Summer Heat: ಬಿಸಿಲಲ್ಲಿ ಹೆಚ್ಚು ಹೊತ್ತು ಮೊಬೈಲ್ ಬಳಸೋದು ಡೇಂಜರ್

By Vinutha PerlaFirst Published Mar 25, 2023, 3:20 PM IST
Highlights

ರಾಜ್ಯಾದ್ಯಂತ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಮನೆಯಿಂದ ಹೊರಗಡೆ ಬಂದು ಓಡಾಡೋದು ಸಹ ಕಷ್ಟ. ಅದರಲ್ಲೂ ಬಿಸಿಲಿನಲ್ಲಿ ಫೋನ್ ಬಳಸುವುದು ಡೇಂಜರಸ್ ಎಂದು ತಜ್ಞರು ಎಚ್ಚರಿಸಿದ್ದಾರೆ. ಹಾಗಂತ ಮೊಬೈಲ್ ಅನಿವಾರ್ಯವಾಗಿರುವ ಇವತ್ತಿನ ದಿನಗಳಲ್ಲಿ ಮೊಬೈಲ್ ಬಳಸದೇ ಇರುವುದು ಕಷ್ಟ. ಹೀಗಾಗಿ ಬೇಸಿಗೆಯಲ್ಲಿ ಮೊಬೈಲ್ ಉಪಯೋಗಿಸುವಾಗ ಈ ಕೆಲವು ವಿಚಾರ ಗಮನದಲ್ಲಿರಲಿ.

ಬೇಸಿಗೆಯ ಧಗೆಗೆ ಎಲ್ಲರೂ ಹೈರಾಣಾಗಿದ್ದಾರೆ. ನೆತ್ತಿ ಮೇಲೆ ಸುಡುವ ಸೂರ್ಯನ ಕಾಟದಿಂದ ಮನೆಯಿಂದ ಹೊರಬರೋಕು ಹಿಂಜರಿಯುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ಒಡ್ಡಿಕೊಳ್ಳುವುದು ನಾನಾ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಹಾಗೆಯೇ ಹೆಚ್ಚು ಬಿಸಿಲಿನ ತಾಪ ಇರುವಾಗ ಎಲೆಕ್ಟ್ರಾನಿಕ್ ಸಾಧನಗಳನ್ನು ಉಪಯೋಗಿಸುವುದು ಸಹ ಸರಿಯಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ ಫೋನ್‌ಗಳ ಬಳಕೆ ಹೆಚ್ಚಾಗಿದೆ. ದಿನಸಿ, ಲೈಟ್ ಬಿಲ್, ವಾಟರ್ ಬಿಲ್, ಪೇಮೆಂಟ್‌ ಎಲ್ಲವೂ ಸ್ಮಾರ್ಟ್‌ಪೋನ್‌ನಲ್ಲೇ ಲಭ್ಯವಿರುವ ಕಾರಣ ಮೊಬೈಲ್ ಇಲ್ಲದೆ ಬದುಕುವುದೇ ಕಷ್ಟ ಎಂಬಂತಾಗಿಬಿಟ್ಟಿದೆ. ಕೆಲವರು ಫೋನ್ ಇಲ್ಲದೆ ಹೊರಗೆ ಕಾಲಿಡುವುದಿಲ್ಲ. ಬಸ್ಸಿನಲ್ಲಿರಲಿ, ಬೈಕ್‌ನಲ್ಲಿರಲಿ, ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗಲೂ ಫೋನ್ ನೋಡುವುದು ಕಾಮನ್ ಆಗಿಬಿಟ್ಟಿದೆ.

ಯಾವಾಗ್ಲೂ ಮೊಬೈಲ್ ಉಪಯೋಗಿಸೋದೇನೋ ಸರಿ. ಆದರೆ ಬಿಸಿಲಿನಲ್ಲಿ ಫೋನ್ ಬಳಸುವುದು ಕಣ್ಣಿಗೆ (Eyes) ದೊಡ್ಡ ಅಪಾಯ ಎಂದು ತಜ್ಞರು ಎಚ್ಚರಿಸಿದ್ದಾರೆ. ಬಿಸಿಲಿನಲ್ಲಿ ಫೋನ್ ನೋಡುವುದು ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗಿ, ದೃಷ್ಟಿ (Vision) ಕಳೆದುಕೊಳ್ಳಬಹುದು ಎಂದು ಅನೇಕ ಅಧ್ಯಯನಗಳು ತೋರಿಸಿವೆ. ಬಿಸಿಲಿನಲ್ಲಿ ಫೋನ್ ಬಳಸುವಾಗ ಸೂರ್ಯನ ಕಿರಣಗಳು ನೇರವಾಗಿ ಫೋನ್ ಪರದೆಯ ಮೇಲೆ ಬೀಳುತ್ತವೆ. ಆ ಸಮಯದಲ್ಲಿ ಸೂರ್ಯನ ಕಿರಣಗಳು ಕಣ್ಣಿನ ರೆಟಿನಾದಲ್ಲಿ ಪ್ರತಿಫಲಿಸುತ್ತದೆ. ಇದು ರೆಟಿನಾದ ಹಿಂದಿನ ಮ್ಯಾಕುಲಾವನ್ನು ಹಾನಿಗೊಳಿಸುತ್ತದೆ. ಇದು ಕುರುಡುವಿಕೆಗೆ ಕಾರಣವಾಗಬಹುದು ಎಂದು ತಜ್ಞರು (Experts) ಹೇಳುತ್ತಾರೆ.

ಬಿಸಿಲ ಧಗೆ ತಡೆಯೋಕೆ ಆಗ್ತಿಲ್ವಾ? ಇಂಥಾ ಪಾನೀಯ ಕುಡಿಯೋದು ಬಿಟ್ಬಿಡಿ

ಹಾಗಾಗಿ ಬಿಸಿಲಿನ ತಾಪಮಾನವು ಹೆಚ್ಚಾಗಲು ಪ್ರಾರಂಭಿಸಿದಾಗ ಫೋನ್ ಹಾಗೂ ನಿಮ್ಮ ಆರೋಗ್ಯವನ್ನು (Health) ರಕ್ಷಿಸಲು ನೀವೇನು ಮಾಡಬಹುದು ಅನ್ನೋ ಮಾಹಿತಿ ಇಲ್ಲಿದೆ.

ಅಗತ್ಯವಿಲ್ಲದಿದ್ದಾಗ ಮೊಬೈಲ್ ಏರ್‌ಪ್ಲೇನ್ ಮೋಡ್‌ನಲ್ಲಿ ಇರಿಸಿ: ಫೋನ್ ಅತಿಯಾಗಿ ಬಿಸಿಯಾಗಲು ಕೇವಲ ಬಾಹ್ಯ ತಾಪಮಾನವಷ್ಟೇ ಕಾರಣವಾಗುವುದಲ್ಲ. ಬದಲಿಗೆ ನೀವು ಹೆಚ್ಚು ಮೊಬೈಲ್ ಉಪಯೋಗಿಸುತ್ತಿದ್ದರೆ ಸಹ ಮೊಬೈಲ್ ಬಿಸಿಯಾಗುತ್ತದೆ. ನೀವು ಆಟಗಳನ್ನು ಆಡುತ್ತಿದ್ದರೆ ಅಥವಾ ಸಾಕಷ್ಟು ಕರೆಗಳನ್ನು ಮಾಡುತ್ತಿದ್ದರೆ, ನಿಮ್ಮ ಫೋನ್ ಹೆಚ್ಚು ಕೆಲಸ ಮಾಡುತ್ತದೆ  ಹೆಚ್ಚು ಶಾಖವನ್ನು ಉತ್ಪಾದಿಸುತ್ತದೆ. ಬೆಚ್ಚಗಿನ ಸುತ್ತಮುತ್ತಲಿನ ತಾಪಮಾನದೊಂದಿಗೆ ಸೇರಿ, ಇದು ಅಧಿಕ ತಾಪಕ್ಕೆ ಕಾರಣವಾಗಬಹುದು. ಹೀಗಾಗಿ ನಿಮ್ಮ ಫೋನ್ ತಣ್ಣಗಾಗಲು ಸಹಾಯ ಮಾಡಲು, ಅದನ್ನು ಏರ್‌ಪ್ಲೇನ್ ಮೋಡ್‌ನಲ್ಲಿ ಇರಿಸಿ. ಮಾತ್ರವಲ್ಲ ಗೇಮ್‌ಗಳಂತಹ ಪ್ರೊಸೆಸರ್-ಇಂಟೆನ್ಸಿವ್ ಅಪ್ಲಿಕೇಶನ್‌ಗಳನ್ನು ಬಳಸುವುದನ್ನು ನಿಲ್ಲಿಸಿ.

ಪೋನ್‌ನ್ನು ಕಾರಿನಲ್ಲಿ ಬಿಡಬೇಡಿ: ಇತ್ತೀಚಿನ ಒಂದು ಅಧ್ಯಯನವು 95 ಡಿಗ್ರಿ ದಿನದಂದು ಸೂರ್ಯನಲ್ಲಿ ನಿಲ್ಲಿಸಿದ ಕಾರು ಕೇವಲ ಒಂದು ಗಂಟೆಯಲ್ಲಿ 116 ಡಿಗ್ರಿ ತಾಪಮಾನವನ್ನು ತಲುಪುತ್ತದೆ ಎಂದು ಕಂಡುಹಿಡಿದಿದೆ. ಐಫೋನ್ 95 ಡಿಗ್ರಿಗಿಂತ ಹೆಚ್ಚಿರುವಾಗ ಅದನ್ನು ಬಳಸದಂತೆ ಆಪಲ್ ಶಿಫಾರಸು ಮಾಡುತ್ತದೆ ಮತ್ತು ನೀವು ಅದನ್ನು 113 ಡಿಗ್ರಿಗಳಿಗಿಂತ ಹೆಚ್ಚಿನ ಸ್ಥಳದಲ್ಲಿ ಸಂಗ್ರಹಿಸಬಾರದು ಎಂದು ಹೇಳುತ್ತದೆ. ಇತರ ಸ್ಮಾರ್ಟ್‌ಫೋನ್‌ ತಯಾರಕರು ಇದೇ ಹಂತಗಳನ್ನು ಶಿಫಾರಸು ಮಾಡುತ್ತಾರೆ.

ಬಿಸಿಲಿನ ಶಾಖಕ್ಕೆ ತಲೆ ತಿರುಗುತ್ತಿದೆಯೇ? ಕಾರಣ ತಿಳಿಯಿರಿ…

ನೇರ ಸೂರ್ಯನ ಬೆಳಕಿನಲ್ಲಿಟ್ಟು ಫೋನ್ ಚಾರ್ಜ್ ಮಾಡಬೇಡಿ: ಫೋನ್ ಚಾರ್ಜ್ ಮಾಡುವಾಗ ಬಿಸಿಯಾಗುವುದನ್ನು ನೀವು ಗಮನಿಸರಬಹುದು. ಹಾಗೆಯೇ ಬಿಸಿಲಿನ ತಾಪಮಾನದಲ್ಲಿ ಚಾರ್ಜ್‌ಗೆ ಇಡುವುದರಿಂದ ಅದು ಹೆಚ್ಚು ಬಿಸಿಯಾಗುತ್ತದೆ. ಹೀಗಾಗಿ ನೇರ ಸೂರ್ಯನ ಬೆಳಕು ಬೀಳುವ ಜಾಗದಲ್ಲಿ ಫೋನ್ ಚಾರ್ಜ್‌ಗೆ ಇಡಬೇಡಿ. ಸೂರ್ಯನ ಶಾಖವು (Summer heat) ಮೊಬೈಲ್‌ನ್ನು ಇನ್ನಷ್ಟು ಬಿಸಿಯಾಗಿಸುತ್ತದೆ. ಅದು ನಿಮ್ಮ ಫೋನ್‌ನ ಬ್ಯಾಟರಿಗೆ ವಿದ್ಯುತ್ ವರ್ಗಾವಣೆಯ ಅಡ್ಡ ಪರಿಣಾಮವಾಗಿದೆ. ಅದು ಫೋನ್ ಸಾಮಾನ್ಯಕ್ಕಿಂತ ಹೆಚ್ಚು ಬಿಸಿಯಾಗಲು ಕಾರಣವಾಗಬಹುದು.

ದಿಂಬಿನ ಕೆಳಗಿಟ್ಟು ಫೋನ್ ಚಾರ್ಜ್ ಮಾಡಬೇಡಿ: ಯಾವುದೇ ರೀತಿಯ ದಿಂಬು, ಕಂಬಳಿ ಅಥವಾ ಇತರ ವಾರ್ಮಿಂಗ್ ವಸ್ತುಗಳ ಅಡಿಯಲ್ಲಿ ಫೋನ್ ಅನ್ನು ಬಿಡಬಾರದು. ಬಿಸಿಯಾದ ದಿನದಲ್ಲಿ, ಚಾರ್ಜಿಂಗ್ ಫೋನ್‌ನಿಂದ ನೀಡುವ ಶಾಖವು ಪರಿಣಾಮಕಾರಿಯಾಗಿ ಹೊರಹಾಕಲು ಅನುಮತಿಸದಿದ್ದರೆ ಅಪಾಯಕಾರಿ (Dangerous) ಮಟ್ಟಕ್ಕೆ ಏರಬಹುದು. 

ಫೋನ್ ತುಂಬಾ ಬಿಸಿಯಾಗಿದ್ದರೆ ಸ್ವಿಚ್‌ ಆಫ್ ಮಾಡಿಡಿ: ತುಂಬಾ ಹೊತ್ತು ಬಳಸಿದ ಬಳಿಕ ಅಥವಾ ತಾಪಮಾನದಿಂದ ಫೋನ್ ಹೆಚ್ಚು ಬಿಸಿಯಾಗಿದ್ದರೆ ಫೋನ್ ಅನ್ನು ಸ್ವಿಚ್ಚ್ ಆಫ್ ಮಾಡುವುದು ಉತ್ತಮ ಪಂತವಾಗಿದೆ. ಸ್ವಲ್ಪ ಸಮಯದವರೆಗೆ ಅದನ್ನು ತಂಪಾದ ಪ್ರದೇಶದಲ್ಲಿ ಬಿಡಿ ಇದರಿಂದ ಅದು ಹೆಚ್ಚು ನೈಸರ್ಗಿಕ ದರದಲ್ಲಿ ಕೋಣೆಯ ಉಷ್ಣಾಂಶಕ್ಕೆ ಮರಳುತ್ತದೆ. ನಂತರ ಮತ್ತೆ ಮೊಬೈಲ್ ಬಳಸಬಹುದು.

click me!