ಲಾಕ್‌ಡೌನ್ ಕೇವಲ 6 ದಿನ ಕಳೆದಿರುವಾಗಲೇ ಮನೆಯಲ್ಲಿ ಕೆಲಸವಿಲ್ಲದೆ ಕುಳಿತು ಅಥವಾ ಮದ್ಯ ಸಿಗದೆ ಬಹಳಷ್ಟುಜನ ಖಿನ್ನತೆಗೆ ಜಾರುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ.
ಕೊರೋನಾ ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ಜಾರಿಗೊಳಿಸಿರುವ 21 ದಿನಗಳ ಲಾಕ್‌ಡೌನ್‌ನಲ್ಲಿ ಕೇವಲ ಆರು ದಿನಗಳು ಮಾತ್ರ ಕಳೆದಿವೆ. ಆದರೆ, ಮನೆಯಲ್ಲಿ ಕುಳಿತು ಕೆಲಸವಿಲ್ಲದೆ, ಆದಾಯವೂ ಇಲ್ಲದೆ, ಭವಿಷ್ಯವನ್ನು ನೆನೆದು ಬಹಳ ಜನರು ಆತಂಕ ಹಾಗೂ ಖಿನ್ನತೆಗೆ ಜಾರತೊಡಗಿದ್ದಾರೆ.
ಇನ್ನು, ಮದ್ಯದಂಗಡಿ ಹಾಗೂ ಇತರ ಅಂಗಡಿಗಳೂ ಬಂದ್ ಆಗಿರುವುದರಿಂದ ಮದ್ಯ ಹಾಗೂ ತಂಬಾಕು ವ್ಯಸನಿಗಳಲ್ಲಿ ಬಹಳ ಜನರು ವಿತ್‌ಡ್ರಾವಲ್ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇವೆರಡರ ಪರಿಣಾಮವೂ ಅತ್ಯಂತ ಗಂಭೀರವಾದುದು. ಖಿನ್ನತೆಯೆಂಬುದು ಮನುಷ್ಯನನ್ನು ಆತನಿಗೇ ಗೊತ್ತಿಲ್ಲದೆ ಒಳಗೊಳಗೇ ಕೊಲ್ಲುವ ಶತ್ರು. ಪರಿಸ್ಥಿತಿ ವಿಪರೀತಕ್ಕೆ ಹೋದರೆ ವ್ಯಕ್ತಿ ಆತ್ಮಹತ್ಯೆಗೂ ಶರಣಾಗಬಹುದು. ಪ್ರತಿದಿನ ಮದ್ಯ ಸೇವಿಸುವ ವ್ಯಸನಿಗಳಲ್ಲಿ ವಿತ್‌ಡ್ರಾವಲ್ ಸಮಸ್ಯೆಯ ಗಂಭೀರ ಪರಿಣಾಮ ಕೇವಲ 48ರಿಂದ 72 ಗಂಟೆಗಳಲ್ಲೇ ಗೋಚರಿಸುತ್ತದೆ. ಅದರಂತೆ ಕರ್ನಾಟಕ ಹಾಗೂ ಕೇರಳದಲ್ಲಿ ಹಲವರು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡ ವರದಿಗಳು ಬಂದಿದೆ.
ಇಂತಹ ವ್ಯಸನಗಳಿಲ್ಲದಿದ್ದರೂ ಮನೆಯಲ್ಲಿ ಕಾಲ ಕಳೆದು ಅಭ್ಯಾಸವಿಲ್ಲದವರಿಗೆ, ಅದರಲ್ಲೂ ಈಗ ಮನೆಯೊಳಗೇ ದಿಗ್ಬಂಧನ ವಿಧಿಸಿದಂತಹ ಪರಿಸ್ಥಿತಿಯಲ್ಲಿ, ದಿನ ಕಳೆಯುವುದು ಬಹಳ ಕಷ್ಟ. ಅದರ ಜೊತೆಗೆ ಎಲ್ಲಿ ನೋಡಿದರೂ ಕೊರೋನಾದಿಂದ ಉಂಟಾಗುತ್ತಿರುವ ಸಾವುನೋವುಗಳ ನೆಗೆಟಿವ್ ಸುದ್ದಿ. ಮಾಡಲು ಏನೂ ಕೆಲಸವಿಲ್ಲ. ವರ್ಕ್ ಫ್ರಂ ಹೋಂ ಸೌಲಭ್ಯ ಪಡೆದವರಿಗೂ ಸಾಕಷ್ಟು ಕೆಲಸವಿಲ್ಲ.
#FeelFree: ಲಾಕ್ ಡೌನ್ ಡಿಪ್ರೆಶನ್‌ಗೆ ಸೆಕ್ಸ್ ಪರಿಹಾರ ಅಂತಾನೆ ಬಾಯ್ ಫ್ರೆಂಡ್, ಏನು ಮಾಡ್ಲಿ?
ಬಹಳಷ್ಟುಜನರಿಗೆ ಕೆಲಸವಿಲ್ಲದಿದ್ದರೆ ಆದಾಯವೂ ಇಲ್ಲ. ಹೀಗಾಗಿ ಭವಿಷ್ಯದ ಬಗ್ಗೆ ಆತಂಕ ಮೂಡುತ್ತದೆ. ಅದನ್ನೇ ಪದೇಪದೇ ಯೋಚಿಸುವುದರಿಂದ ವ್ಯಕ್ತಿ ಖಿನ್ನತೆಗೆ ಜಾರಬಹುದು. ಹೀಗಾಗದಂತೆ ತಡೆಯುವಲ್ಲಿ ವೈಯಕ್ತಿಕ, ಕೌಟುಂಬಿಕ ಹಾಗೂ ಸರ್ಕಾರದ ಜವಾಬ್ದಾರಿಗಳಿವೆ.
ಮೊದಲನೆಯದಾಗಿ, ಎಲ್ಲ ಕಷ್ಟಗಳಂತೆ ಇದೂ ಒಂದು ದಿನ ಕಳೆಯುತ್ತದೆ ಎಂಬ ನಂಬಿಕೆಯನ್ನೂ, ನಂತರ ನನ್ನ ಬದುಕು ಮೊದಲಿನಂತೆಯೇ ಆಗುತ್ತದೆ ಎಂಬ ಆತ್ಮವಿಶ್ವಾಸವನ್ನೂ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಮನೆಯಲ್ಲಿರುವಾಗ ಏಕಾಂಗಿತನ ಕಾಡಿದರೂ ಪುಸ್ತಕ ಓದು, ಸಿನಿಮಾ ವೀಕ್ಷಣೆ, ಮನೆಯವರೊಡನೆ ಹಾಗೂ ಸ್ನೇಹಿತರ ಜೊತೆ ಮಾತುಕತೆ ಮುಂತಾದ ಧನಾತ್ಮಕ ಹವ್ಯಾಸಗಳ ಮೂಲಕ ಮನಸ್ಸನ್ನು ಸಂತೋಷವಾಗಿಟ್ಟುಕೊಳ್ಳಲು ಪ್ರಯತ್ನಿಸಬೇಕು.
ಖಿನ್ನತೆಯನ್ನು ತಪ್ಪಿಸಿಕೊಳ್ಳಲು ಇದು ಎಲ್ಲಕ್ಕಿಂತ ಪರಿಣಾಮಕಾರಿಯಾದ ಮಾರ್ಗ. ಎರಡನೆಯದಾಗಿ, ಮನೆಯಲ್ಲಿ ಯಾರಾದರೂ ಈ ಸಂದರ್ಭದಲ್ಲಿ ಏಕಾಂಗಿತನದಿಂದ ಕಷ್ಟಪಡುತ್ತಿದ್ದಾರೆ ಎಂದು ಕುಟುಂಬದ ಇತರರಿಗೆ ಅನ್ನಿಸಿದರೆ ಅವರು ಎಚ್ಚೆತ್ತುಕೊಂಡು ಸಮಾಧಾನ ಮಾಡುವುದು ಅಥವಾ ಅಗತ್ಯಬಿದ್ದರೆ ನಿಮ್ಹಾನ್ಸ್‌ನಂತಹ ಸಹಾಯವಾಣಿಗೆ ಕರೆ ಮಾಡಿ ಕೌನ್ಸೆಲಿಂಗ್ ಕೊಡಿಸುವ ಕೆಲಸ ಮಾಡಬೇಕು. ಮೂರನೆಯದಾಗಿ, ಕೊರೋನಾ ಸೋಂಕು ಹರಡದಂತೆ ತಡೆಯಲು ಸಾಕಷ್ಟುಮುತುವರ್ಜಿ ವಹಿಸಿ ಜನಜಾಗೃತಿ ಮೂಡಿಸುತ್ತಿರುವ ಸರ್ಕಾರ, ಇದೇ ಸಂದರ್ಭದಲ್ಲಿ ಮನೆಯಲ್ಲಿರುವವರ ಸಮಸ್ಯೆಯನ್ನೂ ಅರ್ಥ ಮಾಡಿಕೊಂಡು ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.
ಭರವಸೆ ಕಳೆದುಕೊಳ್ಳುವ ರೀತಿಯ ಯೋಚನೆಗಳು ಬರುತ್ತಿದ್ದರೆ ಏನು ಮಾಡಬೇಕು, ಖಿನ್ನತೆಯ ಲಕ್ಷಣಗಳೇನು, ವೈದ್ಯಕೀಯವಾಗಿ ಅದನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಮಾಹಿತಿ ನೀಡಬೇಕು. ಸರ್ಕಾರ ನಿಮ್ಹಾನ್ಸ್ ಮೂಲಕ ಇದಕ್ಕಾಗಿ ಸಹಾಯವಾಣಿ ಸ್ಥಾಪಿಸಿದೆ. ಆದರೆ, ಅಷ್ಟೇ ಸಾಲದು. ಸಮೂಹ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ತಜ್ಞರಿಂದ ಸಲಹೆ ಕೊಡಿಸುವುದು ಹಾಗೂ ಭವಿಷ್ಯದ ಬಗ್ಗೆ ಜನರಲ್ಲಿ ಭರವಸೆ ಮೂಡಿಸುವ ಕೆಲಸವನ್ನೂ ಮಾಡಬೇಕಿದೆ.
ಪ್ರವಾಸ ಹೋಗದಿದ್ದರೇನಂತೆ ಮನೆಯಲ್ಲಿದ್ದೇ ಜಗತ್ತು ಸುತ್ತಿ ಬನ್ನಿ!
ಸರ್ಕಾರಕ್ಕೆ ಹೇಗೆ ಈ ಸಂದರ್ಭವು ಅಪರೂಪದಲ್ಲೇ ಅಪರೂಪದ ಸವಾಲಾಗಿದೆಯೋ ಹಾಗೆಯೇ ಜನರಿಗೂ ಇದು ಅವರ ಜೀವಮಾನದಲ್ಲಿ ಮೊದಲ ಬಾರಿ ನೋಡುತ್ತಿರುವ ದುರ್ಭರ ಸಂದರ್ಭವಾಗಿದೆ. ದೈಹಿಕ ರೋಗವನ್ನು ದೂರವಿಡಲು ಸರ್ಕಾರ ಹಾಗೂ ಜನರು ಒಗ್ಗಟ್ಟಿನಿಂದ ಮಾಡುತ್ತಿರುವ ಪ್ರಯತ್ನವನ್ನೇ ಮಾನಸಿಕ ಸಮಸ್ಯೆಯನ್ನು ದೂರವಿಡುವುದಕ್ಕೂ ಈ ಸಂದರ್ಭದಲ್ಲಿ ಮಾಡಬೇಕಿದೆ. ಈಗಾಗಲೇ ರಾಜ್ಯದಲ್ಲಿ ಕೊರೋನಾದಿಂದ ಸಂಭವಿಸಿದ್ದಕ್ಕಿಂತ ಹೆಚ್ಚು ಸಾವು ಮದ್ಯ ಸಿಗದೆ ಸಂಭವಿಸಿದೆ ಎಂಬುದು ಗಮನಿಸಲೇಬೇಕಾದ ವಿಚಾರ. ಇದು ವ್ಯಸನಿಗಳಲ್ಲದವರಿಗೂ ವಿಸ್ತರಿಸುವ ಮುನ್ನ ಈಗಲೇ ಎಚ್ಚೆತ್ತುಕೊಳ್ಳಬೇಕಿದೆ.