ಬದುಕು ಬದಲಾಗಿದೆ, ಹಳೆಯದು ಮರುಕಳಿಸಿದೆ...ಎಲ್ಲವೂ ಮಾಯೆ!

By Suvarna NewsFirst Published Apr 21, 2020, 7:49 PM IST
Highlights

ಹಿಸ್ಟ್ರಿ ರಿಪೀಟ್ಸ್ ಅನ್ನೋದನ್ನು ಕೊರೋನಾ ಸಾಬೀತುಪಡಿಸಿದೆ. ಹಳೆಯ ಆಚರಣೆಗಳು, ಆಹಾರ ಪದ್ಧತಿಗಳು ಮತ್ತೆ ಮುನ್ನಲೆಗೆ ಬರುತ್ತಿವೆ. ವೆಸ್ಟರ್ನ್, ಮಾರ್ಡನ್ ಯಾವುದೂ ಬೇಡ, ಇಂಡಿಯನ್ ಫುಡ್, ಕಲ್ಚರೇ ಸಾಕು ಎಂಬ ಹಂತಕ್ಕೆ ಇಂದು ನಾವು ಬಂದು ನಿಂತಿದ್ದೇವೆ.

ಸಂಜೆ ಶಾಲೆಯಿಂದ ಬಂದ ತಕ್ಷಣ ಬೆನ್ನಿಗಂಟಿರುವ ಬ್ಯಾಗ್ ಅನ್ನು ಎತ್ತಿ ಒಗೆದು ಮನೆಯೊಳಗೆ ಓಡುವ ಮಕ್ಕಳ ತವಕಕ್ಕೆ ತಡೆಯೊಡ್ಡುತ್ತಿದ್ದದ್ದು ಬಾಗಿಲಲ್ಲಿ ನಿಂತಿರುತ್ತಿದ್ದ ಅಜ್ಜ. ಮನೆ ಬಾಗಿಲ ಮುಂದೆಯೇ ಇಟ್ಟಿರುತ್ತಿದ್ದ ಹಂಡೆಯ ನೀರಿನಲ್ಲಿ ಕೈ-ಕಾಲು,ಮುಖ ತೊಳೆದ ಬಳಿಕವೇ ಮನೆಯೊಳಗೆ ಪ್ರವೇಶ. ಈ ಕ್ರಮವನ್ನು 15-20 ವರ್ಷಗಳ ಹಿಂದೆ ಗ್ರಾಮೀಣ ಭಾಗದ ಪ್ರತಿ ಮನೆಯಲ್ಲೂ ಅನುಸರಿಸಲಾಗುತ್ತಿತ್ತು. ಶಾಲೆಯಿಂದ ಬಂದ ಮಕ್ಕಳಿಗೆ ಮಾತ್ರವಲ್ಲ, ಹೊರಹೋಗಿ ಮನೆಯೊಳಗೆ ಬರುವ ಪ್ರತಿಯೊಬ್ಬರಿಗೂ ಈ ಅಲಿಖಿತ ನಿಯಮ ಅನ್ವಯಿಸುತ್ತಿತ್ತು. ನೆಂಟರು ಬಂದರೂ ಅಷ್ಟೆ, ಮನೆ ಬಾಗಿಲಿಗೆ ಬಂದ ತಕ್ಷಣ ಒಂದು ಬಿಂದಿಗೆ ನೀರು ಕೊಟ್ಟು ಕೈ- ಕಾಲು, ಮುಖ ತೊಳೆದುಕೊಳ್ಳಿ ಎಂದು ಹೇಳುವ ಪರಿಪಾಠವಿತ್ತು. ಆದ್ರೆ ಕ್ರಮೇಣ ಆಧುನಿಕತೆ ಹಳ್ಳಿಯ ಮನೆ-ಮನಗಳನ್ನು ಪ್ರವೇಶಿಸಿದ ಬಳಿಕ ಮನೆ ಮುಂದೆ ಬಕೆಟ್ ಅಥವಾ ಹಂಡೆಯಲ್ಲಿ ನೀರಿಡುವ ಸಂಪ್ರದಾಯ ನಿಂತಿತು.ಆದ್ರೆ ಈಗ ಒಂದು ತಿಂಗಳಿನಿಂದ ಇಂಥದೊಂದು ಪರಿಪಾಠಕ್ಕೆ ಮತ್ತೆ ಚಾಲನೆ ಸಿಕ್ಕಿದೆ. ಹಳ್ಳಿಗಳ ಮನೆ ಮುಂದೆ ಈಗ ಮತ್ತೆ ನೀರು ತುಂಬಿದ ಬಕೆಟ್‍ಗಳು ಕಾಣಸಿಗುತ್ತಿವೆ. ಇದಕ್ಕೆ ಕಾರಣ ಮತ್ತ್ಯಾರೂ ಅಲ್ಲ,ಕೊರೋನಾ ಎಂಬ ಮಹಾಮಾರಿ!

ಯಬ್ಬೋ, ಯಾರು ಮಾಡುತ್ತಾರೆ, ಸೋಮಾರಿತನಕ್ಕೆ ಇಲ್ಲಿವೆ ಮದ್ದು

ಹಳೆಯ ಸಂಪ್ರದಾಯ, ಅವೈಜ್ಞಾನಿಕ ಎಂದು ಬದಿಗೊತ್ತಿದ ಆಚರಣೆಗಳನ್ನು ಇಂದು ನಾವೆಲ್ಲ ಸೊಲ್ಲೆತ್ತದೆ ಮತ್ತೆ ಅನುಸರಿಸಲು ಪ್ರಾರಂಭಿಸಿದ್ದೇವೆ. ಮಾರ್ಡನ್, ಕಲ್ಚರ್ಡ್ ಎನ್ನುತ್ತಿದ್ದವರೆಲ್ಲ ಇಂದು ಓಲ್ಡ್ ಈಸ್ ಗೋಲ್ಡ್ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕಾಗಿದೆ. ಸಲೂನ್, ಬ್ಯೂಟಿ ಪಾರ್ಲರ್ ಎಂದು ಕೂದಲು ಕತ್ತರಿಸಿಕೊಳ್ಳಲು ದುಬಾರಿ ಬೆಲೆ ತೆತ್ತು ತಲೆ ಕೊಡುತ್ತಿದ್ದವರಿಗೆ ಇಂದು ಮನೆಯಲ್ಲಿರುವ ಕತ್ತರಿಯೇ ಗತಿ. ಸಲೂನ್‍ಗಳಿಗೆ ಬೀಗ ಬಿದ್ದಿರುವ ಕಾರಣ ಮಕ್ಕಳು ಅಪ್ಪನಿಗೆ, ಅಪ್ಪ ಹೆಂಡ್ತಿಗೆ ತಲೆ ಕೊಟ್ಟು ಕೂರಬೇಕಿದೆ. ಇನ್ನೂ ಕೆಲವು ಕಡೆ ಕ್ಷೌರಿಕರು ಮನೆಗೇ ಬಂದು ಹೇರ್ ಕಟ್ ಮಾಡುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಕ್ಷೌರಿಕರು ಮನೆಗೇ ಬಂದು ಕೂದಲು, ಗಡ್ಡ ಬೋಳಿಸುವ ಕ್ರಮವಿತ್ತು. ಈಗ ಅದೇ ಮರುಕಳಿಸಿದೆ. 

ಕೊರೋನಾ ತಡೆಗೆ ಮನೆಯಲ್ಲೇ ಮಾಡಬಹುದಾದ ಮುನ್ನಚ್ಚರಿಕಾ ಕ್ರಮಗಳಿವು..!

ಹಿಂದೆಲ್ಲ ಮನೆ ಮುಂದೆ, ಹಿಂದೆ, ಆ ಕಡೆ ಈ ಕಡೆ ಸ್ವಲ್ಪ ನೆಲ ಕಾಣಿಸಿದ್ರೆ ಅಲ್ಲಿ ಸೊಪ್ಪು, ತರಕಾರಿ ಗಿಡಗಳು ಎದ್ದು ನಿಲ್ಲುತ್ತಿದ್ದವು. ಹಿತ್ತಲಲ್ಲಿ ಏನು ಸಿಗುತ್ತೋ ಅದನ್ನೇ ಪಲ್ಯ, ಸಾಂಬಾರು, ತಂಬುಳಿ ಮಾಡಿ ತಿನ್ನುತ್ತಿದ್ದರು. ಇದ್ರಿಂದಾಗಿಯೇ ನಮ್ಮ ಅಜ್ಜ, ಮುತ್ತಜ್ಜನಿಗೆ ಬಿಪಿ, ಶುಗರ್ ಮತ್ತೊಂದು, ಇನ್ನೊಂದು ಆರೋಗ್ಯ ಸಮಸ್ಯೆಗಳು ಬಳಿ ಸುಳಿಯುತ್ತಿರಲಿಲ್ಲ. ಆದರೆ, ನಗರೀಕರಣ ಹೆಚ್ಚುತ್ತಿದ್ದಂತೆ ಹಳ್ಳಿ ಜನರೂ ದುಡ್ಡು ಕೊಟ್ಟು ತರಕಾರಿ ತರಲು ಪ್ರಾರಂಭಿಸಿದರು. ಹಿತ್ತಲ ಗಿಡದಲ್ಲಿ ಬೆಳೆದ ತರಕಾರಿಗಳು ನಾಲಗೆಗೆ ರುಚಿಸದೆ ರಾಸಾಯನಿಕ ಹಾಕಿ ಎಲ್ಲೋ ಬೆಳೆದ ತರಕಾರಿಗಳೇ ನಿತ್ಯದ ಸಾಂಬಾರಿಗೆ ಬೇಕಾದವು. ದುಡ್ಡು ಕೊಟ್ಟು ತಂದಿದ್ದಕ್ಕೆ ಯಾವಾಗಲೂ ರುಚಿ ಜಾಸ್ತಿ! ಆದ್ರೆ ಈಗ ತರಕಾರಿ ಖರೀದಿಸಿ ತರಲು ಭಯ. ತರಕಾರಿ ಜೊತೆ ಕೊರೋನಾವೂ ಬಂದುಬಿಟ್ಟರೆ ಎಂಬ ಆತಂಕ. ಹೀಗಾಗಿ ಹಿತ್ತಲಲ್ಲಿ ಬೆಳೆದ ತರಕಾರಿ, ಸೊಪ್ಪುಗಳೇ ನಿತ್ಯದ ಆಹಾರವಾಗುತ್ತಿವೆ. ಹಿತ್ತಲ ಗಿಡದ ರುಚಿಯನ್ನು ನಾಲಗೆ ಚಪ್ಪರಿಸಿಕೊಂಡು ಸವಿಯುತ್ತಿದೆ.

ಮಕ್ಕಳನ್ನು ಕೊರೋನಾದಿಂದ ರಕ್ಷಿಸುವುದು ಹೇಗೆ?

ಟಿವಿ ಆನ್ ಮಾಡಿದ್ರೆ ಸೀರಿಯಲ್ ಬೇಕೆಂದು ಮಹಿಳೆಯರು, ಕ್ರಿಕೆಟ್ ಮ್ಯಾಚ್ ಬೇಕೆಂದು ಗಂಡಸರು ಕಿತ್ತಾಡುವ ಪ್ರಸಂಗ ಈಗ ಯಾವ ಮನೆಗಳಲ್ಲೂ ಇಲ್ಲ. ಸೀರಿಯಲ್‍ಗಳ ಶೂಟಿಂಗ್ ನಿಂತಿರುವ ಕಾರಣ ಹಿಂದಿದ್ದನ್ನೇ ಮರುಪ್ರಸಾರ ಮಾಡುತ್ತಿದ್ದಾರೆ. ಕ್ರಿಕೆಟಿಗರೆಲ್ಲ ಮನೆಬಿಟ್ಟು ಹೊರಬರುವಂತಿಲ್ಲ ಎಂದಾದ ಮೇಲೆ ಮ್ಯಾಚ್ ನಡೆಯೋದಾದ್ರೂ ಹೇಗೆ? ಈಗ ಮನೆಮಂದಿಯಲ್ಲ ಕಣ್ಣೆರಡು ಬಿಟ್ಟುಕೊಂಡು, ಕಿವಿ ಅಗಲಿಸಿಕೊಂಡು ನೋಡೋದು ಬರೀ ನ್ಯೂಸ್ ಚಾನೆಲ್‍ಗಳನ್ನು ಮಾತ್ರ! ನಮ್ಮ ಊರಲ್ಲಿ, ಜಿಲ್ಲೆಯಲ್ಲಿ ಕೊರೋನಾ ಎಷ್ಟು ಜನರಿಗಿದೆ, ಯಾರು ಸತ್ತಿದ್ದಾರೆ, ರಾಜ್ಯದಲ್ಲಿ ಇವತ್ತು ಎಷ್ಟು ಹೊಸ ಕೇಸ್ ಪತ್ತೆಯಾಯ್ತು...ಹೀಗೆ ಮಾಹಿತಿ ಸಂಗ್ರಹಿಸೋದು, ಚರ್ಚಿಸೋದೆ ಕೆಲಸವಾಗಿದೆ.

ನ್ಯೂಸ್ ನೋಡಿ ತಲೆಕೆಟ್ಟವರೆಲ್ಲ ದೂರದರ್ಶನದಲ್ಲಿ ಮರುಪ್ರಸಾರವಾಗುತ್ತಿರುವ ತಮ್ಮ ಬಾಲ್ಯದಲ್ಲೂ ಅಥವಾ ಯೌವನದಲ್ಲೂ ವೀಕ್ಷಿಸಿದ್ದ ರಾಮಾಯಣ ಹಾಗೂ ಮಹಾಭಾರತ ಧಾರವಾಹಿಗಳನ್ನು ನೋಡಲು ಪ್ರಾರಂಭಿಸಿದ್ದಾರೆ. ಅಷ್ಟೇ ಅಲ್ಲ, ಹಿಂದೆ ಸೂಪರ್ ಹಿಟ್ ಆದ ಸೀರಿಯಲ್‍ಗಳನ್ನು ಆಯಾ ಚಾನಲ್‍ಗಳು ಮರುಪ್ರಸಾರ ಮಾಡುತ್ತಿವೆ. ಹೀಗಾಗಿ ಮತ್ತೆ ಹಳೆಯ ಕಥೆಗಳನ್ನೇ ನೋಡುವ ಅವಕಾಶ ಸಿಕ್ಕಿದೆ. ಒಟ್ಟಾರೆ ಹಿಸ್ಟ್ರಿ ರಿಪೀಟ್ಸ್ ಅನ್ನೋದನ್ನು ಕೊರೋನಾ ಪ್ರೂವ್ ಮಾಡಿದೆ. ಈ ಕೊರೋನಾದಿಂದ ಮುಂದೆ ಇನ್ನೇನು ಕಾದಿದೆಯೋ ದೇವರೇ ಬಲ್ಲ!

"

click me!