ಎಷ್ಟೋ ಬಾರಿ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರಾದ್ರೂ ನಾವು ಅದಕ್ಕೆ ತಲೆಕೆಡಿಸಿಕೊಳ್ಳೋದಿಲ್ಲ ಅಥವಾ ಗಮನ ನೀಡೋದಿಲ್ಲ. ಆದ್ರೆ ನಿತ್ಯದ ಬದುಕಿನಲ್ಲಿ ನಮ್ಮನ್ನು ಕಾಡೋ ಸುಸ್ತು, ಆಲಸ್ಯ ಮುಂತಾದ ಸಣ್ಣ ಸಮಸ್ಯೆಗಳ ಹಿಂದೆ ದೊಡ್ಡ ಆರೋಗ್ಯ ಸಮಸ್ಯೆಯೇ ಇರಬಹುದು.ಮೆಟ್ಟಿಲು ಹತ್ತೋವಾಗ ವಿಪರೀತ ಸುಸ್ತು ಕಾಣಿಸಿಕೊಂಡ್ರೆ ಅಥವಾ ತುಂಬಾ ಸಮಯ ಹಿಡಿದ್ರೆ ನಿಮ್ಮ ಹೃದಯದಲ್ಲಿ ಏನೋ ಸಮಸ್ಯೆಯಿದೆಯೆಂದೇ ಅರ್ಥ.
ನಮ್ಮ ಆರೋಗ್ಯದ ಗುಟ್ಟು ವೈದ್ಯರಿಗಿಂತ ಚೆನ್ನಾಗಿ ನಮಗೇ ತಿಳಿದಿರುತ್ತೆ.ಆರೋಗ್ಯದಲ್ಲಿ ಸಣ್ಣ ಏರುಪೇರಾದ್ರೂ ದೇಹ ನಮಗೆ ಅನೇಕ ರೀತಿಯಲ್ಲಿ ಸೂಚನೆ, ಸಂದೇಶಗಳನ್ನು ರವಾನಿಸುತ್ತದೆ. ಎಷ್ಟೋ ಬಾರಿ ನಾವು ಈ ಸೂಚನೆಗಳನ್ನು ಗಮನಿಸೋದಿಲ್ಲ ಅಥವಾ ಗಂಭೀರವಾಗಿ ಪರಿಗಣಿಸೋದಿಲ್ಲ.ಆದ್ರೆ ಈ ರೀತಿ ದೇಹ ನೀಡೋ ಸೂಚನೆಗಳನ್ನು ಗಮನಿಸದಿದ್ರೆ ಮುಂದೆ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡೋ ಸಾಧ್ಯತೆಗಳಿವೆ. ಸ್ನಾಯುಗಳ ನೋವು,ಎದುಸಿರು,ಸುಸ್ತು ಇವೆಲ್ಲ ಶರೀರದಲ್ಲಿ ಏನೋ ಸಮಸ್ಯೆಯಿದೆ ಎಂಬುದರ ಸೂಚನೆಯೇ ಆಗಿರುತ್ತೆ.ಆದ್ರೆ ಬಹುತೇಕರು ಇದಕ್ಕೇ ತಾವೇ ಒಂದು ಕಾರಣ ಹುಡುಕಿ,ಅದೇನೂ ಸಮಸ್ಯೆಯಲ್ಲ, ಸರಿಹೋಗುತ್ತೆ ಎಂದು ಸುಮ್ಮನಾಗಿಬಿಡ್ತಾರೆ.ಆದ್ರೆ ನಂತರ ಸಮಸ್ಯೆ ಗಂಭೀರ ಸ್ವರೂಪ ತಾಳಿದ ಮೇಲೆ ಏನೂ ಮಾಡಲಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತೆ.ಹೀಗಾಗಿ ದೇಹ ನೀಡೋ ಸಣ್ಣಪುಟ್ಟ ಸೂಚನೆಗಳನ್ನುನಿರ್ಲಕ್ಷಿಸೋ ಬದಲಿಗೆ ಆ ಬಗ್ಗೆ ಲಕ್ಷ್ಯ ನೀಡಿ,ಸೂಕ್ತ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ ಪಡೆಯೋದು ಸೂಕ್ತ.ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ,ಎಳೆಯ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪುತ್ತಿರೋರ ಪ್ರಮಾಣವೂ ಹೆಚ್ಚಿದೆ.ಆದ್ರೆ ಹೃದಯ ಸಮಸ್ಯೆಗಳ ಬಗ್ಗೆ ದೇಹ ನಮಗೆ ಮುಂಚಿತವಾಗಿಯೇ ಅನೇಕ ಸೂಚನೆಗಳನ್ನು ನೀಡುತ್ತದೆ. ನಮ್ಮ ದೈನಂದಿನ ದಿನಚರಿಯಲ್ಲೇ ಈ ಬಗ್ಗೆ ಸ್ವಲ್ಪ ಲಕ್ಷ್ಯ ನೀಡಿದ್ರೆ ಸಾಕು, ಸಮಸ್ಯೆಯ ಅರಿವಾಗುತ್ತದೆ ಎನ್ನೋದಕ್ಕೆ ಮೆಟ್ಟಿಲುಗಳನ್ನೇರೋವಾಗ ಹೃದಯದ ಆರೋಗ್ಯ ಅಳೆಯಬಹುದು ಎಂಬುದೇ ಉತ್ತಮ ನಿದರ್ಶನ. ಹೌದು,ಅಧ್ಯಯನವೊಂದರ ಪ್ರಕಾರ ಮೆಟ್ಟಿಲುಗಳನ್ನು ಹತ್ತಲು ತುಂಬಾ ಸಮಯ ಹಿಡಿದ್ರೆ ನಿಮ್ಗೆ ಯಾವುದೋ ಹೃದಯ ಸಂಬಂಧಿ ಕಾಯಿಲೆಯಿದೆ ಎಂದೇ ಅರ್ಥ. ಆದಕಾರಣ ಮೆಟ್ಟಿಲುಗಳನ್ನು ಹತ್ತಲು ಅಗತ್ಯಕ್ಕಿಂತ ಹೆಚ್ಚು ಸಮಯ ಹಿಡಿದ್ರೆ, ವಿಪರೀತ ಸುಸ್ತು ಕಾಡಿದ್ರೆ ಒಮ್ಮೆ ವೈದ್ಯರನ್ನು ಭೇಟಿಯಾಗೋದು ಒಳ್ಳೆಯದು.
ಅಕ್ಕಿ ನೀರು ವೇಸ್ಟ್ ಮಾಡ್ಬೇಡಿ, ಇದರಲ್ಲಿದೆ ಹಲವು ಗುಣ
ಹೃದಯಕ್ಕೂ ಮೆಟ್ಟಿಲು ಹತ್ತೋದಕ್ಕೂ ಎತ್ತಣ ಸಂಬಂಧ?
ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿಯ ವೈಜ್ಞಾನಿಕ ಸಭೆಯಲ್ಲಿ ಸ್ಪಾನಿಷ್ ಸಂಶೋಧಕರ ತಂಡವೊಂದು ಮಂಡಿಸಿದ ಅಧ್ಯಯನ ವರದಿ ಪ್ರಕಾರ ಒಬ್ಬ ವ್ಯಕ್ತಿ ಒಂದೂವರೆ ನಿಮಿಷದೊಳಗೆ ಅಂದಾಜು 6೦ ಮೆಟ್ಟಿಲುಗಳನ್ನು ಹತ್ತಿದ್ರೆ ಆತನ ಹೃದಯ ಆರೋಗ್ಯವಾಗಿದೆ ಎಂದರ್ಥ. ಒಂದು ವೇಳೆ ಆತ ಈ ಮೆಟ್ಟಿಲುಗಳನ್ನು ಹತ್ತಲು ಒಂದೂವರೆಗಿಂತ ಹೆಚ್ಚು ಸಮಯ ತೆಗೆದುಕೊಂಡ್ರೆ ಆತನ ಹೃದಯ ಸುಸ್ಥಿತಿಯಲ್ಲಿಲ್ಲ ಹಾಗೂ ಆತ ಕೂಡಲೇ ವೈದ್ಯರನ್ನು ಭೇಟಿಯಾಗೋದು ಉತ್ತಮ ಎಂಬುದು ಈ ಅಧ್ಯಯನದ ಸಾರ.
ಹೀಗೆ ನಡೆದಿತ್ತು ಅಧ್ಯಯನ
ಹೃದ್ರೋಗ ಹೊಂದಿರೋ 165 ಜನರನ್ನು ಈ ಅಧ್ಯಯನಕ್ಕೆ ಆರಿಸಲಾಗಿತ್ತು. ಮೊದಲು ಇವರಿಗೆ ಟ್ರೆಡ್‌ಮಿಲ್ ಮೇಲೆ ನಡೆಯಲು ಅಥವಾ ಓಡಲು ತಿಳಿಸಲಾಯಿತು ಅವರು ಟ್ರೆಡ್‌ಮಿಲ್ ಮೇಲೆ ಕಸರತ್ತು ಪ್ರಾರಂಭಿಸುತ್ತಿದ್ದಂತೆ ನಿಧಾನವಾಗಿ ವೇಗವನ್ನು ಹೆಚ್ಚಿಸುತ್ತ ಬರಲಾಯಿತು. ಅವರಿಗೆ ಸುಸ್ತಾಗೋ ತನಕ ಈ ಪ್ರಕ್ರಿಯೆ ಮುಂದುವರಿಸಲಾಯ್ತು. ಈ ಸಮಯದಲ್ಲಿ ಅವರ ವ್ಯಾಯಾಮ ಮಾಡೋ ಸಾಮರ್ಥ್ಯವನ್ನು ಅಳೆಯಲಾಯ್ತು. ಆ ಬಳಿಕ ಸ್ವಲ್ಪ ಸಮಯ ಸ್ಪರ್ಧಿಗಳಿಗೆ ವಿಶ್ರಾಂತಿ ನೀಡಲಾಯಿತು. ಸುಮಾರು 6೦ ಮೆಟ್ಟಿಲುಗಳನ್ನು ವೇಗವಾಗಿ ನಡೆದು ಆದ್ರೆ ಎಲ್ಲಿಯೂ ನಿಲ್ಲದೆ ಅಥವಾ ಓಡದೆ ಕ್ರಮಿಸುವಂತೆ ಸೂಚಿಸಲಾಯ್ತು. ಆ ಬಳಿಕ ಸ್ಪರ್ಧಿಗಳ ಮೌಲ್ಯಮಾಪನ ಮಾಡಿದಾಗ ವೇಗವಾಗಿ ಮೆಟ್ಟಿಲುಗಳನ್ನು ಹತ್ತಬಲ್ಲ ಸ್ಪರ್ಧಿಗಳ ಹೃದಯವು ಇತರರಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರೋದು ಕಂಡುಬಂತು.
ಔಷಧೀಯ ಗುಣಗಳ ಖಜಾನೆ ಈ ಕುಂಬಳಕಾಯಿ..! .
ಮತ್ತೊಂದು ಅಧ್ಯಯನ ಏನ್ ಹೇಳುತ್ತೆ ಗೊತ್ತಾ?
ಕೆಲವು ವರ್ಷಗಳ ಹಿಂದೆ ಗಲಿಷ್ಯಾದ ಯುನಿವರ್ಸಿಟಿ ಹಾಸ್ಪಿಟಲ್ ಸಂಶೋಧಕರು ನಡೆಸಿದ ಅಧ್ಯಯನವು ಸುಮಾರು 6೦ ಮೆಟ್ಟಿಲುಗಳನ್ನು ಹತ್ತಲು ಕಷ್ಟಪಡೋ ಜನರು ಹೃದ್ರೋಗಗಳಿಂದ ಸಾವನ್ನಪ್ಪುವ ಸಾಧ್ಯತೆ ಇತರರಿಗಿಂತ ಮೂರು ಪಟ್ಟು ಹೆಚ್ಚು ಎಂದಿದೆ. ಅಷ್ಟೇ ಅಲ್ಲ, ಇಂಥವರು ಕ್ಯಾನ್ಸರ್ ರೋಗದಿಂದ ಸಾವನ್ನಪ್ಪುವ ಅಪಾಯ ಇತರರಿಗಿಂತ ಎರಡು ಪಟ್ಟು ಹೆಚ್ಚು ಎಂದೂ ಹೇಳಿದೆ. ಮೆಟ್ಟಿಲುಗಳನ್ನು ಆರಾಮವಾಗಿ ಹತ್ತಬಲ್ಲ ವ್ಯಕ್ತಿ ಶಸ್ತ್ರಚಿಕಿತ್ಸೆಗೊಳಗಾದ್ರೆ ಕೂಡ ಹೆಚ್ಚಿನ ರಿಸ್ಕ್ ಎದುರಾಗೋದಿಲ್ಲ ಎಂದು ಕೂಡ ಸಂಶೋಧಕರು ಹೇಳಿದ್ದಾರೆ.
ದಿಂಬು ಬಳಸಿ ಮಲಗುವುದರಿಂದ ಮನಸಿಗೆ ಹಿತ: ದೇಹಕ್ಕೆ..?
ಭಯಪಡೋ ಅಗತ್ಯವಿಲ್ಲ
ಹೃದಯದ ಆರೋಗ್ಯ ತಪಾಸಣೆಯನ್ನು ಸುಲಭವಾಗಿ ನಾವೇ ಮಾಡಿಕೊಳ್ಳಬೇಕೆಂದ್ರೆ ಈ ಅಧ್ಯಯನದಲ್ಲಿ ಹೇಳಿದಂತೆ ಮೆಟ್ಟಿಲುಗಳನ್ನು ಹತ್ತಿ ನೋಡಬಹುದು. ಆದ್ರೆ ಒಂದು ವೇಳೆ ನಿಮ್ಗೆ ಮೆಟ್ಟಿಲುಗಳನ್ನುನಿಗದಿತ ಸಮಯದೊಳಗೆ ಹತ್ತಲು ಸಾಧ್ಯವಾಗದಿದ್ರೆ ಭಯಪಡೋ ಅಗತ್ಯವಿಲ್ಲ. ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ. ಉತ್ತಮ ಆಹಾರ ಸೇವಿಸಿ, ವ್ಯಾಯಾಮ ಮಾಡಿ, ಒತ್ತಡ ತಗ್ಗಿಸಿಕೊಂಡು ಖುಷಿ ಖುಷಿಯಾಗಿರಿ. ಇವೆಲ್ಲ ಹೃದಯದ ಆರೋಗ್ಯವನ್ನುಸುಧಾರಿಸಬಲ್ಲವು.