ಜಿಟಿಜಿಟಿ ಮಳೆ..ಮರೆಯಲಾಗದ ಬೆಚ್ಚನೆಯ ಸವಿ ಸವಿ ನೆನಪು

By Suvarna NewsFirst Published Jul 8, 2022, 10:28 AM IST
Highlights

ಧೋ ಧೋ ಎಂದು ಬಿಟ್ಟೂಬಿಡದೆ ಮಳೆ (Rain) ಸುರಿಯುತ್ತಿದೆ. ಎಡೆಬಿಡದೆ ಸುರಿವ ಮಳೆಗೆ ಮನಸ್ಸೂ ಮುದಗೊಂಡು ಬಾಲ್ಯಕಾಲಕ್ಕೆ (Childhood) ಓಡುತ್ತದೆ. ನೆನಪಿನ ಬುತ್ತಿಯಲ್ಲಿ ಬಚ್ಚಿಟ್ಟ ಬೆಚ್ಚನೆಯ ಬಾಲ್ಯದ ನೆನಪುಗಳು (Memories) ಮತ್ತೆ ನೆನಪಾಗುತ್ತವೆ. 

- ವಿನುತಾ ಪೆರ್ಲ

ಕಳೆದ ಕೆಲವು ದಿನಗಳಿಂದ ಆಕಾಶಕ್ಕೆ ತೂತು ಬಿದ್ದಂತೆ ಬಿಟ್ಟೂ ಬಿಡದೆ ಮಳೆ (Rain) ಸುರಿಯುತ್ತಿದೆ. ನದಿ-ಕೊಳಗಳು ಉಕ್ಕುಕ್ಕಿ ಹರಿಯುತ್ತಿವೆ. ಧರೆಗೆ ಮಳೆ ಬಿದ್ದಾಗಿದೆ. ಇಳೆ ತಂಪಾಗಿದೆ. ಮೊದಲ ಮಳೆಗೆ ಮಣ್ಣಿನ ಸುವಾಸನೆಯನ್ನು ಆಘ್ರಾಣಿಸಿ ಖುಷಿಪಡುತ್ತಿರುವಾಗಲೇ ಓತಪ್ರೋತವಾಗಿ ಮಳೆ ಸುರಿದು ತಂಪಿನ ವಾತಾವರಣವನ್ನು ಸೃಷ್ಟಿಸಿದೆ. ಹೀಗೆ ಮಳೆ ಸುರಿಯುವಾಗಲ್ಲೆಲ್ಲಾ ಮನಸ್ಸು ಬಾಲ್ಯಕಾಲಕ್ಕೆ (Childhood) ಓಡುತ್ತದೆ. ಆಗೆಲ್ಲಾ ಮಳೆ ಬಂದಾಗ ಹೀಗೆಲ್ಲಾ ಸಿಟ್ಟು ಬರುತ್ತಿರಲ್ಲಿಲ್ಲ. ಕಿರಿಕಿರಿಯೆನಿಸುತ್ತಿರಲ್ಲಿಲ್ಲ. ಮನೆಗ್ಯಾರೋ ನೆಂಟರು ಬಂದರೇನೋ ಎಂಬಷ್ಟು ಖುಷಿಯಾಗುತ್ತಿತ್ತು.ಹೊರಗಡೆ ಜಿಟಿಜಿಟಿ ಮಳೆ, ಮೈ ಮರಗಟ್ಟವ ಚಳಿಯಲ್ಲಿ ಬೆಚ್ಚನೆ ಕಂಬಳಿ ಹೊದ್ದು ಮನೆಯೊಳಗಿನ ಕಿಟಿಕಿಯಿಂದಲೇ ಮಳೆ ನೋಡುವ ಚಂದ ಬೇರೆಯಿತ್ತು.

ಮಳೆಗಾಲವೂ, ಹಲಸಿನ ಹಪ್ಪಳದ ರುಚಿಯೂ
ಪ್ರತಿಬಾರಿ ಮಳೆ ಸುರಿದಾಗಲೂ ಮನಸು ಬಾಲ್ಯಕಾಲಕ್ಕೆ ಹಾರುತ್ತದೆ. ಬಾಲ್ಯವೇ ಚಂದ, ಅದರಲ್ಲೂ ಮಳೆಗಾಲದ ಬಾಲ್ಯ ಇನ್ನಷ್ಟು ಬೆಚ್ಚಗಿನ ನೆನಪು. ಮಳೆಗಾಲದ ಮೊದಲೇ ಬೇಸಿಗೆಯ ರಜೆ (Summer holidays) ಇರುವ ಕಾರಣ ಕಟ್ಟು ಕಟ್ಟು ಹಪ್ಪಳ, ಸಾಂತಾಣಿ (ಹಲಸಿನ ಬೀಜ ಒಣಗಿಸುವುದು), ಹಲಸಿನ ಚಿಪ್ಸ್ ಎಲ್ಲವೂ ಡಬ್ಬದಲ್ಲಿ ರೆಡಿಯಾಗಿರುತ್ತಿದ್ದವು. ಆದರೆ ಎಷ್ಟು ಆಸೆಯಾದರೂ ತಪ್ಪಿಯೂ ಅವನ್ನೆಲ್ಲಾ ತಿನ್ನುವಂತಿಲ್ಲ. ಅಜ್ಜಿ ಆ ಡಬ್ಬಗಳನ್ನು ಓಪನ್ ಮಾಡಲೇ ಬಿಡುತ್ತಿರಲ್ಲಿಲ್ಲ. ಧಾರಾಕಾರ ಮಳೆ ಸುರಿಯುವಾಗ ಮಾತ್ರ ಬಿಸಿ ಬಿಸಿ ಟೀ, ಕರಿದ ಹಪ್ಪಳ (Papad) ತಿನ್ನಲು ಸಿಗುತ್ತಿತ್ತು. ಅದರಲ್ಲೂ ನಿಗಿ ನಿಗಿ ಕೆಂಡದಲ್ಲಿ ಸುಟ್ಟ ಹಪ್ಪಳ, ಹಲಸಿನ ಬೀಜದ ರುಚಿ ತಿಂದವರೇ ಬಲ್ಲರು. 

Monsoon Safety : ಮಳೆಗಾಲದಲ್ಲಿ ಎಚ್ಚರ ತಪ್ಪಿದ್ರೆ ಸಾವಿನ ಮನೆಗೆ ಹೋಗ್ತೀರಾ!

ಜೋರಾಯ್ತು ಮಳೆ..ಶಾಲೆಗೆ ರಜೆ
ಮಳೆಗಾಲದ (Monsoon) ಶಾಲಾ ನೆನಪುಗಳು ಮತ್ತಷ್ಟು ಖುಷಿ ನೀಡುತ್ತದೆ. ಆಗೆಲ್ಲಾ ವಾಟ್ಸಾಪ್‌, ಫೇಸಬುಕ್‌ಗಳಿರಲ್ಲಿಲ್ಲವಲ್ಲ. ಹೀಗಾಗಿ ಅದೆಷ್ಟು ಮಳೆ ಸುರಿದರೂ ನಾಳೆ ಶಾಲೆಗೆ ರಜೆಯಿದೆಯಾ ಎಂಬುದು ಮುಂಚಿತವಾಗಿ ಗೊತ್ತಾಗುತ್ತಿರಲ್ಲಿಲ್ಲ. ಎಂದಿನಂತೆ ದಿನಚರಿ ಬರೆದು, ಪುಸ್ತಕಗಳನ್ನು ತುಂಬಿ, ಶಿಸ್ತಾಗಿ ಜಡೆಹೆಣೆದು, ಮಳೆಯಲ್ಲೂ ಅರಳಿ ನಿಂತ ಗುಲಾಬಿ ಹೂಗಳನ್ನು ಮುಡಿದು ಕೊಡೆ ಹಿಡಿದು ಒದ್ದೆಮುದ್ದೆಯಾಗುತ್ತಾ ಶಾಲೆಗೆ ತಲುಪಿಯಾಗಿರುತ್ತಿತ್ತು. ಮತ್ತೆ ಶಾಲಾ ಮುಖ್ಯೋಪಾಧ್ಯಾಯರು ಎಲ್ಲಾ ಮಕ್ಕಳನ್ನೂ ಸಾಲಾಗಿ ನಿಲ್ಲಿಸಿ ರಜೆಯೆಂದು ಘೋಷಣೆ ಮಾಡುತ್ತಿದ್ದರು. ಬ್ಯಾಗ್‌ಗಳನ್ನು ಹೊತ್ತು ಅಷ್ಟು ದೂರದಿಂದ ಹೊತ್ತು ಬಂದ್ದು ಸುಸ್ತಾಗಿದ್ದರೂ ರಜೆಯೆಂಬ ಸುದ್ದಿ ಆ ಎಲ್ಲಾ ಆಯಾಸವನ್ನು ಮಾಯ ಮಾಡುತ್ತಿತ್ತು. 

ಓಂಭತ್ತೂವರೆಗೆಲ್ಲಾ ಶಾಲೆಯಿಂದ ಹೊರಟರೂ ಮನೆ ತಲುಪುವಾಗ ಮಧ್ಯಾಹ್ನವಾಗುತ್ತಿತ್ತು. ರಸ್ತೆಯ ಅಕ್ಕಪಕ್ಕ ಇರುವ ಹಳ್ಳಕೊಳ್ಳಗಳು ತುಂಬಿರುವುದನ್ನು ನೋಡುತ್ತಾ, ಅದಕ್ಕೆ ಕಲ್ಲೆಸೆಯುತ್ತಾ, ಕಾಲಲ್ಲಿ ನೀರನ್ನು ಚಿಮ್ಮಿಸಿ ಆಟವಾಡುತ್ತಾ ಮಕ್ಕಳ ತಂಡ ಸಾಗುತ್ತಿತ್ತು. ಅಲ್ಲಲ್ಲಿ ಜರಿದ ಗುಡ್ಡೆಯನ್ನು ದೂರದಿಂದಲೇ ನೋಡಿ ಅಚ್ಚರಿಪಡುತ್ತಾ ಮನೆ ಸೇರುತ್ತಿದ್ದೆವು. ಮನೆಗೆ ಬಂದಾಗ ಮಳೆಗಾಲದಲ್ಲಿ ವಿಪರೀತವಾಗಿ ಸಿಗುವ ಕುಂಟಲೆ ಹಣ್ಣನ್ನು ತಿಂದಿದ್ದಕ್ಕೆ ಅಮ್ನನ ಏಟು ಪ್ರತಿಬಾರಿಯೂ ತಪ್ಪದೇ ಸಿಗುತ್ತಿತ್ತು. ಅದರಲ್ಲಿ ಏನೆಲ್ಲಾ ಜೀವಿ, ಹಾವುಗಳು ಓಡಾಡ್ತವೋ, ಅದನ್ನೆಲ್ಲಾ ತಿನ್ಬಾರ್ದು ಅಂದ್ರೆ ಗೊತ್ತಾಗಲ್ವ ಅನ್ನೋ ಬೈಗುಳಂತೂ ಕೇಳಿ ಕೇಳಿ ಸಾಕಾಗಿತ್ತು. 

ಮಳೆಗಾಲಕ್ಕೆ Best ಅನಿಸುವ ಸೂಪ್ ಪಟ್ಟಿ ಇಲ್ಲಿದೆ ನೋಡಿ

ಕಾಗದದ ದೋಣಿಯನ್ನು ಮರೆಯುವುದುಂಟೇ ?
ಒದ್ದೆಯಾದ ಪುಸ್ತಕಗಳನ್ನು ಒಣಗಿಸಲು ಇಟ್ಟವರಿಗೆ ಮಧ್ಯಾಹ್ನ ಬಿಸಿಬಿಸಿಯೂಟ ಮನ ತಣಿಸುತ್ತಿತ್ತು. ಮನೆ ಮಂದಿ ಮಧ್ಯಾಹ್ನದ ಊಟ ಮಾಡಿ ಮಲಗಿದಾಗ ಮಕ್ಕಳ ಗುಂಪು ಮತ್ತೆ ಮನೆ ಹಿಂದೆ-ಮುಂದೆ ಓಡಾಡಲು ಶುರು ಮಾಡುತ್ತಿತ್ತು. ಹರಿವ ನೀರಿನಲ್ಲಿ ಕಾಗದದ ದೋಣಿ ಮಾಡಿಬಿಡುವುದು, ಹರಿವ ನೀರಿಗೆ ಅಡ್ಡಲಾಗಿ ದಂಡೆ ಕಟ್ಟಿ ಆ ನೀರಲ್ಲಿ ಆಟ ಆಡುವುದು. ಒಟ್ಟಾರೆ ಒದ್ದೆಮುದ್ದೆಯಾಗಿ ಸಂಜೆ ಮನೆ ಸೇರುತ್ತಿದ್ದೆವು.

ಅಷ್ಟೊತ್ತಿಗೆ ಅಮ್ಮನ ಬಿಸಿ ಬಿಸಿ ಟೀ, ಹಪ್ಪಳ, ಸುಟ್ಟ ಹಲಸಿನ ಬೀಜಗಳು ಸಿದ್ಧವಾಗಿರುತ್ತಿದ್ದವು. ಮನತಣಿಯೇ ಅವನ್ನು ತಿಂದು ಹಂಡೆಯ ಬಿಸಿ ಬಿಸಿ ನೀರಲ್ಲಿ ಸ್ನಾನ ಮಾಡುತ್ತಿದ್ದೆವು. ಧೋ ಧೋ ಸುರಿವ ಮಳೆಯ ಮಧ್ಯೆಯೂ ಭಜನೆ ನಡೆಯುತ್ತಿತ್ತು. ವಿದ್ಯುತ್ ಇಲ್ಲದೆ ಚಿಮಿಣಿ ದೀಪದ ಬೆಳಕಿನಲ್ಲೇ ರಾತ್ರಿಯೂಟ ಮುಗಿಯುತ್ತಿತ್ತು. ಕಂಬಳಿ ಹೊದ್ದು ಮಲಗಿದರೆ ಕಿಟಿಕಿಯಲ್ಲಿ ಹಾದು ಬರುವ ಮಿಂಚಿನ ಬೆಳಕು, ಗುಡುಗಿನ ಸದ್ದು ಬೆಚ್ಚಿ ಬೀಳಿಸುತ್ತಿತ್ತು. 

ಮತ್ತದೇ ಮಳೆಯ ಮುಂಜಾನೆ
ರಾತ್ರಿಯಿಡೀ ಎಡೆಬಿಡದೆ ಸುರಿವ ಮಳೆಯೊಂದಿಗೆ ಮತ್ತೊಂದು ಮುಂಜಾನೆ ಶುರುವಾಗುತ್ತಿತ್ತು. ಮಳೆಯಲ್ಲಿ ನೆಂದ ಭೂಮಿ, ನೀರಲ್ಲಿ ನೆನೆದ ಗಿಡಗಳು ಉಲ್ಲಾಸಭರಿತವಾಗಿ ಸ್ವಾಗತಿಸುತ್ತಿದ್ದವು. ಮತ್ತೆ ಸ್ಪಲ್ಪ ಹೊತ್ತಿನ ಬಳಿಕ ಮತ್ತದೇ ಮಳೆ ಸುರಿಯುತ್ತಿತ್ತು. ಧರೆಗುರುಳಿದ ಮರಗಳು, ವಿದ್ಯುತ್ ಕಡಿತ, ತುಂಬಿ ಹರಿವ ನದಿ-ಕೆರಗಳು ಹೀಗೆ ಆ ಮಳೆಗಾಲವೂ ಬೆಚ್ಚಗಿನ ನೆನಪಿನೊಂದಿಗೆ ಮುಗಿದುಹೋಗುತ್ತಿತ್ತು. ಮತ್ತೊಂದು ಮಳೆಗಾಲಕ್ಕಾಗಿ ಕಾತುರದಿಂದ ಕಾಯುವಂತೆ ಮಾಡುತ್ತಿತ್ತು. ಜಿಟಿಜಿಟಿ ಮಳೆ, ಒದ್ದೆಮುದ್ದೆ ಮನಸು, ಬೆಚ್ಚಗಿನ ನೆನಪು ಎಲ್ಲವೂ ಚೆಂದ. ಬಾಲ್ಯ ಮತ್ತೆ ಮರಳುವಂತಿದ್ದರೆ ?

click me!