ಕೊರೋನಾ ತಡೆಗೆ ಮನೆಯಲ್ಲೇ ಮಾಡಬಹುದಾದ ಮುನ್ನಚ್ಚರಿಕಾ ಕ್ರಮಗಳಿವು..!
ಕೊರೋನಾ ವೈರಸ್ ರೋಗಗ್ರಸ್ತನ ಒಡಲಿನಿಂದ ಆರೋಗ್ಯವಂತರಿಗೆ ಹೇಗೆ ಹರಡುತ್ತದೆ ಎನ್ನುವುದು ಇಂದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ರೋಗಗ್ರಸ್ತನು ಕೆಮ್ಮಿದಾಗ ಇಲ್ಲವೇ ಸೀನಿದಾಗ, ಆತನ ಒಡಲಿನಿಂದ ಹೊರಬರುವ ತುಂತುರುಕಣಗಳಲ್ಲಿ ಕೊರೋನಾ ವೈರಸ್ ಇರುತ್ತದೆ. ಇದು ಆರೋಗ್ಯವಂತಹ ಕಣ್ಣು, ಮೂಗು ಅಥವ ಬಾಯಿಯ ಮೂಲಕ ಶರೀರದ ಒಳಗೆ ಬರುತ್ತದೆ ಹಾಗೂ ಸೋಂಕನ್ನು ಉಂಟು ಮಾಡುತ್ತದೆ.
-ಡಾ. ನಾ.ಸೋಮೇಶ್ವರ
ಇದನ್ನು ತಡೆಗಟ್ಟಲು ಸಾಮಾಜಿಕ ಅಂತರವನ್ನು ಕಾಪಾಡುವುದು, ಮಾಸ್ಕ್ ಧರಿಸುವುದು ಹಾಗೂ ಕೈಗಳನ್ನು ಪದೇ ಪದೇ ಸೋಪುನೀರಿನಿಂದ ತೊಳೆದುಕೊಳ್ಳುವುದು ಇಲ್ಲವೇ ಸ್ಯಾನಿಟೈಜರಿನಿಂದ ಸ್ವಚ್ಛಗೊಳಿಸುವುದು ತೀರಾ ಮುಖ್ಯ ಎನ್ನುವ ಮಾಹಿತಿಯೂ ಸಹ ಎಲ್ಲರಿಗೂ ತಿಳಿದಿದೆ ಹಾಗೂ ಸಾಕಷ್ಟುಜನರು ಈ ಮುನ್ನೆಚ್ಚರಿಕೆಯ ಕ್ರಮಗಳನ್ನು ಪರಿಪಾಲಿಸುತ್ತಿದ್ದಾರೆ. ಆದರೆ ಎಲ್ಲರೂ ಮರೆತಿರುವ ಮತ್ತೊಂದು ಮುಖ್ಯ ಮಾರ್ಗವಿದೆ. ಅದುವೇ ಅದುವೇ ರೋಗಗ್ರಸ್ತನ ಮಲಮೂತ್ರಗಳ ಮೂಲಕ ಹರಡುವ ವಿಚಾರ.
ಕೊರೋನಾ ಸೋಂಕು ಬಂದರೆ ಮೊದಲು ಜ್ವರ ಬರುತ್ತದೆ, ಆನಂತರ ಒಣ ಕೆಮ್ಮು ಬರುತ್ತದೆ, ವಿಪರೀತ ಸುಸ್ತಾಗುತ್ತದೆ, ಗಂಟಲಲ್ಲಿ ಕಿರಿಕಿರಿಯಾಗಿ ನೋಯುತ್ತದೆ, ಕೊನೆಗೆ ಸೋಂಕು ಶ್ವಾಸಕೋಶಗಳಿಗೆ ಹರಡಿದಾಗ ನೋವು ಹಾಗೂ ಉಸಿರಾಟದ ತೊಂದರೆ ಕಂಡುಬರುತ್ತದೆ ಎನ್ನುವ ಕೊರೋನಾ ಸೋಂಕು ಲಕ್ಷಣಗಳ ಬಗ್ಗೆಯೂ ಜನಜಾಗೃತಿಯಾಗಿದೆ. ಆದರೆ ಕೊರೋನಾ ಸೋಂಕು ಪಾಸಿಟಿವ್ ಆದ 50% ಜನರಲ್ಲಿ ಈ ಸೋಂಕುಗಳ ಜೊತೆಯಲ್ಲಿ ಜಠರ ಮತ್ತು ಕರುಳಿಗೆ ಸಂಬಂಧ ಪಟ್ಟಲಕ್ಷಣಗಳೇ ಪ್ರಧಾನವಾಗಿರುತ್ತವೆ ಎನ್ನುವುದು ಹೆಚ್ಚಿನ ಜನರಿಗೆ ತಿಳಿದಿಲ್ಲ. 83% ಜನರಲ್ಲಿ ಹಸಿವು ಕಡಿಮೆಯಾಗುತ್ತದೆ. 29% ಜನರಲ್ಲಿ ಭೇದಿಯಾಗುತ್ತದೆ. 0.8% ಜನರಲ್ಲಿ ವಾಂತಿಯಾಗುತ್ತದೆ ಹಾಗೂ 0.4% ಜನರಲ್ಲಿ ಹೊಟ್ಟೆನೋವು ಕಂಡುಬರುತ್ತದೆ. ವಿಪರ್ಯಾಸವೆಂದರೆ ಇವರಲ್ಲಿ ಉಸಿರಾಟಕ್ಕೆ ಸಂಬಂಧಪಟ್ಟಲಕ್ಷಣಗಳು ಕಂಡುಬರುವುದಿಲ್ಲ.
ಕೊರೋನಾ ತಡೆಗಟ್ಟಲು ಥಟ್ಟಂತ ಹೇಳಬಲ್ಲ ಉಪಾಯಗಳು!
ಪ್ರಧಾನವಾಗಿ ಉಸಿರಾಟದ ರೋಗಲಕ್ಷಣಗಳೊಡನೆ ಆಸ್ಪತ್ರೆಗೆ ದಾಖಲಾಗುವ ರೋಗಿಗಳು ಸುಧಾರಿಸಿಕೊಳ್ಳುವ ಸಾಧ್ಯತೆಯು ಹೆಚ್ಚಿರುತ್ತದೆ. ಅದೇ ಪ್ರಧಾನವಾಗಿ ಜಠರ-ಕರುಳು ರೋಗಲಕ್ಷಣಗಳೊಡನೆ ದಾಖಲಾಗುವ
ಜನರ ಸ್ಥಿತಿಯು ಹೆಚ್ಚು ಗಂಭೀರವಾಗುವ ಸಾಧ್ಯತೆಯು ಅಧಿಕವಾಗಿರುತ್ತದೆ. ಕೊರೋನ ಸೋಂಕಿನ ತೀವ್ರತೆಯು ಹೆಚ್ಚುತ್ತಿರುವಂತೆಯೇ ಜಠರ-ಕರುಳಿನ ಲಕ್ಷಣಗಳೂ ಹೆಚ್ಚಾಗುತ್ತಾ ಹೋಗುತ್ತದೆ.
ಕೊರೋನಾ ಸೋಂಕು ಪೀಡಿತನ ಎಂಜಲು ಮತ್ತು ಸಿಂಬಳದ ಮೂಲಕ, ಕೊರೋನಾ ವೈರಸ್ ವಿಸರ್ಜಿತವಾಗುವಂತೆ ಆತನ ಮಲದ ಮೂಲಕವೂ ವಿಸರ್ಜಿತವಾಗುತ್ತದೆ. ರೋಗಗ್ರಸ್ತ ವ್ಯಕ್ತಿಯು ಉಸಿರಾಟಕ್ಕೆ ಸಂಬಂಧಪಟ್ಟಲಕ್ಷಣಗಳಿಂದ ಮುಕ್ತನಾಗಿ ಐದು ವಾರಗಳಾದ ಮೇಲೂ ವೈರಸ್ಸುಗಳು ಆತನ ಮಲದ ಮೂಲಕ ಹೊರಬರುತ್ತಲೇ ಇರುತ್ತವೆ. ಕೆಮ್ಮು-ಸೀನಿನ ಮೂಲಕ ಹರಡುವ ವೈರಸ್ಸನ್ನು ತಡೆಗಟ್ಟಲು ಈಗ ನಾವು ತೆಗೆದುಕೊಂಡಿರುವ ರಕ್ಷಣೋಪಾಯಗಳು ಸಾಕಾಗುತ್ತವೆ. ಆದರೆ ಮಲದ ಮೂಲಕ ವಿಸರ್ಜನೆಯಾಗುವ ವೈರಸ್ ಸೋಂಕನ್ನು ತಡೆಗಟ್ಟುವುದರ ಬಗ್ಗೆ ಯಾವುದೇ ಜಾಗೃತಿಯನ್ನು ನೀಡುತ್ತಿಲ್ಲ. ಮಲವಿಸರ್ಜನೆಯನ್ನು ಮಾಡಿದ ಮೇಲೆ ಕೈಗಳನ್ನು ಸೋಪು-ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳುವುದು ಬಹಳ ಮುಖ್ಯ. ಹಾಗೆಯೇ ಕಮೋಡುಗಳನ್ನು ಫ್ಲಶ್ ಮಾಡಿದಾಗ, ಮಲದ ಕಣಗಳು ಸಣ್ಣ ತುಂತುರುಕಣಗಳ ರೂಪದಲ್ಲಿ ಎಲ್ಲೆಡೆ ಹರಡುತ್ತದೆ. ಈ ಮಲಕಣಗಳಲ್ಲಿ ಕೊರೋನ ವೈರಸ್ ಇರುತ್ತದೆ. ಇವು ಇತರರ ಸಂಪರ್ಕಕ್ಕೆ ಬಂದು ಸೋಂಕನ್ನು ಉಂಟು ಮಾಡಬಲ್ಲವು. ಇದನ್ನು ತಡೆಗಟ್ಟುವುದು ಸುಲಭ. ಕಮೋಡಿನ ಮುಚ್ಚಳವನ್ನು ಹಾಕಿ ಫ್ಲಶ್ ಮಾಡಿದರೆ, ಹೊರಬರುವ ವೈರಸ್‌ಯುಕ್ತ ತುಂತುರು ಕಣಗಳು ವಾತಾವರಣದಲ್ಲಿ ಬೆರೆಯುವುದಿಲ್ಲ. ಮುಚ್ಚಳದ ಕೆಳಗಡೆಯೇ ಶೇಖರವಾಗುತ್ತವೆ.
ಕೊರೋನ ವೈರಸ್ ಸೋಂಕು ಇದ್ದರೂ ಸಹ, ಅವರಲ್ಲಿ ಯಾವುದೇ ರೋಗಲಕ್ಷಣಗಳನ್ನು ಕಾಣುವುದಿಲ್ಲ ಎನ್ನುವ ಸುದ್ದಿಯು ಆತಂಕವನ್ನು ಉಂಟುಮಾಡುತ್ತಿದೆ. ಹಾಗಾಗಿ ಇಂತಹವರು ಸೋಂಕು ರಕ್ಷಣಾ ಕ್ರಮಗಳನ್ನು ಪರಿಪಾಲಿಸದೇ ಹೋಗಬಹುದು. ತಮಗೆ ಅರಿವಿಲ್ಲದೆಯೇ ಸೋಂಕನ್ನು ಹರಡುತ್ತಾ ಹೋಗಬಹುದು. ಹಾಗಾಗಿ ಶೌಚ ಸ್ವಚ್ಛತೆಯ ಬಗ್ಗೆಯೂ ಆದ್ಯತೆಯ ಮೇರೆಗೆ ಜನಜಾಗೃತಿಯನ್ನು ಉಂಟು ಮಾಡಬೇಕಾಗಿದೆ.
ನಿಮಗಿದು ತಿಳಿದಿರಲಿ
- 50% ಕೊರೋನಾ ಸೋಂಕು ಪೀಡಿತರಲ್ಲಿ ಜಠರ ಮತ್ತು ಕರುಳಿನ ರೋಗಲಕ್ಷಣಗಳು ಪ್ರಧಾನವಾಗಿರುತ್ತವೆ. ಉಸಿರಾಟಕ್ಕೆ ಸಂಬಂಧಿಸಿದ ಲಕ್ಷಣಗಳು ಕಾಣದೇ ಇರಬಹುದು.
- ಸೋಂಕುಗ್ರಸ್ತರು, ಪೂರ್ಣ ‘ಗುಣವಾದಮೇಲೂ’ ಸುಮಾರು ಐದು ವಾರಗಳವರೆಗೂ ವೈರಸ್ಸುಗಳನ್ನು ತಮ್ಮ ಮೂಲಕ ವಿಸರ್ಜಿಸುತ್ತಲೇ ಇರುತ್ತಾರೆ.
- ಶೌಚಾಲಯವನ್ನು ಬಳಸಿದ ಮೇಲೆ ತಮ್ಮ ಕೈಗಳನ್ನು, ಮುಖ್ಯವಾಗಿ ಉಗುರಿನ ಕೆಳಗೆ, ಸೋಪು-ನೀರಿನಿಂದ ಚೆನ್ನಾಗಿ ಸ್ವಚ್ಛಗೊಳಿಸಬೇಕು.
- ಕಮೋಡಿನ ಮುಚ್ಚಳವನ್ನು ಹಾಕಿದ ಮೇಲೆ ಫ್ಲಶ್ ಮಾಡಿ.
- ಒಬ್ಬರು ಶೌಚಾಲಯವನ್ನು ಬಳಸಿದ ಮರುಕ್ಷಣವೇ ಶೌಚಾಲಯವನ್ನು ಬಳಸಲು ಮುನ್ನುಗ್ಗಬೇಡಿ. ಸ್ವಲ್ಪ ಸಮಯ ಬಿಟ್ಟು ಬಳಸಿ.