ಟಾಯ್ಲೆಟ್ ಗೆ ಹೋಗುವುದೆಂದರೆ ಬಹಳಷ್ಟು ಮಕ್ಕಳು ಬೇಸರ ಮಾಡಿಕೊಳ್ಳುತ್ತಾರೆ. ಅದು ಯಾಕೆಂದು ಪಾಲಕರು ವಿಚಾರಿಸಬೇಕು. ಮಲ ಗಟ್ಟಿಯಾಗಿ ನೋವಾಗುವುದು, ಸುಲಭವಾಗಿ ಆಗದಿರುವುದೂ ಸಹ ಅವರು ಹಿಂದೇಟು ಹಾಕುವುದಕ್ಕೆ ಕಾರಣವಾಗಿರಬಹುದು. ಇದರಿಂದ ಅವರ ಜೀರ್ಣಾಂಗ ವ್ಯವಸ್ಥೆಗೆ ಹಾನಿಯಾಗುತ್ತದೆ. ಹೀಗಾಗಿ, ಪಾಲಕರು ಕಾಳಜಿ ವಹಿಸಬೇಕು.
ಮಕ್ಕಳು (Children) ಕೆಲವೊಮ್ಮೆ ಮೂರ್ನಾಲ್ಕು ದಿನಗಳಾದರೂ ಟಾಯ್ಲೆಟ್ (Toilet) ಗೆ ಹೋಗುವುದಿಲ್ಲ. ಟಾಯ್ಲೆಟ್ ನಲ್ಲಿ ಕುಳಿತುಕೊಳ್ಳಲು ಬೇಸರಪಟ್ಟುಕೊಳ್ಳುವ ಜತೆಗೆ ಸ್ವಲ್ಪ ಕಷ್ಟಪಟ್ಟಾದರೂ ಮಲವನ್ನು (Stool) ಹೊರಹಾಕಬೇಕೆಂದು ಯತ್ನಿಸುವುದಿಲ್ಲ. ಅವರಿಗೆ ಅದೆಲ್ಲ ತಿಳಿಯುವುದೂ ಇಲ್ಲ. ಪರಿಣಾಮವೇ ಮಲಬದ್ಧತೆ. ಮಲಬದ್ಧತೆ (Constipation) ಉಂಟಾಗುವುದರಿಂದ ಅವರ ಜೀರ್ಣಾಂಗ ವ್ಯವಸ್ಥೆಗೆ (Digestive System) ಹಾನಿಯಾಗುತ್ತದೆ. ಒಟ್ಟಾರೆ ಆರೋಗ್ಯಕ್ಕೂ ತೊಂದರೆ ಕೊಡುತ್ತದೆ. ಹೊಟ್ಟೆಯುಬ್ಬರ ಉಂಟಾಗಿ ಹೊಟ್ಟೆನೋವು (Pain) ಕಾಣಿಸುವುದು ಸಹ ಸಾಮಾನ್ಯ.
ಯಾವಾಗಲಾದರೂ ಒಮ್ಮೆ ಹೀಗಾದರೆ ಹೆಚ್ಚು ಯೋಚನೆ ಮಾಡಬೇಕಾಗಿಲ್ಲ. ಆದರೆ, ಪದೇ ಪದೆ ಹೀಗಾದರೆ ಎಚ್ಚರಿಕೆ ವಹಿಸಬೇಕು. ಆಹಾರ ಪದ್ಧತಿಯನ್ನು ಬದಲಾಯಿಸಬೇಕು. ತಿಂದ ಆಹಾರದ ಅಂಶ ಕರುಳಿನಲ್ಲಿ (Colon) ಸುಲಭವಾಗಿ ಸಾಗದೆ ಇರುವಾಗ ಮಲ ಗಟ್ಟಿಯಾಗುತ್ತದೆ. ಇದಕ್ಕೆ ಹಲವಾರು ಕಾರಣಗಳಿವೆ. ಅವುಗಳನ್ನು ತಿಳಿದುಕೊಂಡು ಮಕ್ಕಳ ಆರೋಗ್ಯ ಕಾಪಾಡಿ.
• ನೀರು (Water) ಅಥವಾ ದ್ರವಾಹಾರದ ಕೊರತೆ (Shortage of Liquid)
ಮಕ್ಕಳಿಗೆ ಸಾಮಾನ್ಯವಾಗಿ ಹಾಲು (Milk) ಕೊಡುತ್ತೀರಿ. ಆದರೆ, ಹಾಲನ್ನು ಹೊರತುಪಡಿಸಿಯೂ ಸ್ವಲ್ಪ ನೀರು ಕೊಡಬೇಕು. ದೇಹಕ್ಕೆ ದ್ರವಾಹಾರದ ಕೊರತೆ ಉಂಟಾದಾಗ ಕರುಳಿನ ಮಾಂಸಖಂಡಗಳು ಬಿಗಿದುಕೊಂಡು ಮೊದಲೇ ಗಟ್ಟಿಯಾಗಿರುವ ಮಲದ ಚಲನೆಯನ್ನು ಇನ್ನಷ್ಟು ಕಷ್ಟವಾಗಿಸುತ್ತವೆ. ಆಗ ಮಕ್ಕಳಿಗೆ ಟಾಯ್ಲೆಟ್ ಹೋಗಬೇಕೆಂದು ಅನ್ನಿಸುವುದೇ ಇಲ್ಲ.
• ನಾರಿನಂಶದ ಆಹಾರ ಕೊಡ್ತೀರಾ? (Fibre rich food)
ಆಹಾರದಲ್ಲಿ ನಾರಿನಂಶದ ಕೊರತೆ ಇದ್ದಾಗ ಮಲಬದ್ಧತೆಯಾಗುತ್ತದೆ. ಮಕ್ಕಳಿಗೂ ಇದು ಅನ್ವಯವಾಗುತ್ತದೆ. ಹೆಚ್ಚು ಚಾಕೋಲೇಟ್ ತಿಂದರೆ, ಬ್ರೆಡ್ (Bread), ಬೇಕರಿ (Bakery) ತಿನಿಸುಗಳನ್ನೇ ಹೆಚ್ಚಾಗಿ ಸೇವಿಸಿದರೆ ಮಲಬದ್ಧತೆಯಾಗುವುದು ಸಾಮಾನ್ಯ. ಹೀಗಾಗಿ, ಅವರ ಆಹಾರದಲ್ಲಿ ತರಕಾರಿ, ಹಣ್ಣುಗಳನ್ನೂ ಸೇರಿಸಿ.
• ಆನುವಂಶಿಕತೆ (Family History)
ಮಲಬದ್ಧತೆಯ ಸಮಸ್ಯೆ ಆನುವಂಶಿಕವೂ ಹೌದು. ತಂದೆ-ತಾಯಿಯರಲ್ಲಿ ಯಾರಿಗಾದರೂ ಮಲಬದ್ಧತೆಯ ಸಮಸ್ಯೆ ಇದ್ದರೆ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ.
ಮಕ್ಕಳನ್ನು ಕಾಡುವ ಮಲಬದ್ಧತೆಗೆ ಇಲ್ಲಿದೆ ಪರಿಹಾರ
• ಔಷಧಗಳು (Medications)
ಮಗು ಯಾವುದೋ ಸೋಂಕು ಅಥವಾ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವಾಗ ಮಲಬದ್ಧತೆ ಉಂಟಾಗುತ್ತದೆ. ಕೆಲವು ಔಷಧಗಳು ಮಲವನ್ನು ಗಟ್ಟಿಯಾಗಿಸುತ್ತವೆ.
• ಟಾಯ್ಲೆಟ್ ಗೆ ಹೋಗಲು ಬೇಸರ (Avoid to go Toilet)
ಅನೇಕ ಮಕ್ಕಳು ಟಾಯ್ಲೆಟ್ ಗೆ ಹೋಗಲು ಬೇಸರ ಮಾಡಿಕೊಳ್ಳುತ್ತಾರೆ. ಅಸಹ್ಯ ಪಡುತ್ತಾರೆ. ಹೀಗಾಗಿ, ಟಾಯ್ಲೆಟ್ ಅನ್ನು ಕ್ಲೀನಾಗಿಡಿ. ಉತ್ತಮ ಪರಿಮಳ ಬೀರುವ ಸುವಾಸಿತ ದ್ರವ್ಯಗಳನ್ನು ಇಡಿ. ಆಗ ಅವರಿಗೆ ಕಿರಿಕಿರಿ ಆಗುವುದಿಲ್ಲ. ಹೊರಗೆ ಅಥವಾ ಶಾಲೆಗೆ ಹೋದಾಗಲೂ ಇದೇ ಸಮಸ್ಯೆ ಮಾಡಿಕೊಳ್ಳುತ್ತಾರೆ. ಅವರಿಗೆ ತಿಳಿಹೇಳುವ ಮೂಲಕ ಅವರ ಹಿಂಜರಿಕೆಯನ್ನು ದೂರ ಮಾಡಬೇಕು.
• ಮಲ ಮಾಡುವಾಗ ನೋವು (Pain)
ಕರುಳಿನಲ್ಲಿ ಮಲದ ಚಲನೆ ಸರಾಗವಾಗಿಲ್ಲದಿದ್ದರೆ, ಮಲ ಗಟ್ಟಿಯಾಗಿದ್ದರೆ ನೋವಾಗುತ್ತದೆ. ಆಗಲೂ ಮಕ್ಕಳು ಟಾಯ್ಲೆಟ್ ನಲ್ಲಿ ಕುಳಿತುಕೊಂಡರೆ ನೋವಾಗುತ್ತದೆ ಎಂದು ಹಿಂದೇಟು ಹಾಕುತ್ತಾರೆ. ಇದಕ್ಕೆ ಪರಿಹಾರವೆಂದರೆ, ಆಹಾರದಲ್ಲಿ ನಾರಿನಂಶ ಇರುವಂತೆ ನೋಡಿಕೊಳ್ಳುವುದು.
ಕಾಫಿ ಅಡಿಕ್ಷನ್ ಇದ್ದರೆ ಬಿಟ್ಟರೊಳಿತು
ಮಕ್ಕಳಲ್ಲಿ ಮಲಬದ್ಧತೆಯ ಲಕ್ಷಣಗಳೇನು?
• ವಾರದಲ್ಲಿ ಮೂರು ದಿನವಾದರೂ ಟಾಯ್ಲೆಟ್ ಮಾಡದಿರುವುದು.
• ಹಸಿವಾಗದಿರುವುದು, ತಿನ್ನುವ ಆಸಕ್ತಿ ಇಲ್ಲದಿರುವುದು.
• ಮಲ ಮಾಡುವಾಗ ಕಷ್ಟಪಡುವುದು.
• ಟಾಯ್ಲೆಟ್ ಗೆ ಹೋಗಿ ಕುಳಿತುಕೊಳ್ಳಲು ಬೇಸರ, ಹಿಂಜರಿಕೆ.
• ಕೆಲವೊಮ್ಮೆ ಮಕ್ಕಳ ಒಳಚಡ್ಡಿಯಲ್ಲಿ ಸ್ವಲ್ಪ ಮಲ ಕಂಡುಬರಬಹುದು.
• ಮಲದೊಂದಿಗೆ ರಕ್ತ ಬರುವುದು.
ಮಕ್ಕಳಿಗೆ ಸ್ನ್ಯಾಕ್ಸ್ (Snacks)
ಪುಟ್ಟ ಮಕ್ಕಳು ಸಹಜವಾಗಿ ದೊಡ್ಡವರಿಗಿಂತ ಸಿಹಿ ತಿನ್ನಲು ಆಸೆಪಡುತ್ತಾರೆ. ಅವರಿಗೆ ಇಷ್ಟವೆಂದು ಬರೀ ಸಿಹಿಯನ್ನೇ ನೀಡಬಾರದು. ಯಾವುದೇ ಕಾರಣಕ್ಕೆ ಬಾಹ್ಯ ತಿಂಡಿಯ ರುಚಿ ತೋರಿಸಬಾರದು. ಸ್ನ್ಯಾಕ್ಸ್ ಮಾಡುವುದಿದ್ದರೆ ಮನೆಯಲ್ಲೇ ಸಿದ್ಧಪಡಿಸಿ. ಹೊರಗಿನ ತಿಂಡಿಯಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಾಗಿರುತ್ತದೆ, ಹೀಗಾಗಿ ಅವುಗಳನ್ನು ಮಕ್ಕಳು ಇಷ್ಟಪಡುತ್ತಾರೆ. ಸಿರಿಧಾನ್ಯಗಳ ಉಪ್ಪಿಟ್ಟು, ಬಾತ್ ಇತ್ಯಾದಿ ಮಾಡಿದರೆ ಚಿಕ್ಕಂದಿನಲ್ಲೇ ಅಭ್ಯಾಸವಾಗುತ್ತದೆ. ಹೊರಗಿನ ತಿಂಡಿ ಕೊಡುವುದಿದ್ದರೂ ಸಮಯ ಹಾಗೂ ಮಿತಿಯನ್ನು ನಿಗದಿಪಡಿಸಬೇಕು. ಹೆಚ್ಚು ಪಾಲಿಶ್ (Polish) ಇರದ ಅಕ್ಕಿಯನ್ನೇ ಬಳಕೆ ಮಾಡಿ. ಮಕ್ಕಳ ಜೀವನಶೈಲಿ (Lifestyle) ಉತ್ತಮವಾಗಿ ಆರಂಭವಾಗಬೇಕು ಎಂದರೆ ಪಾಲಕರೂ ಅದನ್ನು ಅನುಸರಿಸುವುದು ಅಗತ್ಯ.