು ಮಕ್ಕಳ ದೈನಂದಿನ ಚಟುವಟಿಕೆಯ ಮೇಲೂ ಪರಿಣಾಮ ಬೀರಬಹುದು.
•    ಬೊಜ್ಜು (Obesity) ಹೆಚ್ಚುತ್ತದೆ. ವಯಸ್ಸಿಗೆ ಮೀರಿದ ತೂಕ ಕಂಡುಬರುತ್ತದೆ. ಇದು ಫ್ಯಾಟಿ ಲಿವರ್‌ ನ ಅತಿ ಸಾಮಾನ್ಯ ಲಕ್ಷಣವೂ ಹೌದು, ಅಪಾಯವೂ ಹೌದು.
•    ಹೊಟ್ಟೆಯ ನೋವು (Abdominal Pain) ಉಂಟಾಗಬಹುದು. ಓಡಾಡಲು ಕಷ್ಟವಾಗುವಷ್ಟು ಹೊಟ್ಟೆಯ ನೋವು ಕಂಡುಬರಬಹುದು.
•    ಆಹಾರದ ಬಯಕೆ ಇಲ್ಲವಾಗಬಹುದು. ಆದರೆ, ಕರಿದ, ಸಂಸ್ಕರಿತ ಆಹಾರವನ್ನು ಮಾತ್ರ ಸೇವಿಸುವ ಮನಸ್ಸಾಗಬಹುದು. ಮನೆಯ ಆಹಾರದಿಂದ ದೂರವುಳಿಯುವಂತೆ ಆಗಬಹುದು.
•    ಟೈಪ್‌ 2 ಮಧುಮೇಹ (Diabetes) ಉಂಟಾಗಬಹುದು. ಫ್ಯಾಟಿ ಲಿವರ್‌ ಮತ್ತು ಇನ್ಸುಲಿನ್‌ ನಿರೋಧಕತೆಯ ಸಮಸ್ಯೆ ಒಂದಕ್ಕೊಂದು ಸಂಬಂಧ ಹೊಂದಿವೆ.

ಹಾಸಿಗೆಯಲ್ಲೇ ಮೂತ್ರ ಮಾಡುವ ಮಕ್ಕಳ ಅಭ್ಯಾಸ ತಪ್ಪಿಸೋದು ಹೇಗೆ?

ಪಾಲಕರ ಪಾತ್ರ ದೊಡ್ಡದು
ಫ್ಯಾಟಿ ಲಿವರ್‌ ಸಮಸ್ಯೆಯಿಂದ ಮಕ್ಕಳು ಇನ್ನಷ್ಟು ಜಡಭರಿತರಾಗುತ್ತಾರೆ. ಕ್ರಮೇಣ ಈ ಜೀವನಶೈಲಿಯಿಂದ ಇನ್ನೂ ಅನೇಕ ಗಂಭೀರ ರೋಗಗಳು ಗಂಟುಬೀಳುತ್ತವೆ. ಹೀಗಾಗಿ, ಎಚ್ಚರಿಕೆ ಅಗತ್ಯ. ಮಕ್ಕಳನ್ನು ಚಟುವಟಿಕೆಯಿಂದ (Active) ಇರಿಸಲು ಪಾಲಕರು ಕಾಳಜಿ ವಹಿಸಬೇಕು. ಖಂಡಿತವಾಗಿ ಇದಕ್ಕೆ ಸಮಯ ನೀಡಬೇಕು. ಮಕ್ಕಳನ್ನು ಸಾಧ್ಯವಾದಷ್ಟು ಆಟ (Play) ವಾಡಿಸಬೇಕು. ವಾಕಿಂಗ್‌ (Walking) ಕರೆದುಕೊಂಡು ಹೋಗಬೇಕು. ಎಷ್ಟೇ ಹಠ ಮಾಡಿದರೂ ಜಂಕ್‌ ಆಹಾರ (Junk Food), ಕರಿದ, ಸಂಸ್ಕರಿತ ತಿನಿಸುಗಳನ್ನು ನೀಡಬಾರದು. ಮನೆಯಲ್ಲೇ ಆರೋಗ್ಯಕರ ಸ್ನ್ಯಾಕ್ಸ್‌ (Snacks) ರೂಢಿಸಬೇಕು. ಹೆಚ್ಚು ಸಮಯ ಮೊಬೈಲ್‌, ಟಿವಿ ಮುಂದೆ ಸಮಯ ಕಳೆಯದಂತೆ ನೋಡಿಕೊಳ್ಳಬೇಕು.  

click me!